ಹಾಗೆ ನೋಡಿದರೆ ನಿಜವಾದ ಕಲಿಕೆ ಇರುವುದೇ ಕಲಿತದ್ದೆಲ್ಲ ಮರೆಯುವುದರಲ್ಲಿ. ಮುಕ್ತಿ ಅಂದರೆ ಎಲ್ಲ ಅವಲಂಬನೆಗಳನ್ನೂ ಕಳಚಿಕೊಂಡು ಆತ್ಮಕ್ಕೆ ಮರಳುವುದು. ಇದನ್ನು ಅರಿಯುವುದೇ ಕಲಿಕೆ. ಕಲಿತ ನಂತರ ಆತ್ಮಕ್ಕೆ ಮರಳುವಾಗ ‘ಎಲ್ಲ ಜಾಣತನಗಳನ್ನೂ ಮರೆಯುತ್ತ ಮುಗ್ಧರಾಗುವುದು’ ನಿತ್ಯಾನಂದ ಸ್ಥಿತಿಯನ್ನು ಹೊಂದುವ ಪ್ರಕ್ರಿಯೆ… । ಚೇತನಾ ತೀರ್ಥಹಳ್ಳಿ
ಕಣೇ ‘ಲಾ,
ದಾರಿ ತುಳಿಯುವ ಉದ್ದೇಶ -
ಹೋಗುವುದೋ ಬರುವುದೋ ಅಲ್ಲ.
ಮುಟ್ಟುವುದು, ಮರಳುವುದು ಕೂಡಾ ಅಲ್ಲ.
ದಾರಿ ತುಳಿಯುವ ಉದ್ದೇಶ -
ತಲುಪಿಕೊಳ್ಳುವುದು;
ಎಲ್ಲಿಗಾದರೂ.
ದಾವೋ ಅಂದರೆ ಚೀನೀ ಭಾಷೆಯಲ್ಲಿ ದಾರಿ ಎಂದರ್ಥ. ಅಧ್ಯಾತ್ಮ ಚಿಂತನೆಯಲ್ಲಿ ದಾರಿ ಒಂದು ಅತ್ಯುನ್ನತ ರೂಪಕ.
ದಾರಿ ಈಗಾಗಲೇ ಹಲವರು ನಡೆದ ಮೂಡಿಸಿಟ್ಟ ನೆಲದ ಗುರುತೂ ಆಗಿರಬಹುದು, ಮೊದಲಿಗರು ನಡೆಯುತ್ತ ನಡೆಯುತ್ತ ರೂಪುಗೊಂಡಿದ್ದೂ ಆಗಿರಬಹುದು. ಮತ್ತು ದಾರಿ ಯಾವತ್ತೂ ಎಲ್ಲಿಗೋ ಕೊಂಡೊಯ್ಯುವುದೇ ಆಗಬೇಕಿಲ್ಲ, ಅದು ಮರಳಿಸುವುದೂ ಆಗಿರಬಹುದು. ಅಲ್ಲ… ದಾರಿ ಏಕಕಾಲಕ್ಕೆ ಕೊಂಡೊಯ್ಯುವುದೂ ಮರಳಿಸುವುದೂ ಆಗಿರುವುದು. ಅಲ್ಲ, ಹಾಗೂ ಅಲ್ಲ… ದಾರಿ ತನ್ನಷ್ಟಕ್ಕೆ ತಾನು ಇರುವುದು, ನಾವು ಅದರ ಮೂಲಕ ಒಂದೋ ಹೋಗಿ ತಲುಪುವೆವು ಅಥವಾ ಬಂದು ಸೇರಿಕೊಳ್ಳುವೆವು.
ದಾರಿಯ ಮೂಲಕ ನಾವು ಮುಕ್ತಿಯ ಗುರಿ ಮುಟ್ಟಬಹುದು. ದಾರಿಯ ಮೂಲಕ ನಾವು ನಮ್ಮ ನಿಜಧಾಮಕ್ಕೆ, ಅಂದರೆ ನಮ್ಮ ಆತ್ಮಕ್ಕೆ ಮರಳಬಹುದು. ಮುಕ್ತಿಯ ಕಡೆ ಇಡುವ ಹೆಜ್ಜೆಗಳು ಲರ್ನಿಂಗ್. ಆತ್ಮದತ್ತ ಹಿಂತಿರುಗುವ ಹೆಜ್ಜೆಗಳು ಅನ್ ಲರ್ನಿಂಗ್. ಒಂದು ದಾರಿಯಲ್ಲಿ ಕಲಿಯುವುದು, ಒಂದು ದಾರಿಯಲ್ಲಿ ಕಲಿತದ್ದೆಲ್ಲ ಮರೆಯುವುದು.
