ಗಯಟೆ ಮತ್ತು ಬಾಶೋ ಗ್ರಹಿಕೆಗಳು : To have or To be #8

ಟೆನಿಸನ್ ನ ಹೂವಿನೊಡನೆಯ ಸಂಬಂಧ, ‘ಹೊಂದುವ’ ಬಗೆಯ ಜೀವನ ವಿಧಾನ, ಅಥವಾ ಸ್ವಾಧೀನತೆಯನ್ನ ಹೊಂದುವ ಬಗೆಯದು – ಇದು ವಸ್ತುವಿನ ಸ್ವಾಧೀನತೆಯಲ್ಲದ್ದಿದ್ದರೂ ಜ್ಞಾನವನ್ನು ಹೊಂದುವ ಬಗೆ. ಆದರೆ ಬಾಶೋ ಮತ್ತು ಗಯಟೆ ಇಬ್ಬರ ಹೂವಿನ ಜೊತೆಗಿನ ಸಂಬಂಧವೂ “ being “ ವಿಧಾನದ ರೀತಿಯದು… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

(ಹಿಂದಿನ ಸಂಚಿಕೆಯ ಮುಂದುವರಿದ ಭಾಗ…)

ಟೆನಿಸನ್ ಮತ್ತು ಬಾಶೋ ನಡುವಿನ ವ್ಯತ್ಯಾಸವನ್ನ ಗಯಟೆ ಯ ಈ ಸುಂದರ ಕವಿತೆಯಲ್ಲಿ ನಾವು ಕಾಣಬಹುದು.

Found

ನಡೆಯುತ್ತಲಿದ್ದೆ ನನ್ನಷ್ಟಕ್ಕೆ ನಾನೇ
ಕಾಡಿನ ದಾರಿಯಲ್ಲಿ
ಯಾವ ನಿರೀಕ್ಷೆಯೂ ಇಲ್ಲದೇ
ಯಾವುದನ್ನೂ ಹುಡಕಬಾರದು
ಎನ್ನುವ ಮನಸ್ಸು ಮಾಡಿ.

ಒಂದು ನೆರಳಿನ ಮರೆಯಲ್ಲಿ
ಕಾಣಿಸಿತು ಪುಟ್ಟ ಹೂವು,
ನಕ್ಷತ್ರದಂತೆ ಮಿನುಗುತ್ತ
ಸುಂದರ ಕಣ್ಣುಗಳಂತೆ ಹೊಳೆಯುತ್ತ.

ನನಗೋ ಆ ಹೂವನ್ನ
ಕಿತ್ತುಕೊಳ್ಳುವ ಆಸೆ,
ಆದರೆ ಮಾತನಾಡಿತು ಆ ಹೂವು
ನನ್ನೊಡನೆ ತನ್ನ ಮಧುರ ದನಿಯಲ್ಲಿ.
“ ಬಾಡಿಸುವುದಕ್ಕಾ
ನೀನು ಕೀಳುತ್ತಿರುವುದು ನನ್ನನ್ನು? “

ಕಿತ್ತುಕೊಂಡೆ ಬೇರು ಸಹಿತ
ಈ ಹೂವಿನ ಗಿಡವನ್ನ,
ನೆಟ್ಟೆ ಮತ್ತೊಮ್ಮೆ
ಸುಂದರ ಮನೆಯೊಂದರ ಮುಂದಿನ
ಮೋಹಕ ಗಾರ್ಡನ್ ನ
ಸಮಾಧಾನದ ಜಾಗದಲ್ಲಿ.

ಈಗ ಹೂವು
ಹರಡುತ್ತಿದೆ ತನ್ನ ಸುಗಂಧವನ್ನ ಸದಾ
ಮತ್ತೆ ಮತ್ತೆ ಅರಳುತ್ತ.

ಗಯಟೆ, ತನ್ನ ಪಾಡಿಗೆ ತಾನು, ಯಾವ ನಿರೀಕ್ಷೆಗಳೂ ಇಲ್ಲದೆ, ಸುಮ್ಮನೇ ಕಾಡಿನ ಹಾದಿಯಲ್ಲಿ ನಡೆಯುತ್ತಿರುವಾಗ ಈ ಮನಮೋಹಕ ಪುಟ್ಟ ಹೂವು ಅವನ ಕಣ್ಣಿಗೆ ಬೀಳುತ್ತದೆ. ಹೂವನ್ನು ಕಂಡಾಗ ಟೆನಿಸನ್ ನ ಮನಸ್ಸಿನಲ್ಲಿ ಉಂಟಾದ ತೀವ್ರ ಪ್ರಚೋದನೆಯೇ ನನಗೂ ಆಯಿತು ಎಂದು ಗಯಟೆ ಹೇಳುತ್ತಾನೆ. ಆದರೆ ಗಯಟೆ, ಟೆನಿಸನ್ ನ ಹಾಗೆ ಕೇವಲ ಹೂವನ್ನು ಮಾತ್ರ ಕೀಳಲು ಹೋಗುವುದಿಲ್ಲ, ಹಾಗೆ ಮಾಡಿದರೆ ಹೂವು ಸತ್ತು ಹೋಗುತ್ತದೆ ಎನ್ನುವುದು ಅವನಿಗೆ ಗೊತ್ತು. ಗಯಟೆ ಗೆ ಆ ಹೂವು ಎಷ್ಟು ಜೀವಂತವಾಗಿ ಕಾಣಿಸುತ್ತದೆಯೆಂದರೆ, ಅದು ಅವನೊಡನೆ ಮಾತಿಗಿಳಿಯುತ್ತದೆ, ಅವನನ್ನು ಎಚ್ಚರಿಸುತ್ತದೆ ; ಮತ್ತು ಗಯಟೆ, ಟೆನಿಸನ್ ಮತ್ತು ಬಾಶೋರಿಗಿಂತ ವಿಭಿನ್ನವಾಗಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳುತ್ತಾನೆ. ಅವನು ಹೂವಿನ ಗಿಡವನ್ನ ಬೇರು ಸಹಿತ ಕಿತ್ತುಕೊಂಡು ಬಂದು ಉದ್ಯಾನವನದಲ್ಲಿ ನೆಡುತ್ತಾನೆ, ಹಾಗಾಗಿ ಹೂವಿನ ಬದುಕಿಗೆ ಯಾವ ತೊಂದರೆಯೂ ಆಗದಂತೆ ಎಚ್ಚರಿಕೆ ವಹಿಸುತ್ತಾನೆ. ಹೀಗೆ ಮಾಡುವ ಮೂಲಕ ಗಯಟೆ, ಟೆನಿಸನ್ ಮತ್ತು ಬಾಶೋರ ಜೀವನ ವಿಧಾನಗಳ ನಡುವೆ ನಿಲ್ಲುತ್ತಾನೆ. ಅವನಿಗೆ ಮಹತ್ವದ ನಿರ್ಣಾಯಕ ಗಳಿಗೆಯಲ್ಲಿ ಬದುಕಿನ ಸೆಳೆತ, ವೈಯಕ್ತಿಕ ಬೌದ್ಧಿಕ ಕುತೂಹಲದ ಸೆಳೆತಕ್ಕಿಂತ ದೊಡ್ಡದು ಎಂದನಿಸುತ್ತದೆ. ಈ ಸುಂದರ ಪದ್ಯದಲ್ಲಿ ಗಯಟೆ, ಪ್ರಕೃತಿಯನ್ನು ಸಂಶೋಧನೆಗೆ ಒಳಪಡಿಸುವ ಕುರಿತಾದ ತನ್ನ ವಿಶಿಷ್ಟ ಪರಿಕಲ್ಪನೆಯನ್ನು ವರ್ಣಿಸುತ್ತಿದ್ದಾನೆ.

