ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅಂತಾರಲ್ಲ; ಹಾಗೇ ಇದು. ಆ ಪೈಲ್ವಾನನಿಗೆ ಹಚ್ಚೆ ಹಾಕಿಸಿಕೊಳ್ಬೇಕು ಅಂತ ಆಸೆ, ಆದ್ರೆ ನೋವು ತಿನ್ನಲು ತಯಾರಿಲ್ಲ! ಅಂಥವನು ಸಿಂಹದ ಹಚ್ಚೆ ಹಾಕಿಸ್ಕೊಳೋಕೆ ಹೊರಟ. ಆಗೇನಾಯ್ತು ಗೊತ್ತಾ? ರೂಮಿ ಹೇಳ್ತಾನೆ ಕೇಳಿ! । ಮಸ್ನವಿ ಇಂದ, ಕನ್ನಡ ನಿರೂಪಣೆ: ಚೇತನಾ ತೀರ್ಥಹಳ್ಳಿ
ಪರ್ಶಿಯಾದ ಮಧ್ಯ ಪ್ರಾಂತ್ಯದಲ್ಲಿ ಕಾಜ್ವಿನ್ ಹೆಸರಿನ ಪಟ್ಟಣವೊಂದಿದೆ. ಅಲ್ಲಿ ಎಲ್ಲ ಕುಸ್ತಿಪಟುಗಳೂ ಹಚ್ಚೆ ಹಾಕಿಸಿಕೊಳ್ಳುವುದು ಸಂಪ್ರದಾಯ.
ಆ ಪಟ್ಟಣದಲ್ಲಿ ಒಬ್ಬ ವ್ಯಕ್ತಿಗೆ ಇದ್ದಕ್ಕಿದ್ದಂತೆ ತಾನೂ ಹಚ್ಚಿ ಹಾಕಿಸಿಕೊಳ್ಳಬೇಕು ಅನ್ನುವ ಹುಕಿ ಶುರುವಾಯ್ತು. ಅವನೇನೂ ಪೈಲ್ವಾನನಲ್ಲ. ಆದರೂ ಹಚ್ಚೆ ಹಾಕಿಸಿಕೊಳ್ಳೋದು ಧೀರತನದ ಸಂಕೇತವೆಂದು ಅವನು ಭಾವಿಸಿದ್ದ. ಅದಕ್ಕಾಗಿ ಪೊಳ್ಳು ಪೈಲ್ವಾನನಂತೆ ದಾಪುಗಾಲು ಹಾಕುತ್ತಾ ಸಾರ್ವಜನಿಕ ಹಮಾಮ್ ಬಳಿ ಇರುತ್ತಿದ್ದ ಹಚ್ಚೆ ಕಲಾವಿದನ ಬಳಿ ಹೋದ. ತನ್ನ ತೋಳು ಮುಂದೆ ಮಾಡುತ್ತಾ “ನನ್ನ ಶೌರ್ಯಕ್ಕೆ ಸರಿಹೊಂದುವಂಥ ಹಚ್ಚೆ ಹಾಕು” ಅಂದ.
ಹಚ್ಚೆ ಕಲಾವಿದ ಅವನ ತೋಳು ಮುಟ್ಟಿ ನೋಡುತ್ತಾ, “ನಿನಗೆ ಯಾವ ಚಿತ್ರ ಬೇಕು? ಸಿಂಹ ಆದೀತೋ?” ಕೇಳಿದ. ಅದಕ್ಕವನು ತನ್ನ ಗಡ್ಡ ನೀವುತ್ತಾ, “ನನ್ನ ರಾಶಿ ಸಿಂಹ ರಾಶಿ. ಸಿಂಹದ ಚಿತ್ರವನ್ನೇ ಬಿಡಿಸು. ಕಡು ನೀಲಿ ಬಣ್ಣ ಹಾಕಿ ಚೆನ್ನಾಗಿ ಬಿಡಿಸು” ಅಂದ. ಅವನ ದನಿಯಲ್ಲಿ ಪೊಳ್ಳು ಪ್ರತಿಷ್ಠೆ ಢಾಳಾಗಿ ತೋರುತ್ತಿತ್ತು.
ಹಚ್ಚೆ ಕಲಾವಿದ ಸೂಜಿಯನ್ನು ಶಾಯಿಯಲ್ಲಿ ಅದ್ದಿ ತನ್ನ ಕೆಲಸ ಶುರು ಮಾಡಿದ. ಅವನಿನ್ನೂ ಎರಡು ಸಲ ಚುಚ್ಚಿದ್ದಷ್ಟೇ, ಆಗಲೇ ಆ ವ್ಯಕ್ತಿ ಸೂಜಿಯ ಉರಿ ಸಹಿಸದಾದ. ಬೇಡವೆನ್ನಲು ಪ್ರತಿಷ್ಠೆ ಬಿಡುತ್ತಿಲ್ಲ. ಸಂಭಾಳಿಸಿಕೊಂಡು ಕೇಳಿದ, “ಸಿಂಹದ ಯಾವ ಭಾಗ ಬಿಡಿಸ್ತಾ ಇದ್ದೀಯ?”