ಹಾಗೆ ನೋಡಿದರೆ ನಿಜವಾದ ಕಲಿಕೆ ಇರುವುದೇ ಕಲಿತದ್ದೆಲ್ಲ ಮರೆಯುವುದರಲ್ಲಿ. ಮುಕ್ತಿ ಅಂದರೆ ಎಲ್ಲ ಅವಲಂಬನೆಗಳನ್ನೂ ಕಳಚಿಕೊಂಡು ಆತ್ಮಕ್ಕೆ ಮರಳುವುದು. ಇದನ್ನು ಅರಿಯುವುದೇ ಕಲಿಕೆ. ಕಲಿತ ನಂತರ ಆತ್ಮಕ್ಕೆ ಮರಳುವಾಗ ‘ಎಲ್ಲ ಜಾಣತನಗಳನ್ನೂ ಮರೆಯುತ್ತ ಮುಗ್ಧರಾಗುವುದು’ ನಿತ್ಯಾನಂದ ಸ್ಥಿತಿಯನ್ನು ಹೊಂದುವ ಪ್ರಕ್ರಿಯೆ.
ಅದು ಯಾವುದೇ ಆಗಿರಲಿ, ಪ್ರತಿಯೊಂದು ದಾರಿಯೂ ಏಕಕಾಲಕ್ಕೆ ಎರಡು ಸಾಧ್ಯತೆಗಳನ್ನು ಹೊಂದಿರುವವು, ಮೇಲೆ ಹೇಳಿದಂತೆ. ಪರಿಣಾಮಗಳು ನಮ್ಮ ನಮ್ಮ ಆಯ್ಕೆಯ ಮೇಲೆ ಅವಲಂಬಿತವಷ್ಟೇ. ಆಧ್ಯಾತ್ಮಿಕ – ಧಾರ್ಮಿಕ ಪಥಗಳಿಗೂ ಈ ಮಾತು ಅನ್ವಯ. ಯಾವುದೇ ಧರ್ಮ, ಮತ, ಪಂಥವನ್ನು ಯಾರೂ ಕೇಡಾಗಲೆಂದು ಕಟ್ಟಿರುವುದಿಲ್ಲ. ಕಟ್ಟಿದ ದಾರಿಯಲ್ಲಿ ನಡೆವವರ ಕಣ್ಣು ಅಂಗಾಲಿನಲ್ಲೋ ನೆತ್ತಿಯ ಮೇಲೋ… ಅಥವಾ ಇರಬೇಕಾದ್ದಲ್ಲೇ ಇವೆಯೋ ಅನ್ನುವುದರ ಮೇಲೆ ಒಳಿತು – ಕೆಡುಕು ನಿರ್ಧಾರವಾಗೋದು.
ಚೀನೀ ಅಧ್ಯಾತ್ಮ ಪಥಿಕ ಲಾವೋ ಜಿ ತನ್ನ ಚಿಂತನೆಗಳಿಗೆ ದಾವೋ ಎಂದು ಹೆಸರಿಡುವಾಗ ಅದು ಅವನು ರೂಪಿಸಿಕೊಂಡ ದಾರಿ ಅನ್ನುವ ಅರ್ಥದಲ್ಲೇ ಇರಿಸಿದ್ದ. ಅವನಿಗೆ ಅದನ್ನು ಮತ್ತೊಬ್ಬರಿಗೆ ದಾಟಿಸುವ ಇರಾದೆಯೇ ಇರಲಿಲ್ಲ. ಒತ್ತಾಯಕ್ಕೆ ಕಟ್ಟುಬಿದ್ದು ತನ್ನ ಕಾಣ್ಕೆಗೊಂದು ಹೆಸರು ಕೊಟ್ಟ. ರಾಜಕಾರಣ ತುಂಬಿದ ಸಾಮ್ರಾಜ್ಯದ ಸಹವಾಸವೇ ಬೇಡವೆಂದು ಕದ್ದುಮುಚ್ಚಿ ಹೊರಟವನನ್ನು ಸೈನಿಕರು ತಡೆದು ನಿಲ್ಲಿಸಿ, ಒತ್ತಾಯವಾಗಿ ಅವನಿಂದ ಬೋಧನೆ ಪಡೆದರೆಂದು ಹೇಳಲಾಗುತ್ತದೆ. ‘ಲಿ’ ಉಪನಾಮದ ಹಿರಿಯ ಚಿಂತಕ, ಗುರು ತನ್ನ ಪರಿಚಯ ಕೇಳಿದಾಗ ‘ಲಾವೋಜಿ’ ಅಂದಿದ್ದ. ಲಾವೋ – ಒಂದಕ್ಷರ, ಇದರ ಅರ್ಥ ವೃದ್ಧ ಎಂದು. ಜಿ – ಒಂದಕ್ಷರ, ಇದರ ಅರ್ಥ ಮಗು ಎಂದು! ಲಾವೋಜಿಯ ಹೆಸರಲ್ಲೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿದ ಎರಡು ಸಂಗತಿಗಳಿವೆ ನೋಡಿ. ಬಹುಶಃ ಆತ ತನ್ನ ಚಿಂತನೆಯನ್ನು ‘ದಾವೋ’ ಎಂದೂ, ತನ್ನ ಹೆಸರನ್ನು ‘ಲಾವೋಜಿ’ ಎಂದು ಹೇಳಿಕೊಂಡಿದ್ದರ ಹಿಂದೆ ತಾತ್ವಿಕ ಕಾರಣ ಇದ್ದಿರಲೇಬೇಕು. ಲಾವೋಜಿ ಅಂದರೆ ವೃದ್ಧ ಗುರು ಅನ್ನುವ ಅರ್ಥವೂ ಇದೆ. ಆದರೆ ಲಿ ತನ್ನನ್ನು ಹಾಗೆ ಕರೆದುಕೊಂಡಿದ್ದು ಈ ಸರಳಾರ್ಥದಲ್ಲಿ ಅಲ್ಲ ಅಂದುಕೊಳ್ಳಲು ಸಾಕಷ್ಟು ಕಾರಣಗಳಿವೆ.
