ಜಾತಿ ಎಂಬುದು ಅಸಹಜ… । ಗುರುವಚನ #15

ಇಲ್ಲಿ ಉಲ್ಲೇಖಿಸಿರುವ ಘಟನೆಯನ್ನು ಐ.ಆರ್. ಕೃಷ್ಣನ್ ಮೇತ್ತಲ ಅವರ ‘ಶ್ರೀನಾರಾಯಣ ಗುರು ಕಥಗಳಿಲೂಡೆ’ (ಕಥೆಗಳ ಮೂಲಕ ಶ್ರೀನಾರಾಯಣಗುರು) ಎಂಬ ಮಲಯಾಳಂ ಕೃತಿಯಿಂದ ಆಯ್ದು ಅನುವಾದಿಸಲಾಗಿದೆ… । ಎನ್.ಎ.ಎಂ.ಇಸ್ಮಾಯಿಲ್

ಜಾತಿ ಭೇದವನ್ನು ನಿರಾಕರಿಸುವ ಮತ್ತು ಅದನ್ನು ಇಲ್ಲವಾಗಿಸುವ ಪ್ರಯತ್ನವನ್ನು ಸದಾ ಚಾಲನೆಯಲ್ಲಿಟ್ಟವರು ನಾರಾಯಣ ಗುರು. ಅವರು ಪ್ರತಿಷ್ಠಾಪಿಸಿದ ದೇಗುಲಗಳು ಮತ್ತು ಸ್ಥಾಪಿಸಿದ ಆಶ್ರಮಗಳಲ್ಲಿ ಜಾತಿ-ಮತ ತಾರತಮ್ಯವಿಲ್ಲದ ಆಚರಣೆಗಳನ್ನು ಕಡ್ಡಾಯವೆಂಬಂತೆ ಪಾಲಿಸಲಾಗುತ್ತಿತ್ತು. ಗಾಂಧೀಜಿಯವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಬರುವ ಪ್ರಶ್ನೆಯೊಂದಕ್ಕೆ ಉತ್ತರವಾಗಿಯೂ ಗುರುಗಳು ಆಶ್ರಮದಲ್ಲಿ ಎಲ್ಲಾ ಬಗೆಯ ವಿದ್ಯಾರ್ಥಿಗಳು ಒಟ್ಟಾಗಿಯೇ ಉಂಡು, ವಾಸಿಸಿ ಕಲಿಯುವುದರ ಬಗ್ಗೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಘಟನೆ ಗುರು ನಿತ್ಯ ಚೈತನ್ಯ ಯತಿ ಇಂಗ್ಲಿಷ್‌ನಲ್ಲಿ ರಚಿಸಿರುವ ‘Sree Narayana Guru’ ಎಂಬ ಕಿರು ಕೃತಿಯಲ್ಲಿದೆ. ನಾರಾಯಣ ಗುರುಗಳನ್ನು ಪರಿಚಯಿಸುವ ಸಲುವಾಗಿ ಪ್ರಶ್ನೋತ್ತರ ರೂಪದಲ್ಲಿರುವ ಈ ಕೃತಿ ಅಂತರ್ಜಾಲದಲ್ಲಿ ಲಭ್ಯವಿದೆ. ಹಾಗೆಯೇ ಇಲ್ಲಿ ಉಲ್ಲೇಖಿಸಿರುವ ಮತ್ತೊಂದು ಘಟನೆಯನ್ನು ಐ.ಆರ್. ಕೃಷ್ಣನ್ ಮೇತ್ತಲ ಅವರ ‘ಶ್ರೀನಾರಾಯಣ ಗುರು ಕಥಗಳಿಲೂಡೆ’ (ಕಥೆಗಳ ಮೂಲಕ ಶ್ರೀನಾರಾಯಣಗುರು) ಎಂಬ ಮಲಯಾಳಂ ಕೃತಿಯಿಂದ ಆಯ್ದು ಅನುವಾದಿಸಲಾಗಿದೆ.

*

ನಾರಾಯಣ ಗುರು ಹೇಗೆ ಜಾತಿಭೇದದ ವಿರುದ್ಧ ಸಮರ ಸಾರಿದರು?

