ಕವಿ ಕುಮಾರನ್ ಆಶಾನ್ ಅವರು ರಚಿಸಿದ ನಾರಾಯಣ ಗುರುಗಳ ಜೀವನ ಚರಿತ್ರೆ ಗುರುಗಳು ಬದುಕಿರುವಾಗಲೇ ಪ್ರಕಟವಾಗಿತ್ತು. ಬಹುಶಃ ಇದುವೇ ಮೊದಲ ಜೀವನ ಚರಿತ್ರೆ. ಗುರುಗಳ ಕಾಲಾನಂತರವೂ ಶಿಷ್ಯರು, ಭಕ್ತರು ಮತ್ತು ಗುರುಗಳ ಕುರಿತು ಆಳವಾದ ಅಧ್ಯಯನ ನಡೆಸಿದವರು ಗುರುಗಳ ಬದುಕನ್ನು ಪಠ್ಯದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇವುಗಳಲ್ಲಿ ಅತ್ಯಂತ ಹಳೆಯದು ಮಯ್ಯನಾಟ್ಟು ಕೆ. ದಾಮೋದರನ್ ಅವರು ರಚಿಸಿದ ‘ಶ್ರೀನಾರಾಯಣ ಗುರುಸ್ವಾಮಿ ಜೀವಚರಿತ್ರಂ’ ಎಂಬ ಗ್ರಂಥ. ಇದು 1929ರಲ್ಲಿ ಪ್ರಕಟವಾಯಿತು. ಮೊದಲ ಮುದ್ರಣದಲ್ಲೇ 2000 ಪ್ರತಿಗಳನ್ನು ಮುದ್ರಿಸಲಾಗಿತ್ತೆಂಬ ವಿವರ ಪುಸ್ತಕದಲ್ಲಿದೆ. ಈ ಪುಸ್ತಕದಲ್ಲಿ ಗುರುಗಳ ಬದುಕಿನ ಕೆಲವು ಘಟನೆಗಳು ಮತ್ತು ಮಾತುಕತೆಗಳನ್ನು ಅನುಬಂಧ ರೂಪದಲ್ಲಿ ಸೇರಿಸಲಾಗಿದೆ. ಆಯ್ದ ಕೆಲವನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ… । ಎನ್.ಎ.ಎಂ.ಇಸ್ಮಾಯಿಲ್
ವಿಚಾರವಾದಿಯೊಬ್ಬರು ಗುರುಗಳೆದುರು ಒಂದು ಪ್ರಶ್ನೆಯಿಟ್ಟರು: ಪುನರ್ಜನ್ಮವೆಂಬುದಿದೆಯೇ?
ಗುರು: ನಿಮ್ಮ ನಂಬಿಕೆ ಏನು?
ವಿಚಾರವಾದಿ: ನನಗೆ ಪುನರ್ಜನ್ಮದಲ್ಲಿ ನಂಬಿಕೆಯಿಲ್ಲ.
ಗುರು: ಮತ್ತೆ ನಿಮಗೇಕೆ ಅನುಮಾನ?
*
ನಾರಾಯಣ ಗುರುಗಳು ಯಾವತ್ತೂ ತಮ್ಮ ವಿರುದ್ಧದ ಆರೋಪಗಳು ಮತ್ತು ಟೀಕೆಗಳಿಗೆ ಪ್ರತಿಕ್ರಿಯಿಸದವರೇ ಅಲ್ಲ. ಇದನ್ನು ಕುರಿತು ಶಿಷ್ಯರೊಬ್ಬರು ಗುರುಗಳಲ್ಲಿ ಕೇಳಿದರು: “ಬಹಳ ಜನ ನಿಮ್ಮನ್ನು ಹೀಯಾಳಿಸುತ್ತಾರೆ, ವಿಧ ವಿಧ ಆರೋಪಗಳನ್ನು ಮಾಡುತ್ತಾರೆ. ಆದರೆ ತಾವು ಯಾವುದಕ್ಕೂ ಉತ್ತರಿಸುವುದಿಲ್ಲವಲ್ಲ.”
