ರಮಣ ಮಹರ್ಷಿಗಳ ಆಹ್ವಾನದ ಮೇರೆಗೆ 1916ರಲ್ಲಿ ನಾರಾಯಣ ಗುರುಗಳು ಕೆಲ ಸಮಯ ತಿರುವಣ್ಣಾಮಲೈಯಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ‘ಮುನಿಚರ್ಯ ಪಂಚಕಂ’ ಮತ್ತು ‘ನಿರ್ವೃತ್ತಿ ಪಂಚಕಂ’ ಎಂಬ ಸಂಸ್ಕೃತ ಕೃತಿಗಳನ್ನು ರಚಿಸಿದರು. ಮೌನದಲ್ಲೇ ಪರಸ್ಪರರನ್ನು ಅರಿಯಲು ಮಹಾಯೋಗಿಗಳಿಗೆ ಸಾಧ್ಯವಿದೆ ಎಂಬುದಕ್ಕೆ ಗುರು ಮತ್ತು ಮಹರ್ಷಿಗಳ ಭೇಟಿಯೇ ಒಂದು ನಿದರ್ಶನ. ಈ ಘಟನೆಯ ವಿವರಗಳು ಕುಮಾರನ್ ಆಶಾನ್ ಅವರ ನಾರಾಯಣ ಗುರುಗಳ ಜೀವನ ಚರಿತ್ರೆಗೆ ಅನುಬಂಧ ರೂಪದಲ್ಲಿ ಸೇರಿಸಿರುವ ಟಿ. ಭಾಸ್ಕರನ್ ಅವರ ಲೇಖನದಲ್ಲಿದೆ. ಆ ಭಾಗದ ಅನುವಾದ ಕೆಳಗಿದೆ… । ಎನ್.ಎ.ಎಂ.ಇಸ್ಮಾಯಿಲ್
ಒಂದು ದಿನ ಗುರುಗಳ ಎದುರು ಬಹಳ ಹೊತ್ತು ಮೌನವಾಗಿ ಕುಳಿತ ನಂತರ ಮಹರ್ಷಿ ಎದ್ದು ಆಶ್ರಮದೊಳಕ್ಕೆ ನಡೆದರು. ಗುರುಗಳು ರಮಣ ಮಹರ್ಷಿಗಳ ಅನುಯಾಯಿಗಳನ್ನು ಉದ್ದೇಶಿಸಿ ಕೇಳಿದರು ‘ಅರ್ಥವಾಯಿತೇ?’. ಮಹರ್ಷಿಗಳ ಅನುಯಾಯಿಗಳು ಅರ್ಥವಾಯಿತೆಂದು ಉತ್ತರಿಸಿದರು. ಗುರುಗಳು ಆಗ ತಮ್ಮ ಅನುಯಾಯಿಗಳತ್ತ ತಿರುಗಿ ‘ಅರ್ಥವಾಯಿತೇ’ ಎಂದು ಪ್ರಶ್ನಿಸಿದರು. ಅವರೂ ಅರ್ಥವಾಯಿತೆಂದೇ ಉತ್ತರಿಸಿದರು.
ಗುರುಗಳು ಮುಗುಳ್ನಗುತ್ತಾ ಹೇಳಿದರು: ‘ಓಹೋ, ಹಾಗಿದ್ದರೆ ಅರ್ಥವಾಗದೇ ಇದ್ದದ್ದು ನಮಗೆ ಮಾತ್ರ’.
*
ನಾರಾಯಣ ಗುರುಗಳು ರಮಣ ಮಹರ್ಷಿಗಳನ್ನು ಭೇಟಿಯಾಗಿ ಹಿಂದಿರುಗುವಾಗ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆದದ್ದೇ ‘ನಿರ್ವೃತ್ತಿ ಪಂಚಕಂ’ ಎಂಬ ಕಾವ್ಯ ಕೃತಿ. ಇದನ್ನು ರಮಣಾಶ್ರಮದಲ್ಲಿ ಕಾಪಿಡಲಾಗಿದೆ. 5 ಶ್ಲೋಕಗಳ ಈ ಗುಚ್ಛವನ್ನು ನಟರಾಜ ಗುರುಗಳ ಶಿಷ್ಯರಾದ ವಿನಯ ಚೈತನ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಮತ್ತು ಅನುವಾದಗಳೆರಡೂ ಈ ಕೆಳಗಿವೆ.