ಮೊದಲನೆಯದಾಗಿ ಅವರು ತಮ್ಮ ಆಶ್ರಮದೊಳಗೆ ಜಾತಿಭೇದರಹಿತ ವಾತಾವರಣವನ್ನು ಸೃಷ್ಟಿಸಿದರು. ಅವರ ಶಿಷ್ಯರಲ್ಲಿ ಸಮಾಜ ಎಲ್ಲಾ ವಿಭಾಗಗಳಿಂದ ಬಂದವರಿದ್ದರು. ಹಿಂದೂಗಳು, ಕ್ರೈಸ್ತರು, ಮುಸ್ಲಿಮರು, ಬೌದ್ಧರು ಹಾಗೆಯೇ ಪರಯರಿಂದ ತೊಡಗಿ ಬ್ರಾಹ್ಮಣರ ತನಕದ ವಿವಿಧ ಜಾತಿಗಳವರೂ ಆಶ್ರಮದಲ್ಲಿದ್ದರು. ಒಮ್ಮೆ ತಿರುವಿದಾಂಕೂರು ಸಂಸ್ಥಾನದ ದಿವಾನರಾದ ರಾಜಗೋಪಾಲಾಚಾರಿ ಗುರುಗಳನ್ನು ಕಾಣಲು ಆಶ್ರಮಕ್ಕೆ ಬಂದರು. ಮಾತುಕತೆಯ ಮಧ್ಯೆ ದಿವಾನರು ‘ಜಾತಿ ಎಂಬುದು ನಿಸರ್ಗ ಸಹಜ ವಿದ್ಯಮಾನ. ನನಗೆ ಮನುಷ್ಯರನ್ನು ಕಂಡರೆ ಮತ್ತವರ ಮಾತಿನ ಶೈಲಿಯನ್ನು ಕೇಳಿಸಿಕೊಂಡರೆ ಅವರ ಜಾತಿ ತಿಳಿಯುತ್ತದೆ’ ಎಂದರು.

ಗುರುಗಳು ತಕ್ಷಣವೇ ಆಶ್ರಮವಾಸಿಗಳನ್ನು ಕರೆಯಿಸಿ ದಿವಾನರೆದುರು ತಾವು ಕಲಿತ ಮಂತ್ರ, ಪದ್ಯಾದಿ ಶ್ಲೋಕಗಳನ್ನು ಪಠಿಸಲು ಹೇಳಿದರು. ಹಾಗೆಯೇ ದಿವಾನರನ್ನುದ್ದೇಶಿಸಿ ಜಾತಿಯನ್ನು ಗುರುತಿಸಿ ಎಂದರು. ದಿವಾನರಿಗೆ ಅದು ಸಾಧ್ಯವಾಗಲಿಲ್ಲ. ಅದರೊಂದಿಗೆ ಜಾತಿಯೆಂಬುದು ನಿಜ ಮತ್ತು ನೈಸರ್ಗಿಕ ಎಂಬ ಅವರ ಭ್ರಮೆಯೂ ದೂರವಾಯಿತು.

*

ವಿದ್ವಾನ್ ಎ. ಡಿ. ಹರಿಶರ್ಮ* ಹುಟ್ಟಿನಿಂದ ಬ್ರಾಹ್ಮಣರು. ಒಮ್ಮೆ ಅವರು ಗುರುಗಳನ್ನು ಭೇಟಿಯಾಗಲು ಬಂದರು. ಇತರರ ಜೊತೆಗೆ ಗುರುಗಳ ಎಡಪಕ್ಕದಲ್ಲೇ ಕುಳಿತು ಮಾತನಾಡುತ್ತಿದ್ದರು. ಬಹಳ ಸೂಕ್ಷ್ಮವಾದ ಜಿಜ್ಞಾಸೆಗಳಿರುವ ಪ್ರಶ್ನೆಗಳನ್ನವರು ಕೇಳುತ್ತಿದ್ದರು. ಗುರುಗಳು ಅದಕ್ಕೆ ಉತ್ತರಗಳನ್ನೂ ನೀಡುತ್ತಿದ್ದರು. ಸಂವಾದ ಬಹಳ ಗಂಭೀರವಾಗಿ ಸಾಗುತ್ತಿತ್ತು. ಸುತ್ತಲಿದ್ದವರು ಆಸಕ್ತಿಯಿಂದ ಮಾತುಕತೆಯನ್ನು ಆಲಿಸುತ್ತಿದ್ದರು. ಆಶ್ರಮವಾಸಿಯೊಬ್ಬರು ಬಿಸ್ಕತ್ತು, ಹಣ್ಣು ಮತ್ತು ಕಾಫಿಯನ್ನು ಹರಿಶರ್ಮ ಅವರ ಎದುರು ತಂದಿಟ್ಟರು. ಅದನ್ನು ಕಂಡ ಅಲ್ಲಿದ್ದ ಇನ್ನಿಬ್ಬರು ಮೆಲ್ಲಗೆ ತಮ್ಮೊಳಗೇ ಏನೋ ಮಾತನಾಡಿಕೊಂಡರು. ಹರಿಶರ್ಮ ಕೂಡಾ ಅದನ್ನು ಗಮನಿಸಿದರು, ಆದರೆ ಅದೇನೆಂದು ಕೇಳಿಸಲಿಲ್ಲ. ಗುರುಗಳು ಅದನ್ನು ಗಮನಿಸಲೇ ಇಲ್ಲ.

