ತಿಳುವಳಿಕೆಯ ಬಗೆಗಳು: ಓಶೋ ವ್ಯಾಖ್ಯಾನ

ಮೊದಲನೇಯದು, ಅಜ್ಞಾನದಂಥ ತಿಳುವಳಿಕೆ. ಇದು ಕೇವಲ ನನಗೆ ಗೊತ್ತು ಎನ್ನುವ ತಿಳುವಳಿಕೆ. ಎರಡನೇಯ ಬಗೆ, ನನಗೆ ಗೊತ್ತಿಲ್ಲ ಎನ್ನುವ ತಿಳುವಳಿಕೆ… | ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಕಂಡುಕೊಳ್ಳುವುದು ಹೇಗೆ?

ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎನ್ನುವುದು ಸಿದ್ಧವಾಗಿ ಹೋಗಿದೆ.

ಕಾಮ ಹೇಗಿರುತ್ತದೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?

ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು

ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.

– ರೂಮಿ.


ಸಾಕ್ರೆಟಿಸ್ ಹೇಳುತ್ತಿದ್ದನಂತೆ,

“ಹರೆಯದವನಾದಿದ್ಜಾಗ ನನಗೆ ಎಲ್ಲವೂ ಗೊತ್ತು ಎಂದು ಅನಿಸುತ್ತಿತ್ತು. ಸ್ವಲ್ಪ ವಯಸ್ಸಾಗಿ ಪ್ರಬುದ್ಧನಾದಾಗ, ನನಗೆ ಎಲ್ಲವೂ ಗೊತ್ತಿಲ್ಲ ಎನ್ನುವುದು ಗೊತ್ತಾಯಿತು : ಕೆಲ ವಿಷಯಗಳ ಬಗ್ಗೆ ಮಾಹಿತಿ ಇತ್ತು ಆದರೆ ಬಹಳಷ್ಟು ವಿಷಯಗಳು ಇನ್ನೂ ಅಜ್ಞಾತವಾಗಿದ್ದವು, ನಿಗೂಢವಾಗಿದ್ದವು.

ತಾನು ಸಾಯುವ ದಿನ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ಹೇಳಿದನಂತೆ……

“ಇದು ನನ್ನ ಕೊನೆಯ ಹೇಳಿಕೆ, ನನಗೆ ಏನೂ ಗೊತ್ತಿಲ್ಲ.”

ಇದು ವಿಚಿತ್ರ, ತಿಳುವಳಿಕೆಯ ಹಾದಿಯಲ್ಲಿ ಅವನು ಅಚ್ಚರಿಯ ರೀತಿಯಲ್ಲಿ ಗೊತ್ತು ಎನ್ನುವ ಬಿಂದುವಿನಿಂದ ಗೊತ್ತಿಲ್ಲ ಎನ್ನುವ ಗೆರೆಯ ಕಡೆ ಪ್ರಯಾಣ ಮಾಡುತ್ತಿದ್ದಾನೆ. ಸತ್ತಾಗ ಅವನ ಕಣ್ಣುಗಳಲ್ಲಿ ಎಷ್ಟು ಆನಂದ, ಎಷ್ಟು ಸಮಾಧಾನ ಇತ್ತೆಂದರೆ, ಸಾವು ಕೂಡ ಅವನ ಪ್ರಜ್ಞೆಯ ಸರೋವರದಲ್ಲಿ ಅಲೆಗಳನ್ನು ಎಬ್ಬಿಸಲಿಲ್ಲ.

ಮುಂದೆ ಸಾಕ್ರೆಟಿಸ್ ನ ಶಿಷ್ಯ ಪ್ಲೆೇಟೋ ಜ್ಞಾನದ ವಿಷಯದಲ್ಲಿ ಎರಡು ರೀತಿಗಳನ್ನ ಗುರುತಿಸುತ್ತಾನೆ.