1
ಕೋ ನಾಮ ದೇಶಃ ಕಾ ಜಾತಿಃ ಪ್ರವೃತ್ತಿಃ ಕಾ ಕಿಯದ್ವಯಃ
ಇತ್ಯಾದಿವಾದೋಪರತಿರ್ಯಸ್ಯ ತಸ್ಯೈವ ನಿರ್ವೃತಿಃ
(ನಿಮ್ಮ ಹೆಸರೇನು, ಯಾವ ಊರು, ಯಾವ ಜಾತಿ, ಏನು ಕಸುಬು, ವಯಸ್ಸೆಷ್ಟು? ಮುಂತಾದ ಮಾತುಗಳು ಯಾರಿಗಿಲ್ಲವೋ ಅವನದೇ ಆನಂದ)
2
ಆಗಚ್ಛ ಗಚ್ಛ ಮಾ ಗಚ್ಛ ಪ್ರವಿಶ ಕ್ವನುಗಚ್ಛಸಿ
ಇತ್ಯಾದಿವಾದೋಪರತಿರ್ಯಸ್ಯ ತಸ್ಯೈವ ನಿರ್ವೃತಿಃ
(ಬನ್ನಿ, ಹೋಗಿ, ಹೋಗದಿರಿ, ಒಳಗೆ ಬನ್ನಿ, ಎಲ್ಲಿ ಹೋಗುತ್ತಿದ್ದೀರಿ ಮುಂತಾದ ಮಾತುಗಳು ಯಾರಿಗಿಲ್ಲವೋ, ಅವನದೇ ಆನಂದ)
3
ಕ್ವ ಯಾಸ್ಯಸಿ ಕದಾಯಾತಃ ಕುತಃ ಆಯಾಸಿ ಕೋSಸಿ ವೈ
ಇತ್ಯಾದಿವಾದೋಪರತಿರ್ಯಸ್ಯ ತಸ್ಯೈವ ನಿರ್ವೃತಿಃ
(ನೀನು ಎಲ್ಲಿಗೆ ಹೋಗುತ್ರಿರುವೆ, ಯಾವಾಗ ಬಂದೆ, ಯಾಕೆ ಬಂದೆ, ಎಲ್ಲಿಂದ ಬಂದೆ, ಯಾರು ನೀನು ಮುಂತಾದ ಮಾತುಗಳು ಯಾರಿಗಿಲ್ಲವೋ ಅವನದೇ ಆನಂದ)
4
ಅಹಂ ತ್ವಂ ಸೋSಯಮಂತರ್ಹಿ ಬಹಿರಸ್ತಿ ನವಾಸ್ತಿ ವಾ
ಇತ್ಯಾದಿವಾದೋಪರತಿರ್ಯಸ್ಯ ತಸ್ಯೈವ ನಿರ್ವೃತಿಃ
(ನಾನು-ನೀನು, ಅವನು-ಇವನು, ಒಳಗೆ-ಹೊರಗೆ, ಉಂಟು-ಇಲ್ಲ ಮುಂತಾದ ಮಾತುಗಳು ಯಾರಿಗಿಲ್ಲವೋ ಅವನದೇ ಆನಂದ)
5
ಜ್ಞಾತಾಜ್ಞಾತಸಮಃ ಸ್ವಾನ್ಯಭೇದಶೂನ್ಯಃ ಕುತೋ ಭಿದಾ
ಇತ್ಯಾದಿವಾದೋಪರತಿರ್ಯಸ್ಯ ತಸ್ಯೈವ ನಿರ್ವೃತಿಃ
(ತಿಳಿದದ್ದು ತಿಳಿಯದ್ದು ಸಮವಾಗಿ, ತನ್ನವ-ಅನ್ಯ ಎಂಬ ಭೇದಗಳಿಲ್ಲವನಿಗೆ ಭೇದವೆಲ್ಲಿಂದ? ಮುಂತಾದ ಮಾತುಗಳು ಯಾರಿಗಿಲ್ಲವೋ ಅವನದೇ ಆನಂದ)

