ಧ್ಯಾನ, ಪ್ರತಿದಿನದ ಸ್ನಾನ… : ಓಶೋ ವ್ಯಾಖ್ಯಾನ

ಧ್ಯಾನ ಎನ್ನುವುದು ಪ್ರತಿದಿನದ ಸ್ನಾನದಂತೆ. ಒಮ್ಮೆ ಸ್ನಾನ ಮಾಡಿದರೆ ಧೂಳು ಮಾಯವಾಗಿಬಿಡುವುದಿಲ್ಲ, ಪ್ರತಿದಿನ ಮತ್ತೆ ಮತ್ತೆ ಸ್ನಾನ ಮಾಡಬೇಕಾಗುತ್ತದೆ. ಹಾಗೆಯೇ ಧ್ಯಾನ ನಿಮ್ಮ ಬದುಕಿನ ಭಾಗವಾಗಬೇಕು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಆಲೋಚನೆಗಳು ಮನಸ್ಸಿಸಿನ (mind) ಕನ್ನಡಿಯ ಮೇಲೆ ಅಂಟಿಕೊಂಡಿರುವ ಧೂಳಿನಂತೆ. ಆಲೋಚನೆಗಳು, ಬಯಕೆಗಳು, ಕಲ್ಪನೆಗಳು, ನೆನಪುಗಳು ಈ ಎಲ್ಲವೂ ಕೂಡ ಹಾಗೆಯೇ. ಈ ಎಲ್ಲದರ ಕಾರಣವಾಗಿಯೇ ಮೈಂಡ್ ನ ಶುದ್ಧತೆ ನಾಶವಾಗಿದೆ, ಈ ಎಲ್ಲದರ ಕಾರಣವಾಗಿಯೇ ಮನಸ್ಸಿನ ಕನ್ನಡಿತನ ಮಸುಕಾಗಿದೆ. ಮನಸ್ಸಿನ ಕನ್ನಡಿಯ ಮೇಲೆ ಸತತವಾಗಿ ಆವರಿಸಿತೊಳ್ಳುತ್ತಲೇ ಇರುವ ಇವನ್ನು ನಿರಂತರವಾಗಿ ಸ್ವಚ್ಛ ಮಾಡುತ್ತಲೇ ಇರಬೇಕಾಗುತ್ತದೆ.

ಧ್ಯಾನ ಎನ್ನುವುದು ಈ ಎಲ್ಲ ಕೊಳೆಯನ್ನ ಸ್ವಚ್ಛ ಮಾಡುವ ಒಂದು ವಿಧಾನ ಆದ್ದರಿಂದ, ಧ್ಯಾನ ಯಾವುದೋ ಒಂದು ನಿಗದಿತ ಸಮಯಕ್ಕೆ ಮಾತ್ರ ಮಾಡಿ ಮುಗಿಸುವ ಕ್ರಿಯೆ ಅಲ್ಲ ಏಕೆಂದರೆ, ಬದುಕಿನ ಪ್ರತಿ ಕ್ಷಣದಲ್ಲೂ ಮೈಂಡ್ ನ ಮೇಲೆ ಈ ಕೊಳೆಗಳ ದಾಳಿ ನಡೆಯುತ್ತಿರುತ್ತದೆ. ಬದುಕು ಪ್ರಯಾಣಿಕನ ರೀತಿ, ನಿರಂತರವಾಗಿ ಅವನ ಬಟ್ಟೆಯ ಮೇಲೆ, ದೇಹದ ಮೇಲೆ ಧೂಳು ಜಮಾಯಿಸುತ್ತಿರುತ್ತದೆ. ಈ ಕೊಳೆಯಿಂದ ಹೊರತಾಗಲು ಅವನು ಪ್ರತಿದಿನ ಸ್ನಾನ ಮಾಡಬೇಕು. ಮುಂದಿನ ಕ್ಷಣದಲ್ಲಿ ಮತ್ತೆ ಧೂಳು ಅವನ ಮೇಲೆ ಆವರಿಸಿಕೊಳ್ಳುತ್ತದೆ.

ಧ್ಯಾನ ಎನ್ನುವುದು ಪ್ರತಿದಿನದ ಸ್ನಾನದಂತೆ. ಒಮ್ಮೆ ಸ್ನಾನ ಮಾಡಿದರೆ ಧೂಳು ಮಾಯವಾಗಿಬಿಡುವುದಿಲ್ಲ, ಪ್ರತಿದಿನ ಮತ್ತೆ ಮತ್ತೆ ಸ್ನಾನ ಮಾಡಬೇಕಾಗುತ್ತದೆ. ಹಾಗೆಯೇ ಧ್ಯಾನ ನಿಮ್ಮ ಬದುಕಿನ ಭಾಗವಾಗಬೇಕು. ಊಟಮಾಡುವಾಗ, ಕೆಲಸಮಾಡುವಾಗ, ನಿದ್ದೆ ಮಾಡುವಾಗ ಧ್ಯಾನ ನಿಮ್ಮ ಸಹಜ ಸಹಯೋಗಿಯಾಗಬೇಕು. ಪ್ರತಿದಿನ ಕನಿಷ್ಟ ಎರಡು ಹೊತ್ತಾದರೂ ನಿಮ್ಮ ಮೈಂಡ್ ನ ಸ್ವಚ್ಛತೆ ನಡೆಯಬೇಕು.

ಧ್ಯಾನಕ್ಕೆ ಮೊದಲನೇಯ ಅತ್ಯುತ್ತಮ ಸಮಯ, ಮುಂಜಾನೆ. ನೀವು ಹೊಸ ಜಗತ್ತನ್ನು ಪ್ರವೇಶಿಸಲು ಸಿದ್ಧರಾಗುತ್ತಿರುವಾಗ. ನಿಮ್ಮ ಮೈಂಡ್ ನ ಪಾರದರ್ಶಕತೆಯನ್ನ ಸ್ಪಷ್ಟವಾಗಿಸಿಕೊಳ್ಳಲು, ತಪ್ಪುಗಳನ್ನ ಮಾಡದೇ ಇರಲು, ಸುತ್ತ ಕೆಟ್ಟ ಆಲೋಚನೆಗಳು ಸುಳಿಯದೇ ಇರಲು, ಅಹಂ ನ ಭಾವಗಳು ಹುಟ್ಟಿಕೊಳ್ಳದಿರಲು, ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಲು ಧ್ಯಾನ ಸಹಾಯ ಮಾಡುತ್ತದೆ. ಧ್ಯಾನ ನಿಮ್ಮ ಮೈಂಡ್ ನ ಶುದ್ಧಗೊಳಿಸಿ ದಿನದ ದೈನಂದಿನ ಜಗತ್ತಿಗೆ ಕಳುಹಿಸಿಕೊಡುತ್ತದೆ.

ಧ್ಯಾನಕ್ಕೆ ಮತ್ತೊಂದು ಉತ್ತಮ ಸಮಯ ಎಂದರೆ ರಾತ್ರಿ, ನೀವು ನಿದ್ದೆಗೆ ಜಾರುವ ಮುನ್ನ. ಇಡೀ ದಿನ ನಿಮ್ಮ ಮೈಂಡ್ ನ ಆವರಿಸಿಕೊಂಡಿರುವ ಧೂಳನ್ನ ನೀವು ಧ್ಯಾನದ ಮೂಲಕ ಸ್ವಚ್ಛ ಮಾಡಿಕೊಂಡಾಗ, ಗಾಢ ನಿದ್ರೆ ಸಾಧ್ಯವಾಗುತ್ತದೆ.

ಧ್ಯಾನ ನಿಮ್ಮೊಳಗೆ ಪ್ರಶಾಂತ ಶಕ್ತಿಯನ್ನು ಹುಟ್ಟು ಹಾಕುತ್ತದೆ. ಆಗ ನೀವು ಬೇರೆಯದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುತ್ತೀರಿ, ಯಾವ ದ್ವಂದ್ವಗಳಿಲ್ಲದಂತೆ, ಯಾವ ಆಕ್ರಮಣಶೀಲತೆಯಿಲ್ಲದೆ, ಪೂರ್ಣ ಸೌಹಾರ್ದದಲ್ಲಿ ನೀವು ಬದುಕನ್ನ ಪ್ರವೇಶ ಮಾಡುತ್ತೀರಿ. ಈ ಸ್ಥಿತಿಯಲ್ಲಿ ಯಾರಾದರೂ ನಿಮ್ಮನ್ನು ದ್ವೇಷ ಮಾಡುತ್ತಾರಾದರೆ, ಆ ಎನರ್ಜಿಯನ್ನೂ ನೀವು ಪ್ರೇಮವಾಗಿ ಬದಲಾಯಿಸಿಕೊಂಡು ಮತ್ತಷ್ಟು ಗಟ್ಟಿಗೊಳ್ಳುತ್ತೀರಿ.


Source: Osho
The Discipline of Transcendence,
Vol 2
Discourses on the 42 Sutras of Buddha
Chapter_5: A light unto yourself

Leave a Reply