ಲಾವೋಜಿಯ ದಾವೋ ಪೂರ್ವದ ಬೌದ್ಧ ಚಿಂತನೆಯ ಶಾಖೆ ಎಂದೇ ಮನ್ನಣೆ ಪಡೆದಿದೆ. ಚೀನೀ ಭಾಷೆಯಲ್ಲಿ ಇನ್ನೊಂದು ‘ದಾವೋ’ ಇದೆ. ಇದು ‘ದಾ-ವೋ’. ಇಲ್ಲಿ ದಾ ಅಂದರೆ ‘ದೊಡ್ಡದು’, ವೋ ಅಂದರೆ ‘ನಾನು’. ದಾವೋ ಅಂದರೆ ಒಟ್ಟರ್ಥ ಗ್ರೇಟರ್ ಸೆಲ್ಫ್ – ನನ್ನ ಮಹತ್ತರ ಅಥವಾ ಅಖಂಡ ಸ್ವರೂಪ. ಈ ದಾವೋ ಅನ್ನು ಬೌದ್ಧ ಚಿಂತನೆಯ ಪದ ಎಂದೇ ಗುರುತಿಸುತ್ತದೆ ಚೀನೀ ನಿಘಂಟು. ನಾನು ನೋಡಿದೆ, ನಾನು ಮಾಡಿದೆ, ನಾನು ಅರಿತೆ, ನಾನು ಮರೆತೆ ಇತ್ಯಾದಿ ನಾನುಗಳಿಂದ ಮುಕ್ತವಾದ; ಕೇವಲ ನಾನಲ್ಲದ, ಎಲ್ಲರನ್ನೂ ಒಳಗೊಂಡ ಅಖಂಡವಾದ ನಾನು (ಆತ್ಮ) ಅನ್ನುವ ಅರಿವು ಹೊಂದಿದ ವ್ಯಕ್ತಿ ಅಥವಾ ಪ್ರಕ್ರಿಯೆಯೇ ಈ ದಾವೋ. ಜ್ಞಾನೋದಯ ಹೊಂದಿದ ವ್ಯಕ್ತಿ ತನ್ನನ್ನು ತಾನು ಸಂಬೋಧಿಸಿಕೊಳ್ಳುವ ಪದ ಇದು. ನಮ್ಮ ದೇಶದ ಆಧ್ಯಾತ್ಮಿಕ ಪರಂಪರೆಯಲ್ಲಿ ಸಾಧಕರು “ಈ ದೇಹ…” “ಈ ರಾಮ…” ಇತ್ಯಾದಿ ತಮ್ಮನ್ನು ಕರೆದುಕೊಳ್ಳುತ್ತಿದ್ದ ಹಾಗೆ ಇದೂ.
ಒಂದೇ ರೀತಿ ಧ್ವನಿಸುವ ಎರಡು ಪದಗಳು, ಲಿಖಿತ ರೂಪದಲ್ಲಿ ಸಂಪೂರ್ಣ ಭಿನ್ನ, ಅರಿವಿನಲ್ಲಿ ಎಷ್ಟೊಂದು ಹತ್ತಿರ! ಲಾವೋಜಿ ಕಟ್ಟಿಕೊಟ್ಟ ದಾವೋದಲ್ಲಿ (ದಾರಿಯಲ್ಲಿ) ವ್ಯಕ್ತಿಯ ಅಖಂಡ ಸ್ವರೂಪ (ದಾ-ವೋ) ಕಾಣುವುದು. ಕಂಡ ಕೂಡಲೇ ದಾರಿ ಅಖಂಡದ ಅರಿವಿನಲ್ಲಿ ಅಳಿಸಿಹೋಗುವುದು.
ಈ ಅಳಿಸುವಿಕೆಯೇ, ಲೀನಗೊಂಡು ಮುಕ್ತವಾಗುವಿಕೆಯೇ ಅನ್’ಲರ್ನಿಂಗ್. ಇದೇ ದಾರಿಯ ಆತ್ಯಂತಿಕ ಗುರಿಯಾದ ಮರಳುವಿಕೆ.