ಟೆನಿಸನ್ ನ ಹೂವಿನೊಡನೆಯ ಸಂಬಂಧ, ‘ಹೊಂದುವ’ ಬಗೆಯ ಜೀವನ ವಿಧಾನ, ಅಥವಾ ಸ್ವಾಧೀನತೆಯನ್ನ ಹೊಂದುವ ಬಗೆಯದು – ಇದು ವಸ್ತುವಿನ ಸ್ವಾಧೀನತೆಯಲ್ಲದ್ದಿದ್ದರೂ ಜ್ಞಾನವನ್ನು ಹೊಂದುವ ಬಗೆ. ಆದರೆ ಬಾಶೋ ಮತ್ತು ಗಯಟೆ ಇಬ್ಬರ ಹೂವಿನ ಜೊತೆಗಿನ ಸಂಬಂಧವೂ “ being “ ವಿಧಾನದ ರೀತಿಯದು. “ being ” ಎಂದರೆ ಅಸ್ತಿತ್ವದ ಆ ರೀತಿಯ ಜೀವನ ವಿಧಾನ, ಎಲ್ಲಿ ಒಬ್ಬರು ಏನನ್ನೂ ಹೊಂದುವುದಿಲ್ಲ ಅಥವಾ ಯಾವುದನ್ನಾದರೂ ಹೊಂದುವುದಕ್ಕಾಗಿ ಚಡಪಡಿಸುವುದಿಲ್ಲ, ಆದರೆ ಅವರು ಆನಂದವನ್ನು ಅನುಭವಿಸುತ್ತಿದ್ದಾರೆ, ತಮ್ಮ ಸೃಜನಶೀಲತೆಯನ್ನ ಬಳಸಿಕೊಳ್ಳುತ್ತಿದ್ದಾರೆ, ಮತ್ತು ಸಮಸ್ತ ಜಗತ್ತಿನೊಡನೆ ಒಂದಾಗಿದ್ದಾರೆ.

ಗಯಟೆ, ಬದುಕಿನ ಅದ್ಭುತ ಪ್ರೇಮಿ, ಸಂಶೋಧನೆಗಾಗಿ ಬದುಕನ್ನು ನಾಶಮಾಡುವವರ ಮತ್ತು ಮನುಷ್ಯ ಬದುಕಿನ ಯಂತ್ರೀಕರಣದ ವಿರುದ್ಧ ದನಿ ಎತ್ತಿದ ಧೀರ ಹೋರಾಟಗಾರ. ಅವನು ಮನುಷ್ಯನ “ಹೊಂದುವ” ಹಪಹಪಿಗೆ ವಿರುದ್ಧವಾಗಿ ಮನುಷ್ಯನ “being ” ನ ಪ್ರಕ್ರಿಯೆಗೆ ಹೆಚ್ಚು ಒತ್ತು ಕೊಟ್ಚು ತನ್ನ ಬಹುತೇಕ ಪದ್ಯಗಳನ್ನು ರಚಿಸಿದ್ದಾನೆ. ಅವನ Faust (ಜರ್ಮನ್ ದಂತಕಥೆಯ ಮಾಂತ್ರಿಕ, ಆಲ್ಕೆಮಿಸ್ಟ್, ಜ್ಞಾನದ ಮತ್ತು ಅಧಿಕಾರದ ವಿನಿಮಯಕ್ಕಾಗಿ ತನ್ನ ಆತ್ಮವನ್ನು ಮಾರಿದವ), having ಮತ್ತು being ಜೀವನ ವಿಧಾನಗಳ ನಡುವಿನ ವೈರುಧ್ಯವನ್ನು ನಾಟಕೀಯವಾಗಿ ವಿವರಿಸುತ್ತದೆ. ಈ ಕೆಳಗಿನ ಪುಟ್ಟ ಪದ್ಯದಲ್ಲಿ ಗಯಟೆ, “being” ಜೀವನ ವಿಧಾನದ ಕ್ವಾಲಿಟಿಯನ್ನ ತುಂಬ ಸರಳವಾಗಿ ಪ್ರಸ್ತುತಪಡಿಸಿದ್ದಾನೆ.

Property

ನನಗೆ ಗೊತ್ತು
ಯಾವುದೂ ನನಗೆ ಸೇರಿದ್ದಲ್ಲ,
ಆದರೆ ನನ್ನ ಆತ್ಮದ ಮೂಲಕ
ಹರಿದು ಬರುತ್ತಿದೆ
ತಡೆಯಿಲ್ಲದ ವಿಚಾರ ಪ್ರವಾಹ.
ಮತ್ತು ಪ್ರತಿ ಸಾಧು ಕ್ಷಣ
ಯಾವುದನ್ನ ನನ್ನ ಪ್ರೀತಿಯ ನಿಯತಿ
ಆಗು ಮಾಡುತ್ತದೆಯೋ ಆನಂದಿಸಲು ನನಗೆ
ತನ್ನ ಆಳದಿಂದ.

