ಮನುಷ್ಯ ಸಮಾಜದ ಬದಲಾವಣೆಯಲ್ಲಿ ಆರ್ಥಿಕತೆಯ ಪಾತ್ರ : To have or To be #5

E.F.Schumacherನ, ಅಮೂಲಾಗ್ರವಾದ ಮುನುಷ್ಯ ಸ್ವಭಾವದ ಬದಲಾವಣೆಯ ಬೇಡಿಕೆ, ಎರಡು ವಾದಗಳ ಮೇಲೆ ಆಧರಿತವಾಗಿದೆ : ಮೊದಲನೇಯದು, ನಮ್ಮ ಸಧ್ಯದ ಸಾಮಾಜಿಕ ವ್ಯವಸ್ಥೆ ನಮ್ಮನ್ನು ರೋಗಗ್ರಸ್ತರನ್ನಾಗಿಸುತ್ತದೆ ಮತ್ತು, ಎರಡನೇಯದು, ನಾವು ನಮ್ಮ ಸಾಮಾಜಿಕ ವ್ಯವಸ್ಥೆಯನ್ನ ಅಮೂಲಾಗ್ರವಾಗಿ ಬದಲಾಯಿಸಿಕೊಳ್ಳದೇ ಹೋದರೆ ಅತ್ಯಂತ ವಿನಾಶಕಾರಿಯಾದ ಆರ್ಥಿಕ ದುರಂತದ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ… ~ ಎರಿಕ್ ಫ್ರಾಮ್ । ಕನ್ನಡಕ್ಕೆ; ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2023/02/26/from/

