ಕೋಡಂಗಿಗಿಂತ ಕಡೆ! : ಝೆನ್ ದೃಷ್ಟಾಂತ ಕತೆ

ನಗು ನಗುತ್ತಲೇ ಮಾಸ್ಟರ್ ತನ್ನ ಶಿಷ್ಯನಿಗೆ ಜ್ಞಾನೋದಯ ಮಾಡಿಸಿದ್ದು ಹೀಗೆ…. | ಚಿದಂಬರ ನರೇಂದ್ರ

ಚೈನಾ ದೇಶದಲ್ಲಿ ಒಬ್ಬ ಯುವ ಸನ್ಯಾಸಿ ಇದ್ದ. ಅವನು ಅತ್ಯಂತ ಸಿರಿಯಸ್ ಆಗಿ ಧರ್ಮವನ್ನು ಅಭ್ಯಾಸ ಮಾಡುತ್ತಿದ್ದ. ಒಮ್ಮೆ ಧರ್ಮದ ವಿಷಯದಲ್ಲಿ ಅವನಿಗೆನೋ ಅರ್ಥವಾಗಲಿಲ್ಲ. ಸನ್ಯಾಸಿ ಆ ವಿಷಯವನ್ನು ತಿಳಿದುಕೊಳ್ಳಬೇಕೆಂದು ತನ್ನ ಮಾಸ್ಟರ್ ಬಳಿಗೆ ಹೋದ.

ಸನ್ಯಾಸಿಯ ಪ್ರಶ್ನೆ ಕೇಳಿ ಮಾಸ್ಟರ್ ಬಿದ್ದು ಬಿದ್ದು ನಗಲು ಶುರು ಮಾಡಿದ. ಎಷ್ಟೋ ಹೊತ್ತು ನಗುತ್ತಿದ್ದ ಮಾಸ್ಟರ್, ನಗುತ್ತಲೇ ಅಲ್ಲಿಂದ ಎದ್ದು ಹೊರಟು ಹೋದ.

ತನ್ನ ಪ್ರಶ್ನೆಗೆ ಮಾಸ್ಟರ್ ನೀಡಿದ ಪ್ರತಿಕ್ರಿಯೆಯಿಂದ ಯುವ ಸನ್ಯಾಸಿ ಡಿಸ್ಟರ್ಬ್ ಆದ. ಮಾಸ್ಟರ್ ನ ನಗು ಅವನಿಗೆ ಅಪಮಾನದಂತೆ ಅನಿಸಿತ್ತು. ಮುಂದಿನ ಮೂರು ದಿನ ಅವನು ಈ ಗುಂಗಿನಲ್ಲಿಯೇ ಇದ್ದ. ಅವನು ಊಟ ನಿದ್ದೆ ಬಿಟ್ಟು ತಲೆಕೆಡೆಸಿಕೊಂಡಿದ್ದ. ಅವನ ತಲೆಗೆ ಏನೂ ತೋಚಲಿಲ್ಲ. ಮೂರು ದಿನಗಳ ನಂತರ ಅವನು ಮತ್ತೆ ಮಾಸ್ಟರ್ ಹತ್ತಿರ ಹೋಗಿ ತಾನು ಎಷ್ಟು ಡಿಸ್ಟರ್ಬ್ ಆಗಿರುವೆ ಎನ್ನುವುದನ್ನ ಮಾಸ್ಟರ್ ಗೆ ವಿವರಿಸಿ ಹೇಳಿದ.

ಸನ್ಯಾಸಿಯ ಮಾತು ಕೇಳಿಸಿಕೊಂಡ ಮಾಸ್ಟರ್ ಹೇಳಿದ, “ ಹುಡುಗಾ ನಿನ್ನ ಸಮಸ್ಯೆ ಏನು ಗೊತ್ತಾ? ನಿನ್ನ ವರ್ತನೆ ಕೋಡಂಗಿ (clown) ಗಿಂತ ಕಡೆ”

ಮಾಸ್ಟರ್ ಮಾತು ಕೇಳಿ ಸನ್ಯಾಸಿಗೆ ಇನ್ನಷ್ಟು ದಿಗಿಲಾಯಿತು. “ಪೂಜ್ಯರೇ ಇಂಥ ಮಾತು ಹೇಳುವುದು ನಿಮಗೆ ಹೇಗೆ ಸಾಧ್ಯ? ನನ್ನ ವರ್ತನೆ ಹೇಗೆ ಕೋಡಂಗಿಗಿಂತ ಕಡೆ? “ ಯುವ ಸನ್ಯಾಸಿ ದೀನನಾಗಿ ಮಾಸ್ಟರ್ ನ ಕೇಳಿದ.

“ ಯಾರಾದರೂ ನಗುತ್ತಿದ್ದರೆ ಅದನ್ನು ನೋಡಿ ಕೋಡಂಗಿ ತಾನೂ ನಗುತ್ತಾನೆ, ಆ ನಗುವನ್ನ ತಾನೂ ಎಂಜಾಯ್ ಮಾಡುತ್ತಾನೆ. ಆದರೆ ನೀನು ನಾನು ನಗುವುದನ್ನ ನೋಡಿ ಡಿಸ್ಟರ್ಬ್ ಆದೆ, ನಿನಗೆ ದುಃಖ ಆಯಿತು. ಈಗ ನೀನೇ ಹೇಳು ನಿನ್ನ ವರ್ತನೆ ಕೋಡಂಗಿಗಿಂತ ಕಡೆ ಹೌದೋ ಅಲ್ಲವೋ ಎಂದು”. ಮಾಸ್ಟರ್ ಹೇಳಿದ.

ಮಾಸ್ಟರ್ ನ ಈ ಮಾತುಗಳನ್ನ ಕೇಳುತ್ತಿದ್ದಂತೆಯೇ ಸನ್ಯಾಸಿ ತಾನೂ ನಗಲು ಶುರುಮಾಡಿದ. ಅವನಿಗೆ ಆ ಕ್ಷಣದಲ್ಲಿಯೇ ಜ್ಞಾನೋದಯವಾಯಿತು.

Leave a Reply