ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ಪ್ರೇಮದಲ್ಲಿ
ಇದು ಹೀಗೇ ಎಂದು ಹೇಳುವ ನಿಯಮಗಳಿಲ್ಲ,
ಯಾರು ಹೆಚ್ಚು ಪ್ರೇಮಿಸುತ್ತಾರೆ
ಯಾರು ಕಡಿಮೆ ಎನ್ನುವ ಸಂಶಯಗಳಿಲ್ಲ,
ಯಾರು ಉನ್ಮತ್ತರು, ಯಾರು ಸ್ಥಿತಪ್ರಜ್ಞರು
ಎನ್ನುವ ತಮಾಷೆಗಳಿಲ್ಲ.
ಪ್ರೇಮದಲ್ಲಿ,
ಶಾಸ್ತ್ರಗಳನ್ನು ಬಾಯಿಪಾಠ ಮಾಡಿ ಒಪ್ಪಿಸುವ
ಜಾಣತನವಿಲ್ಲ,
ಗುರುಗಳಿಲ್ಲ, ಶಿಷ್ಯರಿಲ್ಲ,
ಇರುವುದೆಲ್ಲ, ಕೇವಲ
ತುಂಟ ಕಾಲೆಳೆದಾಟ,
ಅರ್ಥಗಳಿಲ್ಲದ ಹರಟೆ, ಸಲ್ಲಾಪ
ಹೊಟ್ಟೆ ತುಂಬ ನಗು ಮತ್ತು
ಮೈದುಂಬಿ ಕುಣಿತ.
ಒಡೆದು ಚೂರು ಚೂರಾದಾಗ ಕುಣಿಯಿರಿ,
ಸರಪಳಿಗಳನ್ನು ಕತ್ತರಿಸಿ ಮುಕ್ತರಾದಾಗ ಕುಣಿಯಿರಿ,
ಜಗಳ, ಹೋರಾಟಗಳ ನಡುವೆ ಕುಣಿಯಿರಿ,
ನಿಮ್ಮ ರಕ್ತದ ಕಣ ಕಣದಲ್ಲಿ ಕುಣಿಯಿರಿ
ಎಲ್ಲದರಿಂದ ಪಾರಾದಾಗ ಕುಣಿಯಿರಿ,
ಕುಣಿಯಿರಿ, ಕುಣಿಯಿರಿ, ಕುಣಿಯಿರಿ
~ ರೂಮಿ
ಒಮ್ಮೆ ಅತ್ಯಂತ ದುಃಖಿತವಾಗಿದ್ದ ಮಂಗವೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿತು.
ಮಂಗ ಮರದ ಕೆಳಗೆ ಗಾಢ ನಿದ್ದೆಯಲ್ಲಿದ್ದ ಕಾಡಿನ ರಾಜ ಸಿಂಹದ ಕಿವಿ ಎಳೆಯಿತು.
ಎತ್ತೆಚ್ಚ ಸಿಂಹ ಜೋರಾಗಿ ಗರ್ಜಿಸಿತು, “ ಯಾರದು ತಮ್ಮ ಸಾವಿಗೆ ತಾವೇ ಆಹ್ವಾನ ನೀಡಿದವರು”.
“ ನಾನು ಮಹಾರಾಜ, ನಾನು ನಿಮ್ಮ ಕಿವಿ ಎಳೆದದ್ದು. ನನಗೆ ಯಾರೂ ಗೆಳೆಯರಿಲ್ಲ ಹಾಗಾಗಿ ನನಗೆ ಡಿಪ್ರೆಶ್ಶನ್ ಆಗಿದೆ. ನಾನು ಸಾಯಬೇಕು ಮಹಾರಾಜ, ದಯವಿಟ್ಟು ನನ್ನ ಕೊಂದುಬಿಡಿ”. ಮಂಗ ಬೇಡಿಕೊಂಡಿತು.
“ ನೀನು ನನ್ನ ಕಿವಿ ಎಳೆದದ್ದು ಯಾರಾದರೂ ನೋಡಿದರಾ? “ ಸಿಂಹ ಪ್ರಶ್ನೆ ಮಾಡಿತು.
“ ಇಲ್ಲ ಮಹಾರಾಜ ಯಾರೂ ನೋಡಲಿಲ್ಲ “ ಮಂಗ ನಡುಗುತ್ತ ಉತ್ತರಿಸಿತು.
“ ಹಾಗಾದರೆ ಇನ್ನೊಮ್ಮೆ ನನ್ನ ಕಿವಿ ಎಳೆ ಪ್ಲೀಸ್, ನೀನು ಕಿವಿ ಎಳೆದದ್ದು ಬಹಳ ಚೆನ್ನಾಗಿತ್ತು”. ಸಿಂಹ ಬೇಡಿಕೊಂಡಿತು.
ಕಾಡುವ ಗೆಳೆಯರಿಲ್ಲದಿದ್ದರೆ ಕಾಡಿನ ರಾಜನಿಗೂ ಬೋರ್ ಆಗುತ್ತದೆ. ಸೋ ನಿಮ್ಮ ಗೆಳೆಯರ ಟಚ್ ಲ್ಲಿರಿ, ಅವರ ಕಾಲೆಳೆಯುತ್ತ, ತಮಾಷೆ ಮಾಡುತ್ತ, ಅಣಕಿಸುತ್ತ, ನಗುತ್ತ. ಈ ವಿನೋದ ಅವರನ್ನಷ್ಟೇ ಅಲ್ಲ ನಿಮ್ಮನ್ನೂ ಡಿಪ್ರೆಶ್ಶನ್ ನಿಂದ ದೂರ ಮಾಡುತ್ತದೆ.
ಒಮ್ಮೆ ನಸ್ರುದ್ದೀನ್ ಗೆಳೆಯನೊಡನೆ ಮಾತಾಡುತ್ತಿದ್ದ.
ನಸ್ರುದ್ದೀನ್ : ಬೋರ್ ಆಗ್ತಿದೆ, ಸಿನೇಮಾಕ್ಕೆ ಹೋಗೋಣ ಬರ್ತಿಯಾ ?
ಗೆಳೆಯ : ಇವತ್ತಾಗಲ್ಲ, ಡಾಕ್ಟರ್ ಅಪಾಯಿಂಟ್ಮೆಂಟ್ ಇದೆ.
ನಸ್ರುದ್ದೀನ್ : ಕ್ಯಾನ್ಸಲ್ ಮಾಡು. ಮೈ ಗೆ ಹುಶಾರಿಲ್ಲ ಅಂತ ಫೋನ್ ಮಾಡಿ ಹೇಳು ಡಾಕ್ಟರ್ ಗೆ.
ನಸ್ರುದ್ದೀನ್ ಗೆಳೆಯನಿಗೆ ಸಲಹೆ ನೀಡಿದ.
(Source : Zen page)