The economic necessity for human change

ಇಲ್ಲಿ ಈವರೆಗೆ ಮಂಡಿಸಲಾಗಿರುವ ವಾದದ ಪ್ರಕಾರ, ನಮ್ಮ ಸಮಾಜೋ-ಆರ್ಥಿಕ ವ್ಯವಸ್ಥೆ, ನಮ್ಮ ಬದುಕಿನ ಪದ್ಧತಿಯ ಮೂಲಕ ಹುಟ್ಟು ಹಾಕಿರುವ ಗುಣಲಕ್ಷಣಗಳು ಕೊನೆಗೊಮ್ಮೆ ರೋಗಗ್ರಸ್ತ ವ್ಯಕ್ತಿಯ ಮತ್ತು ಹಾಗಾಗಿ ಒಂದು ರೋಗಗ್ರಸ್ತ ಸಮಾಜದ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಆರ್ಥಿಕ ಮತ್ತು ಪ್ರಾಕೃತಿಕ ದುರಂತಗಳಿಗೆ ಪರ್ಯಾಯವೆಂಬಂತೆ ಮನುಷ್ಯರಲ್ಲಿನ ಆಳವಾದ ಮನೋವೈಜ್ಞಾನಿಕ ಬದಲಾವಣೆಗಳಿಗೆ ಪೂರಕವಾಗಿ ಸಂಪೂರ್ಣ ವಿಭಿನ್ನ ದೃಷ್ಟಿಕೋನದಿಂದ ಮಂಡಿಸಲಾಗಿರುವ ಇನ್ನೂ ಒಂದು ವಾದವಿದೆ. ಈ ವಾದವನ್ನು, ಕ್ಲಬ್ ಆಫ್ ರೋಮ್ ಸಿದ್ಧಪಡಿಸಿರುವ ಎರಡು ವರದಿಗಳಲ್ಲಿ ಎತ್ತಲಾಗಿದೆ, ಒಂದು ವರದಿಯನ್ನ D.H.Meadows et al. ಸಿದ್ಧಪಡಿಸಿದ್ದರೆ ಇನ್ನೊಂದು ವರದಿಯನ್ನು ಜಂಟಿಯಾಗಿ M.D.Mesarovic ಹಾಗು E.Pestel ಪ್ರಸ್ತುತಪಡಿಸಿದ್ದಾರೆ. ಎರಡೂ ವರದಿಗಳು ಜಾಗತಿಕ ಮಟ್ಟದಲ್ಲಿ ಟೆಕ್ನಾಲೊಜಿಕಲ್, ಆರ್ಥಿಕ ಮತ್ತು population trend ಗಳ ಆಧಾರದ ಮೇಲೆ ರೂಪಿತವಾಗಿವೆ. M.D.Mesarovic ಹಾಗು E.Pestel, ಕೇವಲ ಮಾಸ್ಟರ್ ಪ್ಲಾನ್ ಪ್ರಕಾರ ಜಾಗತಿಕ ಮಟ್ಟದಲ್ಲಿ ನಡೆಯುವ ಟೆಕ್ನಾಲೊಜಿಕಲ್ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ತೀವ್ರ ಬದಲಾವಣೆಗಳು ಮಾತ್ರ “ ಭಾರೀ ಮತ್ತು ಕೊನೆಗೆ ಜಾಗತಿಕ ದುರಂತಗಳನ್ನ” ತಪ್ಪಿಸಬಹುದು ಎನ್ನುವ ನಿರ್ಣಯಕ್ಕೆ ಬರುತ್ತಾರೆ. ಮತ್ತು ತಮ್ಮ ಈ ನಿರ್ಣಯದ ಸಮರ್ಥನೆಗಾಗಿ ಅವರು ಕಲೆ ಹಾಕಿರುವ ಮಾಹಿತಿ, ಈ ವರೆಗೆ ಮಾಡಲಾಗಿರುವ ಅತ್ಯಂತ ವ್ಯವಸ್ಥಿತ ಮತ್ತು ಜಾಗತಿಕ ಎನ್ನಬಹುದಾದ ಸಂಶೋಧನೆಯನ್ನು ಆಧರಿಸಿದೆ. ( ಇವರ ಪುಸ್ತಕ Meadows ನ ವರದಿಯ ಮೇಲೆ ಕೆಲವೊಂದು ವೈಧಾನಿಕ ಅನುಕೂಲತೆ – methodological advantages ಗಳನ್ನು ಹೊಂದಿದೆ, ಆದರೆ ಹಿಂದಿನ ಅಧ್ಯಯನ, ದುರಂತಗಳಿಗೆ ಪರ್ಯಾಯವಾಗಿ ಇನ್ನೂ ಹೆಚ್ಚಿನ ತೀವ್ರ ಆರ್ಥಿಕ ಬದಲಾವಣೆಗಳನ್ನು ಪರಿಗಣಿಸಿದೆ ). M.D.Mesarovic ಹಾಗು E.Pestel, ಇನ್ನೂ ಮುಂದುವರೆದು, ಇಂಥ ತೀವ್ರ ಆರ್ಥಿಕ ಬದಲಾವಣೆಗಳು ಕೇವಲ “ಮನುಷ್ಯರ ಮೌಲ್ಯ ವ್ಯವಸ್ಥೆ ಮತ್ತು ಧೋರಣೆಗಳಲ್ಲಿ ಮೂಲಭೂತ ಬದಲಾವಣೆಯಾದಾಗ ಮಾತ್ರ (ಅಥವಾ ಮನುಷ್ಯ ಸ್ವಭಾವದ ದೃಷ್ಟಿಕೋನದಲ್ಲಿ ಬದಲಾವಣೆಯಾದಾಗ) ಸಾಧ್ಯ ಎನ್ನುವ ನಿರ್ಣಯಕ್ಕೆ ಬಂದರು, ಉದಾಹರಣೆಗೆ, ಹೊಸ ನೈತಿಕ ಸಂಹಿತೆ ಮತ್ತು ಪ್ರಕೃತಿಯೆಡೆಗಿನ ಮನುಷ್ಯರ ಹೊಸ ಬದಲಾಗಬೇಕಾದ ಧೋರಣೆ. ಅವರು ಹೇಳುತ್ತಿರುವುದು ಹಿಂದೆ ಬೇರೆಯವರು ಹೇಳಿದ್ದನ್ನ ಧೃಡೀಕರಿಸುತ್ತದೆ. ಅವರ ಪ್ರಕಾರ, ಹೊಸ ಸಮಾಜದ ಸೃಷ್ಟಿ, ಸಮಾಜದ ಬೆಳವಣಿಗೆಯ ಜೊತೆ ಜೊತೆಯೇ, ಮನುಷ್ಯರೂ ಬೆಳವಣಿಗೆ ಹೊಂದಿದರೆ ಮಾತ್ರ ಸಾಧ್ಯ, ಅಥವಾ ಹೊಸ ಪರಿಭಾಷೆಯಲ್ಲಿ ಹೇಳುವುದಾದರೆ, ವರ್ತಮಾನದ ಮನುಷ್ಯರ ಸ್ವಭಾವ ರಚನೆಯಲ್ಲಿ ಮೂಲಭೂತ ಬದಲಾವಣೆಯಾದಾಗ ಮಾತ್ರ ನವ ಸಮಾಜದ ಅಸ್ತಿತ್ವ ಸಾಧ್ಯವಾಗುವುದು.

