ಅಧಿಕಾರದ ಚಲಾವಣೆ : To have or to be #17

ಯಾವಾಗ ಅಧಿಕಾರ ಚಲಾಯಿಸುವವರು ತಮ್ಮ ಅವಶ್ಯಕ ಗುಣಲಕ್ಷಣಗಳನ್ನು ಕಳೆದುಕೊಳ್ಳುತ್ತಾರೋ ಅಥವಾ ಅವರ ಆ ಗುಣಲಕ್ಷಣಗಳು ದುರ್ಬಲವಾಗುತ್ತವೆಯೋ ಆಗ ಅವರ ಅಧಿಕಾರ ಕೇಂದ್ರವೇ ಕೊನೆಗೊಳ್ಳುತ್ತದೆ. ಬಹಳಷ್ಟು ಪ್ರಾಚೀನ ಸಮಾಜಗಳಲ್ಲಿ, ಅರ್ಹತೆಯನ್ನ ದೈಹಿಕ ಸಾಮರ್ಥ್ಯದ ಬದಲಿಗೆ, ಅನುಭವ, ತಿಳುವಳಿಕೆ ಮುಂತಾದ ಕ್ವಾಲಿಟಿಗಳ ಮೂಲಕ ನಿರ್ಧರಿಸಲಾಗಿರುವ ಥೇಟ್ ಇದೇ ರೀತಿಯ ಅಧಿಕಾರ ಕೇಂದ್ರಗಳನ್ನ ನಾವು ಗಮನಿಸಬಹುದು…

ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/09/fromm-13/

Exercising Authority

Having ಮತ್ತು Being ಜೀವನ ವಿಧಾನಗಳಲ್ಲಿನ ಇನ್ನೊಂದು ವ್ಯತ್ಯಾಸವನ್ನು, ನಾವು ಅಧಿಕಾರವನ್ನು ಚಲಾಯಿಸುವ ರೀತಿಯಲ್ಲಿ ಗುರುತಿಸಬಹುದು. Having ರೀತಿಯ ಅಧಿಕಾರ ಕೇಂದ್ರ ಮತ್ತು Being ರೀತಿಯ ಅಧಿಕಾರ ಕೇಂದ್ರಗಳಲ್ಲಿನ ವ್ಯತ್ಯಾಸಗಳಲ್ಲಿ ಅತ್ಯಂತ ಮಹತ್ವದ ಅಂಶವೊಂದನ್ನು ಅಭಿವ್ಯಕ್ತಿಸಲಾಗಿದೆ. ಬಹುತೇಕ ನಾವೆಲ್ಲರೂ ಕೊನೆಪಕ್ಷ ನಮ್ಮ ಬದುಕಿನ ಒಂದಿಲ್ಲ ಒಂದು ಹಂತದಲ್ಲಾದರೂ ಅಧಿಕಾರವನ್ನು ಚಲಾಯಿಸುತ್ತೇವೆ. ಯಾರು ಮಕ್ಕಳನ್ನು ಬೆಳೆಸುತ್ತಿದ್ದಾರೋ ಅವರು ತಮಗೆ ಇಷ್ಟ ಇರಲಿ ಅಥವಾ ಇಲ್ಲದೇ ಇರಲಿ, ತಮ್ಮ ಮಕ್ಕಳನ್ನು ಅಪಾಯದಿಂದ ರಕ್ಷಿಸಲು, ಹಾಗು ವಿವಿಧ ಪರಿಸ್ಥಿತಿಗಳಲ್ಲಿ ಮಕ್ಕಳು ಹೇಗೆ ವರ್ತಿಸಬೇಕು ಎನ್ನುವ ಕುರಿತಾಗಿ ಅವರಿಗೆ ಕನಿಷ್ಟ ಮಾಹಿತಿ ನೀಡಲು ಅಧಿಕಾರವನ್ನು ಚಲಾಯಿಸಲೇಬೇಕು. ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಕೂಡ ಈ ಅಧಿಕಾರ ಚಲಾವಣೆಗೆ ಗುರಿಯಾಗಿರುವ ವಸ್ತುಗಳಂತೆ (objects) ಕಾಣಿಸಿಕೊಳ್ಳುತ್ತಾರೆ. ನಮ್ಮ ಥರದ ಅಧಿಕಾರಶಾಹಿ, ಶ್ರೇಣೀಕೃತ ಸಮಾಜದ ಬಹುತೇಕ ಎಲ್ಲ ಸದಸ್ಯರೂ ಅಧಿಕಾರ ಚಲಾಯಿಸುವವರೇ, ಸಾಮಾಜಿಕವಾಗಿ ಕೆಳವರ್ಗದ ಜನರನ್ನು ಮಾತ್ರ ಹೊರತುಪಡಿಸಿ, ಈ ಜನ ಮೇಲ್ವರ್ಗದ ಜನರ ಅಧಿಕಾರ ಚಲಾವಣೆಗೆ ಒಳಗಾಗಿರುವವರು.

