ಡಾಂಭಿಕ ಗುರುಭಕ್ತಿ

ಗುರುಗಳ ಬಗ್ಗೆ ಗೌರವಭಾವವನ್ನು, ಭಕ್ತಿಯನ್ನು ತೋರ್ಪಡಿಸುತ್ತಿದ್ದರೂ ಜಾತಿಭೇದಾಚರಣೆಯಿಂದ ದೂರವಾಗಲು ಸಿದ್ಧರಿಲ್ಲದ ಹಲವರು ಆ ಕಾಲದಲ್ಲೂ ಇದ್ದರು, ಈ ಕಾಲದಲ್ಲೂ ಇದ್ದಾರೆ. ಗುರುಗಳು ಇಂಥ ಡಾಂಭಿಕತೆಯನ್ನು ಅರೆಕ್ಷಣವೂ ಸಹಿಸುತ್ತಿರಲಿಲ್ಲ. ಇದಕ್ಕೆ ಸಂಬಂಧಿಸಿದ ಘಟನೆಯೊಂದನ್ನು ಶ್ಯಾಂ ಬಾಲಕೃಷ್ಣನ್ ತಮ್ಮ ‘ಮೌನ ಪೂಂತೇನ್’ ಎಂಬ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಅದರ ಅನುವಾದದ ಪ್ರಯತ್ನ ಇಲ್ಲಿದೆ… । ಎನ್.ಎ.ಎಂ.ಇಸ್ಮಾಯಿಲ್

ತಿರುವನಂತಪುರ ಪಟ್ಟಣದ ಸಮೀಪವಿರುವ ದೇವಾಲಯವೊಂದರ ಆಡಳಿತದ ಹಕ್ಕಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವ್ಯಾಜ್ಯವೊಂದಿತ್ತು. ಇದನ್ನು ಪರಿಹರಿಸಲು ನಾರಾಯಣ ಗುರುಗಳ ಮಧ್ಯಪ್ರವೇಶವನ್ನು ಅವರು ಬಯಸಿದರು. ಎರಡೂ ಗುಂಪಿನ ಮುಖ್ಯಸ್ಥರ ನಿಯೋಗವೊಂದು ಶಿವಗಿರಿ ಸಂದರ್ಶಿಸಿ ಗುರುಗಳನ್ನು ಭೇಟಿಯಾಗಿ “ತಾವು ಬಂದು ವ್ಯಾಜ್ಯವನ್ನು ಬಗೆಹರಿಸಿಕೊಡಿ” ಎಂಬ ವಿನಂತಿಸಿತು.

“ನಾವು ಬರಬೇಕೇ, ಬಂದರೆ ನಿಮ್ಮ ವ್ಯಾಜ್ಯ ಮುಗಿಯುತ್ತದೆಯೇ? ನಾವು ಹೇಳಿದಂತೆ ನಡೆಯುತ್ತೀರಾ? ನಾವೇನೋ ಒಮ್ಮೆ ಬಂದು ಹೋಗಬಹುದು. ನೀವು ಎರಡೂ ಗುಂಪಿನವರು ಸದಾ ಅಲ್ಲಿಯೇ ಬದುಕಬೇಕಾದವರು. ನಿಮ್ಮೊಳಗಿನವರೇ ಈ ಸಂಧಾನ ನಡೆಸುವುದು ಸರಿ ಎನಿಸುತ್ತದೆ” ಎಂದು ಗುರುಗಳು ತಮ್ಮ ಅಭಿಪ್ರಾಯವನ್ನು ಹೇಳಿದರು.

ಗುರುಗಳನ್ನು ಆಹ್ವಾನಿಸಲು ಬಂದವರು ತಮ್ಮ ಪಟ್ಟು ಬಿಡಲಿಲ್ಲ. “ಸ್ವಾಮಿ ಶ್ರೀಪಾದರು ಅಲ್ಲಿಗೆ ಆಗಮಿಸಿದರೆ ನಮ್ಮ ವ್ಯಾಜ್ಯ ಖಂಡಿತವಾಗಿಯೂ ಪರಿಹಾರವಾಗುತ್ತದೆ” ಎಂದು ಒತ್ತಾಯಿಸಿದರು.

