ಧ್ಯಾನ ಎನ್ನುವುದು ಪ್ರತ್ಯೇಕವಾದ ಪ್ರಕ್ರಿಯೆ ಅಲ್ಲ. ಬದುಕನ್ನ ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಕ್ರಿಯೆಗೆ ಧ್ಯಾನ ಎಂದು ಹೆಸರು… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಸಭಿಕರೊಬ್ಬರು ಬುದ್ಧನ್ನು ಪ್ರಶ್ನೆ ಮಾಡಿದರು,
“ ನಾವು ಧ್ಯಾನ ಹೇಗೆ ಮಾಡಬೇಕು?”
ಬುದ್ಧ ಉತ್ತರಿಸುತ್ತಾನೆ, “ ನೀನು ಏನೇ ಮಾಡಿದರೂ ಪೂರ್ಣ ಅರಿವಿನಿಂದ ಮಾಡು; ಅದು ಧ್ಯಾನ. ನಡೆಯುವಾಗ ಗಮನ ಪೂರ್ತಿ ನಡೆಯುವುದರ ಮೇಲೆ ಇರಲಿ, ನಡೆಯುವುದೇ ಸಮಸ್ತ ಎನ್ನುವಂತೆ, ನಡೆಯುವುದನ್ನ ಬಿಟ್ಟರೆ ಬೇರೆ ಏನೂ ಇಲ್ಲ ಎನ್ನುವಂತೆ. ಊಟಮಾಡುವಾಗ ಕೂಡ ಹಾಗೆಯೇ ಅನ್ನದ ಪ್ರತೀ ಅಗಳನ್ನೂ ಅನುಭವಿಸಿ ಊಟಮಾಡಿ, ಪ್ರತಿಯೊಂದು ರುಚಿಯನ್ನೂ ಅನುಭವಿಸಿ. ಏಳುವಾಗ, ಕೂಡವಾಗ ನಿಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ಅರಿವು ತುಂಬಿಕೊಂಡಿರಲಿ, ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಮಾಡಿ. ಆಗ ನಿಮ್ಮ ಮನಸ್ಸು ಆ ಕ್ಷಣವನ್ನು ಬಿಟ್ಟು ಕದಲುವುದಿಲ್ಲ, ಆ ಕ್ಷಣದಲ್ಲಿಯೇ ಒಂದಾಗುತ್ತದೆ, ಆ ಕ್ಷಣವೇ ಬದುಕು ಎಂಬಂತೆ ಸ್ಥಾಯಿಯಾಗುತ್ತದೆ.
ಧ್ಯಾನ ಎನ್ನುವುದು ಪ್ರತ್ಯೇಕವಾದ ಪ್ರಕ್ರಿಯೆ ಅಲ್ಲ. ಬದುಕನ್ನ ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಕ್ರಿಯೆಗೆ ಧ್ಯಾನ ಎಂದು ಹೆಸರು. ಧ್ಯಾನ ಎಂದರೆ ನೀವು ದಿನದಲ್ಲಿ ಒಂದು ಗಂಟೆ ಮೀಸಲಿಡುವ ಸಂಗತಿಯಲ್ಲ. ದಿನದ ಈ ಒಂದು ಗಂಟೆ ಮುಗಿಯಿತೆಂದರೆ ಮತ್ತೆ ನಾಳೆಯ ತನಕ ಕಾಯಬೇಕಾದ ಸಂಗತಿಯಲ್ಲ. ನೀವು ಒಂದು ಗಂಟೆ ಧ್ಯಾನ ಮಾಡಿ ಬಾಕಿ ಇಪ್ಪತ್ಮೂರು ಗಂಟೆ ಧ್ಯಾನದಿಂದ ಹೊರತಾಗಿರುವಿರಿ ಎಂದರೆ, ಈ ಇಪ್ಪತ್ಮೂರು ಗಂಟೆಗಳು ನಿಮ್ಮ ಒಂದು ಗಂಟೆಯ ಧ್ಯಾನವನ್ನು ಸೋಲಿಸುತ್ತವೆ. ಇಂಥ ಧ್ಯಾನದಿಂದ ಯಾವ ಬುದ್ಧತ್ವವೂ ಜಾಗೃತವಾಗುವುದಿಲ್ಲ. ಒಂದು ಗಂಟೆಯ ಪ್ರಜ್ಞೆ, ಇಪ್ಪತ್ಮೂರು ಗಂಟೆಗಳ ಅಪ್ರಜ್ಞೆಯ ಬದುಕನ್ನು ಗೆಲುವುದು ಹೇಗೆ ಸಾಧ್ಯ?
ನೀವು ದೇವಾಲಯಗಳಿಗೆ ಭೇಟಿ ನೀಡುವುದರಿಂದ ಧ್ಯಾನ ಸಾಧ್ಯವಾಗುವುದಿಲ್ಲ. ನೀವು ಅಂಗಡಿಯಲ್ಲಿರುವಾಗ, ಮಾರ್ಕೆಟಿನಲ್ಲಿರುವಾಗ, ಮನೆಯಲ್ಲಿರುವಾಗ ಸಾಧ್ಯವಾಗದ ಎಚ್ಚರ, ದೇವಸ್ಥಾನದಲ್ಲಿ ಹೇಗೆ ಸಾಧ್ಯವಾಗಬಲ್ಲದು? ವಿಷಯ ಅಂತರ್ಗತವಾಗದ ಹೊರತು ಯಾವುದೂ ತಕ್ಷಣಕ್ಕೆ ಮಾತ್ರ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬುದ್ಧ ಹೇಳುತ್ತಾನೆ, ನಿಮ್ಮ ದಿನದ ಪ್ರತಿಕ್ಷಣವೂ ಅರಿವಿನಿಂದ ತುಂಬಿಕೊಂಡಾಗ ಮಾತ್ರ ಧ್ಯಾನ ಸಾಧ್ಯವಾಗುತ್ತದೆ.
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.
ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.
ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.
“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.
“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ? “ ಮೊದಲ ಶಿಷ್ಯ ಕೇಳಿದ.
“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.
“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.