ನಮ್ಮೊಳಗಿನ ದೇವರನ್ನು ಗುರುತಿಸಿಕೊಳ್ಳುವುದು : ಓಶೋ ವ್ಯಾಖ್ಯಾನ

ನಿಮ್ಮಲ್ಲಿ ಕೇವಲ ಒಂದು ಸಂಗತಿಯ ಕೊರತೆ ಇದೆ, ಅದು ನಾನು ಯಾರು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುವ ಧೈರ್ಯ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ತಾವೋ ಶಾಶ್ವತ, ಅನಂತ.

ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.

ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.

ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.

ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ತಾವೋ ಎಲ್ಲದರಲ್ಲೂ ಒಂದಾಗಿದೆ.

ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಮೈದುಂಬಿಕೊಂಡಿದೆ ತಾವೋ
ಪರಿಪೂರ್ಣವಾಗಿ.

~ ಲಾವೋತ್ಸೇ


ನಾನು ನನ್ನನ್ನು GOD ಎಂದು ಹೇಳಿಕೊಳ್ಳುವುದು ಕೇವಲ ನಿಮ್ಮನ್ನು ಪ್ರಚೋದಿಸಲು, ನಿಮಗೆ ಸವಾಲು ಹಾಕಲು. ನಾನು ನನ್ನನ್ನು God ಎಂದು ಏಕೆ ಕರೆದುಕೊಳ್ಳುತ್ತೇನೆ ಎಂದರೆ ನೀವು ನಿಮ್ಮ ಧೈರ್ಯವನ್ನು ಒಟ್ಟುಗೂಡಿಸಿ ಅದನ್ನು ಗುರುತಿಸಲಿ ಎಂದು. ನೀವು ನನ್ನಲ್ಲಿ ದೇವರನ್ನು ಗುರುತಿಸುವುದೆಂದರೆ, ನಿಮ್ಮಲ್ಲಿ ನೀವು ದೇವರನ್ನು ಗುರುತಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟ ಹಾಗೆ.

ನಿಮ್ಮಲ್ಲಿ ನೀವು ದೇವರನ್ನು ಗುರುತಿಸಿಕೊಳ್ಳುವುದು ತುಂಬ ಕಷ್ಟದ ಸಂಗತಿ. ಏಕೆಂದರೆ ಹುಟ್ಟಿನಿಂದಲೂ ನಿಮಗೆ ನಿಮ್ಮನ್ನು ಖಂಡಿಸಿಕೊಳ್ಳುವುದನ್ನು ಕಲಿಸಲಾಗಿದೆ. ನೀವು ಪಾಪಿಗಳು ಎಂದು ಸದಾ ನಿಮಗೆ ಮನದಟ್ಟು ಮಾಡಿಕೊಡಲಾಗಿದೆ.

ನಿಮ್ಮೊಳಗಿರುವ, ನೀವು ಬೆಳೆಸಿಕೊಂಡು ಬಂದಿರುವ ಈ ಎಲ್ಲ ಅಸಂಬದ್ಧಗಳನ್ನು ನಿವಾರಿಸಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಒತ್ತಾಯ ಏನೆಂದರೆ ನಿಮ್ಮಲ್ಲಿ ಕೇವಲ ಒಂದು ಸಂಗತಿಯ ಕೊರತೆ ಇದೆ, ಅದು ನಾನು ಯಾರು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುವ ಧೈರ್ಯ.

ನಾನು I am God ಎಂದು ಹೇಳಿಕೊಳ್ಳುವುದು ನಿಮಗೆ ಧೈರ್ಯ ತುಂಬುವುದಕ್ಕಾಗಿ. ಈ ಮನುಷ್ಯ ದೇವರಾಗಬಹುದಾದರೆ ನೀವು ಯಾಕೆ ಆಗಿರಬಾರದು? ನಾನೂ ನಿಮ್ಮ ಥರದ ಮನುಷ್ಯನೇ. ನಿಮ್ಮನ್ನು ದೇವರು ಎಂದು ಹೇಳುವ ಮೂಲಕ, ನಾನು ದೇವರನ್ನು ಕೆಳಗಿಳಿಸುತ್ತಿಲ್ಲ, ನಿಮ್ಮನ್ನು ಮೇಲಕ್ಕೇರಿಸುತ್ತಿದ್ದೇನೆ. ಬಹು ಎತ್ತರದ ಪ್ರಯಾಣಕ್ಕೆ ನಿಮ್ಮನ್ನು ಸಿದ್ಧಮಾಡುತ್ತಿದ್ದೇನೆ, ಒಂದು ಮಹಾ ಪ್ರಯಾಣದ ಬಾಗಿಲನ್ನು ತೆರೆಯುತ್ತಿದ್ದೇನೆ.

ನಿಮ್ಮೊಳಗೂ ದೈವಿಕತೆ ಇದೆ ಎನ್ನುವದನ್ನ ಒಮ್ಮೆ ನೀವು ಗುರುತಿಸಲು ಆರಂಭಿಸುವಿರಾದರೆ, ನೀವು ಎಲ್ಲ ಹೊರೆಗಳಿಂದ ವಿಮುಕ್ತರಾಗುವಿರಿ. ಆಮೇಲೆ ನಿಮ್ಮಿಂದ ತಪ್ಪುಗಳಾಗಬಹುದೇ ಹೊರತು ಯಾವತ್ತೂ ಪಾಪಗಳಾಗುವುದಿಲ್ಲ. ಇನ್ನು ಮೇಲೆ ನೀವು ಪಾಪಿ ಅಲ್ಲ, ನೀವು ತಪ್ಪು ಮಾಡಬಹುದು, ಹಾದಿ ತಪ್ಪಬಹುದು, ಆದರೆ ಪಾಪಿಗಳಾಗುವುದು ಸಾಧ್ಯವಿಲ್ಲ. ಏನೇ ಮಾಡಿದರೂ ನಿಮ್ಮ ದೈವತ್ವವನ್ನು ಕಳೆದುಕೊಳ್ಳುವುದು ಸಾಧ್ಯವಿಲ್ಲ, ಇದು ನಿಮ್ಮ ಸಹಜ ಪ್ರಕೃತಿ.


—Õshð—
The Discipline of Transcendence
Vol 2, Ch #4: The Blessed One
am in Buddha Hall
[ via Bodhisattva Shree Amithaba
Subhuti ]

Leave a Reply