ಮೇಲುಜಾತಿಯಿಂದ ಶೋಷಣೆಗೆ ಒಳಗಾಗುತ್ತಲೇ ತನಗಿಂತ ಕೆಳಗಿನ ಜಾತಿಯನ್ನು ಶೋಷಿಸುವುದು ಜಾತಿ ವ್ಯವಸ್ಥೆಯ ಮುಖ್ಯ ಲಕ್ಷಣ. ಇದನ್ನು ಅರಿತಿದ್ದ ಗುರುಗಳು ಅದರ ಕುರಿತು ಅರಿವು ಮೂಡಿಸಲು ಸಾಧ್ಯವಿರುವ ಎಲ್ಲಾ ಸಂದರ್ಭಗಳನ್ನು ಬಳಸಿಕೊಳ್ಳುತ್ತಿದ್ದರು. ಇಂಥದ್ದೊಂದು ಸಂದರ್ಭವನ್ನು ಮಯ್ಯನಾಟ್ಟು ಕೆ. ದಾಮೋದರನ್ ತಮ್ಮ ‘ಶ್ರೀನಾರಾಯಣ ಗುರುಸ್ವಾಮಿ ಜೀವಚರಿತ್ರಂ’ನಲ್ಲಿ ದಾಖಲಿಸಿದ್ದಾರೆ. ಅದರ ಅನುವಾದ ಇಲ್ಲಿದೆ… । ಎನ್.ಎ.ಎಂ.ಇಸ್ಮಾಯಿಲ್
ಪೆರಿಂಙಾಲ ಶ್ರೀಧರಾಶ್ರಮದಲ್ಲಿ ನಾರಾಯಣ ಗುರುಗಳು ಕೆಲ ದಿನಗಳ ಕಾಲ ತಂಗಿದ್ದ ಕಾಲವದು. ಅಲ್ಲಿನ ಏಕಾಂತ ಗುರುಗಳಿಗೆ ಬಹಳ ಪ್ರಿಯ. ಅಲ್ಲಿಂದ ಹೊರಡುವ ಮೊದಲು ಹತ್ತಿರದಲ್ಲಿದ್ದ ಪ್ರಾಥಮಿಕ ಶಾಲೆಯಲ್ಲಿ ಒಂದು ಸಭೆಯನ್ನು ಕರೆದರು. ಅದು ಮುಕ್ತಾಯಗೊಳ್ಳುವ ಮೊದಲು ಗುರುಗಳು ಆ ಶಾಲೆಯಲ್ಲಿ ವಿದ್ಯಾಭಾಸ ಮಾಡುತ್ತಿದ್ದ ಏಳು ಮಂದಿ ಪುಲಯ ಸಮುದಾಯದ ಮಕ್ಕಳನ್ನು ವೇದಿಕೆಯ ಎದುರು ಕುಳಿತುಕೊಳ್ಳುವಂತೆ ಮಾಡಿದರು. ಮತ್ತೆ. ಒಬ್ಬೊಬ್ಬರನ್ನೂ ಹತ್ತಿರ ಕರೆದು ಸಕ್ಕರೆಯನ್ನು ನೀಡಿ ಚೆನ್ನಾಗಿ ಕಲಿಯಬೇಕು, ಎಲ್ಲರಿಗೂ ಮಾದರಿಯಾಗಬೇಕು ಎಂದು ಆಶೀರ್ವದಿಸಿದರು.
ಈ ಮಕ್ಕಳಲ್ಲಿ ಒಬ್ಬನನ್ನು ನೋಡುತ್ತಾ ಅಲ್ಲಿದ್ದ ಶಿಕ್ಷಕರನ್ನು ಉದ್ದೇಶಿಸಿ ‘ಈತ ಕಲಿಕೆಯಲ್ಲಿ ಬಹಳ ಮುಂದಿದ್ದಾನಲ್ಲವೇ?’ ಎಂದು ಕೇಳಿದರು. ಉಪಾಧ್ಯಾಯರು ಹೌದು ಎಂದು ಗುರುಗಳ ಅಭಿಪ್ರಾಯವನ್ನು ಅನುಮೋದಿಸಿದರು. ಆ ವಿದ್ಯಾರ್ಥಿ ತನಗೆ ತಿಳಿದಂತೆ ಸಭೆಯೆದುರು ಮಾತನಾಡಲಿ ಎಂದು ಗುರುಗಳು ಹೇಳಿದರು. ಆ ಬಾಲಕನ ಮಾತುಗಳು ಹೀಗಿದ್ದವು: “ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಗಳ ದರ್ಶನ ಪಡೆಯಲು ಸಾಧ್ಯವಾದದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಅವರು ಬಹುಕಾಲ ಬದುಕಿರುವಂತಾಗಲಿ”
ಸಭೆ ಮುಗಿದ ನಂತರ ಅರಿಕ್ಕೂರು ಪುರುಷೋತ್ತಮನ್ ಅವರ ಮನೆಯಲ್ಲಿ ಗುರುಗಳು ಉಪಾಹಾರ ಸೇವಿಸುವುದಿತ್ತು. ಶಾಲೆಯಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಯನ್ನು ತಮ್ಮ ಜೊತೆಯೇ ಪುರುಷೋತ್ತಮನ್ ಅವರ ಮನೆಗೆ ಕರೆತಂದ ಗುರುಗಳು ಜಗಲಿಯಲ್ಲಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. ಊಟ, ತಿಂಡಿಗಳನ್ನು ಖಾಸಗಿಯಾಗಿ ಸೇವಿಸುವ ಅಭ್ಯಾಸವಿರಿಸಿಕೊಂಡಿದ್ದ ಗುರುಗಳು ಅಂದು ಮಾತ್ರ ಎಲ್ಲರೆದುರೇ ಉಪಾಹಾರ ಸೇವಿಸುವ ತೀರ್ಮಾನ ಮಾಡಿದ್ದರು. ಉಪಾಹಾರವನ್ನು ಕುಳಿತಲ್ಲಿಗೇ ತರಿಸಿ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡರು. ಅಲ್ಲಿಂದ ಹೊರಡುವ ಮುನ್ನ ‘ಕುಂಞನ್’ ಎಂಬ ಹೆಸರಿನ ಆ ಹುಡುಗನಿಗೆ ‘ಕುಮಾರನ್’ ಎಂದು ಹೊಸ ಹೆಸರನ್ನೂ ನೀಡಿದರು.
ಅಂದು ಅಲ್ಲಿರುವ ಎಲ್ಲರನ್ನೂ ಉದ್ದೇಶಿಸಿ ಗುರುಗಳು ಆಗ್ರಹಪೂರ್ವಕವಾಗಿ ಹೇಳಿದ ಮಾತುಗಳು ಹೀಗಿವೆ: ‘ಪುಲಯ ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಈಳವರು ತಮಗಿಂತ ಕೀಳೆಂದು ಭಾವಿಸಿರುವ ಜಾತಿಗಳವರೊಂದಿಗೆ ಎಷ್ಟು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಅದು ತಾವು ಈಳವರಿಗಿಂತ ಶ್ರೇಷ್ಠರು ಎಂದು ಭಾವಿಸಿರುವ ಜಾತಿಗಳವರಿಗೆ ಮಾದರಿಯಾಗಬೇಕು. ಮನುಷ್ಯರೆಲ್ಲಾ ಒಂದೇ ಜಾತಿ ಎಂಬುದು ಎಲ್ಲರಿಗೂ ಅರಿವಾಗುವಂತಿರಬೇಕು”