“ನಾನು ಬಾಲದಿಂದ ಶುರು ಮಾಡಿದ್ದೀನಿ” ಕಲಾವಿದನೆಂದ.
“ಬೇಡ. ಬಾಲವನ್ನು ಹಾಗೇ ಬಿಡು. ಬೇರೆ ಎಲ್ಲಿಂದಾದರೂ ಶುರು ಮಾಡು” ಆ ಪೊಳ್ಳು ಪೈಲ್ವಾನ್ ಹೇಳಿದ.
ಕಲಾವಿದ ಮತ್ತೆ ತನ್ನ ಕೆಲಸ ಶುರುವಿಟ್ಟ. ಆದರೆ ಈ ಸಲವೂ ಎರಡನೇ ಸಲ ಚುಚ್ಚುವ ಹೊತ್ತಿಗೆ ಪೊಳ್ಳು ಪೈಲ್ವಾನ್ ನೋವಿನಿಂದ ಕೂಗೇ ಬಿಟ್ಟ. “ತಾಳು, ಯಾವ ಭಾಗ ಬಿಡಿಸ್ತಾ ಇದ್ದೀಯ?”
“ಸಿಂಹದ ಕಿವಿ ಬಿಡಿಸ್ತಾ ಇದ್ದೀನಿ”
“ಬೇಡ. ಕಿವಿಯನ್ನು ಹಾಗೇ ಬಿಡು. ಬೇರೆ ಎಲ್ಲಿಂದಾದರೂ ಶುರು ಮಾಡು” ಈ ಸಲವಂತೂ ಅವನ ಕಣ್ಣಲ್ಲಿ ನೀರು ತುಂಬಿಹೋಗಿತ್ತು.
ಹಚ್ಚೆ ಕಲಾವಿದ ನಿಟ್ಟುಸಿರು ಬಿಡುತ್ತಾ ಮತ್ತೆ ತನ್ನ ಕೆಲಸ ಶುರು ಮಾಡಿದ. ಈ ಸಲವೂ ಅದೇ ಕತೆ.
“ಯಾವ ಭಾಗ ಬಿಡಿಸ್ತಾ ಇದ್ದೀಯ?”
“ಸಿಂಹದ ಹೊಟ್ತೆ ಬಿಡಿಸ್ತಾ ಇದ್ದೀನಿ”
“ನಿನಗೇನು ತಲೆ ಕೆಟ್ಟಿದೆಯಾ? ಸಿಂಹಕ್ಕೆ ಹೊಟ್ಟೆ ಯಾಕೆ ಬೇಕು? ಬೇರೆ ಏನಾದ್ರೂ ಬಿಡಿಸು”
ಪೊಳ್ಳು ಪೈಲ್ವಾನ ಅಳು ದನಿಯಲ್ಲಿ ಹೇಳಿದ.
ಹಚ್ಚೆ ಕಲಾವಿದನಿಗೆ ಸಿಟ್ಟೇ ಬಂತು. “ಅದೆಂಥ ಸಿಂಹದ ಹಚ್ಚೆ ಬೇಕು ನಿಂಗೆ? ಬಾಲವಿಲ್ಲದ, ಕಿವಿಯಿಲ್ಲದ, ಹೊಟ್ಟೆಯಿಲ್ಲದ ಸಿಂಹವನ್ನ ಯಾವ ದೇವರೂ ಸೃಷ್ಟಿ ಮಾಡಿಲ್ಲ. ತೆಪ್ಪಗೆ ಹೊರಡು ಇಲ್ಲಿಂದ” ಅನ್ನುತ್ತಾ ತನ್ನ ಸೂಜೆ ನೆಲಕ್ಕೆ ಬಿಸಾಡಿದ.
ಪೊಳ್ಳು ಪೈಲ್ವಾನ ಏನಾದರೂ ಹೇಳಲು ಬಾಯಿ ತೆರೆಯುವ ಮೊದಲೇ ಹಚ್ಚೆಯವ ತೋಳೇರಿಸಿ ಅವನ ಕುತ್ತಿಗೆಗೆ ಕೈ ಹಾಕಿ ಹಮಾಮಿನಿಂದ ಹೊರಗೆ ತಳ್ಳಿಯೂಬಿಟ್ಟ.
ಪೊಳ್ಳು ಪೈಲ್ವಾನನ ಸುಳ್ಳು ಪ್ರತಿಷ್ಠೆ ಹೊರಗಿನ ಚಳಿಯಲ್ಲಿ ನಡುಗುತ್ತಾ ಬಾಲ ಮುದುರಿಕೊಂಡಿತು.

