ಯಾವ ಲಾಜಿಕ್ ಇಲ್ಲದ, ಯಾವ ಕಾರಣ ಇಲ್ಲದ ಸನಾಯಿ, ನನ್ನಂಥ ಹುಚ್ಚ ಮನುಷ್ಯ. ಆದರೆ ಏನು ಮಾಡುವುದು, ಇಂಥ ಜನರನ್ನ ಅವರು ಇರುವ ಹಾಗೆಯೇ ಸ್ವೀಕರಿಸಬೇಕಾಗುತ್ತದೆ. ಅವರನ್ನ ಪ್ರೀತಿಸಬಹುದು ಅಥವಾ ದ್ವೇಷಿಸಬಹುದು, ಸನಾಯಿಯಂಥವರ ಜೊತೆ ಪ್ರೀತಿ ಮತ್ತು ದ್ವೇಷದ ಹೊರತಾಗಿ ಬೇರೆ ಯಾವ ಪರ್ಯಾಯಗಳಿಲ್ಲ ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ಕಾರಣ’
ಭಾಷಣ ಮಾಡುತ್ತಿತ್ತು
” ಈ ಜಗತ್ತಿನಲ್ಲಿರೋದೆ ಆರು ದಿಕ್ಕುಗಳು
ಒಂದು ಹೆಚ್ಚಲ್ಲ, ಒಂದು ಕಡಿಮೆಯಲ್ಲ”
ಪ್ರೇಮ,
ಸುಮ್ಮನಿರಲಾಗದೇ ಬಾಯಿಬಿಟ್ಟಿತು,
” ಈ ಎಲ್ಲವನ್ನೂ ಮೀರಿದ
ದಾರಿಯೊಂದಿದೆ,
ನಾನು ಬೇಕಾದಷ್ಟು ಬಾರಿ
ಆ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದೇನೆ”
‘ಕಾರಣ’ ಕ್ಕೆ
ವ್ಯಾಪಾರಕ್ಕೊಂದು ದಾರಿ ಸಿಕ್ಕಿತು
ಆ ದಿಕ್ಕಿನಲ್ಲೊಂದು ಅಂಗಡಿ ಶುರುವಾಯಿತು.
ಆದರೆ
ಪ್ರೇಮದ ವ್ಯಾಪಾರದಲ್ಲಿ
ಚಲಾವಣೆಯಾಗುವ ಸಂಗತಿಗಳೇ ಬೇರೆ.
‘ಕಾರಣ’
ಅಂಗಡಿ ಮುಚ್ಚಲೇಬೇಕಾಯಿತು.
– ರೂಮಿ
ಸನಾಯಿ ತನ್ನ ಸುಂದರ ಹೇಳಿಕೆಗಳಿಂದಾಗಿ ನನಗೆ ಅತ್ಯಂತ ಪ್ರಿಯನಾಗಿದ್ಜಾನೆ. ಸನಾಯಿಯಂಥ ವ್ಯಕ್ತಿಗಳು ವಾದ ಮಾಡುವುದಿಲ್ಲ, ಅವರು ಸ್ಪಷ್ಟವಾಗಿ ಮಾತನಾಡುತ್ತ ಹೋಗುತ್ತಾರೆ. ತಮ್ಮ ಹೇಳಿಕೆಗಳನ್ನು ಬೆಂಬಲಿಸುವುದಕ್ಕಾಗಿ ಅವರು ಯಾವ ವಾದವನ್ನೂ ಮಂಡಿಸುವುದಿಲ್ಲ, ಅವರ ಬದುಕೇ ಅವರ ಮಾತುಗಳಿಗೆ, ಹೇಳಿಕೆಗಳಿಗೆ ಸಾಕ್ಷಿಯಂತಿದೆ. ಬನ್ನಿ ನನ್ನ ಕಣ್ಣುಗಳಲ್ಲಿ ನೋಡಿ, ಅಲ್ಲಿ ನಿಮಗೆ ಯಾವ ವಾದವೂ ಸಿಗುವುದಿಲ್ಲ, ಅಲ್ಲಿರುವುದು ಒಂದು ಸ್ಪಷ್ಟ ಹೇಳಿಕೆ ಮಾತ್ರ. ಹೇಳಿಕೆ ಬಹುತೇಕ ಸತ್ಯ, ಆದರೆ ವಾದ ಅಪರೂಪಕ್ಕೆ ಮಾತ್ರ.
ಸನಾಯಿ ಜೊತೆಗೆ ನನ್ನದು ಒಂದು ಬಗೆಯ ಪ್ರೇಮ ಸಂಬಂಧ. ನಾನು ಬಯಸಿದರೂ ಅವನ ಬಗ್ಗೆ ಅತಿಶಯೋಕ್ತಿಯಿಂದ ಮಾತನಾಡುವುದು ನನಗೆ ಸಾಧ್ಯವಾಗುವುದಿಲ್ಲ. ಸನಾಯಿ, ಸೂಫಿಸಂ ನ ತಿರುಳು ಇದ್ದ ಹಾಗೆ. ತಸವುಫ್ ಗೆ ಇಂಗ್ಲೀಷ್ ನಲ್ಲಿ ಸೂಫಿಸಂ ಎಂದು ಕರೆಯಲಾಗುತ್ತದೆ. ತಸವುಫ್ ಎಂದರೆ ‘ಶುದ್ಧ ಪ್ರೇಮ’. ಸೂಫಿಸಂ ನಲ್ಲಿ ಸೂಫಿ ಎಂದರೆ ಉಣ್ಣೆ ಮತ್ತು ಸೂಫಿ ಎಂದರೆ ಉಣ್ಣೆಯ ದಿರಿಸನ್ನು ಧರಿಸಿದವ.