Having ಮತ್ತು Being ವಿಧಾನಗಳಲ್ಲಿ “ ಅಧಿಕಾರ” (authority) ವನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ, “ಅಧಿಕಾರ” ಎನ್ನುವುದು ಒಂದು ವಿಶಾಲಾರ್ಥದ ಪದ ಮತ್ತು ಇದಕ್ಕಿರುವ ಎರಡು ಅರ್ಥಗಳು ಸಂಪೂರ್ಣವಾಗಿ ವೈರುಧ್ಯದಿಂದ ಕೂಡಿವೆ ಎನ್ನುವುದನ್ನ ಗುರುತಿಸುವುದರ ಮೇಲೆ ಅವಲಂಬಿತವಾಗಿದೆ. ಒಂದು ಅರ್ಥ “ತರ್ಕಬದ್ಧ” (rational) ಆಗಿದ್ದರೆ ಇನ್ನೊಂದು “ತರ್ಕರಹಿತ” (irrational) ಆಗಿದೆ. ತರ್ಕಬದ್ಧ ಅಧಿಕಾರ, ಅರ್ಹತೆ-ಸಾಮರ್ಥ್ಯದ (competence) ಮೇಲೆ ನಿರ್ಭರವಾಗಿದೆ ಮತ್ತು ಇಂಥ ಅಧಿಕಾರ ಯಾರು ಇದನ್ನು ಅವಲಂಬಿಸಿರುತ್ತಾರೋ ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ತರ್ಕರಹಿತ ಅಧಿಕಾರ ಅವಲಂಬಿತವಾಗಿರುವುದು ದಬ್ಬಾಳಿಕೆಯ ಮೇಲೆ ಮತ್ತು ಇದು ಇಂಥ ಅಧಿಕಾರಕ್ಕೆ ಒಳಪಟ್ಟವರನ್ನು ಶೋಷಣೆ ಮಾಡಲು ಅವಕಾಶ ಮಾಡಿಕೊಡುತ್ತದೆ. ( ಈ ವ್ಯತ್ಯಾಸವನ್ನು ನಾನು ನನ್ನ Escape from Freedom ಕೃತಿಯಲ್ಲಿ ಚರ್ಚಿಸಿದ್ದೇನೆ)

ಪ್ರಾಚೀನ ಸಮಾಜಗಳಲ್ಲಿ, ಉದಾಹರಣೆಗೆ ಬೇಟೆಗಾರರು ಮತ್ತು ಆಹಾರ ಸಂಗ್ರಹಿಸುವವರಲ್ಲಿ, ಅಧಿಕಾರ ಚಲಾಯಿಸುವ ವ್ಯಕ್ತಿಯ ಆಯ್ಕೆ ನಡೆಯುವುದು ಆ ವ್ಯಕ್ತಿಯ ಅರ್ಹತೆ- ಸಾಮರ್ಥ್ಯಕ್ಕನುಗುಣವಾಗಿ. ಸಂದರ್ಭಕ್ಕನುಸಾರವಾಗಿ ವ್ಯಕ್ತಿಯ ಅರ್ಹತೆ-ಸಾಮರ್ಥ್ಯದ ಗುಣಲಕ್ಷಣಗಳು ನಿರ್ಧರಿತವಾಗುತ್ತವೆಯಾದರೂ ಬಹುತೇಕವಾಗಿ, ಜಾಣತನ, ಅನುಭವ, ಔದಾರ್ಯ,ಕೌಶಲ್ಯ, presence, ಧೈರ್ಯ ಮುಂತಾದವು ಯಾವಾಗಲೂ ಈ ಅರ್ಹತೆಯ ಭಾಗವಾಗಿರುತ್ತವೆ ಎನ್ನುವ ಅನಿಸಿಕೆ ಸಮಾಜಗಳಲ್ಲಿ ಬೇರೂರಿದೆ. ಇಂಥ ಬಹಳಷ್ಟು ಬುಡಕಟ್ಟುಗಳಲ್ಲಿ ಯಾವ ಶಾಶ್ವತ ಅಧಿಕಾರ ಕೇಂದ್ರ ಸ್ಥಾಪಿತ ಆಗಿಲ್ಲದಿರುವಾದರೂ, ಅವಶ್ಯಕತೆ ಹುಟ್ಟಿಕೊಂಡಾಗಲೆಲ್ಲ ಅಧಿಕಾರ ಚಲಾಯಿಸುವವರು ಹುಟ್ಟಿಕೊಳ್ಳುತ್ತಾರೆ. ಅಥವಾ ಬೇರೆ ಬೇರೆ ಸಂದರ್ಭಗಳಿಗೆ ಅನುಕೂಲವಾಗುವಂತೆ ಬೇರೆ ಬೇರೆ ಅಧಿಕಾರ ಕೇಂದ್ರಗಳು ಸೃಷ್ಟಿಯಾಗಿರುತ್ತವೆ ; ಉದಾಹರಣೆಗೆ, ಯುದ್ಧ ನಿಭಾಯಿಸಲು, ಧಾರ್ಮಿಕ ಕ್ರಿಯೆಗಳಿಗಾಗಿ, ಜಗಳ ಬಿಡಿಸಲು, ಇತ್ಯಾದಿಯಾಗಿ.

ಯಾವಾಗ ಅಧಿಕಾರ ಚಲಾಯಿಸುವವರು ತಮ್ಮ ಅವಶ್ಯಕ ಗುಣಲಕ್ಷಣಗಳನ್ನು ಕಳೆದುಕೊಳ್ಳುತ್ತಾರೋ ಅಥವಾ ಅವರ ಆ ಗುಣಲಕ್ಷಣಗಳು ದುರ್ಬಲವಾಗುತ್ತವೆಯೋ ಆಗ ಅವರ ಅಧಿಕಾರ ಕೇಂದ್ರವೇ ಕೊನೆಗೊಳ್ಳುತ್ತದೆ. ಬಹಳಷ್ಟು ಪ್ರಾಚೀನ ಸಮಾಜಗಳಲ್ಲಿ, ಅರ್ಹತೆಯನ್ನ ದೈಹಿಕ ಸಾಮರ್ಥ್ಯದ ಬದಲಿಗೆ, ಅನುಭವ, ತಿಳುವಳಿಕೆ ಮುಂತಾದ ಕ್ವಾಲಿಟಿಗಳ ಮೂಲಕ ನಿರ್ಧರಿಸಲಾಗಿರುವ ಥೇಟ್ ಇದೇ ರೀತಿಯ ಅಧಿಕಾರ ಕೇಂದ್ರಗಳನ್ನ ನಾವು ಗಮನಿಸಬಹುದು. ಮಂಗಗಳ ಜೊತೆ ನಡೆಸಲಾದ ಒಂದು ಆಸಕ್ತಿದಾಯಕ ಪ್ರಯೋಗದಲ್ಲಿ, J.M.R. Delgado (1967) ನಿರೂಪಿಸಿದ್ದೇನೆಂದರೆ, ಪ್ರಬಲ ಪ್ರಾಣಿಯೊಂದು ತನ್ನ ಅರ್ಹತೆಗೆ ಕಾರಣವಾದ ಗುಣಲಕ್ಷಣಗಳನ್ನು ಕೆಲಹೊತ್ತಿನ ಮಟ್ಟಿಗೆ ಕಳೆದುಕೊಂಡರೂ ಅದು, ಇತರ ಪ್ರಾಣಿಗಳ ಮೇಲಿನ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ.

