ನಾರಾಯಣ ಗುರುಗಳು ದೇಗುಲ ಪ್ರತಿಷ್ಠಾಪನೆ ಮತ್ತು ಪೂಜೆಗೆ ಸಂಬಂಧಿಸಿದಂತೆ ಬಹಳ ಪ್ರಾಯೋಗಿಕ ನಿಲುವನ್ನು ಹೊಂದಿದ್ದ ಸಂತ. ಇಲ್ಲಿರುವ ಮೂರು ಘಟನೆಗಳು ದೇಗುಲಗಳಿಗೆ ಸಂಬಂಧಿಸಿದಂತೆ ಗುರುಗಳ ನಿಲುವೇನು ಎಂಬುದನ್ನು ಹೇಳುವ ಅತ್ಯುತ್ತಮ ರೂಪಕಗಳು | ಎನ್.ಎ . ಎಂ. ಇಸ್ಮಾಯಿಲ್
ವಾಗ್ಭಟಾನಂದ ಸ್ವಾಮಿಗಳು ಎಂದು ಹೆಸರಾಗಿರುವ ವಯಲೇರಿ ಕುಂಞಿಕಣ್ಣನ್ ಗುರುಕ್ಕಳ್ (1885-1939) ಒಬ್ಬ ಪ್ರಖರ ಅದ್ವೈತಿ. ನಾರಾಯಣ ಗುರುಗಳಂತೆಯೇ ಅದ್ವೈತದ ಮೂಲಕವೇ ಸಮಾನತೆಯ ಸಂದೇಶವನ್ನು ಹರಡಲು ಪ್ರಯತ್ನಿಸಿದವರು. ನಾರಾಯಣ ಗುರುಗಳು ನಡೆಸುತ್ತಿದ್ದ ದೇಗುಲ ಪ್ರತಿಷ್ಠಾಪನೆಗಳ ಬಗ್ಗೆ ಇವರಿಗೆ ಆಕ್ಷೇಪವಿತ್ತು. ಅದ್ವೈತದಲ್ಲಿ ಮೂರ್ತಿ ಪೂಜೆ ಅಪ್ರಸ್ತುತ ಎಂಬುದು ವಾಗ್ಭಟಾನಂದರ ವಾದವಾಗಿತ್ತು. ಅವರು ಗುರುಗಳ ದೇಗುಲ ನಿರ್ಮಾಣವನ್ನು ಟೀಕಿಸುತ್ತಾ ‘ದಕ್ಷಿಣದಿಂದೊಬ್ಬರು ನಾಡಿನುದ್ದಕ್ಕೂ ಸರ್ವೇ ಕಲ್ಲುಗಳನ್ನು ನೆಡುತ್ತಿದ್ದಾರಂತೆ…’ ಎನ್ನುವುದು ಸಾಮಾನ್ಯವಾಗಿತ್ತು. ಅವರು ಗುರುಗಳನ್ನು ಭೇಟಿಯಾದಾಗಲೂ ಇದೇ ಪ್ರಶ್ನೆಯನ್ನು ಕೇಳಿದ್ದರಂತೆ:
“ಇತ್ತೀಚೆಗೆ ಗುರುಗಳು ನಾಡಿನುದ್ದಕ್ಕೂ ಕಲ್ಲು ನೆಡುತ್ತಿರುವುದು ತಿಳಿಯಿತು….”
ಗುರುಗಳು ಮಂದಸ್ಮಿತರಾಗಿ “ನಾವೇನೋ ಕಲ್ಲುಗಳನ್ನು ನೆಟ್ಟು ಮುಂದಕ್ಕೆ ಹೋಗುತ್ತಿದ್ದೇವೆ… ಕುಂಞಿಕಣ್ಣನ್ ಆ ಕಲ್ಲುಗಳನ್ನು ಹೊತ್ತು ನಡೆಯತ್ತಿರುವುದೇಕೆ?” ಎಂದು ಪ್ರಶ್ನಿಸಿದರಂತೆ.
***
ಕೊಲ್ಲಂ ಜಿಲ್ಲೆಯ ಆಯಿರಂತೆಂಙ್ ಎಂಬಲ್ಲಿ 1892ರಲ್ಲಿ ನಾರಾಯಣ ಗುರುಗಳು ಶಿವ ದೇವಸ್ಥಾನವೊಂದರ ಪ್ರತಿಷ್ಠಾಪನೆ ನಡೆಸಿದರು. ದೇಗುಲದ ಗಂಟೆಗಳು ಮೊಳಗಿ ದರ್ಶನ ಆರಂಭವಾದ ಮೇಲೆ ಗುರುಗಳು ಹೇಳಿದ ಮಾತುಗಳಿವು: ‘ನಮ್ಮೊಡನೊಬ್ಬ ಸರ್ವೇಯರ್ ಇದ್ದಾನೆ. ಸರ್ವೇ ಮಾಡಿದ ಮೇಲೆ ನಾವೇನೋ ಕಲ್ಲು ನೆಟ್ಟೆವು. ಆದರೆ ಈ ಮಂದಿರದೊಳಗಿರುವುದು ನಾವು ನೆಟ್ಟ ಕಲ್ಲು ಮಾತ್ರ. ಮತ್ತೇನೂ ಅದರೊಳಗಿಲ್ಲ. ಅದಕ್ಕೆ ನೀವೇನು ಮಾಡುತ್ತೀರಿ ಎಂದು ಹೇಳಿ?’