“ನಿಮಗೆ ಹಾಗನ್ನಿಸುತ್ತಿದ್ದರೆ ನಾವು ಬರುತ್ತೇವೆ. ಆದರೆ ವ್ಯಾಜ್ಯ ಬಗೆಹರಿಯಬಹುದು ಎಂದು ನಮಗನ್ನಿಸುತ್ತಿಲ್ಲ” ಎಂದು ಗುರುಗಳು ಉತ್ತರಿಸಿದರು.

ಗುರುಗಳು ಆ ದೇವಾಲಯವನ್ನು ತಲುಪಿದ್ದು ಒಂದು ವಿಶೇಷ ದಿನದಂದು. ಸಾಮಾನ್ಯವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿರುವ ದಿನ. ಗುರುಗಳ ಆಗಮನದ ಸುದ್ದಿ ಊರಿಗೆಲ್ಲಾ ತಿಳಿದಿದ್ದರಿಂದ ಗುರು ದರ್ಶನದ ಉದ್ದೇಶದಿಂದಲೂ ಬಹುಸಂಖ್ಯೆಯಲ್ಲಿ ಜನರು ನೆರೆದಿದ್ದರು. ಸಂಜೆಯ ದೀಪಾರಾಧನೆಯ ಹೊತ್ತಾಯಿತು. ಆಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಿಂತಿರುವ ಜನರ ಗುಂಪೊಂದು ಗುರುಗಳ ಕಣ್ಣಿಗೆ ಬಿತ್ತು. ಶುಚಿರ್ಭೂತರಾಗಿ ಹಣೆಯಲ್ಲಿ ಭಸ್ಮ ಧರಿಸಿದ್ದ ಜನರ ಗುಂಪು ದೂರದಿಂದಲೇ ಕೈಮುಗಿದು ಮುಂದೆ ಬಾರದೆ ನಿಂತಿತ್ತು.

ಗುರುಗಳು ತಮ್ಮನ್ನು ಆಹ್ವಾನಿಸಿದ್ದವರ ಬಳಿ “ಅಲ್ಲಿ ನಿಂತಿರುವವರು ಯಾರು? ಅವರೇಕೆ ಅಷ್ಟು ದೂರದಲ್ಲಿ ನಿಂತಿದ್ದಾರೆ? ಇಲ್ಲೇ ಬರಬಹುದಲ್ಲವೇ?” ಎಂದು ಕೇಳಿದರು.

ವ್ಯಾಜ್ಯ ಪರಿಹಾರಕ್ಕಾಗಿ ಗುರುಗಳನ್ನು ಆಹ್ವಾನಿಸಿದ ಒಂದು ಗುಂಪಿನ ಮುಖ್ಯಸ್ಥ ಹೇಳಿದ “ಅವರು ‘ಪುಲಯ’ ಸಮುದಾಯದವರು. ಅವರಿಗೆ ದೇಗುಲದೊಳಗೆ ಪ್ರವೇಶವಿಲ್ಲ. ಹಾಗಾಗಿ ದೂರವೇ ನಿಂತಿದ್ದಾರೆ. ಅವರು ಸ್ವಾಮಿ ಶ್ರೀಪಾದರ ದರ್ಶನ ಬಯಸಿ ಇಲ್ಲಿಯ ತನಕ ಬಂದಿದ್ದಾರೆ”