ದುರದೃಷ್ಟವಶಾತ್ ಈ ಎರಡೂ ವರದಿಗಳು ರಚಿತವಾದದ್ದು, ನಮ್ಮ ಕಾಲದ ಸಹಜ ಗುಣಲಕ್ಷಣವಾಗಿದ್ದ ಪ್ರಮಾಣಿಕರಣ (quantification),
ಅಮೂರ್ತತೆ (abstraction) ಮತ್ತು ಅಪವ್ಯಕ್ತಿಕರಣದ (depersonalisation) ಧೋರಣೆಯಲ್ಲಿ. ಅವರು ಸಂಪೂರ್ಣವಾಗಿ ರಾಜಕೀಯ ಮತ್ತು ಸಾಮಾಜಿಕ ಅಂಶಗಳನ್ನ, ಯಾವುದರ ಹೊರತಾಗಿ ಯಾವುದೇ ವಾಸ್ತವಿಕ ಯೋಜನೆಯ ಸಾಧ್ಯತೆಯನ್ನ ನಿರೀಕ್ಷಿಸುವುದು ಅಸಾಧ್ಯವೋ ಅವುಗಳನ್ನ ನಿರ್ಲಕ್ಷಿಸಿಬಿಟ್ಟರು. ಆದರೂ ಅವರು ಕಲೆ ಹಾಕಿದ ಮಾಹಿತಿ (data) ಬಹಳ ಮಹತ್ವದ್ದು ಮತ್ತು ಮೊದಲಬಾರಿಗೆ ಅವರು ಮಾನವ ಜನಾಂಗದ ಆರ್ಥಿಕ ಸ್ಥಿತಿಯನ್ನ ಇಡಿಯಾಗಿ ತಮ್ಮ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಂಡಿದ್ದರು. ಹೊಸ ನೈತಿಕ ಸಂಹಿತೆ ಮತ್ತು ಪ್ರಕೃತಿಯೆಡೆಗೆ ಹೊಸ ಧೋರಣೆ ಬೆಳೆಸಬೇಕು ಎನ್ನುವ ಅವರ ನಿರ್ಣಯ ಅತ್ಯಗತ್ಯವಾದದ್ದು, ಹಾಗು ಹೆಚ್ಚು ಮಹತ್ವದ್ದು ಏಕೆಂದರೆ ಈ ಬೇಡಿಕೆ ಅವರ ತಾತ್ವಿಕ ಭೂಮಿಕೆಗೆ (philosophical premise) ಪ್ರತಿಕೂಲವಾಗಿರುವ ಕಾರಣವಾಗಿ.

ಈ ಎಲ್ಲ ಚರ್ಚೆಯ ಕೊನೆಯಂತೆ ನಿಲ್ಲುವ ಹೆಸರು E.F.Schumacher ನದು. ಅವನು ಅರ್ಥಶಾಸ್ತ್ರಜ್ಞನಾಗಿದ್ದರೂ ಅದೇ ಕಾಲಕ್ಕೆ ತಲಸ್ಪರ್ಶಿ ಮಾನವತಾವಾದಿಯೂ ಆಗಿದ್ದವನು. ಅವನ, ಅಮೂಲಾಗ್ರವಾದ ಮುನುಷ್ಯ ಸ್ವಭಾವದ ಬದಲಾವಣೆಯ ಬೇಡಿಕೆ, ಎರಡು ವಾದಗಳ ಮೇಲೆ ಆಧರಿತವಾಗಿದೆ : ಮೊದಲನೇಯದು, ನಮ್ಮ ಸಧ್ಯದ ಸಾಮಾಜಿಕ ವ್ಯವಸ್ಥೆ ನಮ್ಮನ್ನು ರೋಗಗ್ರಸ್ತರನ್ನಾಗಿಸುತ್ತದೆ ಮತ್ತು, ಎರಡನೇಯದು, ನಾವು ನಮ್ಮ ಸಾಮಾಜಿಕ ವ್ಯವಸ್ಥೆಯನ್ನ ಅಮೂಲಾಗ್ರವಾಗಿ ಬದಲಾಯಿಸಿಕೊಳ್ಳದೇ ಹೋದರೆ ಅತ್ಯಂತ ವಿನಾಶಕಾರಿಯಾದ ಆರ್ಥಿಕ ದುರಂತದ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ.

ತೀವ್ರವಾದ ಮನುಷ್ಯ ಬದಲಾವಣೆಯ ಅಗತ್ಯತೆ ಹುಟ್ಟಿಕೊಂಡಿದ್ದು, ಕೇವಲ ನೈತಿಕ ಅಥವಾ ಧಾರ್ಮಿಕ ಬೇಡಿಕೆಗಳ ಕಾರಣವಾಗಿ ಅಲ್ಲ, ಕೇವಲ ನಮ್ಮ ಸಧ್ಯದ ಸಾಮಾಜಿಕ ರಚನೆಯ ರೋಗಕಾರಕ ಸ್ಥಿತಿಯ ಕಾರಣವಾಗಿ ಹುಟ್ಟಿಕೊಂಡಿರುವ ಮನೋವೈಜ್ಞಾನಿಕ ಬೇಡಿಕೆಯಾಗಿಯೂ ಅಲ್ಲ, ಇದರ ಕಾರಣ ನಮ್ಮ ಮಾನವ ಜನಾಂಗದ ಉಳಿಯುವಿಕೆಯ ಏಕಮಾತ್ರ ಉದ್ದೇಶಕ್ಕಾಗಿ ಕೂಡ. ಸರಿಯಾದ ದಾರಿಯಲ್ಲಿ ಬದುಕುವುದು ಈಗ ನೈತಿಕ ಅಥವಾ ಧಾರ್ಮಿಕ ಪರಿಪೂರ್ಣತೆಯನ್ನು ಸಾಧಿಸುವ ಏಕೈಕ ಮಾರ್ಗವಲ್ಲ. ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ, ಮಾನವ ಜನಾಂಗದ ಭೌತಿಕ ಬದುಕುಳಿಯುವಿಕೆ, ಮನುಷ್ಯ ಹೃದಯದ ಅಮೂಲಾಗ್ರ ಬದಲಾವಣೆಯ ಮೇಲೆ ಅವಲಂಬಿತವಾಗಿರುವುದು. ಆದರೆ ತೀವ್ರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು, ಮನುಷ್ಯ ಹೃದಯದ ಬದಲಾವಣೆಗಾಗಿ ಎಷ್ಟು ಅವಕಾಶ ಮಾಡಿಕೊಡುವುದು ಸಾಧ್ಯವಾಗುತ್ತದೆಯೋ ಮತ್ತು ಎಷ್ಟು ಈ ಬದಲಾವಣೆಯನ್ನು ಸಾಧಿಸಿಕೊಳ್ಳುವ ಧೈರ್ಯ ಮತ್ತು ನೋಟವನ್ನು ಒದಗಿಸಿಕೊಡುತ್ತವೆಯೋ ಅಷ್ಟರಮಟ್ಟಿಗೆ ಮಾತ್ರ ಮನುಷ್ಯ ಹೃದಯದ ಬದಲಾವಣೆ ಸಾಧ್ಯ.

(ಮುಂದುವರೆಯುತ್ತದೆ… )


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply