ಎರಡು ಕರಾಳ ರಾತ್ರಿಗಳ ನಡುವಿನ ಬೆಳಗು; ಬದುಕು : ಓಶೋ ವ್ಯಾಖ್ಯಾನ

ಜನ ವಿಚಿತ್ರ… ನೀವು ಅವರಿಗೆ ಸಾವಿರ ಸಹಾಯಗಳನ್ನು ಮಾಡಿರಬಹುದು ಮತ್ತು ಕೇವಲ ಒಮ್ಮೆ ಮಾತ್ರ ನಿಮ್ಮಿಂದ ಅವರಿಗೆ ಸಹಾಯ ಆಗಿಲ್ಲದಿರಬಹುದು. ಆದರೆ ಅವರು ನೆನಪಿಟ್ಟುಕೊಂಡಿರುವುದು ನಿಮ್ಮ ಸಾವಿರ ಸಹಾಯಗಳನ್ನಲ್ಲ, ಅವರ ಮೈಂಡ್ ನಲ್ಲಿ ಗಟ್ಟಿಯಾಗಿ ಉಳಿದುಬಿಟ್ಟಿರುವುದು ಒಮ್ಮೆ ನಿಮ್ಮಿಂದ ಸಹಾಯ ಆಗಿರದ ಸಂಗತಿ ಮಾತ್ರ. ಈ ಒಂದು ಸಂಗತಿಯನ್ನೇ ಅವರು ಬದುಕಿನುದ್ದಕ್ಕೂ ನೆನಪಿಟ್ಟುಕೊಂಡಿರುತ್ತಾರೆ. ಜನ ಬದುಕುತ್ತಿರುವುದೇ ಹೀಗೆ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.

ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.

ಅವನ ಅಪಾರ ಕರುಣೆಯನ್ನು ಸ್ಮರಿಸು !

ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.

ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.

~ ಶಮ್ಸ್ ತಬ್ರೀಝಿ


ಮೈಂಡ್ ಗೆ ಹೂವನ್ನು ಕಣ್ತುಂಬಿಕೊಳ್ಳುವುದರಲ್ಲಿ ಆಸಕ್ತಿ ಇಲ್ಲ, ಅದರ ಆಸಕ್ತಿ ಇರುವುದು ಹೂವಿನ ಸುತ್ತ ಇರುವ ಮುಳ್ಳುಗಳನ್ನು ಎಣಿಸುವುದರಲ್ಲಿ ಮಾತ್ರ. ನಿಮ್ಮ ಮೈಂಡ್ ನ ಕಾರ್ಯಾಚರಣೆಯನ್ನ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ, ನಿಮಗೆ ಆಶ್ಚರ್ಯವಾಗಬಹುದು ನಿಮ್ಮ ಮನಸ್ಸಿನಲ್ಲಿ ನಿಮ್ಮ ಗೆಳೆಯರಿಗಿಂತ ನಿಮ್ಮ ವೈರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಿಮ್ಮ ಮೂರ್ಖ ಮೈಂಡ್ ನ ಪರಿಸ್ಥಿತಿ.

