ಸಮಸ್ಯೆ ಸ್ವತಃ ನೀವೇ! : ಓಶೋ ವ್ಯಾಖ್ಯಾನ

ಸಮಸ್ಯೆ ಬೇರೆ ಯಾರೂ ಅಲ್ಲ ಸ್ವತಃ ನೀವೇ, ನೀವು ಪರಿಹಾರ ಆಗುವ ತನಕ, ನೀವು ಮಾಡು ಪ್ರತಿಯೊಂದೂ, ಇತರ ಸಂಗತಿಗಳನ್ನು ಸಂಕೀರ್ಣಗೊಳಿಸುತ್ತ ಹೋಗುತ್ತದೆ… ~ ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿನ್ನೆ ಪೇಟೆಯಲ್ಲಿ, ಕೆಲ ತತ್ವಜ್ಞಾನಿಗಳು,
ತಮ್ಮ ತಲೆಗಳನ್ನ ಬುಟ್ಟಿಯಲ್ಲಿ ತುಂಬಿಕೊಂಡು,
ಕೂಗುತ್ತ ಹೋಗುತ್ತಿದ್ದರು.

“ಜ್ಞಾನ, ಜ್ಞಾನ, ಯಾರಿಗೆ ಬೇಕು ಜ್ಞಾನ”

ತಮ್ಮ ಎದೆಗಳನ್ನು ಸಮಾಧಾನ ಮಾಡಲು
ತಲೆ ಮಾರಿಕೊಳ್ಳುವುದು ಇವರಿಗೆ ಅನಿವಾರ್ಯ.

ಒಬ್ಬ ತತ್ವಜ್ಞಾನಿ,
ದಾರಿಯಲ್ಲಿ ಕಸಗುಡಿಸುವವನೊಂದಿಗೆ ಮಾತಿಗಿಳಿದ.

” ನನಗೆ, ನಿನ್ನನ್ನು ಕಂಡರೆ ಅಯ್ಯೋ! ಎನಿಸುತ್ತದೆ.
ಎಂಥ ಕಠಿಣ, ಎಂಥ ಹೊಲಸು ಕೆಲಸ ನಿನ್ನದು”

“ನಿಮ್ಮ ಅಂತಃಕರಣಕ್ಕೆ ಧನ್ಯವಾದಗಳು.
ನೀವೇನು ಕೆಲಸ ಮಾಡುತ್ತೀರಿ ಸ್ವಾಮಿ”
ಕಸಗುಡಿಸುವವ ಮರು ಪ್ರಶ್ನೆ ಮಾಡಿದ.

“ಮನುಷ್ಯರ ಮನಸ್ಸನ್ನ, ಅವರು ಮಾಡುವ ಕರ್ಮವನ್ನ,
ಅವರ ಆಸೆಗಳನ್ನ, ಅಭ್ಯಾಸ ಮಾಡುವುದೇ ನನ್ನ ಕೆಲಸ”

ತತ್ವಜ್ಞಾನಿ, ಹೆಮ್ಮೆಯಿಂದ ಉತ್ತರಿಸಿದ.

ಕಸಗುಡಿಸುವವ, ತನ್ನ ಕೆಲಸ ಮುಂದುವರೆಸುತ್ತ ಹೇಳಿದ,

“ಹೌದಾ, ಹಾಗಾದರೆ ನನಗೂ ನಿಮ್ಮ ಬಗ್ಗೆ
ಅಯ್ಯೋ ಅನಿಸುತ್ತದೆ.”

~ ಖಲೀಲ್ ಜಿಬ್ರಾನ್


ನೆನಪಿನಲ್ಲಿರಲಿ ಸಮಸ್ಯೆ ಬೇರೆ ಯಾರೂ ಅಲ್ಲ ಸ್ವತಃ ನೀವೇ, ನೀವು ಪರಿಹಾರ ಆಗುವ ತನಕ, ನೀವು ಮಾಡು ಪ್ರತಿಯೊಂದೂ, ಇತರ ಸಂಗತಿಗಳನ್ನು ಸಂಕೀರ್ಣಗೊಳಿಸುತ್ತ ಹೋಗುತ್ತದೆ. ಮೊದಲು ನಿನ್ನ ಮನೆಯಲ್ಲಿ ವ್ಯವಸ್ಥೆಯನ್ನು ಜಾರಿಗೊಳಿಸು, ಅಲ್ಲೊಂದು ವ್ಯವಸ್ಥಿತ ಜಗತ್ತನ್ನು ಸೃಷ್ಟಿಸು, ಅದು ಈಗ ಅವ್ಯವಸ್ಥೆಯ ಗೂಡಾಗಿದೆ.

