ಧ್ಯಾನ ಅಂದರೆ ವಿಶ್ರಾಂತಿ… : ಓಶೋ ವ್ಯಾಖ್ಯಾನ

ಧ್ಯಾನದ ಜೊತೆ ಸಲಿಗೆ ಅತ್ಯಗತ್ಯ, ಧ್ಯಾನವನ್ನ ಒಂದು ವಿನೋದ ಎಂದು ಅನುಭವಿಸುವುದು ಬಹಳ ಮುಖ್ಯ. ಧ್ಯಾನವನ್ನ ಸಿರಿಯಸ್ ಪರಿಗಣಿಸಿದಾಗಲೆಲ್ಲ, ಧ್ಯಾನ ನಮ್ಮಿಂದ ಮಿಸ್ ಆಗುತ್ತದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಧ್ಯಾನ ಎಂದರೆ ವಿಶ್ರಾಂತಿ, ಸಂಪೂರ್ಣ ವಿಶ್ರಾಂತಿ, ಎಲ್ಲ ಕ್ರಿಯೆಗಳಿಗೆ ಪೂರ್ಣ ವಿರಾಮ, ಆ ಕ್ರಿಯೆ ದೈಹಿಕವಾಗಿರಬಹುದು, ಮಾನಸಿಕವಾಗಿರಬಹುದು, ಭಾವನಾತ್ಮಕವಾಗಿರಬಹುದು. ನೀವು ಇಂಥ ಪೂರ್ಣ ವಿಶ್ರಾಂತಿಯ ಸ್ಥಿತಿಯಲ್ಲಿರುವಾಗ ನಿಮ್ಮೊಳಗೆ ಯಾವ ಸಂಗತಿಯೂ ಕಲಕುವುದಿಲ್ಲ, ಪ್ರತಿಯೊಂದು ಕ್ರಿಯೆಯೂ ಕರಗಿ ಕರಗಿ ಇಲ್ಲವಾದಾಗ, ನೀವು ಗಾಢ ನಿದ್ದೆಯಲ್ಲಿರುವಾಗಲೂ ಪೂರ್ಣ ಎಚ್ಚರವಾಗಿರುವಂಥ ಸ್ಥಿತಿಯಲ್ಲಿ ನಿಮಗೆ ನೀವು ಯಾರು ಎನ್ನುವುದು ಅರಿವಿಗೆ ಬರುತ್ತದೆ, ಥಟ್ಟನೇ ಕಿಟಕಿಯೊಂದು ತೆರೆದುಕೊಳ್ಳುತ್ತದೆ, ಈ ಕಿಟಕಿಯನ್ನ ಪ್ರಯತ್ನದಿಂದ ತೆರೆಯಲಾಗುವುದಿಲ್ಲ ಏಕೆಂದರೆ ಪ್ರಯತ್ನದಿಂದಾಗಿ ಒತ್ತಡ ಹುಟ್ಟಿಕೊಳ್ಳುತ್ತದೆ ಮತ್ತು ಒತ್ತಡ ಎಲ್ಲ ಸಂಕಟಗಳ ಮೂಲ. ಆದ್ದರಿಂದ ಧ್ಯಾನ ಸಂಪೂರ್ಣ ವಿಶ್ರಾಂತಿಯ ಸ್ಥಿತಿ ಎನ್ನುವುದು ನಾವು ಹೊಂದಬೇಕಾದ ಮೂಲಭೂತ ತಿಳುವಳಿಕೆ.

