ಅರುವಿಪ್ಪುರಂನಲ್ಲಿ 1888ರಲ್ಲಿ ಶಿವ ದೇಗುಲ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡ ನಾರಾಯಣ ಗುರುಗಳ ದೇಗುಲ ಸ್ಥಾಪನಾ ಕಾರ್ಯ ಅವರು ಸಮಾಧಿಸ್ಥರಾಗುವ ಹಿಂದಿನ ವರ್ಷದ ತನಕವೂ ಮುಂದುವರೆಯಿತು. ಜಾತಿ-ಮತ ಭೇದವಿಲ್ಲದೆ ಸರ್ವರಿಗೂ ಪ್ರವೇಶವಿರುವ ಈ ದೇಗುಲಗಳು ಸರ್ವರೂ ಒಂದುಗೂಡುವ ಸ್ಥಳವಾಗಬೇಕೆಂದು ಗುರುಗಳ ಭಾವನೆಯಾಗಿತ್ತು. ದೇಗುಲವೆಂಬುದು ತಾವು ಪರಿಭಾವಿಸಿದ ತಾಣವಾಗುತ್ತಿಲ್ಲ ಎಂದು ಅವರಿಗೆ ಅನ್ನಿಸಿದಾಗ ದೇಗುಲ ಸ್ಥಾಪನೆಯನ್ನು ಪ್ರೋತ್ಸಾಹಿಸುವ ಅಗತ್ಯವಿಲ್ಲ ಎಂಬ ನಿಲುವು ತಳೆದರು. 1917ರಲ್ಲಿ ಅವರು ಈ ಕುರಿತಂತೆ ಒಂದು ಅಧಿಕೃತ ಹೇಳಿಕೆಯನ್ನೇ ನೀಡಿದರು. ಅದು ಈ ಕೆಳಗಿನಂತಿದೆ… । ಎನ್.ಎ.ಎಂ.ಇಸ್ಮಾಯಿಲ್
“ಇನ್ನು ದೇಗುಲ ನಿರ್ಮಾಣವನ್ನು ಪ್ರೋತ್ಸಾಹಿಸಬೇಡಿ. ದೇಗುಲಗಳ ಬಗ್ಗೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ದೇವಾಲಯ ನಿರ್ಮಾಣಕ್ಕೆ ಖರ್ಚು ಮಾಡುವ ಹಣ ಉಪಯೋಗಕ್ಕೆ ಬಾರದ ವೆಚ್ಚವಾಯಿತಲ್ಲಾ ಎಂದು ದುಃಖಿಸುವ ಸ್ಥಿತಿಯುಂಟಾಗಬಹುದು. ಕಾಲ ಅಷ್ಟೊಂದು ಬದಲಾಗಿದೆ. ಈಗ ದೇಗುಲ ಬೇಡವೆಂದರೆ ಜನರು ಒಪ್ಪಲಾರರು. ಹೀಗೆ ಬೇಕೇ ಬೇಕು ಎಂದಿದ್ದರೆ ಸಣ್ಣ ಗುಡಿಗಳನ್ನು ಕಟ್ಟಿಕೊಳ್ಳಬಹುದು. ಈಗ ಬೇಕಾಗಿರುವ ಪ್ರಧಾನ ದೇವಾಲಯವೆಂದರೆ ವಿದ್ಯಾಲಯಗಳು. ಚಂದಾ ಎತ್ತಿ ಶಾಲೆಗಳನ್ನು ನಿರ್ಮಿಸುವುದಕ್ಕೆ ಉತ್ಸಾಹ ತೋರಬೇಕಿದೆ. ಶುಚಿ ಮತ್ತಿತರ ವಿಚಾರಗಳು ದೇಗುಲಗಳಿಂದ ಸಾಧ್ಯ. ಹಾಗೆಯೇ ದೇಗುಲಗಳಂಥ ಸಾರ್ವಜನಿಕ ಆರಾಧನಾ ಸ್ಥಳಗಳಲ್ಲಿ ಜಾತಿಭೇದವಿಲ್ಲದೆ ಜನರನ್ನು ಒಂದುಗೂಡಿಸಲು ಸಾಧ್ಯವಾಗಬಹುದು ನಾವು ಭಾವಿಸಿದ್ದೆವು. ಆದರೆ ನಮ್ಮ ಅನುಭವ ಅದಕ್ಕೆ ವಿರುದ್ಧವಾದುದಾಯಿತು. ದೇಗುಲಗಳು ಜಾತಿಭೇದವನ್ನು ಹೆಚ್ಚಿಸುತ್ತಿವೆ. ಇನ್ನು ಜನಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿದೆ. ಅವರಲ್ಲಿ ಅರಿವು ಹೆಚ್ಚಲಿ. ಅದೇ ಅವರನ್ನು ಗುಣಮುಖರನ್ನಾಗಿಸುವ ಮದ್ದು”
ಈ ನಿಲುವು ತಳೆದ ನಂತರ ಅವರು ಪ್ರತಿಷ್ಠಾಪಿಸಿದ ದೇಗುಲಗಳೆಲ್ಲವೂ ವಿಶಿಷ್ಟವಾದುದಾಗಿದ್ದವು. ತ್ರಿಶೂರ್ ಪಟ್ಟಣದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣದಲ್ಲಿ ತಲುಪಬಹುದಾದ ಕಾರಮುಕ್ಕ್ ಎಂಬಲ್ಲಿ 1921ರ ಮೇ 15ರಂದು ಗುರುಗಳು ಚಿದಂಬರನಾಥನನ್ನು ಪ್ರತಿಷ್ಠಾಪಿಸಿದರು. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಹೆಚ್ಚಿನವರು ಅನಕ್ಷರಸ್ಥರು ಮತ್ತು ಕೆಳಜಾತಿಯವರಾಗಿದ್ದರು. ಈಳವ ಸಮುದಾಯಕ್ಕೆ ಸೇರಿದ ಸ್ಥಳೀಯ ಶ್ರೀಮಂತ ವ್ಯಕ್ತಿಯೊಬ್ಬರು ದೇಗುಲವನ್ನು ಕಟ್ಟಿಸಿ ಪ್ರತಿಷ್ಠಾನೆಗಾಗಿ ನಾರಾಯಣ ಗುರುಗಳನ್ನು ಆಹ್ವಾನಿಸಿದರು.
ಸರ್ವರಿಗೂ ಪ್ರವೇಶವಿರುವ ಸಾರ್ವಜನಿಕ ದೇಗುಲವಾದರಷ್ಟೇ ತಾನು ಪ್ರತಿಷ್ಠಾಪನೆ ನಡೆಸುತ್ತೇನೆಂದು ಗುರುಗಳು ಮೊದಲೇ ಸ್ಪಷ್ಟಪಡಿಸಿದ್ದರು. ಇದಕ್ಕೆ ದೇಗುಲವನ್ನು ನಿರ್ಮಿಸಿದ್ದ ಕುಟುಂಬವೂ ಒಪ್ಪಿತ್ತು. ಗುರುಗಳು ಪ್ರತಿಷ್ಠಾಪನೆಗಾಗಿ ಕಾರಮುಕ್ಕ್ ತಲುಪುವ ಹೊತ್ತಿಗಾಗಲೇ ದೇಗುಲ ನಿರ್ಮಾಣ ಮಾಡಿದ ಕುಟುಂಬದವರು ಬಹಳ ಸುಂದರವಾಗಿ ಕಲ್ಲಿನಲ್ಲಿ ಕಡೆದಿದ್ದ ದೇವತಾ ವಿಗ್ರಹಗಳನ್ನು ಸಿದ್ಧಪಡಿಸಿದ್ದರು. ಗುರುಗಳು ಸ್ಥಳಕ್ಕೇ ಬಂದವರೇ ವಿಗ್ರಹಗಳನ್ನು ನೋಡಿ ‘ಇವೆಲ್ಲಾ ಏನು’ ಎಂದು ಕೇಳಿದರು.
‘ಇವೆಲ್ಲವೂ ಪ್ರತಿಷ್ಠಾಪನೆಗಾಗಿ ತಂದಿರುವ ದೇವತಾ ವಿಗ್ರಹಗಳು’ ಎಂಬ ಉತ್ತರ ಬಂತು.
