ತೃಪ್ತಿಯ ಅಳತೆಗೋಲು : ಓಶೋ

ನಮ್ಮ ಬದುಕಿನ ಹಲವಾರು ಆಯಾಮಗಳು ನಮ್ಮ ಕೈಯ್ಯಲ್ಲಿಲ್ಲ, ನಾವು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದೇವೆ. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಆ್ಯಂಡ್ರ್ಯೂ ಕಾರ್ನೆಗಿ ತೀರಿಕೊಂಡಾಗ ಅವನು ಒಂದು ಬಿಲಿಯನ್ ಡಾಲರ್ ಆಸ್ತಿ ಬಿಟ್ಟು ಹೋಗಿದ್ದ. ತೀರಿಕೊಳ್ಳುವ ಎರಡು ದಿನಗಳ ಮುಂಚೆಯಷ್ಟೇ ಅವನ ಸೆಕ್ರೆಟರಿ ಸಾವಿನ ಹಾಸಿಗೆಯಲ್ಲಿದ್ದ ಆ್ಯಂಡ್ರ್ಯೂ ನ ಪ್ರಶ್ನೆ ಮಾಡಿದ್ದ, “ಒಂದು ಬಿಲಿಯನ್ ಡಾಲರ್ ಆಸ್ತಿ ಮಾಡಿದಿಯಲ್ಲಾ, ಇದು ನಿನಗೆ ತೃಪ್ತಿನಾ?”

“ತೃಪ್ತಿ? ಅತ್ಯಂತ ದುಃಖದಿಂದ ನಾನು ಸಾವಿನೆಡೆಗೆ ಪ್ರಯಾಣ ಮಾಡುತ್ತಿದ್ದೇನೆ. ಏಕೆಂದರೆ ಬದುಕಿನಲ್ಲಿ ನನ್ನ ಗುರಿ ೧೦ ಬಿಲಿಯನ್ ಡಾಲರ್ ಗಳಿಸುವುದಾಗಿತ್ತು, ಇನ್ನೊಂದು ಹತ್ತು ವರ್ಷ ಬದುಕಿದ್ದರೆ ಗಳಿಸಿಬಿಡುತ್ತಿದ್ದೆ ಕೂಡ”. ಆ್ಯಂಡ್ರ್ಯೂ ವಿಷಾದದಿಂದ ಉತ್ತರಿಸಿದ್ದ.

ಯಾರು ಹತ್ತು ಬಿಲಿಯನ್ ಡಾಲರ್ ಗಳ ಪ್ಲಾನ್ ಮಾಡಿಕೊಂಡಿದ್ದಾರೋ ಅವರಿಗೆ ಒಂದು ಬಿಲಿಯನ್ ಡಾಲರ್ ಸಮಾಧಾನ ತರುವುದು ಹೇಗೆ ಸಾಧ್ಯ? ಅದು ಅವರಿಗೆ ಒಂಭತ್ತು ಬಿಲಿಯನ್ ಡಾಲರ್ ಗಳ ನಷ್ಟ ಅಲ್ಲವೆ? ನೀವು ಒಂದು ಬಿಲಿಯನ್ ಡಾಲರ್ ಲಾಭದತ್ತ ನೋಡುತ್ತಿದ್ದರೆ ಆ್ಯಂಡ್ರ್ಯೂ ಒಂಭತ್ತು ಬಿಲಿಯನ್ ಡಾಲರ್ ಗಳ ಲುಕ್ಸಾನಿನ ಬಗ್ಗೆ ಯೋಚಿಸುತ್ತಿದ್ದಾನೆ. ಈಗ ಅವನು ಗಳಿಸಿದ್ದು ಅವನಿಗೆ ಲೆಕ್ಕವೇ ಇಲ್ಲ. ಹೀಗೆ ಶುರುವಾದ ಅಸಮಾಧಾನದ ಓಟ ಸಾವಿನವರೆಗೆ ಮುಂದುವರೆಯುತ್ತಲೇ ಇರುತ್ತದೆ.

ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ, “ಯಾಕೆ ಈ ಓಟ?” ನಿಮ್ಮ ಬಳಿ ಈ ಪ್ರಶ್ನೆಗೆ ಯಾವ ಉತ್ತರವೂ ಇಲ್ಲ. ನೀವು ಪ್ರಜ್ಞಾರಹಿತರಾಗಿದ್ದೀರಿ, ನೀವು ಯಾಕೆ ಓಡುತ್ತಿದ್ದೀರಿ ಎನ್ನುವ ಬಗ್ಗೆ ನಿಮಗೆ ಪ್ರಜ್ಞೆ ಇಲ್ಲ. ಎಲ್ಲಿಗೆ ಹೋಗುತ್ತಿದ್ದೀರಿ, ಯಾಕೆ ಹೋಗುತ್ತಿದ್ದೀರಿ ಎನ್ನುವ ಬಗ್ಗೆ ನಿಮಗೆ ತಿಳಿವಳಿಕೆ ಇಲ್ಲ. ಹೀಗೆ ಹೋಗದಿದ್ದರೆ ನೀವು ಏನು ಮಾಡುತ್ತಿದ್ದೀರಿ? ನಿಲ್ಲಿಸುತ್ತಿದ್ದಿರಾ? ಆದರೆ ನಿಲ್ಲಿಸುವುದು ಹೇಗೆ? ಯಾಕೆ ನಿಲ್ಲಿಸಬೇಕು? ನಿಲ್ಲಿಸುವುದರ ಬಗ್ಗೆ ಕೂಡ ನಿಮಗೆ ಏನೂ ಗೊತ್ತಿಲ್ಲ.

ಮನುಷ್ಯ ಮಾದಕ ದ್ರವ್ಯಗಳ ನಶೆಯಲ್ಲಿರುವಂತೆ ಬದುಕುತ್ತಾನೆ. ನಮ್ಮ ಬದುಕಿನ ಹಲವಾರು ಆಯಾಮಗಳು ನಮ್ಮ ಕೈಯ್ಯಲ್ಲಿಲ್ಲ, ನಾವು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದೇವೆ.

ಗುರ್ಜೇಫ್ ಹೇಳುತ್ತಿದ್ದ ನಾವು ಬಹುತೇಕ ನಿದ್ರಾ ನಡಿಗೆಯಲ್ಲಿದ್ದೇವೆ. ನಮ್ಮ ಕಣ್ಣುಗಳು ತೆರೆದುಕೊಂಡಿವೆ ನಿಜ, ಆದರೆ ನಮ್ಮ ನಿದ್ರೆ ಇನ್ನೂ ಮುಗಿದಿಲ್ಲ. ನಮ್ಮ ಕಣ್ಣುಗಳ ತುಂಬ ನಿದ್ದೆ ತುಂಬಿಕೊಂಡಿದೆ. ಏನೋ ಒಂದು ಘಟಿಸುತ್ತದೆ, ನಾವು ಅದನ್ನೇ ಮುಂದುವರೆಸುತ್ತೇವೆ, ಆದರೆ ಯಾಕೆ? ಯಾಕೆ ಎಂದು ಪ್ರಶ್ನಿಸುವುದಕ್ಕೆ ನಮಗೆ ಹೆದರಿಕೆ. ಏಕೆಂದರೆ ನಮ್ಮ ಬಳಿ ಯಾವ ಉತ್ತರವೂ ಇಲ್ಲ. ಇಂಥ ಪ್ರಶ್ನೆಗಳನ್ನು ಎತ್ತುವುದು ನಮ್ಮನ್ನು ಆಯಾಸಕ್ಕೆ ಗುರಿ ಮಾಡುತ್ತದೆ.


ಒಂದು ದಿನ ಇಬ್ಬರು ವ್ಯಕ್ತಿಗಳು ಓಡುತ್ತ ನಸ್ರುದ್ದೀನ್ ನ ಮನೆಗೆ ಬಂದರು.

“ ಯಾಕೆ ಏನಾಯ್ತು ? “ ಆ ಇಬ್ಬರನ್ನು ವಿಚಾರಿಸಿದ ನಸ್ರುದ್ದೀನ್.

“ ಮಾರ್ಕೇಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “

ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.

“ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
ನಸ್ರುದ್ದೀನ್.

“ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “

“ ನನ್ನ ಹಾಗೇ ಇತ್ತಾ ಅವನ ಗಡ್ಡ ? “

“ ಥೇಟ್ ನಿನ್ನ ಹಾಗೆ “

“ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “

“ ಪಿಂಕ್ ಕಲರ್ ಶರ್ಟ್ “

“ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “

ನಿಟ್ಟುಸಿರು ಬಿಟ್ಟ ನಸ್ರುದ್ದೀನ್.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.