ಎಲ್ಲ ಪ್ರಶ್ನೆಗಳೂ ನಾಶವಾಗಿಬಿಟ್ಟರೆ… : ಓಶೋ ವ್ಯಾಖ್ಯಾನ

ನಿಮ್ಮ ಎಲ್ಲ ಪ್ರಶ್ನೆಗಳೂ ನಾಶವಾಗಿಬಿಟ್ಟರೆ ನೀವು ಮೊದಲಿನ ಅದೇ ಮುಗ್ಧ ಮಗು. ಆಗ ನಿಮ್ಮ ಮನಸ್ಸು ಸಮಾಧಾನದಲ್ಲಿರುತ್ತದೆ, ಅದಕ್ಕೆ ಮತ್ತೆ ಕಳವಳಕ್ಕೆ ಒಳಗಾಗುವ ಯಾವ ಅವಕಾಶವೂ ಇರುವುದಿಲ್ಲ. ಆಗ ನಿಮ್ಮೊಳಗೆ ಒಂದು ಪರಮ ಸಮಾಧಾನ ನೆಲೆಗೊಳ್ಳುತ್ತದೆ. ಇದು ಉತ್ತರ… ~ ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ

ದೇವನ ನಿರಾಕರಣೆಯೂ
ದೈವಿಕವಾಗಿರುತ್ತದೆ ಎಂಬ ಸತ್ಯ
ತುಂಬ ಜನರಿಗೆ ಗೊತ್ತಿಲ್ಲ.

ನಿನ್ನ ತುಟಿಗೇನಾದರೂ
ಜೇನು ಮೆತ್ತಿಕೊಂಡಿದೆಯಾ

ಎಂಬ ನನ್ನ ಪ್ರಶ್ನೆಗೆ
ಒಮ್ಮೆ ತುಟಿ ಸವರಿಕೊಂಡು
ಉತ್ತರಿಸಿದ ಆತ

“ಇಲ್ಲವಲ್ಲ”

ಈ ನಿರಾಕರಣೆಯೂ
ಒಂದು ಬಗೆಯ ‘ಜೇನು’
ಎನ್ನುವುದನ್ನ
‘ರುಚಿ’ ಬಲ್ಲವರೇ ಬಲ್ಲರು.

  • ರೂಮಿ

ಮೇವ್ಲಾನಾ ಜಲಾಲುದ್ದೀನ್ ರೂಮಿಯ ಬದುಕಿನಲ್ಲಿ ನಡೆದ ಒಂದು ಕಥೆ. ಒಮ್ಮೆ ರೂಮಿ ಮರುಭೂಮಿಯೊಂದರ ಆಶ್ರಮದಲ್ಲಿ ತನ್ನ ಶಿಷ್ಯರೊಂದಿಗೆ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದ. ಅದೇ ದಾರಿಯಲ್ಲಿ ಹಾಯ್ದು ಹೋಗುತ್ತಿದ್ದ ಕೆಲ ಪ್ರವಾಸಿಗರು ಕುತೂಹಲದಿಂದ ಆಶ್ರಮದ ಒಳಗೆ ಬಂದು ಗಮನಿಸಿದರು. ಆಶ್ರಮದ ಅಂಗಳದಲ್ಲಿ ವಿದ್ಯಾರ್ಥಿಗಳು, ಶಿಷ್ಯರೂ ಕುಳಿತಿದ್ದರು ಮತ್ತು ಮೇವ್ಲಾನಾ ರೂಮಿ ಅವರ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿದ್ದ. ಮೇವ್ಲಾನಾ ಎಂದರೆ ಪ್ರೀತಿಯ ಗುರು (beloved master).