ಇದಕ್ಕೆ ಉತ್ತರವಾಗಿ ಗುರುಗಳು: ‘ಇಲ್ಲಿಗೆ ಕಲ್ಲಿನ ಕೆಲಸ ಮುಗಿಯಿತು. ಇನ್ನು ಇವುಗಳನ್ನು ತೆಗೆದಿಟ್ಟು ಬಿಡಿ’ ಎಂದರು. ಮೂರು ಬತ್ತಿಗಳಿರುವ ದೀಪವೊಂದನ್ನು ತರಿಸಿ ಅದನ್ನು ಬೆಳಗಿದ ಗುರುಗಳು ‘ಬೆಳಕು ಎಂದರೆ ಅರಿವು. ಅರಿವಿನ ಬೆಳಕು ಎಲ್ಲಡೆ ಹರಡಲಿ’ ಎಂಬ ಸಂಕಲ್ಪ ಮತ್ತು ಆಶಯದೊಂದಿಗೆ ಕಾರಮುಕ್ಕ್ ಚಿದಂಬರನಾಥನನ್ನು ಜ್ಯೋತಿಯಾಗಿ ಪ್ರತಿಷ್ಠಾಪಿಸಿದರು. ಈ ದೇವಾಲಯ ಈಗ ‘ವಿಳಕ್ಕು ಅಂಬಲಂ’ (ಬೆಳಕಿನ ದೇವಾಲಯ) ಎಂದು ಹೆಸರಾಗಿದೆ
1921ರ ಡಿಸೆಂಬರ್ 22ರಂದು ತಿರುವನಂತಪುರ ಜಿಲ್ಲೆಯ ಮುರುಕ್ಕುಂಪುಳದ ಎಡವಿಲಗಂ ಎಂಬಲ್ಲಿ ಸ್ಥಾಪಿಸಿದ ಕಾಳಕಂಠೇಶ್ವರ ದೇಗುಲವೂ ವಿಶಿಷ್ಟವೇ. ಇಲ್ಲಿಯೂ ಯಾವುದೇ ದೇವರ ಮೂರ್ತಿಯಿಲ್ಲ. ಇಲ್ಲಿಯೂ ಯಾವುದೇ ಮೂರ್ತಿಯನ್ನು ಸ್ಥಾಪಿಸುವುದಿಲ್ಲ ಎಂದು ಗುರುಗಳು ಹಿತ್ತಾಳೆಯ ಫಲಕವೊಂದರ ಕೇಂದ್ರದಲ್ಲಿ ‘ಓಂ’ ಎಂದೂ ಅದರ ಸುತ್ತಲೂ ‘ಸತ್ಯಂ, ಧರ್ಮಂ, ದಯಾ, ಶಾಂತಿ’ ಎಂದು ಬರೆಯಿಸಿ ತರಲು ಹೇಳಿ ಅದನ್ನೇ ಇಲ್ಲಿ ಪ್ರತಿಷ್ಠಾಪಿಸಿದರು.
ಆಲಪ್ಪುಳ ಜಿಲ್ಲೆಯ ಕಳವಂಕೋಡಂನಲ್ಲಿರುವ ಅರ್ಧನಾರೀಶ್ವರ ದೇಗುಲ ‘ಕನ್ನಾಡಿ ಪ್ರತಿಷ್ಠ’ ಎಂದೇ ಪ್ರಸಿದ್ಧವಾಗಿದೆ. ಈ ದೇಗುಲದ ಪ್ರತಿಷ್ಠಾಪನೆಗೆ ಬಂದ ಗುರುಗಳು ಒಂದು ಕನ್ನಡಿಯನ್ನು ತರಿಸಿ ಅದರಲ್ಲಿ ‘ಓಂ ಶಾಂತಿ’ ಎಂದು ಕೆತ್ತಿಸಿ ಅದನ್ನೇ ಪ್ರತಿಷ್ಠಾಪಿಸಿದರು. ಇದು ಗುರುಗಳು ನಡೆಸಿದ ಮೊದಲ ದರ್ಪಣ ಪ್ರತಿಷ್ಠಾಪನೆ.
ಇನ್ನು ಗುರುಗಳು ನಡೆಸಿದ ಕೊನೆಯ ಪ್ರತಿಷ್ಥಾಪನೆ ವೈಕಂ ಸಮೀಪದ ಉಲ್ಲಲ ಓಂಕಾರೇಶ್ವರ ದೇಗುಲದ್ದು. ಈ ಪ್ರತಿಷ್ಠಾಪನೆ ನಡೆದದ್ದು 1921ರ ಡಿಸೆಂಬರ್ 27ರಂದು. ಅದು ಬರಗಾದಲ ದಿನಗಳು. ಈ ಪ್ರದೇಶದ ಸುತ್ತ ಇದ್ದ ಯಾವ ಕೊಳ, ತೊರೆಗಳಲ್ಲಿಯೂ ನೀರಿರಲಿಲ್ಲ. ಮೇಲ್ಜಾತಿಗಳಿಗಳಿಗಷ್ಟೇ ಪ್ರವೇಶಾನುಮತಿಯಿದ್ದ ಕೆಲ ದೇಗುಲಗಳ ಕಲ್ಯಾಣಿಗಳಲ್ಲಿ ನೀರಿತ್ತು. ಆದರೆ ಅದನ್ನು ಬಳಸಲು ಕೆಳಜಾತಿಯವರಿಗೆ ಅನುಮತಿ ಇರಲಿಲ್ಲ.