ಮೊದಲನೇಯದು, ಅಜ್ಞಾನದಂಥ ತಿಳುವಳಿಕೆ. ಇದು ಕೇವಲ ನನಗೆ ಗೊತ್ತು ಎನ್ನುವ ತಿಳುವಳಿಕೆ. ನೀವು ಈ ವಿಷಯದ ಬಗ್ಗೆ ಓದಿದ್ದೀರಿ, ಕೇಳಿದ್ದೀರಿ ಅಷ್ಟೇ ಆದರೆ ಯಾವತ್ತೂ ನೀವು ಈ ವಿಷಯದ ಸತ್ಯಕ್ಕೆ ನೇರವಾಗಿ ಸಾಕ್ಷಿಯಾಗಿಲ್ಲ. ಇದು ಕೇವಲ ಕಿವಿಯ ಮೇಲೆ ಬಿದ್ದದ್ದು, ಅಜ್ಞಾನಕ್ಕೆ ಸಮವಾಗಿರುವ ತಿಳುವಳಿಕೆ, a knowledge which is ignorance. ದುರದೃಷ್ಟವಶಾತ್ ತೊಂಭತ್ತು ಪ್ರತಿಶತ ಮಾನವ ಜನಾಂಗ ಈ ರೀತಿಯ ಭಾಗವಾಗಿದೆ.

ಎರಡನೇಯ ಬಗೆ, ನನಗೆ ಗೊತ್ತಿಲ್ಲ ಎನ್ನುವ ತಿಳುವಳಿಕೆ. ನೀವು ಮತ್ತೆ ಮುಗ್ಧ ಹಸುಳೆಯಾಗಿದ್ದೀರಿ, ಗೊತ್ತು ಎನ್ನುವ ಎಲ್ಲ ತಿಳುವಳಿಕೆಯಿಂದ ಕಳಚಿಕೊಂಡುಬಿಟ್ಟಿದ್ದೀರಿ. ಅಸ್ತಿತ್ವ ಮತ್ತೆ ನಿಮಗೆ ನಿಗೂಢವಾಗಿ ಕಾಣಿಸುತ್ತಿದೆ, ಹುಟ್ಟಿದಾಗ ನೀವು ಹೇಗೆ ಇದ್ದಿರೋ ಹಾಗೆ. ಮೊದಲಬಾರಿ ನೀವು ಕಣ್ಣು ತೆರೆದಾಗ ಹೇಗೆ ಎಲ್ಲವೂ ನಿಮಗೆ ರಹಸ್ಯಮಯವಾಗಿ ಕಾಣಿಸುತ್ತಿತ್ತೋ ಹಾಗೆ.

Ignorance that knows… ಈಗ ನೀವು ಯಾವ ರೀತಿಯ ಅಜ್ಞಾನಿಗಳಾಗಿದ್ದಿರೆಂದರೆ, ನಿಮ್ಮ ಮೇಲೆ ಈಗ ಯಾವ ಶಾಸ್ತ್ರ ಗ್ರಂಥಗಳ, ಧರ್ಮ ಸಿದ್ಧಾಂತಗಳ, ತತ್ವಜ್ಞಾನಗಳ ಭಾರ ಇಲ್ಲ. ಮುಗ್ಧತೆ ಮಾತ್ರ ಸಾಧ್ಯಮಾಡಬಲ್ಲ ಸ್ಪಷ್ಟತೆ ಈಗ ನಿಮ್ಮಲ್ಲಿ ಮನೆ ಮಾಡಿದೆ. ಈ ಸ್ಪಷ್ಟತೆಯಲ್ಲಿ ನಿಮಗೆ ಕಾಣಿಸುತ್ತಿರುವುದು ಶಬ್ದಾತೀತ, ಆದ್ದರಿಂದ “ನನಗೆ ಗೊತ್ತು” ಎಂದು ಹೇಳುವುದು ನಿಮಗೆ ಸಾಧ್ಯವಾಗುವುದಿಲ್ಲ. ಇದು ಎಂಥ ಸ್ಪಷ್ಟತೆಯೆಂದರೆ, ಈ ನೋಡುವಿಕೆಯಲ್ಲಿ ನೋಡುಗ ಮಾಯವಾಗಿದ್ದಾನೆ. ಇಲ್ಲಿರುವುದು ಕೇವಲ ಕಾಣುವಿಕೆ. ಅನುಭವ ಇದೆ ಆದರೆ ಅನುಭವಿಸುವವ ನಾಪತ್ತೆಯಾಗಿದ್ದಾನೆ.

ಇದು ಅನುಭಾವದ ಸ್ಥಿತಿ, ಹುಡುಕಾಟವನ್ನು ಬಿಟ್ಟಾಗ ಮಾತ್ರ ಸಾಧ್ಯವಾಗುವ ಸ್ಥಿತಿ. ಎಲ್ಲ ಹುಡುಕಾಟವೂ ತನ್ನ ಗಮ್ಯವನ್ನು ಸೇರುವ ಸ್ಥಿತಿ.

Leave a Reply