ಹರಿಶರ್ಮ ಕಾಫಿ ಕುಡಿದರು. ಅಲ್ಲಿದ್ದ ಬಿಸ್ಕತ್ತು ಮತ್ತು ಹಣ್ಣನ್ನೂ ತಿಂದರು. ಅಲ್ಲಿಯ ತನಕ  ಆಲೋಚನಾ ಮಗ್ನರಾಗಿದ್ದ ಗುರುಗಳು ಕೇಳಿದರು ‘ಪರಮೇಶ್ವರನಿಗೆ ಸಂಶಯವಿತ್ತಲ್ಲವೇ… ಹರಿಶರ್ಮ ಕಾಫಿ ಕುಡಿಯುತ್ತಾರೋ ಇಲ್ಲವೋ ಎಂದು?’

ಪರಮೇಶ್ವರನ ಉತ್ತರ ಬಂತು: ‘ಹೌದು’

ಗುರುಗಳ ಪ್ರಶ್ನೆ ಅಲ್ಲಿಗೇ ಕೊನೆಗೊಳ್ಳಲಿಲ್ಲ. ನೆರದಿದ್ದವರನ್ನು ಉದ್ದೇಶಿಸಿ ಅವರು ಕೇಳಿದರು: ‘ನಿಮ್ಮಲ್ಲಿ ಎಷ್ಟು ಮಂದಿ ಪುಲಯ ಸಮುದಾಯದವರೊಂದಿಗೆ ಕುಳಿತು ಅವರು ಕೊಟ್ಟ ಕಾಫಿ ಕುಡಿದಿದ್ದೀರಿ?’

ಈ ಪ್ರಶ್ನೆಗೆ ಅಲ್ಲಿ ದೊರೆತ ಉತ್ತರ ಮೌನ ಮಾತ್ರ. ಗುರುಗಳು ಮಾತು ಮುಂದುವರೆಸಿದರು “ಇತರರನ್ನು ಟೀಕಿಸಿದರಷ್ಟೇ ಸಾಕೇ. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಲ್ಲವೇ? ಹರಿಶರ್ಮ ಸಂಪ್ರದಾಯಸ್ಥ ಸಮುದಾಯದ ಹಿನ್ನೆಲೆ ಇರುವವರು. ಅವರು ನಾವು ಕೊಟ್ಟ ಕಾಫಿ ಕುಡಿಯದಿದ್ದರೆ ಆಶ್ಚರ್ಯಪಡುವಂಥದ್ದೇನೂ ಇರಲಿಲ್ಲ. ಆದರೆ ಅವರು ಸಂತೋಷದಿಂದಲೇ ನಮ್ಮ ಕಾಫಿಯನ್ನು ಸೇವಿಸಿದರು”

ಈ ಮಾತುಗಳ ನಂತರದ ಮೌನದಲ್ಲೇ ಅಲ್ಲಿದ್ದವರು ದೊಡ್ಡ ಪಾಠ ಕಲಿತರು. ಗುರುಗಳ ಇಂಗಿತವನ್ನು ಅರಿತರು.


*ವಿದ್ವಾನ್ ಎ.ಡಿ. ಹರಿಶರ್ಮ ದಕ್ಷಿಣ ಕೇರಳದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಸಮಸ್ತ ಕೇರಳ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.