ದೇವರನ್ನ ಹೇಗೆ ಡಿಫೈನ್ ಮಾಡುವುದು? : ಓಶೋ

“ಹಳದಿ ಬಣ್ಣವನ್ನ ಡಿಫೈನ್ ಮಾಡುವುದು ಕಷ್ಟ ಎಂದು ಹೇಳುತ್ತಿದ್ದೀಯ, ದೇವರನ್ನ ಹೇಗೆ ಡಿಫೈನ್ ಮಾಡುವುದು?” ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

G E ಮೋರ್ ಬಹಳ ದೊಡ್ಡ ಚಿಂತಕ, ಬಹುಶಃ ನನ್ನ ಪ್ರಕಾರ ಈ ಶತಮಾನದ ಅತ್ಯಂತ ಶ್ರೇಷ್ಠ ಚಿಂತಕರಲ್ಲಿ ಅವನೂ ಒಬ್ಬ. ಕಳೆದ ಐವತ್ತು ವರ್ಷಗಳಲ್ಲಿ ತನ್ನ ತಾರ್ಕಿಕ ಚಿಂತನೆಯ ಮೂಲಕ ಅವನು ಮಾನವ ಮೈಂಡ್ ಮೇಲೆ ತನ್ನದೇ ಆದ ಛಾಪು ಮೂಡಿಸಿದ್ದಾನೆ. ತನ್ನ ಚಿಂತನೆಯ ಸಾರವನ್ನು ಅವನು ತನ್ನ ಪುಸ್ತಕ Principia Ethica – principles of ethics ದಲ್ಲಿ ಕಟ್ಟಿ ಕೊಟ್ಟಿದ್ದಾನೆ. ಈ ಪುಸ್ತಕ ಬರೆಯಲಿಕ್ಕೆ ಆತ ಬಹಳ ಶ್ರಮ ಪಟ್ಟಿದ್ದಾನೆ. ಈ ಇಡೀ ಪುಸ್ತಕದಲ್ಲಿ ಅವನು ಕೇವಲ ಒಂದು ಪ್ರಶ್ನೆಯನ್ನು ಅತ್ಯಂತ ಆಳದಲ್ಲಿ ಸುಧೀರ್ಘವಾಗಿ ಚರ್ಚಿಸಿದ್ದಾನೆ, ಆ ಪ್ರಶ್ನೆ ಎಂದರೆ what is good?. ಮನುಷ್ಯ ಜಾತಿಯ ಇತಿಹಾಸದಲ್ಲಿ ಒಂದು ಪುಸ್ತಕದ ಮೇಲೆ ಇಷ್ಟು ಶ್ರಮ ಹಾಕಿದ ಇನ್ನೊಬ್ಬನ ಬಗ್ಗೆ ನನಗೆ ತಿಳಿದಿಲ್ಲ.

ಹಲವಾರು ವರ್ಷಗಳ ತೀವ್ರ ಪರಿಶ್ರಮದ ನಂತರ ಈ ಪುಸ್ತಕವನ ಸಿದ್ಧಪಡಿಸಲಾಗಿದೆ. ಪುಸ್ತಕದ ಪ್ರತಿಯೊಂದು ಶಬ್ದವನ್ನ ಅಳೆದು ತೂಗಿ ಅಪಾರ ಆಲೋಚನೆಯ ನಂತರ ಬರೆಯಲಾಗಿದೆ. ಆಕ್ಸ್‌‌ಫರ್ಡ ವಿಶ್ವವಿದ್ಯಾಲಯದ ಈ ಮಹಾ ತರ್ಕ ಶಾಸ್ತ್ರಜ್ಞ ಕೊನೆಗೆ ನೀಡುವ ತೀರ್ಮಾನ ಏನೆಂದರೆ good is indefinable. ಕೊನೆಗೆ ಅವನು ಹೇಳುವುದೇನೆಂದರೆ ಗುಡ್ ಅನ್ನು ಡಿಫೈನ್ ಮಾಡುವುದೆಂದರೆ ಹಳದಿ ಬಣ್ಣ ಎಂದರೆ ಏನು ಎಂದು ಡಿಫೈನ್ ಮಾಡಿದಂತೆ. ಯಾರಾದರೂ “what is yellow?” ಎಂದು ಪ್ರಶ್ನೆ ಮಾಡಿದರೆ, ನಾನು ಏನು ಹೇಳಲಿ, “Yellow is yellow” ಎಂದು ಮಾತ್ರ ಹೇಳಬಹುದು. ನಾನು ಬೇರೆ ಏನು ಹೇಳುವುದು ಸಾಧ್ಯ? ಹೀಗೆ ಹೇಳಿದರೆ ಅದು ಹಳದಿ ಬಣ್ಣದ ಡೆಫನೀಷನ್ ಆಗುವುದು ಸಾಧ್ಯವೆ? ಹಳದಿ ಎಂದರೆ ಹಳದಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆಗ ನೀವು ಏನು ಮಾಡಬಹುದು? ಬಹುಶಃ ಒಂದು ಹಳದಿ ಹೂವನ್ನು ತೋರಿಸಿ ಹೇಳಬಹುದು, “ಇದು ಹಳದಿ – ಇದು ಹಳದಿ ಹೂವು”.

