ಝರತುಷ್ಟ್ರ, “ದೇವರು ಸತ್ತ” ಅಂದಿದ್ದರ ಅರ್ಥ… : ಓಶೋ ವ್ಯಾಖ್ಯಾನ

ಮನುಷ್ಯ ತನ್ನ ಅಪ್ರಜ್ಞೆ ಯ ಸ್ಥಿತಿಯಲ್ಲಿ ದೇವರನ್ನು ಕೊಂದುಬಿಟ್ಟಿದ್ದಾನೆ. ಹಾಗೆಂದರೆ ದೇವರನ್ನು ತನ್ನ ಕೈಯಾರೆ ಮೂರ್ತ ರೂಪದಲ್ಲಿ ಕೊಂದಿಲ್ಲ, ದೇವರನ್ನು ಕೊಲ್ಲುವುದು ಹೇಗೆ ಸಾಧ್ಯ? ಆದರೆ ಮನುಷ್ಯ ದೇವರಿಂದ ಹೊರತಾಗಿಬಿಟ್ಟಿದ್ದಾನೆ, ದೇವರಿಲ್ಲದವನಾಗಿಬಿಟ್ಟಿದ್ದಾನೆ. ಇದು ನಿಷೆಯ ಮಾತಿನ ಅರ್ಥ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಫ್ರೆಡ್ರಿಕ್ ನಿಷೆಯ ‘Thus spake Zarathustra’…. ದಲ್ಲಿ ಒಂದು ದೃಷ್ಟಾಂತವಿದೆ. ಪರ್ವತದಿಂದ ಕೆಳಗಿಳಿದು ಬಂದ ಝರತುಷ್ಟ್ರ, ಬೆಟ್ಟದ ಕೆಳಗೆ ದೇವರನ್ನು ಕುರಿತು ಪ್ರಾರ್ಥಿಸುತ್ತಿದ್ದ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡುತ್ತಾನೆ. “ ನಿನಗೆ ದೇವರು ಸತ್ತು ಹೋಗಿರುವ ಸುದ್ದಿ ಗೊತ್ತಿಲ್ಲವೆ? ಯಾರನ್ನು ಕುರಿತು ಪ್ರಾರ್ಥನೆ ಮಾಡುತ್ತಿರುವೆ?, ದೇವರು ಸತ್ತ ಸುದ್ದಿ ನಿನಗೆ ಇನ್ನೂ ತಲುಪಿಲ್ಲವೆ? ಝರತುಷ್ಟ್ರ ನಗುತ್ತ ಸನ್ಯಾಸಿಯನ್ನು ಮಾತನಾಡಿಸುತ್ತಾನೆ.

ಇವನ್ಯಾರು ಈ ಮೂರ್ಖ, ಹೀಗೆ ಮಾತನಾಡುತ್ತಿದ್ದಾನೆ ಎನ್ನುತ್ತ ಝರತುಷ್ಟ್ರ ನ ಮಾತು ಕೇಳಿ ಸನ್ಯಾಸಿ ಅಚ್ಚರಿಯಲ್ಲಿ ಬೀಳುತ್ತಾನೆ.

ಝರತುಷ್ಟ್ರನೇ ನ ಮಾತು ಕೇಳಿ ಆಘಾತಕ್ಕೊಳಗಾದವನಂತೆ ಸನ್ಯಾಸಿ ಸುಮ್ಮನಾಗಿಬಿಟ್ಟ, ಅವನ ಬಾಯಿಂದ ಒಂದು ಮಾತೂ ಹೊರಬರಲಿಲ್ಲ. ಕೊನೆಗೆ ಝರತುಷ್ಟ್ರನೇ ಮಾತನಾಡಿದ, “ ಬಹುಶಃ ಇಲ್ಲಿಗೆ ನಾನು ಬೇಗ ಬಂದೆ ಅನಿಸುತ್ತದೆ, ದೇವರು ಸತ್ತಿರುವ ಸುದ್ದಿ ಇಲ್ಲಿ ಇನ್ನೂ ತಲುಪಿಲ್ಲ, ನಿಮಗ್ಯಾರಿಗೂ ದೇವರು ಸತ್ತು ಹೋಗಿರುವ ಸುದ್ದಿ ಗೊತ್ತಿಲ್ಲ. ನನ್ನನ್ನು ಅಚ್ಚರಿಗೆ ನೂಕುವ ಸಂಗತಿಯೆಂದರೆ, ದೇವರನ್ನು ಕೊಂದವರು ನೀವೇ, ಆದರೂ ದೇವರು ಸತ್ತು ಹೋಗಿರುವ ಸುದ್ದಿ ಇನ್ನೂ ನಿಮ್ಮನ್ನು ಬಂದು ಮುಟ್ಟಿಲ್ಲ. ಮನುಷ್ಯ ದೇವರನ್ನು ಕೊಂದಿದ್ದಾನೆ ಆದರೂ ಅವನಿಗೆ ದೇವರು ಸತ್ತು ಹೋಗಿರುವುದು ಇನ್ನೂ ಗೊತ್ತಿಲ್ಲ. ಬಹುಶಃ ಈ ಸುದ್ದಿ ನಿಮ್ಮನ್ನು ಬಂದು ತಲುಪಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.”