ಧ್ಯಾನದ ಜೊತೆ ಸಲಿಗೆ ಅತ್ಯಗತ್ಯ, ಧ್ಯಾನವನ್ನ ಒಂದು ವಿನೋದ ಎಂದು ಅನುಭವಿಸುವುದು ಬಹಳ ಮುಖ್ಯ. ಧ್ಯಾನವನ್ನ ಸಿರಿಯಸ್ ಪರಿಗಣಿಸಿದಾಗಲೆಲ್ಲ, ಧ್ಯಾನ ನಮ್ಮಿಂದ ಮಿಸ್ ಆಗುತ್ತದೆ. ಧ್ಯಾನವನ್ನ ಅತ್ಯಂತ ಆನಂದಪೂರ್ವಕವಾಗಿ ಪ್ರವೇಶ ಮಾಡಬೇಕು, ಮತ್ತು ಅದು ಆಳ ವಿಶ್ರಾಂತಿಯತ್ತ ನಮ್ಮ ಕರೆದೊಯ್ಯುತ್ತಿದೆ ಎನ್ನುವುದನ್ನ ಖಚಿತಪಡಿಸಿಕೊಳ್ಳಬೇಕು. ಧ್ಯಾನ ಎಂದರೆ ಏಕಾಗ್ರತೆಯಲ್ಲ, ಸಂಪೂರ್ಣ ವಿಶ್ರಾಂತಿ. ಇಂಥ ಪೂರ್ಣ ಹಗುರಾದ ಸ್ಥಿತಿಯಲ್ಲಿರುವಾಗ ಮೊದಲಬಾರಿಗೆ ನಿಮಗೆ, ನಿಮ್ಮ ವಾಸ್ತವದ ಅರಿವಾಗುತ್ತದೆ, ನಿಮ್ಮ ಅಸ್ತಿತ್ವದ ಜೊತೆ ನಿಮ್ಮ ಮುಖಾಮುಖಿ ಸಾಧ್ಯವಾಗುತ್ತದೆ. ನೀವು ಯಾವುದಾದರೂ ಕ್ರಿಯೆಯಲ್ಲಿ ತೊಡಗಿಕೊಂಡಾಗ, ಎಷ್ಟು ಮಗ್ನರಾಗಿರುತ್ತೀರಿ ಎಂದರೆ, ನಿಮಗೆ ನೀವು ಕಾಣುವುದಿಲ್ಲ. ಕ್ರಿಯೆ ನಿಮ್ಮ ಸುತ್ತ ಧೂಮವನ್ನ ಸೃಷ್ಟಿಸುತ್ತದೆ, ಧೂಳು ನಿಮ್ಮ ಸುತ್ತ ಆವರಿಸಿಕೊಳ್ಳುತ್ತದೆ, ಆದ್ದರಿಂದ ಸ್ವಲ್ಪ ಹೊತ್ತಾದರೂ ಎಲ್ಲ ಬಗೆಯ ಕ್ರಿಯೆಗಳಿಂದ ದೂರವಾಗಿ ಸಂಪೂರ್ಣ ವಿರಾಮದ ಸ್ಥಿತಿಯನ್ನು ಪ್ರವೇಶಿಸುವುದು ಬಹಳ ಅವಶ್ಯಕ.

ಕ್ರಿಯೆಯನ್ನ ನಿಲ್ಲಿಸಿ ಎಂದು ನಾನು ಹೇಳುತ್ತಿರುವುದು, ನೀವು ಧ್ಯಾನದ ಕಲಿಕೆಯ ಶುರುವಾತಿನಲ್ಲಿ ಇದ್ದಾಗ ಮಾತ್ರ. ಯಾವಾಗ ನಿಮಗೆ ವಿಶ್ರಾಂತಿಯಲ್ಲಿರುವಾಗ art of being ನ ರೂಢಿ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆಯೋ ಆಗ, ಕ್ರಿಯೆ ಮತ್ತು ವಿಶ್ರಾಂತಿ ಎರಡನ್ನೂ ಜೊತೆ ಜೊತೆಯಾಗಿ ಸಾಧಿಸಬಹುದು. ಏಕೆಂದರೆ ಅಷ್ಟೊತ್ತಿಗಾಗಲೇ ನಿಮಗೆ ವಿಶ್ರಾಂತಿ ಎನ್ನುವುದು ನಿಮ್ಮ ಒಳಗಿನ ಆಳಕ್ಕೆ ಸಂಬಂಧಿಸಿದ್ದು ಮತ್ತು ಕ್ರಿಯೆ ಪರಿಧಿಯ ಸಂಗತಿ ಎನ್ನುವುದು ಗೊತ್ತಾಗಿರುತ್ತದೆ. ಹಾಗಾಗಿ ಪರಿಧಿಯ ಕ್ರಿಯೆ, ಕೇಂದ್ರದ ವಿಶ್ರಾಂತಿಗೆ ಅಡಚಣಿ ಉಂಟುಮಾಡುವುದಿಲ್ಲ.
ಆಗ ನೀವು ದಿನದ ಇಪ್ಪತ್ನಾಲ್ಕು ಗಂಟೆಯ ಲೌಕಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತಲೇ ವಿಶಾಂತಿಯನ್ನ ಹೊಂದುತ್ತ ಧ್ಯಾನವನ್ನ ಸಾಧಿಸಬಹುದು.