Being ವಿಧಾನದಲ್ಲಿ ಅಧಿಕಾರ ಚಲಾಯಿಸುವವರು, ಕೆಲವು ಸೋಷಿಯಲ್ ಫಂಕ್ಷನ್ ಗಳನ್ನು ಪೂರೈಸುವ ಕುರಿತಾದ ತಮ್ಮ ವೈಯಕ್ತಿಕ ಅರ್ಹತೆ-ಸಾಮರ್ಥ್ಯದ ಬಗ್ಗೆ ಮಾತ್ರ ವಿನೀತರಾಗಿಲ್ಲ, ಅವರು ಅತ್ಯುನ್ನತ ಮಟ್ಟದ ಬೆಳವಣಿಗೆ ಮತ್ತು ಏಕತ್ವವನ್ನ (integration) ಸಾಧಿಸಿಕೊಂಡಿರುವ ತಮ್ಮ ವ್ಯಕ್ತಿತ್ವದ ತಿರುಳಿನಲ್ಲೂ ಅಷ್ಟೇ ವಿನೀತ ಭಾವವನ್ನು ರೂಢಿಸಿಕೊಂಡಿದ್ದಾರೆ. ಇಂಥ ಜನರಿಗೆ, ಬೇರೆಯವರಿಗೆ ಆರ್ಡರ್ ಮಾಡುವ, ಭಯ ಹುಟ್ಟಿಸುವ, ಲಂಚ ಕೊಡುವ ಪ್ರಮೇಯ ಎದುರಾಗುವುದಿಲ್ಲ, ಅವರ ಮೂಲಕ ಅಧಿಕಾರ ತಾನೇ ತಾನಾಗಿ ಎಲ್ಲವನ್ನೂ ಸಾಧ್ಯಮಾಡಿಕೊಳ್ಳುತ್ತದೆ ( authority will radiate through such people). ಇವರು ಅತ್ಯಂತ ಉನ್ನತ ಮಟ್ಟದ ಬೆಳವಣಿಗೆಯನ್ನ ಸಾಧ್ಯಮಾಡಿಕೊಂಡ ವ್ಯಕ್ತಿಗಳು, ಇವರು ತಮ್ಮ ಅಧಿಕಾರವನ್ನು ರುಜುವಾತುಪಡಿಸುವುದು ಮುಖ್ಯವಾಗಿ ತಾವು ಏನು ಮಾಡುತ್ತಿದ್ದೇವೆ, ಏನು ಹೇಳುತ್ತಿದ್ದೇವೆ ಎನ್ನುವುದರ ಮೂಲಕ ಅಲ್ಲ, ಇವರ ಅಧಿಕಾರದ ಅನುಭವ ನಮಗೆ ಆಗುವುದು, ಅವರು ಹೇಗೆ ಇರುವರು (what they are) ಎನ್ನುವ ಕಾರಣಕ್ಕೆ, ಯಾವುದೆಲ್ಲ ಮಾನವ ಜನಾಂಗಕ್ಕೆ ಸಾಧ್ಯ ಎನ್ನುವ ಕಾರಣಕ್ಕೆ. ನಮ್ಮ ಎಲ್ಲ ಗ್ರೇಟ್ ಮಾಸ್ಟರ್ಸ್ ಆಫ್ ಲಿವಿಂಗ್ ಇಂಥ ಅಥಾರಿಟಿಯನ್ನ ಮೈಗೂಡಿಸಿಕೊಂಡವರು, ಕಡಿಮೆ ಮಟ್ಟದ ಪರಿಪೂರ್ಣತೆಯಲ್ಲಿಯಾದರೂ ಇಂಥ ಕೆಲವರಾದರೂ ಎಲ್ಲ ಶೈಕ್ಷಣಿಕ ಹಂತಗಳಲ್ಲಿ ಮತ್ತು ಬೇರೆ ಬೇರೆ ಥರದ ಸಂಸ್ಕೃತಿಗಳಲ್ಲಿ ಕಾಣಸಿಗುತ್ತಾರೆ. [ ಈ ಅಂಶದ ಆಧಾರದ ಮೇಲೆಯೇ ನಮ್ಮ ಶಿಕ್ಷಣದ ಸಮಸ್ಯೆ ತೂಗಾಡುತ್ತದೆ. ತಂದೆ ತಾಯಿ ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸಿ ತಮ್ಮ ತಮ್ಮ ಕೇಂದ್ರಗಳಲ್ಲಿ ಸ್ಥಿರವಾಗಿರುವ ಸಂದರ್ಭಗಳಲ್ಲಿ, ಅಧಿಕಾರಕೇಂದ್ರಿತ (authoritarian) ಮತ್ತು ತನ್ನ ಪಾಡಿಗೆ ತಾನು ಮುಂದುವರೆದುಕೊಂಡು ಹೋಗುವ (lauded z-faire) ಶಿಕ್ಷಣಪದ್ದತಿಗಳಲ್ಲಿ ಕಾಣಸಿಗುವ ವೈರುಧ್ಯ ಅತ್ಯಂತ ಕಡಿಮೆ. ಇಂಥ being ವಿಧಾನದ ಅಧಿಕಾರಕ್ಕೆ, ಮಗು ತುಂಬ ಕಾತುರತೆಯಿಂದ ಪ್ರತಿಕ್ರಯಿಸುತ್ತದೆ ; ಇನ್ನೊಂದು ಬದಿಯಲ್ಲಿ ಮಗು, ಬೆಳೆಯುತ್ತಿರುವ ಮಗುವಿನಿಂದ ತಾವು ನಿರೀಕ್ಷಿಸುತ್ತಿರುವ ಗುಣ ಲಕ್ಷಣಗಳನ್ನು ತಮ್ಮ ಸ್ವಭಾವದಲ್ಲಿ ಪ್ರದರ್ಶಿಸದೇ ಇರುವ ಜನರ ಒತ್ತಡಕ್ಕೆ ಅಥವಾ ನಿರ್ಲಕ್ಷಕ್ಕೆ ಅಥವಾ ಅತಿ ಆಸಕ್ತಿಗೆ (over feeding) ತೀವ್ರವಾಗಿ ಪ್ರತಿಭಟನೆ ತೋರಿಸುತ್ತದೆ.]

