ಯಾವ ಬೇಡಿಕೆ, ಒತ್ತಾಯವಿಲ್ಲದ ಪ್ರೀತಿಯ ಸನ್ನೆ ನಿಮ್ಮಿಂದ ಕಾಣಿಸಿದರೆ ಸಾಕು… ಕೇವಲ ಪ್ರೀತಿಗಾಗಿ ಪ್ರೀತಿ; ನಿಮಗೆ ಆಶ್ಚರ್ಯವಾಗಬಹುದು… ಅಸ್ತಿತ್ವದ ಸಾವಿರಾರು ಕಿಟಕಿಗಳು ಧೀಡೀರ್ ನೆ ನಿಮಗೆ ತೆರೆದುಕೊಳ್ಳುತ್ತವೆ, ಸೂರ್ಯ , ಮಳೆ, ಗಾಳಿ ನಿಮಗಾಗಿ ಹಾತೊರೆದು, ನಿಮ್ಮತ್ತ ಧಾವಿಸಿ ಬರುತ್ತವೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೀತಿ ನಮ್ಮ ಅತ್ಯಂತ ಆಳವಾದ ತುಡಿತ. ದೇಹಕ್ಕೆ ಹೇಗೆ ಆಹಾರ ಬೇಕೋ ಹಾಗೆಯೇ ಆತ್ಮಕ್ಕೆ ಪ್ರೀತಿ ಬೇಕು, ಪ್ರೀತಿ ಒಂದು ರೀತಿಯ ಪೋಷಣೆ, ಅಧ್ಯಾತ್ಮಿಕ ಪೋಷಣೆ. ಆಹಾರ, ಗಾಳಿ, ನೀರು ಇಲ್ಲದಿರುವಾಗ ದೇಹ ಕ್ಷೀಣಿಸುತ್ತ ಹೋಗುತ್ತದೆ, ಪ್ರೀತಿ ಇಲ್ಲದಿರುವಾಗ ಆತ್ಮ ಕುಗ್ಗಲು ಶುರು ಮಾಡುತ್ತದೆ.
ಪ್ರೀತಿ ಬಲವಂತವಾಗಿ ಸಂಭವಿಸುವ ಸಂಗತಿಯಲ್ಲ, ಪ್ರೀತಿ ಸ್ವಾಧೀನಪಡಿಸಿಕೊಳ್ಳಬಲ್ಲ ಸಂಗತಿ ಅಲ್ಲ, ಪ್ರೀತಿ ಯಾವ ರೀತಿಯಿಂದಲೂ ಕಸಿದುಕೊಳ್ಳಬಹುದಾದ ಸಂಗತಿ ಅಲ್ಲ. ಪ್ರೀತಿ, ಸಹಜ, ಸುಂದರ, ಜೀವಂತ ಯಾವಾಗ ನೀವು ಅದನ್ನ ಯಾವ ಬೇಡಿಕೆಯಿಲ್ಲದೇ ಕೊಡುತ್ತೀರೋ ಆಗ ಮಾತ್ರ, ಯಾವಾಗ ಅದು ಯಾವ ಕರಾರು ಇಲ್ಲದೆ ನಿಮ್ಮನ್ನ ಬಂದು ಸೇರುತ್ತದೆಯೋ ಆಗ ಮಾತ್ರ. ಯಾವಾಗ ಯಾವ ಬೇಡಿಕೆ, ಕರಾರು ಇಲ್ಲದೇ ನೀವು ಪ್ರೀತಿಯನ್ನು ಹಂಚುತ್ತೀರೋ ಅಥವಾ ಪ್ರೀತಿ ನಿಮ್ಮನ್ನು ಬಂದು ಸೇರುತ್ತದೆಯೋ ಆಗ ಅದು ಸಾವಿರಪಟ್ಟು ಅಪಾರವಾಗಿರುತ್ತದೆ.
ಆದ್ದರಿಂದ ಸಾಧ್ಯವಾದಷ್ಟು ಪ್ರೀತಿಯನ್ನು ಹಂಚಿ, ಆಗ ನಿಮ್ಮ ಊಹೆಗೂ ನಿಲುಕದಷ್ಟು ಪ್ರೀತಿ ನಿಮ್ಮನ್ನು ಬಂದು ಸೇರುತ್ತದೆ, ಇಡೀ ಅಸ್ತಿತ್ವ ಧಾರಾಕಾರವಾಗಿ ಪ್ರೀತಿಯನ್ನು ನಿಮಗೆ ಪ್ರದಾನ ಮಾಡುತ್ತದೆ. ಇದು ನಂಬಲು ಅಸಾಧ್ಯವಾದರೂ ಸತ್ಯ ಮಾತ್ರ.
ಯಾವ ಬೇಡಿಕೆ, ಒತ್ತಾಯವಿಲ್ಲದ ಪ್ರೀತಿಯ ಸನ್ನೆ ನಿಮ್ಮಿಂದ ಕಾಣಿಸಿದರೆ ಸಾಕು, ಕೇವಲ ಪ್ರೀತಿಗಾಗಿ ಪ್ರೀತಿ, ನಿಮಗೆ ಆಶ್ಚರ್ಯವಾಗಬಹುದು, ಅಸ್ತಿತ್ವದ ಸಾವಿರಾರು ಕಿಟಕಿಗಳು ಧೀಡೀರ್ ನೆ ನಿಮಗೆ ತೆರೆದುಕೊಳ್ಳುತ್ತವೆ, ಸೂರ್ಯ , ಮಳೆ, ಗಾಳಿ ನಿಮಗಾಗಿ ಹಾತೊರೆದು, ನಿಮ್ಮತ್ತ ಧಾವಿಸಿ ಬರುತ್ತವೆ.
ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ ಮಾತು ಹೇಳುತ್ತಾನೆ….
ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ
ವಾಪಸ್ ಪಡೆಯಲಾಗುವುದು.
ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ , ಪ್ರತಿಗಾಮಿ ಅನಿಸಬಹುದು. ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ
ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.
ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ
ಕಸಿದುಕೊಳ್ಳಲಾಗುವುದು.
ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.
ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.
ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.
—Ôshø—
Going All The Way
Darshan excerpt, Ch #23
pm in Chuang Tzu Auditorium
[_ via Bodhisattva Shree Amithaba
Subhuti _ ]

