ಒಂದು ಪ್ರಾರ್ಥನೆ … : ಯುದ್ಧ ನಿರಾಕರಣೆ ಪದ್ಯ

ಮೂಲ: Palestinian poet MAMOUD DARWISH (1931-2008) | ಕನ್ನಡಕ್ಕೆ: ಚಿದಂಬರ ನರೇಂದ್ರ

ಬೆಳಗಿನ ತಿಂಡಿಗಾಗಿ ನೀವು
ಲಗುಬಗೆಯಿಂದ ಸಿದ್ಧರಾಗುತ್ತಿರುವಾಗ
ಕೊಂಚ ಬೇರೆಯವರ ಬಗ್ಗೆ ಯೋಚನೆ ಮಾಡಿ,
ನಿಮ್ಮ ಅಂಗಳದಲ್ಲಿ ಗುಟುರುಗುಡುತ್ತಿರುವ
ಧಾವಂತದ ಪಾರಿವಾಳಗಳನ್ನು ಮರೆಯಬೇಡಿ.

ನಿಮ್ಮ ಯುದ್ಧಗಳನ್ನು ನೀವು
ಹುರುಪಿನಿಂದ ಜಾರಿ ಮಾಡುತ್ತಿರುವಾಗ
ಸ್ವಲ್ಪ ಬೇರೆಯವರ ಬಗ್ಗೆ ಯೋಚನೆ ಮಾಡಿ,
ಯಾರು ಶಾಂತಿಯನ್ನ ಬಯಸುತ್ತಿದ್ದಾರೋ ಅವರ
ಹಕ್ಕಿನ ಸಮಾಧಾನಗಳನ್ನ ಮರೆಯಬೇಡಿ.

ನೀವು ನೀರಿಗೆ ಹಣ ಕೊಟ್ಟು
ನಿಮ್ಮ ಬಾಯಿಯ ಕಾವು ಆರಿಸಿಕೊಳ್ಳುತ್ತಿರುವಾಗ
ಕೊಂಚ ಬೇರೆಯವರ ಬಗ್ಗೆ ಯೋಚನೆ ಮಾಡಿ,
ಕೇವಲ ಮೋಡಗಳ ಮೇಲೆ ಕಣ್ಣಿಟ್ಟು ಕಾಯುತ್ತಿರುವ
ಒಣಗಿದ ಗಂಟಲುಗಳನ್ನು ಮರೆಯಬೇಡಿ.

ಸಂಜೆ ಕೆಲಸದ ನಂತರ ನೀವು
ನಿಮ್ಮ ಸ್ವಂತದ ಮನೆಯಲ್ಲಿ ನಿರಾಳವಾಗಿ ಕಾಲಿಟ್ಟಾಗ
ಸ್ವಲ್ಪ ಬೇರೆಯವರ ಬಗ್ಗೆ ಯೋಚನೆ ಮಾಡಿ,
ಟೆಂಟುಗಳಲ್ಲಿ ಉಸಿರು ಬಿಗಿಹಿಡಿದು ಜೀವ ತೇಯುತ್ತಿರುವ
ಬಿರುಸು ದೇಹಗಳನ್ನು ಮರೆಯಬೇಡಿ.

ನಿರಾಳವಾಗಿ ಮಲಗಿ
ನೀವು ನಕ್ಷತ್ರಗಳನ್ನು ಎಣಿಸುವಾಗ
ಕೊಂಚ ಬೇರೆಯವರ ಬಗ್ಗೆ ಯೋಚನೆ ಮಾಡಿ,
ಮಲಗಲು ನೆಲ, ಎಣಿಸಲು ಆಕಾಶ ಇಲ್ಲದ
ಹತಾಶ ಕಣ್ಣುಗಳನ್ನು ಮರೆಯಬೇಡಿ.

ರೂಪಕಗಳನ್ನು ಸೃಷ್ಟಿಸುತ್ತ
ನಿಮ್ಮನ್ನು ನೀವು ಮುಕ್ತರಾಗಿಸಿಕೊಳ್ಳುವಾಗ
ಸ್ವಲ್ಪ ಬೇರೆಯವರ ಬಗ್ಗೆ ಯೋಚನೆ ಮಾಡಿ,
ಮಾತಿನ ಹಕ್ಕು ಕಿತ್ತುಕೊಳ್ಳಲಾಗಿರುವ ನತದೃಷ್ಟ
ಮೂಕ ನಾಲಿಗೆಗಳನ್ನು ಮರೆಯಬೇಡಿ.

ಮತ್ತು ದೂರದ
ಬೇರೆಯವರ ಬಗ್ಗೆ ಯೋಚಿಸುವಾಗಲೇ
ಕೊಂಚ ನಿಮ್ಮ ಬಗ್ಗೆ ಯೋಚಿಸಿ……..

ಒಂದು ದೀಪವಾದರೂ ಆಗಬೇಕಿತ್ತು ನಾನು
ಈ ಕಗ್ಗತ್ತಲೊಳಗೆ ಎನ್ನುವ ನಿಮ್ಮ
ನಿತ್ಯದ ಹಳಹಳಿಕೆಯನ್ನ
ಒಮ್ಮೆಯಾದರೂ ಸತ್ಯ ಮಾಡಿ.

Leave a Reply