ಬೇಟೆಗಾರ ಮತ್ತು ಆಹಾರಕ್ಕಾಗಿ ಓಡಾಡುವ ಸಮಾಜಗಳಿಗಿಂತ ಹೆಚ್ಚು ದೊಡ್ಡದಾದ ಹೆಚ್ಚು ಸಂಕೀರ್ಣವಾದ, ಶ್ರೇಣೀಕೃತ ಸಮಾಜಗಳ ಸ್ಥಾಪನೆಯಿಂದಾಗಿ, ಅರ್ಹತೆಯ ಆಧಾರದ ಅಧಿಕಾರ ಕೇಂದ್ರಗಳು, ಸಾಮಾಜಿಕ ಸ್ಥಿತಿಯನ್ನಾಧರಿಸಿದ (based on social status) ಅಧಿಕಾರ ಕೇಂದ್ರಗಳಿಗೆ ವಿಧೇಯವಾಗತೊಡಗಿದವು. ಹೀಗೆಂದರೆ ಸಧ್ಯದ ಅಧಿಕಾರ ಕೇಂದ್ರಗಳು ಅನರ್ಹ ಏಂದೇನಲ್ಲ, ಬದಲಾಗಿ ಸಧ್ಯದ ಅಧಿಕಾರ ಕೇಂದ್ರಗಳಿಗೆ ಅರ್ಹತೆ ಅವಶ್ಯಕ ಮಾನದಂಡವಲ್ಲ ಎಂದು ಮಾತ್ರ. ರಾಜವಂಶದ ಅಧಿಕಾರ ಕೇಂದ್ರ, ಎಲ್ಲಿ ಅಧಿಕಾರದ ಅರ್ಹತೆಯನ್ನ ವಂಶದ ರಕ್ತಸಂಬಂಧ ನಿರ್ಧರಿಸುತ್ತದೆ ಅಥವಾ, ವಿಶ್ವಾಸಘಾತ, ಕೊಲೆಯ ಮೂಲಕ ಅಧಿಕಾರ ಆಕ್ರಮಿಸಿಕೊಂಡ ಅನೈತಿಕ ಕ್ರಿಮಿನಲ್ ಗಳು ಅಥವಾ, ಆಧುನಿಕ ಡೆಮಾಕ್ರಸಿಯಲ್ಲಿ ತಮ್ಮ ದೈಹಿಕ ಹಾವ ಭಾವ, ಭಾಷಣ , ಹಣ ಮುಂತಾದವುಗಳ ಮೂಲಕ ಅಧಿಕಾರಕ್ಕೆ ಬರುವ ರಾಜಕಾರಣಿ ಜನರು, ಈ ಎಲ್ಲ ಸಂದರ್ಭಗಳಲ್ಲಿ ವ್ಯಕ್ತಿಗಳ ಅರ್ಹತೆ-ಸಾಮರ್ಥ್ಯ (competence) ಕ್ಕೂ ಅವರು ಆಕ್ರಮಿಸಿಕೊಳ್ಳುತ್ತಿರುವ ಅಧಿಕಾರಕ್ಕೂ ಯಾವ ಸಂಬಂಧವೂ ಇಲ್ಲ.

ಕೆಲವು ಅರ್ಹತೆಗಳ ಆಧಾರದ ಮೇಲೆಯೇ ಅಧಿಕಾರವನ್ನು ಹೊಂದಿದ ಸಂದರ್ಭಗಳಲ್ಲಿ ಕೂಡ ಒಮ್ಮೊಮ್ಮೆ ಸೀರಿಯಸ್ ಆದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಯ್ಕೆಗೊಂಡ ನಾಯಕರು ಒಂದು ವಿಷಯದ ಆಧಾರದ ಮೇಲೆ ಅರ್ಹರಾಗಿ ಇನ್ನೊಂದರಲ್ಲಿ ಅನರ್ಹರಾಗಿರಬಹುದು ; ಉದಾಹರಣೆಗೆ, ಒಬ್ಬ ರಾಜಕಾರಣಿ ಯುದ್ಧವನ್ನು ನಿರ್ವಹಿಸುವುದರಲ್ಲಿ ನಿಷ್ಣಾತರಾಗಿದ್ದು ಶಾಂತಿ ಕಾಲದ ಪರಿಸ್ಥಿತಿಯನ್ನು ಸಂಭಾಳಿಸಲು ಅನರ್ಹರಾಗಿರಬಹುದು. ಅಥವಾ ಮೊದ ಮೊದಲು ಪ್ರಾಮಾಣಿಕ, ಧೈರ್ಯಶಾಲಿಯಾಗಿದ್ದ ನಾಯಕರು, ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಈ ಕ್ವಾಲಿಟಿಯನ್ನ ಕಳೆದುಕೊಳ್ಳಬಹುದು. ಅಥವಾ ವಯಸ್ಸು ಮತ್ತು ದೈಹಿಕ ತೊಂದರೆಗಳು ಅವರ ಕ್ವಾಲಿಟಿ ನಶಿಸಿ ಹೋಗಲು ಕಾರಣವಾಗಬಹುದು. ಕೊನೆಗೂ ನಾವು ನೆನಪಿಡಬೇಕಾದದ್ದು ಏನೆಂದರೆ, ಸಣ್ಣ ಸಣ್ಣ ಗುಂಪಿನ ಸದಸ್ಯರುಗಳಿಗೆ ತಮ್ಮ ನಾಯಕರ (authority) ಸ್ವಭಾವಗಳನ್ನು ಅಳೆಯುವುದು, ತೂಗಿ ನೋಡುವುದು, ಲಕ್ಷ ಲಕ್ಷ ಜನಗಳ ಗುಂಪಿನ ಸದಸ್ಯರಿಗಿಂತ ಹೆಚ್ಚು ಸುಲಭ. ಬೃಹತ್ ಗುಂಪಿನ ಸದಸ್ಯರುಗಳಿಗೆ, ಪಬ್ಲಿಕ್ ರಿಲೇಷನ್ ಎಕ್ಸಪರ್ಟುಗಳು ಸೃಷ್ಟಿ ಮಾಡಿರುವ ತಮ್ಮ ನಾಯಕನ ಇಮೇಜು ಮಾತ್ರ ಗೊತ್ತು.

ಅರ್ಹತೆ-ಸಾಮರ್ಥ್ಯಗಳನ್ನು ಸೃಷ್ಟಿ ಮಾಡುವ ಕ್ವಾಲಿಟಿಯ ನಶಿಸುವಿಕೆಗೆ ಕಾರಣಗಳು ಏನೇ ಇರಲಿ, ಬೃಹತ್, ಸಂಘಟಿತ, ಶ್ರೇಣೀಕೃತ ಸಮಾಜಗಳಲ್ಲಿ ಅಧಿಕಾರದ ಪರಕೀಯತೆಯ ಪ್ರಕ್ರಿಯೆ ( process of alienation of authority) ನಡೆಯುತ್ತಿರುತ್ತದೆ. ಮೊದ ಮೊದಲ ಇದ್ದ ನೈಜ ಅಥವಾ ಆರೋಪಿತ ಅರ್ಹತೆ, ಅಧಿಕಾರದ ಯೂನಿಫಾರ್ಮ್ ಗೆ, ಟೈಟಲ್ ಗೆ ವರ್ಗಾಯಿಸಲ್ಪಡುತ್ತದೆ. ಅಧಿಕಾರಿ ಸೂಕ್ತ ಯೂನಿಫಾರ್ಮ್ ಅಥವಾ ಟೈಟಲ್ ಧರಿಸಿದಾಗ, ಈ ಆರೋಪಿತ ಅರ್ಹತೆ ಅವರ ನೈಜ ಅರ್ಹತೆಯನ್ನ ರಿಪ್ಲೇಸ್ ಮಾಡುತ್ತದೆ. ಕಿಂಗ್ – ಇಂಥದೊಂದು ಪದವಿಯನ್ನು ಈ ಬಗೆಯ ಅಥಾರಿಟಿಗೆ ಸಂಕೇತವಾಗಿ ಬಳಸುವುದು – ಅಪ್ಪಟ ಮೂರ್ಖತನ ಹಾಗು ಕೇಡಿನಿಂದ ಕೂಡಿದ್ದು ಮತ್ತು, ಅಧಿಕಾರವನ್ನು ಹೊಂದಲು ಅತ್ಯಂತ ಅನರ್ಹರಾದವರೊಬ್ಬರು ಈ ಕಾರಣವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಎಲ್ಲಿಯವರೆಗೆ ಅವರು ಆ ಪದವಿಯನ್ನು ಹೊಂದಿದ್ದಾರೋ ಅಲ್ಲಿಯವರೆಗೆ ಅವರು ಆಯಾ ಅರ್ಹತೆಯ ಕ್ವಾಲಿಟಿಯನ್ನು ಹೊಂದಿದ್ದಾರೆ ಎಂದು ತಿಳಿದುಕೊಳ್ಳಲಾಗುತ್ತದೆ. ಚಕ್ರವರ್ತಿ ಬೆತ್ತಲಾಗಿದ್ದರೂ ಅವನು ಬೆಲೆಬಾಳುವ ಸುಂದರ ಪೋಷಾಕು ಧರಿಸಿದ್ದಾನೆಂದು ಎಲ್ಲರೂ ನಂಬುತ್ತಾರೆ.

