ಕನಸುಗಳಿಲ್ಲದ ನಿದ್ದೆ… : ಓಶೋ ವ್ಯಾಖ್ಯಾನ

ಎರಡು ಗಂಟೆಗಳ ಸುಷುಪ್ತಿ, ಕನಸುರಹಿತ ಸ್ಥಿತಿ ಮತ್ತು ಸಮಾಧಿ, ಬುದ್ಧತ್ವದ ಆತ್ಯಂತಿಕ ಸ್ಥಿತಿ, ಈ ಎರಡರ ನಡುವೆ ಬಹಳ ವ್ಯತ್ಯಾಸವೇನಿಲ್ಲ ಎಂದು ಹೇಳುತ್ತಾನೆ ಪತಂಜಲಿ, ಒಂದು ಸಣ್ಣ ಮತ್ತು ಬಹುಮುಖ್ಯ ವ್ಯತ್ಯಾಸವಿದ್ದರೂ. ಈ ವ್ಯತ್ಯಾಸ ಪ್ರಜ್ಞೆಯ ಕುರಿತಾದದ್ದು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಅವನು
ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು ನೋಡಿಕೊಂಡಾಗ ಮಾತ್ರ
ಹಾಸಿಗೆಯಲ್ಲಿ
ಅದೇ ಮನುಷ್ಯ ಪ್ರಾಣಿ.

ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ
ಚಿಟ್ಟೆಯೋ?

ಶುರುವಾಯ್ತು ಗೊಂದಲ ಜುವಾಂಗ್-ತ್ಸೆ ಗೆ.

ಕನಸುಗಳ ಹೊರತಾದ ನಿದ್ದೆಯಲ್ಲಿ ಅಹಂ ಸಂಪೂರ್ಣವಾಗಿ ಗೈರುಹಾಜರಾಗಿರುತ್ತದೆ, ಏಕೆಂದರೆ ಎಲ್ಲಿ ಥಿಂಕಿಂಗ್ ಇಲ್ಲವೂ, ಎಲ್ಲಿ ಡ್ರೀಮಿಂಗ್ ಇಲ್ಲವೂ ಅಲ್ಲಿ ಹೇಗೆ ತಾನೇ ಕಾಲ್ಪನಿಕತೆ (fiction) ಸಾಧ್ಯವಾಗಬಲ್ಲದು? ಆದರೆ ಇಂಥ ಕನಸುಗಳಿಲ್ಲದ ನಿದ್ದೆ, ಆರೋಗ್ಯಪೂರ್ಣ 8 ಗಂಟೆಗಳ ನಿದ್ದೆಯಲ್ಲಿ ಕೇವಲ ಎರಡು ಗಂಟೆಗಳಷ್ಟು ಮಾತ್ರ. ಆದರೆ ಈ ಎರಡು ಗಂಟೆಗಳು ನಮಗೆ ಸಾಧ್ಯವಾಗಬಹುದಾದರೆ ಅದು ನಮ್ಮನ್ನು ಪುನಶ್ಚೇತನಗೊಳಿಸುತ್ತದೆ, ಹೊಸ ಜೀವಂತಿಕೆಯನ್ನು ನಮ್ಮಲ್ಲಿ ತುಂಬುತ್ತದೆ. ಎರಡು ಗಂಟೆಗಳ ಕನಸುರಹಿತ ನಿದ್ದೆಯಿಂದಾಗಿ, ಮರುದಿನದ ನಿಮ್ಮ ಮುಂಜಾವು ತಾಜಾ ಆಗಿರುತ್ತದೆ, ಜೀವಂತಿಕೆಯಿಂದ ತುಂಬಿತುಳುಕುತ್ತಿರುತ್ತದೆ. ಈ ಹೊಸ ದಿನ ನಿಮಗೆ ಉಡುಗೊರೆಯೊಂದರಂತೆ ಭಾಸವಾಗುತ್ತದೆ, ಎಲ್ಲವೂ ಹೊಸದು ಅನಿಸತೊಡಗುತ್ತದೆ ಏಕೆಂದರೆ ನೀವು ಹೊಸತನದಿಂದ ಕೂಡಿದ್ದೀರಿ. ಎಲ್ಲವೂ ಸುಂದರವಾಗಿ ಕಾಣತೊಡಗುತ್ತದೆ ಏಕೆಂದರೆ ನೀವು ಸುಂದರ ಅವಕಾಶದಲ್ಲಿ ನಿಮ್ಮನ್ನು ನೀವು ಕಂಡುಕೊಂಡಿದ್ದೀರಿ.

ಈ ಎರಡು ಗಂಟೆಗಳ ಆಳ ನಿದ್ದೆಯಲ್ಲಿ ಅಂಥದೇನಾಯಿತು ನಿಮ್ಮೊಳಗೆ? ಪತಂಜಲಿ ಇದನ್ನ ಕನಸುಗಳಿಲ್ಲದ ನಿದ್ದೆ, ಸುಷುಪ್ತಿ ಎಂದು ಕರೆಯುತ್ತಾನೆ. ಈ ಎರಡು ಗಂಟೆಗಳ ಅವಧಿಯಲ್ಲಿ ನಿಮ್ಮ ಅಹಂ ಮಾಯವಾಗಿತ್ತು ಮತ್ತು ಈ ಕಾರಣವಾಗಿಯೇ ನೀವು ಪುನಶ್ಚೇತನಗೊಂಡಿದ್ದೀರಿ, ಹೊಸ ಜೀವಂತಿಕೆಯನ್ನ ತುಂಬಿಕೊಂಡಿದ್ದೀರಿ. ಈ ಎರಡು ಗಂಟೆಗಳ ಅಹಂ ರಹಿತ ಸ್ಥಿತಿಯಲ್ಲಿ ಅದು ಪ್ರಜ್ಞೆಯಿಂದ ಹೊರತಾಗಿದ್ದರೂ ನೀವು ದೈವದ ರುಚಿ ನೋಡಿದ್ದೀರಿ.

ಎರಡು ಗಂಟೆಗಳ ಸುಷುಪ್ತಿ, ಕನಸುರಹಿತ ಸ್ಥಿತಿ ಮತ್ತು ಸಮಾಧಿ, ಬುದ್ಧತ್ವದ ಆತ್ಯಂತಿಕ ಸ್ಥಿತಿ, ಈ ಎರಡರ ನಡುವೆ ಬಹಳ ವ್ಯತ್ಯಾಸವೇನಿಲ್ಲ ಎಂದು ಹೇಳುತ್ತಾನೆ ಪತಂಜಲಿ, ಒಂದು ಸಣ್ಣ ಮತ್ತು ಬಹುಮುಖ್ಯ ವ್ಯತ್ಯಾಸವಿದ್ದರೂ. ಈ ವ್ಯತ್ಯಾಸ ಪ್ರಜ್ಞೆಯ ಕುರಿತಾದದ್ದು. ಸುಷುಪ್ತಿಯಲ್ಲಿ ನೀವು ಪ್ರಜ್ಞಾರಹಿತ ಸ್ಥಿತಿಯಲ್ಲಿರುವಿರಾದರೆ, ಸಮಾಧಿಯಲ್ಲಿ ಪ್ರಜ್ಞಾಪೂರ್ಣ ಸ್ಥಿತಿಯಲ್ಲಿ, ಆದರೆ ಸ್ಥಿತಿಗಳಲ್ಲಿ ಯಾವ ವ್ಯತ್ಯಾಸವಿಲ್ಲ, ವ್ಯತ್ಯಾಸ ಇರುವುದು ಅದನ್ನು ಹೊಂದಿರುವವರಲ್ಲಿ ಮಾತ್ರ. ಸಮಾಧಿಯಲ್ಲಿ ನೀವು ದೈವಕ್ಕೆ ಹತ್ತಿರವಾಗುತ್ತೀರಿ, ನೀವು ಬ್ರಹ್ಮಾಂಡದ ಕೇಂದ್ರವನ್ನು ಪ್ರವೇಶಿಸುತ್ತೀರಿ. ಪರಿಧಿಯಿಂದ ಮಾಯವಾಗಿ ಕೇಂದ್ರದಲ್ಲಿ ನೆಲೆಗೊಳ್ಳುತ್ತೀರಿ. ಕೇಂದ್ರದ ಜೊತೆಗಿನ ಆ ಸಂಪರ್ಕ ಮಾತ್ರವೇ ನಿಮ್ಮನ್ನ ಪುನಶ್ಚೇತನಗೊಳಿಸುತ್ತದೆ.

ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”

ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.

“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .

“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.

“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .

“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ “ ಉತ್ತರಿಸಿದ ನಸ್ರುದ್ದೀನ.

Leave a Reply