ಗುರುಗಳು ಹೇಳಿದರು: “ಓ, ಹಾಗೋ… ಅವರನ್ನು ದೇವಸ್ಥಾನದೊಳಕ್ಕೆ ಕರೆಯಿರಿ. ಅವರೂ ಮನುಷ್ಯರೇ ತಾನೇ? ಅವರಿಗೂ ದೇಹ ಶುದ್ಧಿಯಿದೆ. ಶುಭ್ರವಸ್ತ್ರಗಳನ್ನು ಧರಿಸಿದ್ದಾರೆ. ಆರೋಗ್ಯವಂತರಾಗಿಯೂ ಇರುವಂತೆ ಕಾಣಿಸುತ್ತದೆ. ದುಡಿಮೆಯಿಂದ ಹುರಿಗಟ್ಟಿದ ದೇಹವೇ ಅವರ ಆರೋಗ್ಯವನ್ನು ತೋರಿಸಿಕೊಡುತ್ತಿದೆಯಲ್ಲಾ… ಅವರ ವೃತ್ತಿಯೂ ಒಳ್ಳೆಯದೇ ಆಗಿರುವಂತಿದೆ”

ಮುಖ್ಯಸ್ಥ: ಸಾಧ್ಯವಿಲ್ಲ ಸ್ವಾಮಿಗಳೇ… ಪುಲಯ ಜಾತಿಯವರನ್ನು ನಮ್ಮ ದೇವಸ್ಥಾನದೊಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅದು ನಮಗೆ ನೋವುಂಟು ಮಾಡುವ ಸಂಗತಿ. ಶ್ರೀಪಾದರು ಅಂಥದ್ದೊಂದು ಅಪ್ಪಣೆ ಕೊಡಿಸಬೇಡಿ

ಗುರು: ತಾವೀಗ ‘ನಮಗೆ’ ಎಂದಿರಿ. ಈ ‘ನಾವು’ ಯಾರು?

ಮುಖ್ಯಸ್ಥ: ನನ್ನ ಗುಂಪಿನವರು….

ಈ ಮಾತನ್ನು ಕೇಳಿದ ಗುರುಗಳು “ನಿಮಗಿಷ್ಟವಿಲ್ಲದಿದ್ದರೆ ನಾವೂ ಒತ್ತಾಯಿಸುವುದಿಲ್ಲ” ಎಂದು ದೇವಸ್ಥಾನದ ಆಡಳಿತದ ವ್ಯಾಜ್ಯಕ್ಕೆ ಕಾರಣರಾದ ಮತ್ತೊಂದು ಗುಂಪಿನ ಮುಖ್ಯಸ್ಥನನ್ನು ಉದ್ದೇಶಿಸಿ “ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು.

ಆ ಗುಂಪಿನ ಮುಖ್ಯಸ್ಥನೂ “ನಮಗೂ ಒಪ್ಪಿಗೆಯಿಲ್ಲ ಸ್ವಾಮಿ. ಪುಲಯ ಜಾತಿಯವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಡುವುದೇ…?”

ಗುರುಗಳು ಎದ್ದು ಅಲ್ಲಿಂದ ಹೊರಡಲು ಸಿದ್ಧರಾದರು. ಆಗ ಎರಡೂ ಗುಂಪಿನ ಮುಖ್ಯಸ್ಥರು “ನಮ್ಮ ನಡುವಣ ವ್ಯಾಜ್ಯದ ವಿಚಾರ…” ಎಂದು ಕೇಳಲು ಮುಂದಾದರು.

ಅವರ ಮಾತನ್ನು ತಡೆದ ಗುರುಗಳು “ನಿಮ್ಮ ನಡುವೆ ವ್ಯಾಜ್ಯವೇ ಇಲ್ಲವಲ್ಲ. ನಿಮ್ಮ ಐಕ್ಯವನ್ನು ಈಗಷ್ಟೇ ತೋರಿಸಿಕೊಟ್ಟಿರಲ್ಲವೇ? ಅವರನ್ನು ದೇವಸ್ಥಾನದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಏಕಕಂಠದಿಂದ ಎರಡೂ ಗುಂಪಿನವರು ಹೇಳಿದಿರಲ್ಲವೇ… ಇನ್ನು ನಮಗಿಲ್ಲಿ ಕೆಲಸವಿಲ್ಲ.” ಎಂದು ತಕ್ಷಣವೇ ಗುರುಗಳು ದೇಗುಲದಿಂದ ಹೊರ ನಡೆದರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.