ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು : ಜಿಡ್ಡು ಕಂಡ ಹಾಗೆ

ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ : ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಮ್ಮಲ್ಲಿನ ಬಹುತೇಕರಿಗೆ ನಮ್ಮ ಸುತ್ತಲಿನ ಈ ಅಸಾಮಾನ್ಯ ಜಗತ್ತಿನ ಬಗ್ಗೆ ಯಾವ ಗಮನ, ಯಾವ ಕಾಳಜಿಯೂ ಇಲ್ಲ; ನಾವು ಎಂದಾದರೂ ಗಾಳಿಯಲ್ಲಿ ಅಲುಗಾಡುತ್ತಿರುವ ಎಲೆಗಳನ್ನೂ, ಮಂಜಿನಿಂದ ತೊಯ್ದ ಹುಲ್ಲಿನ ಗರಿಯನ್ನು ನಮ್ಮ ಕೈಗಳಿಂದ ತನ್ಮತೆಯಿಂದ ಮುಟ್ಟಿ ಅವುಗಳ ಅಸ್ತಿತ್ವವನ್ನು ಅನುಭವಿಸಿದ್ದೀವಾ? ಇದು ಸುಮ್ಮನೇ ಕಾವ್ಯಾತ್ಮಕ ಹೇಳಿಕೆಯಲ್ಲ ಆದ್ದರಿಂದ ದಯವಿಟ್ಟು ಊಹಾತ್ಮಕ ಮತ್ತು ಭಾವನಾತ್ಮಕ ಸ್ಥಿತಿಗೆ ಪ್ರವೇಶ ಮಾಡಬೇಡಿ.

ನನ್ನ ಪ್ರಕಾರ ನಮ್ಮ ಸುತ್ತಲಿನ ಬದುಕಿನ ಬಗ್ಗೆ ಆಳವಾದ ಭಾವನೆಗಳನ್ನು ಹೊಂದುವುದರ ಬದಲಾಗಿ ಕೇವಲ ಬೌದ್ಧಿಕ ಚರ್ಚೆಗಳಲ್ಲಿ ತೊಡಗುತ್ತ, ಬೌದ್ಧಿಕ ಪರಿಣಾಮಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತ , ಪರೀಕ್ಷೆಗಳನ್ನು ಪಾಸುಮಾಡುತ್ತ, ಉರು ಹೊಡೆದ ಮಾತುಗಳನ್ನ ಮತ್ತೆ ಮತ್ತೆ ಹೇಳುತ್ತ, ಹೊಸದಾಗಿ ಹುಟ್ಟಿದ ಚಿಂತನೆಯೊಂದನ್ನು, ಇದನ್ನ ಈಗಾಗಲೇ ಹೇಳಿಯಾಗಿದೆ ಎಂದು ಮರೆ ಮಾಚುತ್ತ ಕೂಡುವುದು ಕಾಲಹರಣ ಮಾಡಿದಂತೆ.

ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು, ಬೌದ್ಧಿಕತೆ ನಮಗೆ ಎಂದೂ ಹಾಳಾಗದಂಥ ಪೋಷಣೆಯನ್ನೂ ನೀಡಲಾರದು. ಬೌದ್ಧಿಕತೆ ನಮಗೆ ಕಾರಣಗಳನ್ನು ಹೇಳಬಹುದು, ಚರ್ಚೆಯಲ್ಲಿ ಸಹಾಯ ಮಾಡಬಲ್ಲದು, ವಿಷಯನ್ನು ಬಗೆದು ನೋಡಲು ಅವಕಾಶ ಮಾಡಿಕೊಡಬಲ್ಲದು, ಅನುಮಾನಗಳ ಮೂಲಕ ಒಂದು ತೀರ್ಮಾನಕ್ಕೆ ಬರಲು ಕಾರಣವಾಗಬಹುದು. ಆದರೆ ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ. ಆದರೆ ನಮ್ಮ ಸಂವೇದನೆ ಹಾಗಲ್ಲ, ಸಂವೇದನೆಗೆ ನಮ್ಮ ಒಟ್ಟು ಕಲಿಕೆಯ ಹಂಗಿಲ್ಲ, ಅದು ನಮ್ಮನ್ನು ನೇರವಾಗಿ ಭಯ ಮತ್ತು ಆತಂಕಗಳ ವಲಯದಿಂದ ಆಚೆ ಕರೆದೊಯ್ಯಬಲ್ಲದು.

ನಾವು ನಮ್ಮ ದಿನಗಳನ್ನ, ಆಯುಷ್ಯವನ್ನ ಈ ಬೌದ್ಧಿಕತೆಯನ್ನು ಬೆಳೆಸಿಕೊಳ್ಳಲು, ವಾದ ಮಾಡಲು, ಚರ್ಚೆ ಮಾಡಲು, ಜಗಳವಾಡಲು, ಏನೋ ಆಗಬೇಕೆಂದು ಸಂಘರ್ಷ ಮಾಡಲು, ಹೀಗೆ ಮುಂತಾಗಿ ಇನ್ನೂ ಹಲವಾರು ಸಂಗತಿಗಳಲ್ಲಿ ವ್ಯಯ ಮಾಡುತ್ತೇವೆ. ನಮ್ಮ ಜಗತ್ತು ಅದ್ಭುತವಾಗಿದೆ, ಅಸಾಮಾನ್ಯವಾಗಿದೆ, ಶ್ರೀಮಂತವಾಗಿದೆ, ಈ ಮುಂಬೈ, ಪಂಜಾಬ್, ರಷ್ಯಾ, ಅಮೇರಿಕ ಎಲ್ಲ ನಮ್ಮದು ನಿಮ್ಮದು ನನ್ನದು. ಇದು ಭಾವನಾತ್ಮಕ ಸಂಗತಿಯಲ್ಲ ವಸ್ತು ಸ್ಥಿತಿ. ಆದರೆ ದುರದೃಷ್ಟವಶಾತ್ ಇವನ್ನೆಲ್ಲ ನಾವು ನಮ್ಮ ಕ್ಷುಲ್ಲಕತೆಯಿಂದಾಗಿ, ಪ್ರಾದೇಶಿಕ ಮೇಲರಿಮೆಯಿಂದಾಗಿ ತುಂಡು ತುಂಡು ಮಾಡಿಬಿಟ್ಟಿದ್ದೇವೆ. ನಮಗೆ ಗೊತ್ತಿದೆ, ನಾವು ಹೀಗೆ ಮಾಡಿಕೊಂಡಿರುವುದು ನಮ್ಮ ಸುರಕ್ಷತೆಗಾಗಿ, ನಮ್ಮ ಹೊಟ್ಟೆ ಪಾಡಿಗಾಗಿ.

ಇಂಥ ರಾಜಕಾರಣ ಇಡೀ ಜಗತ್ತಿನ ತುಂಬ ನಡೆದಿದೆ ಮತ್ತು ಈ ಕಾರಣವಾಗಿ ನಾವು ಮನುಷ್ಯರಾಗುವುದನ್ನ ಮರೆತಿದ್ದೇವೆ, ನಮ್ಮ ಈ ಭೂಮಿಯ ಮೇಲೆ ಆನಂದದಿಂದ ಬದುಕುವುದನ್ನು , ಈ ಆನಂದದಿಂದ ಹೊಸದನ್ನೇನೋ ಹುಟ್ಟುಹಾಕುವುದನ್ನು ಮರೆತಿದ್ದೇವೆ.

Leave a Reply