Having ಮತ್ತು being ವಿಧಾನಗಳ ನಡುವಿನ ವ್ಯತ್ಯಾಸಗಳು, ಪೂರ್ವ ಮತ್ತು ಪಶ್ಚಿಮದ ನಡುವಿನ ವ್ಯತ್ಯಾಸಗಳಾಗಿರಲೇಬೇಕಾದ ಅವಶ್ಯಕತೆಯೇನಿಲ್ಲ. ಈ ವ್ಯತ್ಯಾಸಗಳು ಪ್ರಾತಿನಿಧಿಕವಾಗಿ ವಸ್ತು ಕೇಂದ್ರಿತ ಸಮಾಜ ಮತ್ತು ಮನುಷ್ಯ ಕೇಂದ್ರಿತ ಸಮಾಜಗಳ ನಡುವೆ ಇರುವಂಥವು. ಹೊಂದುವ ಜೀವನ ವಿಧಾನ ಪಾಶ್ಚಿಮಾತ್ಯ ಕೈಗಾರಿಕಾ ಸಮಾಜದ ಗುಣಲಕ್ಷಣವಾಗಿದೆ ; ಇಲ್ಲಿ ಹಣದ, ಪ್ರಸಿದ್ಧಿಯ, ಅಧಿಕಾರದ ಅತಿಯಾಸೆ ಬದುಕಿನ ಪ್ರಧಾನ ಥೀಮ್ ಎಂದು ಗುರುತಿಸಲ್ಪಡುತ್ತವೆ. ಕಡಿಮೆ ಪರಕೀಯ ಸಮಾಜಗಳಾದ, ಮಧ್ಯಯುಗದ ಸಮಾಜ, Zuni Indians, ಆಫ್ರಿಕದ ಬುಡಕಟ್ಟಿನ ಸಮಾಜಗಳು, ಯಾವವು ಆಧುನಿಕ “ಪ್ರಗತಿಯ” ಐಡಿಯಾದಿಂದ ಇನ್ನೂ ಪ್ರಭಾವಿತವಾಗಿಲ್ಲವೋ, ಆ ಸಮಾಜಗಳೆಲ್ಲ ತಮ್ಮ ತಮ್ಮ ಬಾಶೋಗಳನನ್ನು ಹೊಂದಿವೆ. ಬಹುಶಃ ಇನ್ನೂ ಎರಡು ಮೂರು ಪೀಳಿಗೆಯ ಕೈಗಾರಿಕೀಕರಣದ ನಂತರ, ಜಪಾನೀಯರೂ ತಮ್ಮ ತಮ್ಮ ಟೆನಿಸನ್ ರನ್ನು ಹೊಂದುತ್ತಾರೆ. ಪಾಶ್ಚಿಮಾತ್ಯ ಮನುಷ್ಯರಿಗೆ ಪೌರ್ವಾತ್ಯ ಜೀವನ ವಿಧಾನಗಳಾದ ಝೆನ್ ಬುದ್ಧಿಸಂ ( ಯೂಂಗ್ ಹೇಳಿದಂತೆ) ಮುಂತಾದವೆಲ್ಲ ಅರ್ಥವಾಗುವುದಿಲ್ಲ ಎಂದು ಹೇಳಲಿಕ್ಕಾಗುವುದಿಲ್ಲವಾದರೂ, ಆಧುನಿಕ ಮನುಷ್ಯರಿಗೆ, ಆಸ್ತಿ ಕೇಂದ್ರಿತವಲ್ಲದ ಮತ್ತು ಅತಿಯಾಸೆಯಿಂದ (greed) ಹೊರತಾದ ಸಮಾಜಗಳ ಸ್ಪಿರಿಟ್ ಅರ್ಥವಾಗುವುದಿಲ್ಲ. ಖಂಡಿತ Master Eckhart ನ ಬರಹಗಳು ( ಬೋಶೋ ಮತ್ತು ಝೆನ್ ನಷ್ಟೇ ಅರ್ಥಮಾಡಿಕೊಳ್ಳಲು ಕಷ್ಟಕರವಾದ) ಮತ್ತು ಬುದ್ಧನ ವಿಚಾರಗಳು ಕೇವಲ ಒಂದೇ ಭಾಷೆಯ ಎರಡು ಆಡುನುಡಿಗಳ (dialect) ರೀತಿಯವು.

(ಮುಂದುವರೆಯುತ್ತದೆ)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply