ತುಂಟ ಝೆನ್ ಚಿತ್ರಕಾರನ ಕಲ್ಪನೆಯಲ್ಲರಳಿದ ‘ಮೂಲಂಗಿಯ ಪರಿನಿರ್ವಾಣ’!

ಜಕುಚೆಯ ಇತಿವೃತ್ತಾಂತ ಓದಿದರೆ, ಈತ ಸತ್ವತಃ ತುಂಟತನದ ವ್ಯಕ್ತಿ ಅನಿಸುತ್ತದೆ. ಚಿಕ್ಕವನಿದ್ದಾಗಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಈತನಿಗೆ ಅದರಲ್ಲೇ ತರಬೇತಿ ಕೊಡಿಸಲು ಶಾಲೆಗೆ ಹಾಕಲಾಗಿತ್ತು. ಆದರೆ ಜಕುಚೆ ಗೋಡೆಗಳ ನಡುವೆ ಕೂತು ಕಲಿಯಲಾಗದೆ ಎದ್ದು ಬಂದ. ಇವನ ಅಪ್ಪನದೊಂದು ದಿನಸಿ ಅಂಗಡಿ ಇತ್ತು. ಅಲ್ಲಿ ಅವರಿಗೆ ಸಹಾಯ ಮಾಡುತ್ತಲೇ ಚಿತ್ರಾಭ್ಯಾಸ ಮಾಡತೊಡಗಿದ. ಈತನಿಗೆ ಝೆನ್ – ಬೌದ್ಧ ಧರ್ಮದ ಪರಿಚಯವಾಗಿದ್ದು ರಿಂಜಾಯ್ ಪಂಥದ ಸನ್ಯಾಸಿ ಕೆಂಜೋನಿಂದ. । ಚೇತನಾ ತೀರ್ಥಹಳ್ಳಿ

ಇಟೋ ಜಕುಚೆ, 17 – 18ನೇ ಶತಮಾನದಲ್ಲಿ ಜಪಾನಿನಲ್ಲಿ ಆಗಿಹೋದ ಚಿತ್ರ ಕಲಾವಿದ. ಚೀನಾ ದೇಶದ ಪರಂಪರೆಯಿಂದ ಪ್ರಭಾವಿತಗೊಂಡ ಝೆನ್ ಬೌದ್ಧೀಯತೆಯ ಪ್ರತಿಪಾದನೆ ಮತ್ತು ಝೆನ್ ಶೈಲಿಯ ಚಿತ್ರ ರಚನೆ ಈತನ ವೈಶಿಷ್ಟ್ಯ.

ಝೆನ್ ಪರಂಪರೆಯಲ್ಲಿ ಅರಿವಿಗೆ, ಧ್ಯಾನಕ್ಕೆ, ನಿಯಮಗಳಿಗೆ ಎಷ್ಟು ಮಹತ್ವ ಇದೆಯೋ ಹಾಸ್ಯಕ್ಕೆ, ನಗುವಿಗೆ, ತುಂಟತನಕ್ಕೂ ಅಷ್ಟೇ ಮಹತ್ವವಿದೆ.

ಜಪಾನ್ ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಕಾರರಲ್ಲಿ ಒಬ್ಬನೆಂದು ದಾಖಲಾಗಿದ್ದಾನೆ ಜಕುಚೆ. ಝೆನ್ ಇಂಕ್ ಚಿತ್ರ ಶೈಲಿಯ ಅತ್ಯುತ್ಕೃಷ್ಟ ಕಲಾಕೃತಿಗಳಲ್ಲಿ ಈತ ರಚಿಸಿದ ಕಪ್ಪೆ, ಹುಂಜಗಳು ಮತ್ತು ಕೀಟಗಳ ಚಿತ್ರ ಇಂದಿಗೂ ಅಧ್ಯಯನ ವಸ್ತುಗಳಾಗಿವೆ. ಕಲಿಕೆಗೆ, ಅಭ್ಯಾಸಕ್ಕೆ ಮಾದರಿಗಳಾಗಿವೆ.

ಜಕುಚೆಯ ಇತಿವೃತ್ತಾಂತ ಓದಿದರೆ, ಈತ ಸತ್ವತಃ ತುಂಟತನದ ವ್ಯಕ್ತಿ ಅನಿಸುತ್ತದೆ. ಚಿಕ್ಕವನಿದ್ದಾಗಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಈತನಿಗೆ ಅದರಲ್ಲೇ ತರಬೇತಿ ಕೊಡಿಸಲು ಶಾಲೆಗೆ ಹಾಕಲಾಗಿತ್ತು. ಆದರೆ ಜಕುಚೆ ಗೋಡೆಗಳ ನಡುವೆ ಕೂತು ಕಲಿಯಲಾಗದೆ ಎದ್ದು ಬಂದ. ಇವನ ಅಪ್ಪನದೊಂದು ದಿನಸಿ ಅಂಗಡಿ ಇತ್ತು. ಅಲ್ಲಿ ಅವರಿಗೆ ಸಹಾಯ ಮಾಡುತ್ತಲೇ ಗೋದಾಮಿನ ತರಕಾರಿಗಳು, ರಸ್ತೆಯಲ್ಲಿ ಓಡಾಡುವ ಹುಂಜಗಳು, ಹಿತ್ತಲಲ್ಲಿ ಹಾರಾಡುವ ಕೀಟಗಳು, ಕೊಳದ ಕಪ್ಪೆಗಳು, ನಿಶಿಕಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಮೀನುಗಳು – ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾ ವಿವಿಧ ಭಾವ ಹೊಮ್ಮುವಂತೆ ಚಿತ್ರಿಸತೊಡಗಿದ.

