ಇರುವುದೊಂದೇ ಸತ್ಯ : ಓಶೋ ವ್ಯಾಖ್ಯಾನ

ಇದು ಪತಂಜಲಿಯ ಧೋರಣೆ. ಬ್ರಹ್ಮಾಂಡದಲ್ಲಿ ಇರುವ ಸತ್ಯ ಒಂದೇ, ಮತ್ತು ಆ ಸತ್ಯಕ್ಕೆ ಲಕ್ಷಾಂತರ ಪ್ರತಿಬಿಂಬಗಳು… ~ ಓಶೋ | ಕನ್ನಡಕ್ಕೆ; ಚಿದಂಬರ ನರೇಂದ್ರ

ಮಧು ತಂದ ಸಾಕಿ
ಕೇಳುವುದಿಲ್ಲ, ಸುಮ್ಮನೇ ಸುರಿಯುತ್ತಾಳೆ.

ಚಂದ್ರನನ್ನು ಹುಟ್ಟು, ಬೆಳಗು
ಎಂದು ಯಾರೂ ಪೀಡಿಸುವುದಿಲ್ಲ.

ಸ್ವಾಮಿತ್ವ, ಕಳಚಿ ಎದ್ದು ರಜೆಗೆ ಹೋದಾಗ,

ಕಳೆದು ಹೋದ ಕೈ, ಹಿಡಿದ ಕೈಯ
ಮುಟ್ಟಲು ಹಾತೊರೆದಾಗ,

ಕನ್ನಡಿಯೊಳಗಿನ ದೀಪದ ಬಿಂಬ
ಪಕ್ಕದ ದೀಪಕ್ಕೆ ಹೊತ್ತುವ ಆಸೆ ಹುಟ್ಟಿಸಿದಾಗ,

ನಿನ್ನ ನೆರಳು ನನ್ನೊಳಗೆ ದಾಖಲಾಗುತ್ತದೆ.

~ ರೂಮಿ

ಇದು ಒಂದು ಹಳೆಯ ಕಥೆ. ಒಬ್ಬ ರಾಜ ಒಂದು ಹೊಸ ಅರಮನೆಯನ್ನು ಕಟ್ಟಿಸಿದ್ದ. ಆ ಅರಮನೆಯನ್ನ ಕನ್ನಡಿಗಳ ಅರಮನೆ ಎಂದು ಕರೆಯಲಾಗುತ್ತಿತ್ತು. ಅರಮನೆಯ ಎಲ್ಲ ಗೋಡೆಗಳನ್ನ, ನೆಲವನ್ನ ,ಚಾವಣೆಯನ್ನ, ಪ್ರತಿಯೊಂದು ಭಾಗವನ್ನೂ ಪುಟ್ಟ ಪುಟ್ಟ ಕನ್ನಡಿಗಳಿಂದ ಸಿಂಗರಿಸಲಾಗಿತ್ತು. ಕನ್ನಡಿಗಳನ್ನು ಹೊರತುಪಡಿಸಿ ಆ ಅರಮನೆಯಲ್ಲಿ ಬೇರೇನೂ ಇರಲಿಲ್ಲ.

ಆಗಾಗ ರಾಜ, ಅತಿಥಿಗಳೊಂದಿಗೆ ಅರಮನೆಗೆ ಬಂದು ಹೋಗುತ್ತಿದ್ದ. ಹೀಗೆ ರಾಜ ಅರಮನೆಗೆ ಬಂದಾಗಲೆಲ್ಲ, ರಾಜನ ನಾಯಿಯೂ ಅವನ ಜೊತೆ ಅರಮನೆಗೆ ಬರುತ್ತಿತ್ತು. ಹೀಗೆ ಒಮ್ಮೆ ಅರಮನೆಗೆ ಬಂದಾಗ, ರಾಜನ ನಾಯಿ ಅರಮನೆಯಲ್ಲಿ ನಿದ್ದೆ ಹೋಗಿಬಿಟ್ಟಿತು. ರಾಜ ತಾನು ಬಂದ ಕೆಲಸ ಮುಗಿದ ಮೇಲೆ ವಾಪಸ್ ಆದ. ರಾಜನ ನಾಯಿ ಅರಮನೆಯಲ್ಲಿಯೇ ಉಳಿದುಕೊಂಡುಬಿಟ್ಟಿತ್ತು ಮತ್ತು ರಾತ್ರಿಯಾಗುತ್ತಿದ್ದಂತೆಯೇ ಅರಮನೆಯನ್ನು ಹೊರಗಿನಿಂದ ಲಾಕ್ ಮಾಡಲಾಯ್ತು. ನಾಯಿಗೆ ಎಚ್ಚರವಾದಾಗ, ಅದು ಕತ್ತೆತ್ತಿ ನೋಡುತ್ತಿದ್ದಂತೆಯೇ ಎಲ್ಲೆಲ್ಲಿಯೂ ಲಕ್ಷಾಂತರ ನಾಯಿಗಳು. ಮೇಲೆ , ಕೆಳಗೆ, ಹಿಂದೆ, ಮುಂದೆ ಎಲ್ಲೆಲ್ಲಿಯೂ ನಾಯಿಗಳು, ಅಸಂಖ್ಯ ನಾಯಿಗಳು. ಆ ನಾಯಿ ಸಾಮಾನ್ಯ ನಾಯಿಯಾಗಿರಲಿಲ್ಲ, ಅದು ರಾಜನ ನಾಯಿಯಾಗಿತ್ತು, ಅಪಾರ ಧೈರ್ಯಶಾಲಿ, ಶೂರ ನಾಯಿಯಾಗಿತ್ತು. ಆದರೂ ಈಗ ಅದು ಅರಮನೆಯಲ್ಲಿ ಒಂಟಿಯಾಗಿತ್ತು. ಅದು ಒಂದು ರೂಮಿನಿಂದ ಇನ್ನೊಂದು ರೂಮಿಗೆ ಓಡಾಡಿತು, ಆದರೆ ಎಲ್ಲೂ ಪಾರಾಗುವ ದಾರಿ ನಾಯಿಗೆ ಸಿಗಲಿಲ್ಲ. ಅದಕ್ಕೆ ಭಯ ಮತ್ತೆ ಹೆಚ್ಚಾಗತೊಡಗಿತು. ಆ ಅರಮನೆಯಿಂದ ಪಾರಾಗಲು ನಾಯಿ, ಎಲ್ಲ ಪ್ರಯತ್ನಗಳನ್ನೂ ಮಾಡಿತು ಆದರೆ ಅದರ ಎಲ್ಲ ಪ್ರಯತ್ನಗಳೂ ವಿಫಲವಾದವು. ಅರಮನೆಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು.