ವಿವೇಕಯುತ ಮನಸ್ಸು ವ್ಯಕ್ತಿಗಳನ್ನ, ಸಂಗತಿಗಳನ್ನ ವಿರುದ್ಧ ದಿಕ್ಕಿನಿಂದ ನೋಡುತ್ತದೆ : ಅದು ತನ್ನ ಕುರಿತಾದ ಹಾರೈಕೆಗಳನ್ನು ಕೌಂಟ್ ಮಾಡುತ್ತದೆ, ಅದು ತನ್ನ ಜೊತೆ ಘಟಿಸಿದ ಸುಂದರ ಸಂಗತಿಗಳನ್ನು ನೆನಪಿಟ್ಟುಕೊಳ್ಳುತ್ತದೆ, ತಾನು ಕೃತಜ್ಞವಾಗಿರಬೇಕಾದ ಎಲ್ಲವನ್ನೂ ಅದು ತನ್ನೊಳಗೆ ದಾಖಲು ಮಾಡಿಕೊಳ್ಳುತ್ತದೆ. ಸಹಜವಾಗಿ ಅಂಥ ವ್ಯಕ್ತಿಯ ಬದುಕು, ಸುಂದರ ಸಂಗತಿಗಳಿಂದ ಆವರಿಸಲ್ಪಟ್ಟಿರುವ ಹಾರೈಕೆಗಳ ಬದುಕಾಗಿರುತ್ತದೆ. ನೀವು ಮಾಡಬೇಕಾಗಿರುವುದು ನಿಮ್ಮ ಮೈಂಡ್ ನ ರಚನೆಯನ್ನ ಕೊಂಚ ಬದಲಾಯಿಸಬೇಕಾಗಿರುವುದಷ್ಟೇ. ಸ್ವಲ್ಪ ಬದಲಾವಣೆ ಸಾಕು, ಅದು ನಿಮ್ಮೊಳಗೆ ಅಪಾರ ಬದಲಾವಣೆಯನ್ನು ಸಾಧ್ಯ ಮಾಡುವುದು. ನಿಮ್ಮ ಜೊತೆ, ನಿಮ್ಮ ಸುತ್ತ ನಡೆಯುತ್ತಿರುವ ಸುಂದರ ಸಂಗತಿಗಳನ್ನು ಸಂಗ್ರಹಿಸಲು ಶುರು ಮಾಡಿ. ಯಾವುದು ಸುಂದರವಲ್ಲವೋ ಅದು ನೆನಪಿಟ್ಟುಕೊಳ್ಳಲು ಅರ್ಹವಲ್ಲ. ಹೂವು, ಸುಗಂಧಗಳಿರಬೇಕಾದ ಜಾಗದಲ್ಲಿ ಕಸ ಕಡ್ಡಿಯನ್ನು ಕೂಡಿ ಹಾಕಿ ಯಾಕೆ ನಿಮ್ಮನ್ನು ನೀವು ಭಾರವಾಗಿಸಿಕೊಳ್ಳುವಿರಿ?

ನಿಮ್ಮ ಮೈಂಡ್ ನ ಕೊಂಚ ಈ ದಿಕ್ಕಿನಲ್ಲಿ ತರಬೇತುಗೊಳಿಸುವುದು ಬಹಳ ಮುಖ್ಯ. ಧ್ಯಾನ ಇದನ್ನು ಸಾಧ್ಯ ಮಾಡುತ್ತದೆ. ಧ್ಯಾನದ ಒಂದು ಬಹುಮುಖ್ಯ ಅವಶ್ಯಕ ಭಾಗವೆಂದರೆ, ಸಂಗತಿಗಳ, ವ್ಯಕ್ತಿಗಳ, ಘಟನೆಗಳ ಉತ್ತಮ ಭಾಗಗಳನ್ನು ಮಾತ್ರ ನಿಮ್ಮದಾಗಿಸಿಕೊಳ್ಳುವುದು, ಆಗ ನಿಮ್ಮ ಸುತ್ತ ಕೇವಲ ಉತ್ತಮವಾದದ್ದು ತುಂಬಿಕೊಳ್ಳುತ್ತದೆ, ನಿಮ್ಮ ಬೆಳವಣಿಗೆಯನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ.