ಗುರುಗಳು ಶಿಷ್ಯನನ್ನುದ್ದೇಶಿಸಿ: ‘ಪಾರ್ಶ್ವವಾಯು ಪೀಡಿತನಾಗಿರುವ ಒಬ್ಬ ನಡೆಯಲು ಕಷ್ಟಪಡುವುದನ್ನು ಕಂಡರೆ ನೀನು ಏನು ಮಾಡಬೇಕು? ಆತನಿಗೆ ಸಹಾಯ ಮಾಡಬೇಕೋ ಅಥವಾ ಹೊಡೆದು ಓಡಿಸಬೇಕೋ?’
ಶಿಷ್ಯ: ನಾನು ಆತನಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು.
ಗುರು: ನಾನೀಗ ಮಾಡುತ್ತಿರುವುದೂ ಅದನ್ನೇ. ಮನಸ್ಸಿಗೆ ಪಾರ್ಶ್ವವಾಯು ಬಾಧಿಸಿದವರಷ್ಟೇ ಹೀಗೆ ಅನಗತ್ಯ ಟೀಕೆಗಳನ್ನು ಮಾಡುವುದು. ಅವರು ಹಾಗೆ ಮಾಡುವಾಗ ಅವರಿಗೆ ಕೈಯಾಸರೆಯಾಗಿ ಸರಿದಾರಿಯಲ್ಲಿ ಸಾಗುವಂತೆ ಮಾಡಬೇಕಲ್ಲವೇ?
*
ಅರುವಿಪ್ಪುರಂನಲ್ಲಿ ಹಲಸಿನ ಹಣ್ಣು ಕದ್ದೊಯ್ದ ಒಬ್ಬಾತನನ್ನು ಮಾಲು ಸಮೇತ ಹಿಡಿದು ತಂದು ಗುರುಗಳ ಎದುರು ನಿಲ್ಲಿಸಲಾಯಿತು. ಅವನನ್ನುದ್ದೇಶಿಸಿ ಗುರುಗಳು “ಇದನ್ನು ಕದಿಯಲು ಬಹಳ ಕಷ್ಟಪಡಬೇಕಾಯಿತಲ್ಲವೇ?” ಎಂದರು
ಹಲಸು ಕದ್ದವನು ಮೌನವಾಗಿದ್ದ.
ಗುರುಗಳು ಮುಂದುವರಿಸಿದರು… “ರಾತ್ರಿ ಮಳೆ ಸುರಿಯುತ್ತಿತ್ತು. ಅಮವಾಸ್ಯೆಯ ಕತ್ತಲು ಬೇರೆ. ಕಲ್ಲು, ಮುಳ್ಳು ಮತ್ತು ಕೊರಕಲುಗಳಿರುವ ಈ ಜಾಗದಲ್ಲಿ ಹಾವುಗಳ ಕಾಟವೂ ಇದೆ. ಈ ಎಲ್ಲದರಿಂದ ತಪ್ಪಿಸಿಕೊಂಡು ಮರವೇರಿ ಹಲಸು ಕೊಯ್ಯಲು ನಿನಗೆ ಬಹಳ ಕಷ್ಟವಾಗಿರಬೇಕು. ಇನ್ನು ಮುಂದೆ ರಾತ್ರಿ ಬಂದು ಕದಿಯುವ ಕೆಲಸ ಬೇಡ. ಹಗಲೇ ಬಂದು ಬೇಕಿರುವ ಹಲಸನ್ನು ಕೊಂಡೊಯ್ಯಬೇಕು” ಎಂದು ಅವನು ಕದ್ದಿದ್ದ ಹಲಸನ್ನು ಅವನಿಗೇ ಕೊಟ್ಟು ಕಳುಹಿಸಿದರು.