ಜನರು, ಯುನಿಫಾರ್ಮ್ ಗಳನ್ನ, ಟೈಟಲ್ ಗಳನ್ನ ಅರ್ಹತೆಯ ನೈಜ ಕ್ವಾಲಿಟಿಯ ಸಂಕೇತ ಎಂದುಕೊಳ್ಳುವುದು ತನ್ನಷ್ಟಕ್ಕೆ ತಾನೆ ಆಗುವ ಪ್ರಕ್ರಿಯೆಯಲ್ಲ. ಯಾರು ಈ ಅಧಿಕಾರದ ಸಂಕೇತಗಳನ್ನು ಹೊಂದಿದ್ದಾರೋ, ಯಾರಿಗೆ ಇಂಥ ಸಂಗತಿಯಿಂದ ಲಾಭ ಇದೆಯೋ ಅವರು, ತಮ್ಮ ಗುರಿಯಾಗಿರುವ ಜನರ ನೈಜ (ನಿರ್ಣಾಯಕ) ಆಲೋಚನೆಗಳನ್ನು ಮಂಕಾಗಿಸಿ ಇಂಥದೊಂದು ಕಾಲ್ಪನಿಕತೆಯನ್ನ (fiction) ನಂಬುವಂತೆ ಮಾಡುತ್ತಾರೆ. ಯಾರು ಈ ಬಗ್ಗೆ ಆಲೋಚನೆ ಮಾಡುತ್ತಾರೋ ಅವರಿಗೆ ಈ ಪ್ರೊಪಗಾಂಡಾ ಯೋಜನೆಯ ಬಗ್ಗೆ , ಇಂಥ ಪ್ರೊಪಗಾಂಡಾಗಳ ಮೂಲಕ ನಾಶ ಮಾಡಲಾಗುವ ಕ್ರಿಟಿಕಲ್ ಜಡ್ಜಮೆಂಟ್ ಬಗ್ಗೆ, ಕ್ಲೀಷೆಗಳ ಮೂಲಕ ಮೈಂಡ್ ನ ನಿಷ್ಕ್ರೀಯಗೊಳಿಸಿ ವಿಧೆಯತೆಯತ್ತ ನೂಕುವ ಬಗ್ಗೆ, ಜನರನ್ನ ಪರಾವಲಂಬಿಗಳಾಗಿಸುತ್ತ ಅವರು ತಮ್ಮ ನೋಡುವ ಮತ್ತು ನಿರ್ಣಯಿಸುವ ಸಾಮರ್ಥ್ಯವನ್ನ ಕಳೆದುಕೊಳ್ಳುವಂತೆ ಮಾಡುವ ಬಗ್ಗೆ ಗೊತ್ತಿರುತ್ತದೆ.

(ಮುಂದುವರೆಯುತ್ತದೆ…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply