ತಿಳುವಳಿಕೆಗೆ, ವಿವೇಕಕ್ಕೆ ಮಿತಿ ಇಲ್ಲ, ಅದು ಜ್ಞಾನ ಮತ್ತು ಕ್ರಿಯೆ ಎರಡನ್ನೂ ಒಳಗೊಂಡಿರುವಂಥದು. ನಾವು ಟೊಂಗೆಯನ್ನು ಮಾತ್ತ ಅಪ್ಪಿಕೊಳ್ಳುತ್ತ ಅದನ್ನೇ ಇಡೀ ಮರ ಎಂದುಕೊಳ್ಳುತ್ತೇವೆ. ಹಾಗಾಗಿ ಬಿಡಿಯಾದ ಜ್ಞಾನದಿಂದ ನಾವು ಇಡಿಯಾದ ಆನಂದವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಅಸಾಧ್ಯ… ~ ಜಿಡ್ಡು ಕೃಷ್ಣಮೂರ್ತಿ ; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಜ್ಞಾನದ ಹುಡುಕಾಟದಲ್ಲಿ, ಬಯಕೆಗಳನ್ನು ಸ್ವಾಧೀನಪಡಿಸಿಕೊಳ್ಳುವ ನಮ್ಮ ಹೋರಾಟದಲ್ಲಿ ನಾವು, ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ, ಚೆಲುವನ್ನು ಕುರಿತ ಮತ್ತು ಕ್ರೌರ್ಯದ ಬಗೆಗಿನ ನಮ್ಮ ಸಂವೇದನೆಗಳನ್ನು ಮೊಂಡು ಮಾಡಿಕೊಳ್ಳುತ್ತಿದ್ದೇವೆ. ನಾವು ಹೆಚ್ಚು ಹೆಚ್ಚು ತಜ್ಞರಾಗುತ್ತ ನಮ್ಮ ಅಖಂಡತೆಯನ್ನ, ಸಮಗ್ರತೆಯಿಂದ ದೂರವಾಗುತ್ತಿದ್ದೇವೆ. ತಿಳುವಳಿಕೆಯ ಜಾಗವನ್ನ ಜ್ಞಾನ ತೆಗೆದುಕೊಳ್ಳುವುದು ಯಾವತ್ತೂ ಸಾಧ್ಯವಿಲ್ಲ. ನಾವು ಎಷ್ಟೇ ಜ್ಞಾನ ಸಂಗ್ರಹಿಸಿದರೂ, ನಮ್ಮ ವಿವರಣೆಗಳು, ನಮ್ಮ ಮಾಹಿತಿ ಖಜಾನೆ ನಮ್ಮನ್ನ ದುಗುಡದಿಂದ ಪಾರುಮಾಡಲಾರದು. ಜ್ಞಾನ ಅತ್ಯಂತ ಅವಶ್ಯಕ, ಬದುಕಿನಲ್ಲಿ ವಿಜ್ಞಾನಕ್ಕೆ ತನ್ನದೇ ಆದ ಜಾಗವಿದೆ ಆದರೆ ನಮ್ಮ ಜ್ಞಾನ, ನಮ್ಮ ಹೃದಯ ಮತ್ತು ಮನಸ್ಸನ್ನ ಉಸಿರುಗಟ್ಟಿಸುತ್ತಿದ್ದರೆ, ಹಾಗು ದುಗುಡದ ಕಾರಣವನ್ನು ವಿವರಿಸಿಬಿಡಬಹುದಾದರೆ,ನಮ್ಮ ಬದುಕು ಅರ್ಥಹೀನವಾಗುತ್ತಿತ್ತು, ಉಪಯೋಗಕ್ಕೆ ಬಾರದಹಾಗಿರುತ್ತಿತ್ತು.
ಮಾಹಿತಿ, ವಿಷಯ ಸಂಗ್ರಹಣೆ ಹೆಚ್ಚುತ್ತಲೇ ಹೋಗುತ್ತಿದೆಯಾದರೂ, ಅವುಗಳ ಸ್ವಭಾವದ ಕಾರಣವಾಗಿಯೇ ಅವು ಮಿತಿಯನ್ನು ಹೊಂದಿರುವಂಥವು. ಆದರೆ ತಿಳುವಳಿಕೆಗೆ, ವಿವೇಕಕ್ಕೆ ಮಿತಿ ಇಲ್ಲ, ಅದು ಜ್ಞಾನ ಮತ್ತು ಕ್ರಿಯೆ ಎರಡನ್ನೂ ಒಳಗೊಂಡಿರುವಂಥದು. ನಾವು ಟೊಂಗೆಯನ್ನು ಮಾತ್ತ ಅಪ್ಪಿಕೊಳ್ಳುತ್ತ ಅದನ್ನೇ ಇಡೀ ಮರ ಎಂದುಕೊಳ್ಳುತ್ತೇವೆ. ಹಾಗಾಗಿ ಬಿಡಿಯಾದ ಜ್ಞಾನದಿಂದ ನಾವು ಇಡಿಯಾದ ಆನಂದವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಅಸಾಧ್ಯ. ಕೇವಲ ಬುದ್ಧಿ ನಮ್ಮನ್ನ ಪರಿಪೂರ್ಣತೆಯತ್ತ ಕರೆದೊಯ್ಯಲಾರದು ಏಕೆಂದರೆ ಅದು ತಿಳುವಳಿಕೆಯ ಒಂದು ಭಾಗ ಮಾತ್ರ, ಒಂದಂಶ ಮಾತ್ರ.
ನಾವು ಬುದ್ಧಿಯಿಂದ ಸಂವೇದನೆಯನ್ನು ಬೇರೆ ಮಾಡಿ ಬರಡು ಮಾಡಿಬಿಟ್ಟಿದ್ದೇವೆ. ಸಂವೇದನೆಯನ್ನ ಬಲಿಕೊಟ್ಟು ಬುದ್ಧಿಯನ್ನು ವಿಸ್ತರಿಸಿಕೊಂಡಿದ್ದೇವೆ. ನಾವು, ಒಂದು ಕಾಲು ಉಳಿದೆರಡು ಕಾಲುಗಳಿಗಿಂತ ಉದ್ದವಾಗಿರುವ ಮೂರು ಕಾಲಿನ ಪ್ರಾಣಿಯಂತೆ ಮತ್ತು ಈ ಕಾರಣವಾಗಿಯೇ ನಾವು ಸಮತೋಲನವನ್ನು ಕಳೆದಿಕೊಂಡಿದ್ದೇವೆ. ನಮ್ಮ ತರಬೇತಿ ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರ, ನಮ್ಮ ಶಿಕ್ಷಣ ನಮ್ಮ ಬುದ್ಧಿಶಕ್ತಿಯನ್ನ ಹರಿತಗೊಳಿಸುತ್ತ ನಮ್ಮನ್ನು ತಂತ್ರಗಾರರನ್ನಾಗಿ, ಮಾಹಿತಿ ಸಂಗ್ರಹಕರನ್ನಾಗಿ ಬೆಳೆಸುತ್ತಿದೆ, ಹಾಗಾಗಿ ಅದು ನಮ್ಮ ವ್ಯಾವಹಾರಿಕ ಬದುಕಿನಲ್ಲಿ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ತಿಳುವಳಿಕೆ, ಬುದ್ಧಿಶಕ್ತಿಗಿಂತ ಬಹಳ ಹಿರಿದಾದದ್ದು, ಅದು ಪ್ರೀತಿ ಮತ್ತು ವಿವೇಕ ಎರಡರ ಸಂಯೋಗ. ನಮ್ಮ ಕುರಿತಾದ ಸ್ವ ಜ್ಞಾನ ಮತ್ತು ನಮ್ಮತನದ ಕುರಿತಾದ ಆಳ ಮಾಹಿತಿ ಇದ್ದಾಗ ಮಾತ್ರ ಪೂರ್ಣ ತಿಳುವಳಿಕೆ ಸಾಧ್ಯವಾಗುತ್ತದೆ.