ಪ್ರವಾಸಿಗರಿಗೆ ಈ ಪ್ರಶ್ನೋತ್ತರ ನೋಡಿ ಸಾಕು ಸಾಕಾಯಿತು. ಶಿಷ್ಯರ ವಿಚಿತ್ರ ಪ್ರಶ್ನೆಗಳು ಮತ್ತು ರೂಮಿಯ ವಿಚಿತ್ರ ಉತ್ತರಗಳು. ಇನ್ನು ಸಮಯ ವ್ಯರ್ಥ ಮಾಡುವುದು ಬೇಡ ಎಂದು ಪ್ರವಾಸಿಗರು ಅಲ್ಲಿಂದ ಹೊರಟು ಹೋದರು. ಕೆಲ ವರ್ಷಗಳ ನಂತರ ಅದೇ ಪ್ರವಾಸಿಗರು ಆ ದಾರಿಯಲ್ಲಿ ವಾಪಸ್ ಬರುವಾಗ ಮತ್ತೆ ರೂಮಿಯ ಆಶ್ರಮದಲ್ಲಿ ಇಣುಕಿ ನೋಡಿದರು. ಆಶ್ರಮದ ಅಂಗಳದಲ್ಲಿ ಮೇವ್ಲಾನಾ ರೂಮಿ ಮಾತ್ರ ಕುಳಿತಿದ್ದ, ಅಲ್ಲಿ ಯಾವ ಶಿಷ್ಯರೂ ಇರಲಿಲ್ಲ. ಅವರಿಗೆ ಆಶ್ಚರ್ಯವಾಯಿತು. ಅವರು ರೂಮಿಯ ಬಳಿ ಹೋಗಿ ಪ್ರಶ್ನೆ ಮಾಡಿದರು. “ ಮೇವ್ಲಾನಾ ನಿನ್ನ ಶಿಷ್ಯರೆಲ್ಲ ಎಲ್ಲಿ ಹೋದರು?”.

ರೂಮಿ ನಗುತ್ತ ಉತ್ತರಿಸಿದ, “ ನನ್ನ ಬದುಕಿನ ಉದ್ದೇಶವೇ ಇದು. ನಾನು ಅವರ ಪ್ರಶ್ನೆಗಳನ್ನೆಲ್ಲ ಚೂರು ಚೂರು ಮಾಡಿದೆ, ಅವರ ಬಳಿ ಈಗ ಯಾವ ಪ್ರಶ್ನೆಗಳಿಲ್ಲ. ನಾನು ಅವರಿಗೆ ಹೊರಗೆ ಹೋಗಿ ಎಲ್ಲರ ಪ್ರಶ್ನೆಗಳನ್ನ ಒಡೆದು ಚೂರು ಚೂರು ಮಾಡುವಂತೆ ಆದೇಶ ನೀಡಿದ್ದೇನೆ. ತುಂಬ ಪ್ರಶ್ನೆಗಳಿರುವ ಯಾರಾದರೂ ನಿಮಗೆ ಗೊತ್ತಿದ್ದರೆ ಅವರನ್ನು ನನ್ನ ಆಶ್ರಮಕ್ಕೆ ಕಳಿಸಿ!. “

ನಿಮ್ಮ ಎಲ್ಲ ಪ್ರಶ್ನೆಗಳೂ ನಾಶವಾಗಿಬಿಟ್ಟರೆ ನೀವು ಮೊದಲಿನ ಅದೇ ಮುಗ್ಧ ಮಗು. ಆಗ ನಿಮ್ಮ ಮನಸ್ಸು ಸಮಾಧಾನದಲ್ಲಿರುತ್ತದೆ, ಅದಕ್ಕೆ ಮತ್ತೆ ಕಳವಳಕ್ಕೆ ಒಳಗಾಗುವ ಯಾವ ಅವಕಾಶವೂ ಇರುವುದಿಲ್ಲ. ಆಗ ನಿಮ್ಮೊಳಗೆ ಒಂದು ಪರಮ ಸಮಾಧಾನ ನೆಲೆಗೊಳ್ಳುತ್ತದೆ. ಇದು ಉತ್ತರ. ಈ ಉತ್ತರದಲ್ಲಿ ಯಾವ ಪದಗಳಿಲ್ಲ, ಮತ್ತು ಈ ಉತ್ತರ ಯಾವ ನಿರ್ದಿಷ್ಟ ಪ್ರಶ್ನೆಗೂ ಅಲ್ಲ; ಇದು ಒಂದು ಶುದ್ಧ ಮೌನದ ಸ್ಥಿತಿ.