ಹೌದು ಝರತುಷ್ಟ್ರ ಹೇಳುವುದು ನಿಜ, ಮನುಷ್ಯ ತನ್ನ ಅಪ್ರಜ್ಞೆ ಯ ಸ್ಥಿತಿಯಲ್ಲಿ ದೇವರನ್ನು ಕೊಂದುಬಿಟ್ಟಿದ್ದಾನೆ. ಹಾಗೆಂದರೆ ದೇವರನ್ನು ತನ್ನ ಕೈಯಾರೆ ಮೂರ್ತ ರೂಪದಲ್ಲಿ ಕೊಂದಿಲ್ಲ, ದೇವರನ್ನು ಕೊಲ್ಲುವುದು ಹೇಗೆ ಸಾಧ್ಯ? ಆದರೆ ಮನುಷ್ಯ ದೇವರಿಂದ ಹೊರತಾಗಿಬಿಟ್ಟಿದ್ದಾನೆ, ದೇವರಿಲ್ಲದವನಾಗಿಬಿಟ್ಟಿದ್ದಾನೆ. ಇದು ನಿಷೆಯ ಮಾತಿನ ಅರ್ಥ.

ಹಟಾತ್ ನೇ ಈ ಶತಮಾನ ದೇವರಿಂದ ಹೊರತಾಗಿಲ್ಲ. ಕಳೆದ ಮೂರು ನಾಲ್ಕು ಶತಮಾನಗಳ ಹಿಂದಿನಿಂದ ದೇವರನ್ನು ಕಳೆದುಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಕಳೆದು ಮೂರು ನಾಲ್ಕು ಶತಮಾನಗಳಿಂದ ಮನುಷ್ಯ ಪ್ರಜ್ಞೆ ತನ್ನನ್ನು ತಾನು ದೇವರಿಂದ ಹೊರತಾಗಿಸಿಕೊಳ್ಳಲು, ವೇದಿಕೆಯೊಂದನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಮಾರ್ಕ್ಸ್, ಫ್ರಾಯ್ಡ್ ಮತ್ತು ಎಲ್ಲ ರೀತಿಯ ಎಲ್ಲ ಥರದ ಜನರು ಮನುಷ್ಯನನ್ನು ದೇವರಿಂದ ಹೊರತಾಗಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈ ಪ್ರಯತ್ನ ಈಗ ಸಫಲ ವಾಗಿರುವಾಗ ಸ್ವತಃ ಮನುಷ್ಯನಿಗೆ ಆಶ್ಚರ್ಯವಾಗಿದೆ ಪುರೋಹಿತ ವರ್ಗ ಕೂಡ ಅಚ್ಚರಿಗೊಳಗಾಗಿದೆ, ಅವರೇ ಜಗತ್ತು ಕಂಡ ಈ ಮಹಾ ಕೊಲೆಯ ಸೂತ್ರಧಾರಿಗಳಾಗಿದ್ದರೂ. “ ಇದೆಂಥ ಕೆಲಸ ಆಗಿಹೋಯಿತು ನಮ್ಮಿಂದ?” ಅವರು ಆಶ್ಚರ್ಯಚಕಿತರಾಗಿದ್ದಾರೆ, ದಿಗಿಲಿಗೊಳಗಾಗಿದ್ದಾರೆ. ದೇವರ ರಕ್ತದಿಂದ ಅವರ ಕೈಗಳು ರಕ್ತಸಿಕ್ತವಾಗಿವೆ, ಆದರೂ ದೇವರು ಸತ್ತ ಸುದ್ದಿ ಅವರನ್ನ ಇನ್ನೂ ತಲುಪಿಲ್ಲದಿರುವುದು ಅವರನ್ನು ತಲ್ಲಣಕ್ಕೆ ಈಡು ಮಾಡಿದೆ.

ಒಮ್ಮೆ ಒಬ್ಬ ವಿಕ್ಷಿಪ್ತ ವಿನೋದೀ ಮುದುಕ ರಾಜಬೀದಿಯಲ್ಲಿ ತಾನು “ದೇವರು” ಎಂದು ಹೇಳಿಕೊಂಡು ಓಡಾಡುತ್ತಿದ್ದ. ಇದನ್ನು ಗಮನಿಸಿದ ರಾಜ ಭಟರು ಅವನನ್ನು ಬಂಧಿಸಿ ಸುಲ್ತಾನನ ಎದುರು ಪ್ರಸ್ತುತಪಡಿಸಿದರು.

“ ಕಳೆದ ವಾರ ತಾನು ದೇವದೂತ ಎಂದು ಹೇಳಿಕೊಂಡು ಓಡಾಡುತ್ತಿದ್ದ ಒಬ್ಬ ಮನುಷ್ಯನನ್ನು ಬಂಧಿಸಿ ಅವನಿಗೆ ಕಠಿಣ ಸಜೆ ವಿಧಿಸಿದ್ದೇನೆ. ಈಗ ನೀನು “ ನಾನು ದೇವರು” ಎಂದು ಹೇಳಿಕೊಂಡು ಓಡಾಡುತ್ತಿದ್ದೀಯಂತೆ, ನಿನಗೆಂಥ ಕಠಿಣ ಶಿಕ್ಷೆ ಕಾದಿದೆ ಗೊತ್ತಾ? “ ಸುಲ್ತಾನ ಆ ಮುದುಕನನ್ನು ಪ್ರಶ್ನೆ ಮಾಡಿದ.

“ ತಾವು ಆ ಮನುಷ್ಯನಿಗೆ ಕಠಿಣ ಶಿಕ್ಷೆ ಕೊಟ್ಟದ್ದು ಸರಿಯಾಗಿದೆ ಸುಲ್ತಾನರೇ, ಏಕೆಂದರೆ ನಾನು ಯಾರನ್ನೂ ದೇವದೂತ ಎಂದು ನೇಮಕ ಮಾಡಿ ಭೂಮಿಗೆ ಕಳಿಸಿಲ್ಲ.” ವಿಕ್ಷಿಪ್ತ ಮುದುಕ ನಗು ನಗುತ್ತ ಸುಲ್ತಾನನಿಗೆ ಉತ್ತರಿಸಿದ.


Osho – *Far Beyond the Stars* (A Darshan Diary)

Leave a Reply