ಆದರೆ ಜನ ವಿಚಿತ್ರ… ನೀವು ಅವರಿಗೆ ಸಾವಿರ ಸಹಾಯಗಳನ್ನು ಮಾಡಿರಬಹುದು ಮತ್ತು ಕೇವಲ ಒಮ್ಮೆ ಮಾತ್ರ ನಿಮ್ಮಿಂದ ಅವರಿಗೆ ಸಹಾಯ ಆಗಿಲ್ಲದಿರಬಹುದು. ಆದರೆ ಅವರು ನೆನಪಿಟ್ಟುಕೊಂಡಿರುವುದು ನಿಮ್ಮ ಸಾವಿರ ಸಹಾಯಗಳನ್ನಲ್ಲ, ಅವರ ಮೈಂಡ್ ನಲ್ಲಿ ಗಟ್ಟಿಯಾಗಿ ಉಳಿದುಬಿಟ್ಟಿರುವುದು ಒಮ್ಮೆ ನಿಮ್ಮಿಂದ ಸಹಾಯ ಆಗಿರದ ಸಂಗತಿ ಮಾತ್ರ. ಈ ಒಂದು ಸಂಗತಿಯನ್ನೇ ಅವರು ಬದುಕಿನುದ್ದಕ್ಕೂ ನೆನಪಿಟ್ಟುಕೊಂಡಿರುತ್ತಾರೆ. ಜನ ಬದುಕುತ್ತಿರುವುದು ಹೀಗೆ : ದ್ವೇಷವನ್ನು ಸಾಧಿಸುತ್ತ, ವೈರತ್ವವನ್ನು ಬೆಳೆಸುತ್ತ, ಕ್ರೋಧ, ಹತಾಶೆಯನ್ನು ಗಟ್ಟಿಗೊಳಿಸಿಕೊಳ್ಳುತ್ತ, ಬದುಕಿನಿಂದ ತಿರಸ್ಕರಿಸಲ್ಪಟ್ಟವರಂತೆ, ಅಸ್ತಿತ್ವದಿಂದ ಅನ್ಯರಾಗಿರುವ ಭಾವನೆಯನ್ನು ಪೋಷಿಸುತ್ತ. ಆದರೆ ವಿಷಯ ಏನೆಂದರೆ ನೀವು ತಪ್ಪು ಸಂಗತಿಗಳನ್ನು ಮಾತ್ರ ಕಾಪಿಟ್ಟುಕೊಳ್ಳುತ್ತಿದ್ದೀರಿ. ಬದುಕು ಎರಡೂ ರೀತಿಯ ಸಂಗತಿಗಳಿಂದ ತುಂಬಿಕೊಂಡಿದೆ.

ನೀವು ನಿಮ್ಮ ಬದುಕನ್ನ ಎರಡು ಕರಾಳ ರಾತ್ರಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಒಂದು ಸಣ್ಣ ಬೆಳಗಿನ ಹಾಗೆ ನೋಡಬಹುದು ಅಥವಾ ಎರಡು ಸುಂದರ ಬೆಳಗುಗಳ ನಡುವೆ ಹಾಯ್ದುಹೋಗುತ್ತಿರುವ ಒಂದು ಸಣ್ಣ ರಾತ್ರಿಯ ಹಾಗೆಯೂ ಕಾಣಬಹುದು. ಸ್ವರ್ಗವೋ, ನರಕವೋ, ಆಯ್ಕೆ ಮಾಡಿಕೊಳ್ಳಬೇಕಾದವರು ನೀವೇ.

ಆಯ್ಕೆ ನಿಮ್ಮದೇ.

95 ನೇ ಹುಟ್ಟು ಹಬ್ಬದ ದಿನ ನಸ್ರುದ್ದೀನ್ ನನ್ನು ಪತ್ರಕರ್ತನೊಬ್ಬ ಮಾತನಾಡಿಸಿದ,

“ ವಯಸ್ಸಾಗುತ್ತಿರುವುದರ ಬಗ್ಗೆ ನಿನಗೆ ಬೇಸರ ಇಲ್ಲವೆ ನಸ್ರುದ್ದೀನ್ ? “

“ ಖಂಡಿತ ಇಲ್ಲ. ಬದಲಾಗಿ ನನಗೆ ಖುಶಿ ಇದೆ. ಅಕಸ್ಮಾತ್ ನನಗೆ ವಯಸ್ಸಾಗದೇ ಹೋಗಿದ್ದರೆ ನಾನು ಸತ್ತು ಹೋಗಿರುತ್ತಿದ್ದೆ. “

ನಸ್ರುದ್ದೀನ್ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.