ಸನಾಯಿ ಯಾವಾಗಲೂ ಕಪ್ಪು ಬಣ್ಣದ ಟೊಪ್ಪಿಗೆ ಧರಿಸುತ್ತಿದ್ದ. ಬಿಳಿಯ ದಿರಿಸಿನ ಮೇಲೆ ಕಪ್ಪು ಟೊಪ್ಪಿಗೆ. ಯಾವ ಲಾಜಿಕ್ ಇಲ್ಲದ, ಯಾವ ಕಾರಣ ಇಲ್ಲದ ಸನಾಯಿ, ನನ್ನಂಥ ಹುಚ್ಚ ಮನುಷ್ಯ. ಆದರೆ ಏನು ಮಾಡುವುದು, ಇಂಥ ಜನರನ್ನ ಅವರು ಇರುವ ಹಾಗೆಯೇ ಸ್ವೀಕರಿಸಬೇಕಾಗುತ್ತದೆ. ಅವರನ್ನ ಪ್ರೀತಿಸಬಹುದು ಅಥವಾ ದ್ವೇಷಿಸಬಹುದು, ಸನಾಯಿಯಂಥವರ ಜೊತೆ ಪ್ರೀತಿ ಮತ್ತು ದ್ವೇಷದ ಹೊರತಾಗಿ ಬೇರೆ ಯಾವ ಪರ್ಯಾಯಗಳಿಲ್ಲ. ಅವರನ್ನ ಸ್ವೀಕರಿಸಬಹುದು ಅಥವಾ ವಿರೋಧಿಸಬಹುದು ಆದರೆ ನಿರ್ಲಕ್ಷಿಸುವುದಂತೂ ಸಾಧ್ಯವಿಲ್ಲ. ಇದು ಅನುಭಾವಿಗಳ ಜೊತೆಗಿನ ಪವಾಡ. ಇವರ ಸಂಪರ್ಕಕ್ಕೆ ಬಂದವರಿಗೆ ಗೆಳೆಯ ಅಥವಾ ವೈರಿಯಾಗದೇ ಬೇರೆ ದಾರಿಯೇ ಇಲ್ಲ. ಒಮ್ಮೊಮ್ಮೆ ಇವರು ಪದ್ಯವನ್ನು ಕೂಡ ರಚಿಸಿಬಿಡುತ್ತಾರೆ, ಹುಚ್ಚರಿಗೆ ಯಾವುದು ತಾನೇ ಅಸಾಧ್ಯ?.
ಸನಾಯಿ ನೇರವಾಗಿ ಮಾತನಾಡುತ್ತಾನೆ ತನ್ನ ಮಾತಿಗೆ ಬೆಂಬಲವಾಗಿ ಅವನು ಯಾವ ವಾದವನ್ನೂ ಮಂಡಿಸುವುದಿಲ್ಲ. ಯಾಕೆ ಹೀಗೆ ಎಂದು ನೀವು ಕೇಳುವ ಹಾಗಿಲ್ಲ.
ಸನಾಯಿ ಹೇಳುತ್ತಾನೆ…
“ಬಾಯಿ ಮುಚ್ಚು! ಯಾಕೆ ಎನ್ನುವುದು ಇಲ್ಲವೇ ಇಲ್ಲ”.
ನೀವು ಗುಲಾಬಿಯನ್ನ “ಯಾಕೆ?” ಎಂದು ಕೇಳುವುದಿಲ್ಲ.
ಹಿಮಕ್ಕೆ ನೀವು “ಯಾಕೆ?” ಎಂದು ಕೇಳುವುದಿಲ್ಲ.
ನಕ್ಷತ್ರಗಳಿಗೆ ನೀವು “ಯಾಕೆ?” ಎಂದು ಕೇಳುವುದಿಲ್ಲ.
ಆದರೆ ಸನಾಯಿ ಗೆ ಯಾಕೆ “ಯಾಕೆ?” ಎನ್ನುವ ಪ್ರಶ್ನೆ?
ಸನಾಯಿ, ಗುಲಾಬಿ, ಹಿಮ, ನಕ್ಷತ್ರಗಳ ಜಗತ್ತಿನವ.
ವಾದ ಅವನಿಂದ ಸಾಧ್ಯವೇ ಇಲ್ಲ.
ನನಗೆ ಸನಾಯಿ ಎಂದರೆ ಪ್ರೀತಿ. ಸನಾಯಿ ಯ ಬಗ್ಗೆ ನಾನು ಜಾಸ್ತಿ ಮಾತನಾಡುವುದಿಲ್ಲ ಏಕೆಂದರೆ, ಅವನನ್ನು ನಾನು ನನಗೆ ಮಾತ್ರ ಮೀಸಲಾಗಿಟ್ಟುಕೊಳ್ಳಲು ಬಯಸುತ್ತೇನೆ, ನನ್ನ ಹೃದಯದಲ್ಲಿ.