ಆದರೆ ನನಪಿರಲಿ, ಕೀ ವರ್ಡ್ ಯಾವುದು ಎಂದು, ಅದು ವಿಶ್ರಾಂತಿ. ಯಾವತ್ತಿಗೂ ವಿಶ್ರಾಂತಿ ಮತ್ತು ಪ್ರಶಾಂತತೆಗೆ ವಿರುದ್ಧ ದಿಕ್ಕಿನಲ್ಲಿ ಹೋಗಬೇಡಿ. ನಿಮ್ಮ ಬದುಕಿನ ಸಮಯವನ್ನ ಹೀಗೆ ಆರೇಂಜ್ ಮಾಡಿಕೊಳ್ಳಿ, ಎಲ್ಲ ವ್ಯರ್ಥ ಕ್ರಿಯೆಗಳನ್ನ ತ್ಯಜಿಸಿಬಿಡಿ, ಏಕೆಂದರೆ ಪ್ರತಿಶತ ತೊಂಭತ್ತರಷ್ಟು ಕ್ರಿಯೆಗಳು ಈ ಬಗೆಯವು, ನಿಮ್ಮ ಸಮಯವನ್ನ ಅನಗತ್ಯವಾಗಿ ಹಾಳು ಮಾಡುವಂಥವು. ಇಂಥ ವ್ಯರ್ಥವನ್ನೆಲ್ಲ ಬಿಟ್ಟು ಉಳಿದ ಸಮಯವನ್ನ ಅಂತರಂಗದ ಪ್ರಯಾಣಕ್ಕೆ ಮೀಸಲಾಗಿಡಿ, ನಿಮ್ಮ ಎಲ್ಲ ಸಾಮರ್ಥ್ಯಗಳನ್ನು ಸೃಜನಶೀಲ ಕ್ರಿಯೆಗಳತ್ತ ಒಟ್ಟುಗೂಡಿಸಿ. ಆಗ ವಿಶ್ರಾಂತಿ ಮತ್ತು ಕ್ರಿಯೆ ಜೊತೆ ಜೊತೆಯಾಗಿ ಸಾಧ್ಯವಾಗುವ ಪವಾಡ ಸಂಭವಿಸುತ್ತದೆ. ಇದು ಪವಿತ್ರ ಮತ್ತು ನಿರಸ, ಈ ಜಗತ್ತು ಮತ್ತು ಆ ಜಗತ್ತು, ವಸ್ತುಪ್ರಪಂಚ ಮತ್ತು ಆಧ್ಯಾತ್ಮಿಕ ಪ್ರಪಂಚ ಒಂದಾಗುವ ಬಿಂದು.

ಒಮ್ಮೆ ಒಬ್ಬ ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ,

” ಮಾಸ್ಟರ್ ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕು? ”

“ಏಳು ವರ್ಷ” ಮಾಸ್ಟರ್ ಉತ್ತರಿಸಿದ.

” ಕಷ್ಟ ಪಟ್ಟು ಸಾಧನೆ ಮಾಡಿದರೆ ? ”

ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.

” ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.

Leave a Reply