ಖಾಲಿಯಾಗುವುದು ಅಂದರೆ…

ಮೇಲಿಂದ ಮೇಲೆ ಬುದ್ಧನನ್ನು ಪ್ರಶ್ನೆ ಮಾಡಲಾಗುತ್ತಿತ್ತು.“ಖಾಲಿಯಾಗಬೇಕು ಎಂದು ಹೇಳುತ್ತೀಯಲ್ಲಾ, ಏನಾಗುತ್ತದೆ ಖಾಲಿಯಾದರೆ?” ಮುಂದೆ ಓದಿ… | ಚಿದಂಬರ ನರೇಂದ್ರ

ಒಂದಾನೊಂದು ಕಾಲದಲ್ಲಿ
‘ತಾವೋ’ ವನ್ನು ಅರೆದು ಕುಡಿದವರು
ಕಣ್ಣಿಗೆ ಕಾಣಿಸಿಯೂ ಕಾಣಿಸದಷ್ಟು
ಕೈಗೆ ಸಿಕ್ಕೂ ಸಿಗದಷ್ಟು
ಸೂಕ್ಷ್ಮರೂ, ನಿಗೂಢರೂ,
ಹರಿತ ಜಗಳಗಂಟರೂ ಆಗಿದ್ದರು.

ಅವರ ಆಳ, ಅಗಲಗಳನ್ನು
ಬಲ್ಲವರಿಲ್ಲವಾದ್ದರಿಂದ
ಅವರು ಹೇಗಿದ್ದಿರಬಹುದು ಎಂದು
ಊಹೆ ಮಾತ್ರ ಮಾಡಬಲ್ಲೆ.

ಚಳಿಗಾಲದ ನದಿಯಲ್ಲಿ ನಡೆಯುವವರಂತೆ
ಹೆಜ್ಜೆ ಮೇಲೆ ಹೆಜ್ಜೆ ಇಡುವವರು,
ಪಕ್ಕದ ಮನೆಯ ಕಿಟಕಿಯ ಬಗ್ಗೆ
ಮೈಯೆಲ್ಲ ಕಣ್ಣಾದವರು,
ಮನೆಗೆ ಬಂದ ದೂರದ ನೆಂಟರಂತೆ
ವಿನಮ್ರರು ಮತ್ತು ಭಿಡೇ ಸ್ವಭಾವದವರು,
ಕರಗುವ ಮಂಜಿನಂತೆ ಜಾರಿಕೊಳ್ಳುವವರು,
ಕೆತ್ತಲು ಸಿದ್ಧವಾಗಿರುವ ಮರದ ತುಂಡಿನಂತೆ
ಮುಗ್ಧರು, ಸುಲಭ ಸಾಧ್ಯರು,
ಆಳ ಕಣಿವೆಗಳಂತೆ
ಖಾಲಿ ತೆರೆದುಕೊಳ್ಳುವವರು,
ಬಗ್ಗಡದ ನೀರಿನಂತೆ
ಕೃದ್ಧರು, ದಂಗೆ ಎದ್ದವರು.

ನಿಂತು ನಿಂತು ತಿಳಿಯಾಗುವ
ಕಲೆಯ ತಿಳಿದವರು.
ಚಲನೆಗೊಂದು ಅರ್ಥ ಬರುವತನಕ
ಜಪ್ಪಯ್ಯ ಅಂದರೂ ಏಳದವರು

ತುಂಬಿಕೊಳ್ಳಲೊಲ್ಲದ ಉಡಾಳರು,
ಖಾಲಿತನ ಸೃಷ್ಟಿಸುವ ಅವಕಾಶಗಳ
ಮಹತ್ವ ಅರಿತ ಮಹಾತ್ಮರು.

~ ಲಾವೋತ್ಸು

****************

ಮೇಲಿಂದ ಮೇಲೆ ಬುದ್ಧನನ್ನು ಪ್ರಶ್ನೆ ಮಾಡಲಾಗುತ್ತಿತ್ತು.“ಖಾಲಿಯಾಗಬೇಕು ಎಂದು ಹೇಳುತ್ತೀಯಲ್ಲಾ, ಏನಾಗುತ್ತದೆ ಖಾಲಿಯಾದರೆ?”

ಈ ಪ್ರಶ್ನೆಗೆ ಬುದ್ಧ ಯಾವ ಉತ್ತರವನ್ನೂ ನೀಡದೆ ಸುಮ್ಮನಾಗಿಬಿಡುತ್ತಿದ್ದ.

ಉತ್ತರಕ್ಕಾಗಿ ಒತ್ತಾಯಿಸಿದಾಗ ಬುದ್ಧ ಹೇಳುತ್ತಿದ್ದ,

“ನನ್ನ ಏನೂ ಕೇಳಬೇಡಿ, ನೀವು ಖಾಲಿ ಆಗಿ ನೋಡಿ ಏನಾಗುತ್ತದೆಯೆಂದು”.