ಒಂದು ರಾತ್ರಿ ಏಳೆಂಟು ಮಂದಿ ಈಳವ ಯುವಕರು ಇಂಥದ್ದೊಂದು ದೇಗುಲದ ಕಲ್ಯಾಣಿಯಲ್ಲಿ ಮುಳುಗಿ ಸ್ನಾನ ಮಾಡಿದರು. ಆಗ ಅವರಿಗೊಂದು ಕಂಚಿನ ಪ್ರತಿಮೆ ದೊರೆಯಿತು. ಇದನ್ನು ಮರದ ಪೆಟ್ಟಿಗೆಯಲ್ಲಿಟ್ಟು ಕಣಜದಲ್ಲಿ ಅಡಗಿಸಿಟ್ಟರು. ಹೊಸತಾಗಿ ಕಟ್ಟಿಸಿದ ದೇಗುಲದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ಗುರುಗಳನ್ನು ಕೋರಿದಾಗ ‘ಅಡಗಿಸಿಟ್ಟ ವಿಗ್ರಹವನ್ನು ನಾನು ಪ್ರತಿಷ್ಠಾಪಿಸುವುದಿಲ್ಲ’ ಎಂದು ನಿರಾಕರಿಸಿದರು.
ಆದರೆ ಊರಿನವರನ್ನು ನಿರಾಶೆಗೊಳಿಸದ ಗುರುಗಳು ‘ನನ್ನ ಮನಸ್ಸಿನಲ್ಲಿರುವ ವಿಗ್ರಹವೇ ಬೇರೆ. ನೀವು ಒಪ್ಪಿದರೆ ಅದನ್ನು ಪ್ರತಿಷ್ಠಾಪಿಸುವೆ’ ಎಂದರು. ಊರಿನವರು ಒಪ್ಪಿದಾಗ ಒಂದು ಮರದ ಚೌಕಟ್ಟಿನಲ್ಲಿ ಕನ್ನಡಿಯನ್ನು ಅಳವಡಿಸಿ ಅದರ ಮೇಲೇ ದೇವನಾಗರಿ ಲಿಪಿಯಲ್ಲಿ ‘ಓಂ’ ಬರೆಯಿಸಿ ತರಲು ಹೇಳಿದರು. ಹಾಗೆ ಕನ್ನಡಿಯಲ್ಲಿ ಬರೆದ ‘ಓಂ’ ಅಕ್ಷರವಿರುವ ಫಲಕವೇ ಇಲ್ಲಿ ಓಂಕಾರೇಶ್ವರನ ವಿಗ್ರಹವಾಯಿತು.
ಗುರುಗಳ ದೇಗುಲ ಪ್ರತಿಷ್ಠಾಪನೆಯ ಸರಣಿಯನ್ನು ಭಕ್ತಿಯಿಂದ ಆರಂಭಗೊಂಡು ತನ್ನಲ್ಲೇ ಬ್ರಹ್ಮವನ್ನು ಕಾಣುವ ಜ್ಞಾನದ ತನಕದ ಮಾರ್ಗವೆನ್ನಬಹುದು. ಆರಂಭದಲ್ಲಿ ಜನರು ಒಗ್ಗೂಡಲು ಬೇಕಿದ್ದದ್ದು ದೈವ ಭಕ್ತಿ. ಅದಕ್ಕಾಗಿ ಜನರು ಇಚ್ಛಿಸಿದ ರೂಪಗಳಲ್ಲಿ ಗುರುಗಳು ದೇಗುಲಗಳನ್ನು ಸ್ಥಾಪಿಸಿದರು. ಮುಂದೆ ಅರಿವೆಂಬ ಬೆಳಕಿನ ರೂಪಕವಾಗಿ ಜ್ಯೋತಿ ರೂಪದ ಚಿದಂಬರನಾಥನನ್ನು ಪ್ರತಿಷ್ಠಾಪಿಸಿದರು. ಪಡೆದ ಅರಿವು ಸತ್ಯ, ಧರ್ಮ, ದಯೆ ಮತ್ತು ಶಾಂತಿಯನ್ನು ಸಾಕಾರಗೊಳಿಸಬೇಕು ಎಂದು ಹೇಳುವ ಕಾಳಕಂಠೇಶ್ವರನನ್ನು ಗುರುಗಳು ತಂದಿತ್ತರು. ಮತ್ತೆ ತನ್ನಲ್ಲೇ ಬ್ರಹ್ಮವನ್ನು ಕಾಣಬೇಕೆಂಬುದರ ಸಂಕೇತವಾಗಿ ದರ್ಪಣ ರೂಪದ ಅರ್ಧನಾರೀಶ್ವರ ಮತ್ತು ಓಂಕಾರೇಶ್ವರರನ್ನು ಪ್ರತಿಷ್ಠಾಪಿಸಿದರು.