ಆದರೆ ಮೋರ್ ಗೆ ಇದು ಒಪ್ಪಿಗೆ ಇಲ್ಲ, ಅವನು ಹೇಳುತ್ತಾನೆ, ಇದು ಹಳದಿ ಬಣ್ಣ ಅಲ್ಲ, ಇದು yellow painted ಗೋಡೆ ಅಥವಾ ಹಳದಿ ಬಣ್ಣ ಧರಿಸಿರುವ ಹೂವು. ಹಳದಿ ಬಣ್ಣದ ಬಟ್ಟೆ ಎಂದರೆ ಅದು yellow painted ಬಟ್ಟೆ, ಅದೇ ಹಳದಿ ಬಣ್ಣ ಅಲ್ಲ. ನಮ್ಮ ಪ್ರಶ್ನೆ ಏನೆಂದರೆ ಈ ಹಳದಿ ಹೂವು, ಹಳದಿ ಗೋಡೆ, ಹಳದಿ ಬಟ್ಟೆಯಲ್ಲಿರುವ ಹಳದಿತನ (yellowness) ಎಂದರೆ ಏನು? ಇಂಥ ಪ್ರಶ್ನೆಗೆ ಏನು ಉತ್ತರ ಕೊಡುತ್ತೀರಿ? ಕೊನೆಗೆ ಬೇಸತ್ತು ನೀವು ಹೇಳಬಹುದು, “ ಇದು ಇಷ್ಟೇ, ಮುಂದೆ ಬಡಬಡಿಸಬೇಡ”.

ಮೋರ್ ಕೂಡ ಇದನ್ನೇ ಹೇಳುತ್ತಾನೆ. ಈ ವಿಷಯದ ಮೇಲೆ ಇಷ್ಟು ವರ್ಷಗಳ ಕಠಿಣ ಪರಿಶ್ರಮದ ನಂತರ ಕೊನೆ ಅವನು ಹೇಳುವುದೇನೆಂದರೆ, “ at the most ಇದನ್ನ ಹಳದಿತನ ಅಂತ ಮಾತ್ರ ಹೇಳಬಹುದು”.
ಪರಿಪೂರ್ಣ ಡೆಫನೀಷನ್ ಸಾಧ್ಯವಿಲ್ಲ, ನಾವು ಒಂದು ಸೂಚನೆ, ಒಂದು ಸುಳಿವು ಮಾತ್ರ ಕೊಡಬಹುದು. ಸಾಮಾನ್ಯ ಹಳದಿ ಬಣ್ಣವನ್ನೇ ಡಿಫೈನ್ ಮಾಡುವುದು ಕಷ್ಟ ಎಂದ ಮೇಲೆ God ನ ಹೇಗೆ ಡಿಫೈನ್ ಮಾಡುವುದು? ಯಾರಾದರೂ ಮೋರ್ ಗೆ ಈ ಪ್ರಶ್ನೆ ಕೇಳಿದ್ದರೆ? ಪಾಪ ಆ ಮನುಷ್ಯ ಈಗ ಇಲ್ಲ, ಬದುಕಿದ್ದರೆ ಅಥವಾ ಮುಂದಿನ ಜನ್ಮ ಎನ್ನುವುದೇನಾದರೂ ಇದ್ದರೆ ನಾನು ಖಂಡಿತ ಅವನಿಗೆ ಈ ಕುರಿತು ಪ್ರಶ್ನೆ ಕೇಳುತ್ತಿದ್ದೆ, “ಹಳದಿ ಬಣ್ಣವನ್ನ ಡಿಫೈನ್ ಮಾಡುವುದು ಕಷ್ಟ ಎಂದು ಹೇಳುತ್ತಿದ್ದೀಯ, ದೇವರನ್ನ ಹೇಗೆ ಡಿಫೈನ್ ಮಾಡುವುದು?”

ಬದುಕಿನ ಮಹತ್ತರವಾದ ಸಂಗತಿಗಳು ಕೂಡ ಹೀಗೆಯೇ, ಡಿಫೈನ್ ಮಾಡುವುದು ಸಾಧ್ಯವಿಲ್ಲ. ನಾನು ಬದುಕನ್ನ irrational ಎಂದು ಹೇಳುವಾಗ ನಾನು ಹೇಳುತ್ತಿರುವುದು ಬದುಕು indefinable ಎಂದೇ. ಬದುಕನ್ನ ಬಾಳಬಹುದು ಡಿಫೈನ್ ಮಾಡುವುದು ಸಾಧ್ಯವಿಲ್ಲ.

Leave a Reply