“ಖಾಲಿ ಎನ್ನುವುದು ಮಹಾ ಆನಂದದ ಸ್ಥಿತಿ” ಎಂದು ಬುದ್ಧ ಎಂದೂ ಉತ್ತರಿಸುತ್ತಿರಲಿಲ್ಲ. ಏಕೆಂದರೆ ಮಹದಾನಂದದ ಸ್ಥಿತಿ ಎಂದ ತಕ್ಷಣ ನೀವು ಆನಂದದ ಸ್ಥಿತಿಯ ಐಡಿಯಾದ ಬಗ್ಗೆ ಯೋಚನೆ ಮಾಡಲು ಶುರು ಮಾಡುತ್ತೀರಿ. ಮತ್ತು ನಿಮಗೆ ಈ ಮಹದಾನಂದ (bliss) ಎನ್ನುವುದು ಕೇವಲ ಒಂದು ಸುಖ ನೀಡುವಂಥ ಸ್ಥಿತಿ. ಮತ್ತು ಹೆಚ್ಚೆಂದರೆ ಈ ಸ್ಥಿತಿ ನಿಮಗೆ ಖುಶಿ ಕೊಡುತ್ತದೆ ಎನ್ನುವುದು ನಿಮ್ಮ ತಿಳುವಳಿಕೆ. ನಿಮಗೆ ಇದು ಒಂದು ಮನಸ್ಸಿನ, ಒಂದು ದೈಹಿಕ ಸ್ಥಿತಿ ಎನ್ನುವ ಕಲ್ಪನೆ. ಆದರೆ ಬ್ಲಿಸ್ ಎನ್ನುವುದು ಆ ಥರದ ಸ್ಥಿತಿ ಅಲ್ಲ.

ಬ್ಲಿಸ್ ಎನ್ನುವುದು ಮನಸ್ಸು ಅನುಭವಿಸಂಥ, ದೇಹ ಅನುಭವಿಸುವಂಥ ಉತ್ಕಟ ಸುಖದ ಸ್ಥಿತಿ ಅಲ್ಲ. ಇದು ಒಂದು ಮೀರುವಿಕೆಯ ಸ್ಥಿತಿ, ನಿಮಗೆ ಗೊತ್ತಿರುವ, ನಿಮ್ಮ ಅನುಭದಲ್ಲಿರುವ, ನೀವು ಆಗಿರುವ ಎಲ್ಲವನ್ನೂ ಮೀರಿದಂಥ ಸ್ಥಿತಿ.

ಇಂಥದೊಂದು ಸ್ಥಿತಿಯನ್ನ ಕೊವಲ ಖಾಲೀತನ ಎನ್ನುವುದೇ ಒಳ್ಳೆಯದು, ಮೂಲದಿಂದಲೇ ನಿಮ್ಮನ್ನು ಕತ್ತರಿಸಿಬಿಡುವಂಥ ಸ್ಥಿತಿ ಇದು.

ಮಾಸ್ಟರ್ ಜೋಶು ಝೆನ್ ಕಲಿಯಲು ಶುರು ಮಾಡಿದ್ದು ಅರವತ್ತನೇ ವಯಸ್ಸಿನಲ್ಲಿ. ಜ್ಞಾನೋದಯವಾದಾಗ ಅವನಿಗೆ ಬರೊಬ್ಬರಿ ಎಂಭತ್ತು ವರ್ಷ ವಯಸ್ಸು. ತನ್ನ ನೂರಾ ಇಪ್ಪತ್ತನೇ ವಯಸ್ಸಿನವರೆಗೆ ಆತ ಝೆನ್ ಪಾಠ ಮಾಡಿದ.

ಒಮ್ಮೆ ಒಬ್ಬ ಶಿಷ್ಯ, ಜೋಶುನಿಗೆ ಪ್ರಶ್ನೆ ಮಾಡಿದ.

“ ನನ್ನ ಮನಸ್ಸು ಖಾಲಿಯಾಗಿದೆಯಲ್ಲ, ಏನು ತಾನೇ ಮಾಡಲಿ ಇನ್ನು? “

“ಮನಸ್ಸಲ್ಲಿರೋದನ್ನ ಹೊರ ಹಾಕು “
ಜೋಶು ಉತ್ತರಿಸಿದ.

“ಆದರೆ ನನ್ನ ಮನಸ್ಸು ಖಾಲಿ, ಏನನ್ನ ಹೊರ ಹಾಕಲಿ”

ಶಿಷ್ಯ ಮತ್ತೆ ಪ್ರಶ್ನೆ ಮಾಡಿದ.

“ ಹೌದಾ, ಹಾಗಾದರೆ ಅದನ್ನೇ ಹೊತ್ತು ನಡೆ “

ಜೋಶು ಕಣ್ಣು ಮಿಟುಕಿಸಿದ.

~ ಓಶೋ

****************************

Leave a Reply