ಭಾರತದಲ್ಲಿ ಒಂದು ಅತ್ಯಂತ ಹಳೆಯ ನೀತಿಕಥೆಯಿದೆ, ಕಥೆ ಹಳೆಯದಾದರೂ ಬಹಳ ಮಹತ್ವಪೂರ್ಣವಾದದ್ದು.

ಒಬ್ಬ ದೊಡ್ಡ ಆದರೆ ಮೂರ್ಖ ಚಕ್ರವರ್ತಿ, ರಾಜ್ಯದ ರಸ್ತೆಗಳು ತನ್ನ ಪಾದಗಳಿಗೆ ಗಾಯಮಾಡುತ್ತವೆಯೆಂದು ತಾನು ಓಡಾಡುವ ಜಾಗದಲ್ಲೆಲ್ಲ ಕುರಿಯ ತುಪ್ಪಳ ಹಾಸುವಂತೆ ಆದೇಶ ನೀಡಿದ. ಆಸ್ಥಾನದ ವಿದೂಷಕ ದೊರೆಯ ಆದೇಶವನ್ನು ಕೇಳಿ ಜೋರಾಗಿ ನಕ್ಕುಬಿಟ್ಟ. ವಿದೂಷಕ ತುಂಬ ವಿವೇಕದ ಮನುಷ್ಯ, “ರಾಜನ ಈ ಆದೇಶ ಮೂರ್ಖತನದ್ದು” ಎಂದು ದೊಡ್ಡ ದನಿಯಲ್ಲಿ ಘೋಷಿಸಿದ.

ವಿದೂಷಕನ ಮಾತಿದೆ ಕೆಂಡಾಮಂಡಲವಾದ ದೊರೆ, “ ನೀನು ಇದಕ್ಕಿಂತ ಒಳ್ಳೆಯ ಉಪಾಯವನ್ನು ಹೇಳು, ಇಲ್ಲದಿದ್ದರೆ ನಿನ್ನ ತಲೆಯನ್ನ ಕತ್ತರಿಸಲಾಗುವುದು” ಎಂದು ಎಚ್ಚರಿಕೆ ನೀಡಿದ.

ವಿದೂಷಕ ಉತ್ತರಿಸಿದ, “ಖಂಡಿತ ದೊರೆ, ನಿನ್ನ ದಾರಿಯಲ್ಲೆಲ್ಲ ಕುರಿಯ ತುಪ್ಪಳ ಹಾಕುವುದರ ಬದಲಾಗಿ, ಅದೇ ತುಪ್ಪಳದ ತುಂಡಿನಿಂದ ನಿನ್ನ ಪಾದಗಳಿಗೆ ಸರಿಯಾಗಿ ಹೊಂದು ಹಾಗೆ ಹೊದಿಕೆಗಳನ್ನು ಹೊಲಿಸಿಕೋ. ಆಗ ನೀನು ಎಲ್ಲಿ ಹೋದರೂ ನಿನ್ನ ಪಾದಗಳಿಗೆ ಗಾಯ ಆಗವುದಿಲ್ಲ”. ಚಪ್ಪಲಿಗಳು ಹುಟ್ಟಿದ ಕಥೆ ಇದು.