ಬದುಕಿನ ಉದ್ದೇಶ ಉತ್ತರಗಳನ್ನು ಹುಡುಕುವುದಲ್ಲ, ಪ್ರಶ್ನೆಗಳನ್ನು ಕಳೆದುಕೊಳ್ಳುತ್ತ ಹೋಗುವುದು, ಶುದ್ಧ ಶೂನ್ಯದ ಸ್ಥಿತಿಯನ್ನು ತಲುಪುವುದು.

ಒಮ್ಮೆ ನಸ್ರುದ್ದೀನ್ ತನ್ನ ಹಲವಾರು ಹಿಂಬಾಲಕರೊಡನೆ ಭರ್ತಿ ಮಾರ್ಕೇಟ್ ನಲ್ಲಿ ಮೆರವಣಿಗೆ ಹೋಗುತ್ತಿದ್ದ. ಪ್ರತೀ ಒಂದು ನಿಮಿಷಕ್ಕೆ ತನ್ನ ಕೈಗಳನ್ನು ಮೇಲಕ್ಕೆತ್ತಿ ಹೋ ಎಂದು ಕೂಗುತ್ತ ಜಿಗಿಯುತ್ತಿದ್ದ. ನಸ್ರುದ್ದೀನ್ ಹೇಗೆ ಮಾಡುತ್ತಾನೋ ಅವನ ಹಿಂಬಾಲಕರೂ ಹಾಗೇ ಮಾಡುತ್ತಿದ್ದರು.

ಇದನ್ನು ನೋಡಿದ ನಸ್ರುದ್ದೀನ್ ನ ವ್ಯಾಪಾರಿ ಗೆಳೆಯ ಪ್ರಶ್ನೆ ಮಾಡಿದ.

“ ಏನಿದು ನಸ್ರುದ್ದೀನ್? ಯಾಕೆ ಇವರೆಲ್ಲ ನಿನ್ನ ಕಾಪಿ ಮಾಡುತ್ತಿದ್ದಾರೆ ? “

“ ಈಗ ನಾನು ಸೂಫಿ ಸಂತ. ಇವರೆಲ್ಲ ನನ್ನ ಶಿಷ್ಯರು ಅಧ್ಯಾತ್ಮ ಸಾಧಕರು, ನಾನು ಇವರ ಜ್ಞಾನೋದಯಕ್ಕೆ ಸಹಾಯ ಮಾಡುತ್ತಿದ್ದೇನೆ. “

ನಸ್ರುದ್ದೀನ್, ಗೆಳೆಯನ ಪ್ರಶ್ನೆಗೆ ಉತ್ತರಿಸಿದ.

“ ಇವರಿಗೆಲ್ಲ ಜ್ಞಾನೋದಯ ಆಗಿದೆ ಅಂತ ನಿನಗೆ ಹೇಗೆ ಗೊತ್ತಾಗುತ್ತದೆ? “

ಗೆಳೆಯ ಮತ್ತೆ ಪ್ರಶ್ನೆ ಮಾಡಿದ.

“ ಅದು ಬಹಳ ಸುಲಭ, ಪ್ರತೀ ಮುಂಜಾನೆ ನಾನು ಇವರ ಹಾಜರಾತಿ ಎಣಿಸುತ್ತೇನೆ, ಯಾರು ಬಿಟ್ಟು ಹೋಗಿದ್ದಾರೋ ಅವರಿಗೆ ಜ್ಞಾನೋದಯ ಆಗಿದೆ ಅಂತ ಅರ್ಥ “

ನಸ್ರುದ್ದೀನ್ ತನ್ನ ಗುಟ್ಟು ಬಿಟ್ಟುಕೊಟ್ಟ.

Leave a Reply