ಬೇರೆ ನಾಯಿಗಳನ್ನ ಹೆದರಿಸಲು ನಾಯಿ ಬೊಗಳತೊಡಗಿತು. ರಾಜನ ನಾಯಿ ಬೊಗಳತೊಡಗಿದ ಕ್ಷಣದಲ್ಲಿಯೇ ಬೇರೆ ಎಲ್ಲ ನಾಯಿಗಳು ಬೊಗಳತೊಡಗಿದವು, ಏಕೆಂದರೆ ಬೇರೆ ಎಲ್ಲ ನಾಯಿಗಳು ರಾಜನ ನಾಯಿಯ ಶುದ್ಧ ಪ್ರತಿಬಿಂಬಗಳಾಗಿದ್ದವು. ನಾಯಿಯ ಭಯ ಮತ್ತೆ ಹೆಚ್ಚಾಯಿತು. ಬೇರೆ ನಾಯಿಗಳನ್ನು ಹೆದರಿಸಲು ರಾಜನ ನಾಯಿ, ಎಲ್ಲ ಗೋಡೆಗಳನ್ನು ತಟ್ಟ ತೊಡಗಿತು. ಆಗ ಬೇರೆ ಎಲ್ಲ ನಾಯಿಗಳೂ ಗೊಡೆಯನ್ನು ತಟ್ಟಲು ಶುರು ಮಾಡಿದವು. ಮುಂಜಾನೆಯಾಗುವಷ್ಟರಲ್ಲಿ ಈ ತಲ್ಲಣ, ಈ ಆಘಾತದಿಂದ ತತ್ತರಿಸಿದ ನಾಯಿ ಸತ್ತು ಹೋಯಿತು.

ರಾಜನ ನಾಯಿ ಸತ್ತ ತಕ್ಷಣವೇ ಬೇರೆ ಎಲ್ಲ ನಾಯಿಗಳೂ ಸತ್ತು ಹೋದವು. ಅರಮನೆ ನಿಶಬ್ದವಾಯಿತು. ಆಗ ಅಲ್ಲಿ ಉಳಿದದ್ದು ಒಂದು ನಾಯಿ ಮತ್ತು ಅದರ ಲಕ್ಷಾಂತರ ಪ್ರತಿಬಿಂಬಗಳು.

ಇದು ಪತಂಜಲಿಯ ಧೋರಣೆ. ಬ್ರಹ್ಮಾಂಡದಲ್ಲಿ ಇರುವ ಸತ್ಯ ಒಂದೇ, ಮತ್ತು ಆ ಸತ್ಯಕ್ಕೆ ಲಕ್ಷಾಂತರ ಪ್ರತಿಬಿಂಬಗಳು. ನೀನು ನನ್ನಿಂದ ಒಂದು ಪ್ರತಿಬಿಂಬದಂತೆ ಪ್ರತ್ಯೇಕಿಸಲ್ಪಟ್ಟಿದ್ದೀಯ, ನಾನು ನಿನ್ನಿಂದ ಒಂದು ಪ್ರತಿಬಿಂಬದಂತೆ ಪ್ರತ್ಯೇಕಿಸಲ್ಪಟ್ಟಿದ್ದೇನೆ. ನಾವೆಲ್ಲರೂ ಒಂದೇ ಸತ್ಯದತ್ತ ಹೆಜ್ಜೆ ಹಾಗಿದಾಗ ಮಾತ್ರ, ಎಲ್ಲರೂ ಒಬ್ಬರಲ್ಲೊಬ್ಬರು ಸೇರಿಕೊಳ್ಳುತ್ತೇವೆ, ಒಂದಾಗುತ್ತೇವೆ.

Leave a Reply