ಇದಕ್ಕೆ ಉತ್ತರವಾಗಿ ಭಕ್ತರು ಹೇಳಿದರು: ‘ವರ್ಷದಲ್ಲಿ ಹತ್ತು ದಿನದ ಉತ್ಸವವನ್ನು ನಾವು ನಡೆಸುತ್ತೇವೆ…’
ಗುರುಗಳು ಇದಕ್ಕೆ ಪ್ರತಿಕ್ರಿಯಿಸಿ: ‘ಅಷ್ಟು ಸಾಕಾಗದು. ಕರೆತಂದು ನಿರಾಶೆಗೊಳಿಸಬಾರದು. ನಿಮ್ಮಲ್ಲೇ ಒಬ್ಬರು ಪ್ರತಿದಿನ ಬೆಳಿಗ್ಗೆ ಶುಚಿರ್ಭೂತರಾಗಿ ಹೂಗಳು ಮತ್ತು ಸ್ವಲ್ಪ ಅನ್ನದೊಂದಿಗೆ ದೇಗುಲಕ್ಕೆ ಬಂದು ಆವರಣವನ್ನು ಶುಚಿಗೊಳಿಸಿ ಪುಷ್ಪಾರ್ಚನೆ ಮಾಡಿ ನೈವೇದ್ಯವರ್ಪಿಸಿ ಅದನ್ನು ಸ್ವೀಕರಿಸಬೇಕು. ಪೂಜಾಕರ್ಮಗಳನ್ನು ಅರಿತು ಮಾಡಿದರೆ ಸಾಕು. ಪೂಜೆಯ ಕ್ರಮಗಳನ್ನು ನಾವು ಕಲಿಸಿಕೊಡುತ್ತಿದ್ದೇವೆ. ಕಲಿಯಲು ಆಸಕ್ತಿ ಇರುವ ಒಬ್ಬರು ನಮ್ಮಲ್ಲಿಗೆ ಬಂದರೆ ಸಾಕು. ಅರ್ಚಕರನ್ನು ಹುಡುಕಿ ನೇಮಿಸುವ ಕಷ್ಟ ನಿಮಗೆ ಬೇಡ’
***
ಮೂರ್ತಿ ಪೂಜೆಗೆ ಸಂಬಂಧಿಸಿದ ಮತ್ತೊಂದು ಘಟನೆ ಶಿವಗಿರಿ ಮಠದಿಂದ ಪ್ರಕಟವಾಗುತ್ತಿದ್ದ ‘ಧರ್ಮಂ’ ಪತ್ರಿಕೆಯ 1928ರ ಏಪ್ರಿಲ್ ಸಂಚಿಕೆಯಲ್ಲಿ ದಾಖಲಾಗಿದೆ. ದೇಗುಲಗಳ ಮೇಲೆ ದಾಳಿ ನಡೆಸಿ ವಿಗ್ರಹಗಳನ್ನು ಒಡೆದು ಹಾಕುವಾಗ ನಿಮ್ಮ ದೇವರು ಏನು ಮಾಡುತ್ತಿದ್ದರು ಎಂಬ ಕಟಕಿಗಳ ಬಗ್ಗೆ ಭಾಷಣಕಾರರೊಬ್ಬರು ಕೇಳಿದ ಪ್ರಶ್ನೆಗಳಿಗೆ ಗುರುಗಳ ಉತ್ತರಗಳು ಹೀಗಿವೆ.
ಭಾಷಣಕಾರ: ಹಲವರು ತಮ್ಮ ಭಾಷಣಗಳಲ್ಲಿ ಮುಹಮದೀಯರು ಮತ್ತಿತರರು ವಿಗ್ರಹಗಳನ್ನು ಒಡೆದಾಗ ವಿಗ್ರಹದಲ್ಲಿದ್ದ ದೇವರೇನು ಮಾಡಿದರು ಎಂಬ ಪ್ರಶ್ನೆಯನ್ನೆತ್ತಿ ಟೀಕಿಸುತ್ತಿದ್ದಾರೆ…
ಗುರು: ದೇವರು ಸರ್ವವ್ಯಾಪಿ, ಮನುಷ್ಯ ಹೃದಯದಲ್ಲೂ ದೇವರಿದ್ದಾನೆ ಎಂಬುದನ್ನು ಅವರು ಒಪ್ಪುತ್ತಾರೆ ತಾನೇ?
ಭಾಷಣಕಾರ: ಹೌದು
ಗುರು: ಮನುಷ್ಯರನ್ನು ಕೊಂದರೆ ಅದಕ್ಕೆ ಯಾವ ಬಗೆಯ ದೈವ ಶಿಕ್ಷೆಯಿದೆ ಎಂದು ಅವರು ಹೇಳುತ್ತಾರೆ?
ಭಾಷಣಕಾರ: ಅಂತ್ಯದಿನದ ವಿಚಾರಣೆಯಲ್ಲಿ ಈ ಅಪರಾಧಕ್ಕೆ ಶಿಕ್ಷೆಯಾಗುವುದಂತೆ…
ಗುರು: ಹಾಗಿದ್ದರೆ ವಿಗ್ರಹಧ್ವಂಸ ಮಾಡಿದವರಿಗೂ ಅಂತ್ಯದಿನದ ವಿಚಾರಣೆಯ ನಂತರ ಇದೇ ಬಗೆಯಲ್ಲಿ ಶಿಕ್ಷೆಯಾಗುವುದೆಂದು ಹೇಳಬಹುದಲ್ಲವೇ…?