ಅಪ್ಪ ತೀರಿಕೊಂಡ ಮೇಲೆ ದಿನಸಿ ಅಂಗಡಿಯ ಜವಾಬ್ದಾರಿ ಆತನ ಹೆಗಲ ಮೇಲೆ ಬಿದ್ದರೂ ಜಕುಚೆ ಅದನ್ನು ಹೊರುವ ಮನಸ್ಸು ಮಾಡಲಿಲ್ಲ. ಬದಲಿಗೆ, ಕಾಮೋ ನದಿಯ ತೀರದಲ್ಲಿ ಎರಡು ಅಂತಸ್ತಿನ ಆರ್ಟ್ ಸ್ಟುಡಿಯೋ ತೆರೆದು, ಅದಕ್ಕೆ ‘ಶೀನೆನ್ ಕಾನ್’ (ವಿರಾಗಿ ಹೃದಯ) ಎಂದು ಹೆಸರಿಟ್ಟ. ಈ ವೇಳೆಗಾಗಲೇ ಜಕುಚೆಗೆ ರಿಂಜಾಯ್ (ಝೆನ್ ಪರಂಪರೆಗೆ ಸೇರಿದ ಒಂದು ಪಂಥ) ಸನ್ಯಾಸಿ ಡಾಯ್ಟೆನ್ ಕೆಂಜೋ ಪರಿಚಯವಾಗಿ ಅದು ಗೆಳೆತನಕ್ಕೂ ತಿರುಗಿತ್ತು. ಇಟೋ ವಂಶದ ಈ ವಿರಾಗಿ ಚಿತ್ರಕಾರನನ್ನು ‘ಜಕುಚೆ’ ಎಂದು ಮೊದಲ ಬಾರಿಗೆ ಕರೆದಿದ್ದು ಈ ಸನ್ಯಾಸಿಯೇ. ಜಕುಚೆ ಅನ್ನುವ ಪದ ಶೂನ್ಯವನ್ನು ಸೂಚಿಸುತ್ತದೆ. ಇದು  ದಾವೋ ದೆ ಚೆಂಗ್ ನಿಂದ ಪಡೆಯಲಾದ ಪದ ಎಂದು ಹೇಳಲಾಗುತ್ತದೆ.

ಕೆಂಜೋ ಜೊತೆಗಿನ ಗೆಳೆತನ ಜಕುಚೆಯ ಚಿತ್ರ ರಚನೆಗೆ ಮತ್ತಷ್ಟು ಕಸುವು ತುಂಬಿತು. ಆತನ ಮೂಲಕ ಪರಿಚಯವಾದ ಚೀನೀ ಝೆನ್ ದೇವಾಲಯಗಳ ಭೇಟಿ, ಚಿತ್ರ ಸಂಗ್ರಹಗಳ ಅವಲೋಕನ ಮತ್ತು ಝೆನ್ ಪರಂಪರೆಯ ಪರಿಚಯ ಎಲ್ಲವೂ ಸಾಧ್ಯವಾಯಿತು. ಕ್ರಮೇಣ ಝೆನ್ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಂಡ ಜಕುಚೆ, ಅಲ್ಲಿಂದ ಪಡೆದ ಅರಿವನ್ನು ತನ್ನ ಚಿತ್ರಗಳ ಮೂಲಕ ದಾಟಿಸತೊಡಗಿದ. ಹೀಗೆ ಮೂಡಿಬಂದ ಅದ್ಭುತ ಕಲ್ಪನೆಯ ಕಲಾಕೃತಿಯೇ ‘ತರಕಾರಿಯ ಪರಿನಿರ್ವಾಣ’.

ಬುದ್ಧನ ಪರಿನಿರ್ವಾಣವನ್ನು ಹೋಲುವ ಜಕುಚೆಯ ‘ಯಸಾಯ್ ನೆಹಾನ್’ (ತರಕಾರಿಯ ಪರಿನಿರ್ವಾಣ)ದಲ್ಲಿ ಬಿಳಿಯ ದೊಡ್ಡ ಮೂಲಂಗಿಯೇ ಬುದ್ಧ. ಹಣ್ಣು – ತರಕಾರಿಗಳು ಶಿಷ್ಯಗಣ. ಶ್ರೀಫಲವೇ ಮೇಲಿಂದ ಇಳಿದು ಬಂದ ಮಾಯಾದೇವಿ!

ಯಸಾಯ್ ನೆಹಾನ್ – ತರಕಾರಿಯ ಪರಿನಿರ್ವಾಣ

ಬುದ್ಧನ ಕೊನೆಗಾಲದ ಸಾಂಪ್ರದಾಯಿಕ ಚಿತ್ರಣದಲ್ಲಿ ಬುದ್ಧ ಗುರು ಮಧ್ಯದಲ್ಲಿ ಮಲಗಿರುತ್ತಾನೆ. ಸುತ್ತಲೂ ಶಿಷ್ಯರು, ಸಾರ್ವಜನಿಕರು ಇರುತ್ತಾರೆ. ಆತನ ತಾಯಿ ಮಾಯಾದೇವಿ ಆತನನ್ನು ನೋಡಲು ಮೇಲಿಂದ ಇಳಿದು ಬರುತ್ತಾಳೆ. ಜಕುಚೆ ಇದೇ ಚಿತ್ರಣವನ್ನು ತರಕಾರಿ – ಹಣ್ಣುಗಳನ್ನು ಬಳಸಿ ಚಿತ್ರಿಸಲು ಮಹತ್ತರವಾದ ಕಾರಣವೂ ಇದೆ. ಅದು ಆತನ ತುಂಟತನದ ಜೊತೆಗೆ ಝೆನ್ ಹಾಗೂ ಬುದ್ಧಿಸಮ್ ಬಗ್ಗೆ ಆತನಿಗಿದ್ದ ಅರಿವನ್ನೂ ಸೂಚಿಸುತ್ತದೆ.

ಬೌದ್ಧ ಧರ್ಮದ ಪದ್ಮಸೂತ್ರದಲ್ಲಿ “ಬುದ್ಧತ್ವವು ಕೇವಲ ಸಚೇತನರಿಗೆ (ಮನುಷ್ಯರಿಗೆ) ಮಾತ್ರವಲ್ಲ, ಹಣ್ಣು – ತರಕಾರಿಗಳಿಗೂ ಸಾಧ್ಯ” ಅನ್ನುವ ಹೇಳಿಕೆ ಮತ್ತು ವಿವರಣೆ ಇದೆ. ಪರಿನಿರ್ವಾಣ (ನೆಹಾನ್) ಅನ್ನುವ ಪದ – ಬುದ್ಧನ ನಿರ್ಗಮನವನ್ನು (ಸಾವನ್ನು) ಸೂಚಿಸುತ್ತದೆ. ಅದರ ಆಧಾರದ ಮೇಲೆ ಜಕುಚೆ ರಚಿಸಿದ ಕಲಾಕೃತಿ ಈ ಯಸಾಯ್ ನೆಹಾನ್.

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ಗಮನಿಸಿರುವ ಯಾರಿಗಾದರೂ ಈ ತರಕಾರಿಗಳ ಚಿತ್ರವನ್ನು ಕಂಡ ಕೂಡಲೇ ಪರಿನಿರ್ವಾಣದ ನೆನಪಾಗದೆ ಇರದು. ಅಷ್ಟು ಸಶಕ್ತ ಅಭಿವ್ಯಕ್ತಿಯಾಗಿದೆ ಈ ಕಲಾಕೃತಿ.

ಚಿತ್ರಗಳನ್ನು ಬಿಡಿಸುತ್ತಲೇ ತನ್ನ ಜೀವನ ಕಳೆದ ಜಕುಚೆ, 84ನೆಯ ವಯಸ್ಸಿನಲ್ಲಿ ಇಹಲೋಕ ತೊರೆದ. ಈತ ರಚಿಸಿದ ಝೆನ್ ಇಂಕ್ ಶೈಲಿಯ ಕಪ್ಪೆ, ಕಪ್ಪೆಯ ಚಿತ್ರಗಳಲ್ಲೇ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆ ಪಡೆದಿದೆ.

ಬಣ್ಣಗಳನ್ನೂ ಅಧ್ಯಾತ್ಮವನ್ನೂ ಒಂದೇ ಕುಂಚದಲ್ಲಿ ಅದ್ದಿ ಕಲಾಕೃತಿಗಳನ್ನು ರಚಿಸಿದ ಇಟೋ ಜಕುಚಿ, ಈತನ ಬಗ್ಗೆ ಇನ್ನಷ್ಟು ತಿಳಿಯಬೇಕು ಅನ್ನುವ ಆಸಕ್ತಿ ಹುಟ್ಟಿಸುವ ವ್ಯಕ್ತಿತ್ವ. ಈತನ ಬಹುತೇಕ ಕಲಾಕೃತಿಗಳನ್ನು ಈಗಲೂ ಮೂಲರೂಪದಲ್ಲಿ ಸಂಗ್ರಹಾಲಯಗಳನ್ನು ಕಾಯ್ದಿಡಲಾಗಿದೆ. ಈತನ ದೊಶೊಕು ಸಾಯ್ ಇ (ಜೀವಿಗಳ ಸಾಮ್ರಾಜ್ಯ) ಸಾರ್ವಕಾಲಿಕ ಶ್ರೇಷ್ಠ ಚಿತ್ರ ಸರಣಿ ಎಂಬ ಮಾನ್ಯತೆ ಪಡೆದಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.