ಗುರು ಹಾಕಿದ ಕರಾರು…

ಮೂಲ: Thich Nhat Hanh | ಕನ್ನಡಕ್ಕೆ: ಚಿದಂಬರ ನರೇಂದ್ರ

ಉಸಿರು,
ಬದುಕು ಮತ್ತು ಪ್ರಜ್ಞೆಗಳ
ನಡುವಿನ ಸೇತುವೆ,
ದೇಹ ಮತ್ತು ಮನಸ್ಸುಗಳ
ನಡುವಿನ ಕೊಂಡಿ.
ಮನಸ್ಸು ಚೆಲ್ಲಾಪಿಲ್ಲಿಯಾದಾಗಲೆಲ್ಲ
ಉಸಿರಿನ ಬೆನ್ನೇರಿ
ಮನಸ್ಸನ್ನು ಇಡಿಯಾಗಿಸಿಕೊಳ್ಳಿ.
ಮನಸ್ಸು ಸುಮ್ಮನಾದ
ಖಾಲಿಯಲ್ಲಿ ಮಾತ್ರ
ತುಂಬಿಕೊಳುತ್ತದೆ ಬದುಕು.


ಸುಮಾರು ಹತ್ತು ವರ್ಷಗಳ ಹಿಂದೆ ನನ್ನ ಶಿಷ್ಯೆಯೊಬ್ಬಳು ವಿಯೆತ್ನಾಂ ನಲ್ಲಿ ನಾನು ಸತ್ತ ಮೇಲೆ ನನ್ನ ಅಸ್ಥಿಯನ್ನು ಸಂಗ್ರಹಿಸಿ ಇಡಲು ಒಂದು ಬುದ್ಧಿಸ್ಟ್ ಸ್ತೂಪವನ್ನ ನಿರ್ಮಿಸಿದಳು. ನನ್ನ ದೇಹದ ಬೂದಿಗೆ ಯಾವ ಸ್ತೂಪದ ಅವಶ್ಯಕತೆ ಇಲ್ಲವೆಂದೂ ಮತ್ತು ನಾನು ಸ್ತೂಪಕ್ಕೆ ಮಾತ್ರ ಸೀಮಿತನಾಗುವವನಲ್ಲ ಎಂದೂ ಎಲ್ಲೆಲ್ಲಿಯೂ ಇರುವವನೆಂದೂ ಅವಳಿಗೆ ತಿಳಿಹೇಳಿದೆ.

“ಆದರೆ ಈಗಾಗಲೇ ಸ್ತೂಪ ಕಟ್ಟಿಯಾಗಿದೆಯಲ್ಲ” ಎನ್ನುತ್ತ ಆಕೆ ನನ್ನ ಮಾತನ್ನ ವಿರೋಧಿಸಿದಳು. “ಹಾಗಾದರೆ ಒಂದು ಕೆಲಸ ಮಾಡು, ಸ್ತೂಪದ ಪ್ರವೇಶದ್ವಾರದಲ್ಲಿ ಇಲ್ಲಿ ಮಾಸ್ಟರ್ Thich Nhat Hanh ಇಲ್ಲವೆಂದು ಬರೆಸಿ ಹಾಕು” ಎಂದು ಅವಳಿಗೆ ಹೇಳಿದೆ. ಇದು ನಿಜ, ನಾನು ಸ್ತೂಪಗಳಲ್ಲಿ ಕಟ್ಟಿಹಾಕಿಸಿಕೊಳ್ಳುವವನಲ್ಲ.

ಒಂದು ವೇಳೆ ನಾನು ಸತ್ತ ಮೇಲೆ ನನ್ನ ಅಸ್ಥಿಯನ್ನ ಅಲ್ಲಿ ಇಡಲಾದರೂ, ನಾನು ಅಲ್ಲಿ ಇರುವವನಲ್ಲ, ಹೊರಗೆ ಜಗತ್ತು ಇಷ್ಟು ವೈಬ್ರಂಟ್ ಆಗಿರುವಾಗ ನಾನು ಯಾಕೆ ಸ್ತೂಪದ ಕೋಣೆಯೊಳಗೆ ಪ್ರದರ್ಶನದ ವಸ್ತುವಾಗಲಿ?

ನಾನು ಅವಳಿಗೆ ಇನ್ನೊಂದು ಮಾತು ಹೇಳಿದೆ. ಒಂದು ವೇಳೆ ಪ್ರವೇಶ ದ್ವಾರದಲ್ಲಿ ನಾನು ಅಲ್ಲಿ ಇಲ್ಲ ಎನ್ನುವ ಫಲಕ ನೋಡಿ ಜನ ತಪ್ಪು ತಿಳಿದುಕೊಳ್ಳಬಹುದಾದರೆ, ಅಲ್ಲಿ ಇನ್ನೊಂದು ಇನ್ನೊಂದು ಫಲಕ ಬರೆಯಿಸಿ ಹಾಕು, ಮಾಸ್ಟರ್ ಸ್ತೂಪದ ಒಳಗಷ್ಟೇ ಅಲ್ಲ ಹೊರಗೂ ಇಲ್ಲ ಎಂದು ಆ ಫಲಕದ ಮೇಲೆ ಬರೆದಿರಲಿ.

ಜನ ಇದನ್ನೂ ಅಪಾರ್ಥ ಮಾಡಿಕೊಳ್ಳಬಹುದು ಎಂದು ನಿನಗನಿಸಿದರೆ ಮೂರನೇ ಫಲಕವೂ ಅಲ್ಲಿರಲಿ. ಮೂರನೇ ಫಲಕದ ಮೇಲೆ ಹೀಗೆ ಬರೆಸು,

“ಮಾಸ್ಟರ್ ನ ಎಲ್ಲಿಯಾದರೂ ನೀವು ಕಾಣ ಬಯಸುವಿರಾದರೆ, ಅವರು ಇರುವುದು ನಿಮ್ಮ ಪ್ರಶಾಂತ ಉಸಿರಾಟದಲ್ಲಿ (peaceful breathing) ಮತ್ತು ಸಮಾಧಾನದ ನಡಿಗೆಯಲ್ಲಿ.”

ನೀವು ಯಾವತ್ತೂ ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿಸಿರಲಿಕ್ಕಿಲ್ಲ, ಆದರೆ ನೀವು ಉಸಿರಾಡಿದಾಗ ನಿಮಗೆ ಪ್ರಶಾಂತತೆಯ, ಸಮಾಧಾನದ ಅನುಭವವಾದರೆ, ನಾನು ಅಲ್ಲಿದ್ದೇನೆ ಎಂದು ತಿಳಿದುಕೊಳ್ಳಿ.


Source: Thich Nhat Hanh, in “The Art of Living”.

Leave a Reply