ತೆಪ್ಪ ಹೊತ್ತು ನಡೆಯೋದು ಜಾಣತನವಲ್ಲ: ಬುದ್ಧ ಹೇಳಿದ ದೃಷ್ಟಾಂತ

“ಒಮ್ಮೆ ದಾಟಿದ ಮೇಲೆ ಕಲಿಕೆಯನ್ನ ಅಲ್ಲಿಯೇ ಬೇರೆ ಸಾಧಕರಿಗಾಗಿ ಬಿಟ್ಟು ಮುಂದುವರೆಯಬೇಕು. ದಾಟಿದ ಮೇಲೂ ಹೊತ್ತು ನಡೆಯುವುದು ಮಹಾ ಮೂರ್ಖತನ” ಅನ್ನುತ್ತಾನೆ ಬುದ್ಧ… – ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದು ಮಹಾ ಪ್ರಯಾಣವನ್ನು ಆರಂಭಿಸಿದ್ದ ಒಬ್ಬ ವ್ಯಕ್ತಿ ತನಗೆ ಎದುರಾದ ಒಂದು ದೊಡ್ಡ ನದಿಯನ್ನು ಕಂಡು, ಆ ನದಿಯನ್ನು ಹೇಗೆ ದಾಟುವುದು ಎಂದು ಯೋಚಿಸುತ್ತ ನಿಂತ. ನದಿ ಬಹಳ ರಭಸದಿಂದ ಭೋರ್ಗರೆದು ಹರಿಯುತ್ತಿತ್ತು. ಆ ನದಿಯನ್ನು ದಾಟಲು ಸುತ್ತಮುತ್ತ ಯಾವ ಸೇತುವೆಗಳಿರಲಿಲ್ಲ, ಯಾವ ದೋಣಿಗಳೂ ಇರಲಿಲ್ಲ. ಆ ನದಿಯನ್ನು ದಾಟದೇ ಹೋದ ಪಕ್ಷದಲ್ಲಿ ಆ ವ್ಯಕ್ತಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ. ಅವನಿಗೆ ನದಿಯನ್ನು ದಾಟಲೇ ಬೇಕಾಗಿತ್ತು. ಅವನು ಸುತ್ತಮುತ್ತ ಲಭ್ಯವಿದ್ದ ಮರದ ರೆಂಬೆ ಕೊಂಬೆ ಮತ್ತು ಎಲೆ, ಹುಲ್ಲುಗಳಿಂದ ಒಂದು ತಾಕ್ಕಾಲಿಕ ತೆಪ್ಪವನ್ನು ತಯಾರಿಸಿಕೊಂಡು, ಆ ತೆಪ್ಪದ ಸಹಾಯದಿಂದ ನದಿಯನ್ನು ದಾಟಿ ಈಚೆ ದಡ ಸೇರಿದ.

ದಡ ಸೇರಿದ ಮೇಲೆ ಆ ವ್ಯಕ್ತಿಗೆ ತಾನು ತಯಾರಿಸಿದ್ದ ತೆಪ್ಪದ ಮೇಲೆ ಬಹಳ ಅಭಿಮಾನ ಉಂಟಾಗಿತ್ತು. ಆ ತೆಪ್ಪವನ್ನು ಬೆನ್ನ ಮೇಲೆ ಹೊತ್ತುಕೊಂಡು ತನ್ನ ಪ್ರಯಾಣ ಮುಂದುವರೆಸಿದರೆ ಮುಂದೆ ಮತ್ತೆ ಎಲ್ಲಾದರೂ ಈ ತೆಪ್ಪದ ಉಪಯೋಗವಾಗಬಹುದು ಎಂದು ಆ ವ್ಯಕ್ತಿ ಯೋಚಿಸತೊಡಗಿದ.

ಅವನು ತೆಪ್ಪದ ಭಾರವನ್ನ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಪ್ರಯಾಣವನ್ನು ಮುಂದುವರೆಸಿದ್ದರೆ ಅದು ಜಾಣ ನಡೆಯಾಗುತ್ತಿತ್ತೆ? ಅಥವಾ ಬೇರೆಯವರಿಗೆ ಉಪಯೋಗವಾಗುವಂತೆ, ಆ ತೆಪ್ಪವನ್ನು ಅಲ್ಲಿಯೇ ಎಲ್ಲಾದರೂ ಸುರಕ್ಷಿತ ಜಾಗದಲ್ಲಿ ಬಿಟ್ಚು ಅವನು ಮುಂದುವರೆಯಬೇಕಾಗಿತ್ತೆ?

ನಾನು ಧರ್ಮವನ್ನು ಕಲಿತಿದ್ದು ಮತ್ತು ಕಲಿಸಿದ್ದು ಈ ರೀತಿಯಲ್ಲಿ, ಧರ್ಮವನ್ನು ಬಳಸಬೇಕಾದದ್ದು ಕೇವಲ ದಾಟಲು, ಅದನ್ನು ಹೊತ್ತು ನಡೆಯುವುದಕ್ಕಲ್ಲ. ಓ ಸನ್ಯಾಸಿಗಳೇ! ಪ್ರತಿ ಮನಸ್ಥಿತಿಯನ್ನ ಅದು ಒಳ್ಳೆಯದಿರಬಹುದು ಕೆಟ್ಟದ್ದಿರಬಹುದು ಅದನ್ನು ದಾಟಿದ ಮೇಲೆ ಅದನ್ನ ಬಿಟ್ಟುಬಿಡಿ. ಯಾವಾಗಲೂ ನೆನಪಿರಲಿ ತೆಪ್ಪವನ್ನು ಹೊತ್ತು ನಡೆಯಬೇಡಿ ಅದನ್ನು ಹಿಂದೆ ಬಿಟ್ಟುಬಿಡಿ.

ಈ ದೃಷ್ಟಾಂತವನ್ನು ಹೇಳಿದ್ದು ಗೌತಮ ಬುದ್ಧ ಮತ್ತು ಇದು ಸತ್ಯದ ಶೋಧನೆಯಲ್ಲಿ ಇರುವವರಿಗೆ ಒಂದು ಎಚ್ಚರಿಕೆಯ ಸಂದೇಶ. ಬುದ್ಧ ಹೇಳುತ್ತಾನೆ, ಧಮ್ಮದ ಕಲಿಕೆಯನ್ನು ಕೇವಲ ಸ್ವ ಮತ್ತು ಬುದ್ಧಿ-ಮನಸ್ಸುಗಳನ್ನು ( self & mind) ಮೀರಲು, ದಾಟಿ ಮುಂದೆ ಹೋಗಲು ಬಳಸಬೇಕು. ಈ ದಾಟುವ ಮತ್ತು ಮೀರುವ ಕೆಲಸಕ್ಕೆ ಮಾತ್ರ ಧಮ್ಮದ ಕಲಿಕೆಯನ್ನ ಮೀಸಲಾಗಿಡಬೇಕು, ಒಮ್ಮೆ ದಾಟಿದ ಮೇಲೆ ಈ ಕಲಿಕೆಯನ್ನ ಅಲ್ಲಿಯೇ ಬೇರೆ ಸಾಧಕರಿಗಾಗಿ ಬಿಟ್ಟು ಮುಂದುವರೆಯಬೇಕು. ದಾಟಿದ ಮೇಲೂ ಹೊತ್ತು ನಡೆಯುವುದು ಮಹಾ ಮೂರ್ಖತನ.

ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.

ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.

ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?”

ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.”

“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ?” ಮಾಸ್ಟರ್ ನಗುತ್ತ ಉತ್ತರಿಸಿದ.

ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.

Leave a Reply