ಆಗೇನು ಮಾಡೋದು!? : ನಸ್ರುದ್ದೀನನ ದೃಷ್ಟಾಂತ ಕತೆ

ಓಶೋ ಹೇಳಿದ ಕತೆ… | ಚಿದಂಬರ ನರೇಂದ್ರ

ಅತಿ ಆಲೋಚನೆಯ (over thinking) ಕುರಿತಾದ ಒಂದು ಸೂಫಿ ಕತೆಯನ್ನ ಓಶೋ ನೆನಪು ಮಾಡಿಕೊಳ್ಳುತ್ತಾರೆ. ಅದು ಹೀಗಿದೆ….

ಒಮ್ಮೆ ಮುಲ್ಲಾ ನಸ್ರುದ್ದೀನ್ ಒಂದು ದೊಡ್ಡ ಹಡಗಿನ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗಿರುತ್ತಾನೆ. ಹಡಗಿನ ಕ್ಯಾಪ್ಟನ್ ಮತ್ತು ಇತರ ಹಿರಿಯ ಅಧಿಕಾರಿಗಳು ನಸ್ರುದ್ದೀನ್ ನನ್ನು ಇಂಟರ್ವ್ಯೂ ಮಾಡುತ್ತಾರೆ.

ಕ್ಯಾಪ್ಟನ್ ಪ್ರಶ್ನೆ ಮಾಡುತ್ತಾನೆ “ ಹಡಗು ಪ್ರಯಾಣಿಸುವಾಗ ಭಯಂಕರ ಬಿರುಗಾಳಿ ಬಂದು ಹಡಗನ್ನು ಬೇರೆ ಯಾವುದು ದಿಕ್ಕಿಗೆ ಎಳೆದೊಯ್ಯುತ್ತಿದ್ದರೆ ನೀನು ಏನು ಮಾಡುತ್ತೀಯ?”

“ ಸಿಂಪಲ್, ಲಂಗರು (anchor) ಬಳಸಿ ಹಡಗನ್ನು ಹತೋಟಿಗೆ ತೆಗೆದುಕೊಂಡು ಬರುತ್ತೇನೆ? “ ನಸ್ರುದ್ದೀನ್ ಉತ್ತರಿಸುತ್ತಾನೆ.

“ ಅದು ಸರಿ ಇನ್ನೊಂದು ದಿಕ್ಕಿನಿಂದ ಬಿರುಗಾಳಿ ಬೀಸಲು ಆರಂಭಿಸಿದರೆ ಆಗ ಏನು ಮಾಡುತ್ತೀಯ” ಕ್ಯಾಪ್ಟನ್ ಮತ್ತೆ ಪ್ರಶ್ನೆ ಮಾಡುತ್ತಾನೆ.

“ಏನಿಲ್ಲ ಆಗ ಇನ್ನೊಂದು ಲಂಗರು ಬಳಸಿ ಹಡಗನ್ನು ನಿಯಂತ್ರಿಸುತ್ತೇನೆ” ಉತ್ತರಿಸಿದ ನಸ್ರುದ್ದೀನ್.

“ ಮೂರನೇ ಬಿರುಗಾಳಿ ಹಡಗನ್ನು ಅಪ್ಪಳಿಸಿತು ಎಂದುಕೋ ಆಗ ಏನು ಮಾಡುತ್ತೀಯ” ಕ್ಯಾಪ್ಟನ್ ಪ್ರಶ್ನೆ ಮುಂದುವರೆಯಿತು.

“ ಸರಳ, ಆಗ ನಾನು ಮೂರನೇ ಆ್ಯಂಕರ್ ಬಳಸಿ ಹಡಗನ್ನ ಕಂಟ್ರೋಲ್ ಮಾಡುತ್ತೇನೆ”. ನಸ್ರುದ್ದೀನ್ ನ ಉತ್ತರ.

“ ಹೌದಪ್ಪ ಆದರೆ ಇಷ್ಟೆಲ್ಲ ಆ್ಯಂಕರ್ ಗಳನ್ನ ಎಲ್ಲಿಂದ ತರ್ತೀಯಾ”. ಕ್ಯಾಪ್ಟನ್ ಪಟ್ಟು ಸಡಿಲಿಸಲಿಲ್ಲ

“ನೀವು ಇಷ್ಟೊಂದು ಬಿರುಗಾಳಿಗಳನ್ನ ಎಲ್ಲಿಂದ ತರುತ್ತಿದ್ದೀರೋ ಅಲ್ಲಿಂದ”. ನಸ್ರುದ್ದೀನ್ ಪ್ರಾಮಾಣಿಕವಾಗಿ ಉತ್ತರಿಸಿದ.

Leave a Reply