ಇಡೀ ನೆಲಕ್ಕೆ ಕುರಿಯ ತುಪ್ಪಳವನ್ನ ಹೊದಿಸುವ ಅವಶ್ಯಕತೆ ಇಲ್ಲ, ಕೇವಲ ನಿಮ್ಮ ಪಾದಗಳನ್ನು ಚರ್ಮದಿಂದ ಕವರ್ ಮಾಡಿಕೊಂಡುಬಿಟ್ಚರೆ ಅದು ಇಡೀ ಜಗತ್ತನ್ನು ಕವರ್ ಮಾಡಿದ ಹಾಗೆ. ಇದು ವಿವೇಕದ ಹುಟ್ಟು. ಹೌದು ಜಗತ್ತಿನಲ್ಲಿ ಮಹಾ ಮಹಾ ಸಮಸ್ಯೆಗಳಿವೆ ಒಪ್ಪುತ್ತೇನೆ, ಬದುಕು ನರಕವಾಗಿಬಿಟ್ಟಿದೆ, ಈ ಬದುಕಿನಲ್ಲಿ ದುಃಖ ಇದೆ, ಸಂಕಟ ಇದೆ, ಹಿಂಸೆ ಇದೆ, ಅಪಾರ ಹುಚ್ಚುತನ ಇದೆ, ಖಂಡಿತ ಇದೆಲ್ಲ ಇರೋದು ನಿಜ. ಆದರೂ ನಾನು ಒತ್ತಿ ಹೇಳೋದು ಏನೆಂದರೆ, ಸಮಸ್ಯೆ ಹುಟ್ಟೋದು ವೈಯಕ್ತಿಕ ವ್ಯಕ್ತಿಗಳಲ್ಲಿ, ಸಮಸ್ಯೆಗೆ ಕಾರಣ ವ್ಯಕ್ತಿ ಅವ್ಯವಸ್ಥೆಯ ಗೂಡಾಗಿರುವುದು. ಇಡೀ ಜಗತ್ತಿನ ಅವವ್ಯವಸ್ಥೆ ಈ ವೈಯಕ್ತಿಕ ಅವ್ಯವಸ್ಥೆಗಳ ಒಟ್ಟು ಮೊತ್ತ. ನಾವು ನಮ್ಮ ಎಲ್ಲ ಅವ್ಯಸ್ಥೆಗಳನ್ನ ಸುರಿದು ಒಂದು ಮಹಾ ಅವ್ಯವಸ್ಥೆಯನ್ನ ಹುಟ್ಟು ಹಾಕಿದ್ದೇವೆ. ಆದ್ದರಿಂದ ಇದಕ್ಕೆ ಪರಿಹಾರ ನಮ್ಮನ್ನು ನಾವು ಮೊದಲು ವ್ಯವಸ್ಥಿತವಾಗಿಸಿಕೊಳ್ಳುವುದು.

ಒಂದು ದಿನ ನಸ್ರುದ್ದೀನ್ ತನ್ನ ಡಾಕ್ಟರ್ ಗೆಳೆಯನಿಗೆ ಸಮಸ್ಯೆ ವಿವರಿಸುತ್ತಿದ್ದ.

“ ನನ್ನ ಹೆಂಡತಿಗೆ ಕೊಂಚವೂ ಕಿವಿ ಕೇಳಿಸುತ್ತಿಲ್ಲ “

“ ವಯೋಸಹಜ ಸಮಸ್ಯೆ ಇದು, ನೀನು ಹೀಗೆ ಮಾಡು. ಇವತ್ತು ಮನೆಗೆ ಹೋದಾಗ ಅವಳನ್ನು ಗೇಟ್ ನಿಂದ ಕೂಗು, ಆಮೇಲೆ ಮನೆಯ ಬಾಗಿಲು ಹತ್ತಿರ ಹೋಗಿ ಕೂಗು, ನಂತರ ಅವಳಿರುವ ಕೋಣೆಗೆ ಹೋಗಿ ಕೂಗು ಅವಳು ಯಾವಾಗ ಉತ್ತರಿಸುತ್ತಾಳೆ ಬಂದು ಹೇಳು ಅವಳ ಚಿಕಿತ್ಸೆಗೆ ಅನುಕೂಲವಾಗುತ್ತದೆ “

ಡಾಕ್ಟರ್ ಗೆಳೆಯ ನಸ್ರುದ್ದೀನ್ ಗೆ ಸಲಹೆ ನೀಡಿದ.

ಅಂದು ಸಂಜೆ ಮನೆಗೆ ಹೋದಾಗ ನಸ್ರುದ್ದೀನ್ ಗೇಟ್ ನಿಂದ ಹೆಂಡತಿಯನ್ನ ಕೂಗಿದ, ಅವಳು ಉತ್ತರಿಸದಿದ್ದಾಗ ಮನೆಯ ಬಾಗಿಲಿನಿಂದ ಕೂಗಿದ. ಆಗಲೂ ಯಾವ ಉತ್ತರ ಬಾರದಿದ್ದಾಗ ನಸ್ರುದ್ದೀನ್ ಹೆಂಡತಿಯ ರೂಮಿಗೆ ಹೋಗಿ ಅವಳನ್ನು ಕೂಗಿದ.

“ ಯಾಕೆ ನಸ್ರುದ್ದೀನ್ ನಿನ್ನ ಕಿವಿ ಕಿವುಡಾ, ಯಾಕೆ ಅಷ್ಟು ಕೂಗುತ್ತಿದ್ದೀಯಾ ? ಮೂರು ಬಾರಿ ನಿನಗೆ ಉತ್ತರಿಸಿದೆ ನಾನು. “

ಹೆಂಡತಿ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು.

Leave a Reply