ನಿಮ್ಮ ಬಾಸ್, ನಿಮ್ಮ ಗೆಳೆಯರು, ನಿಮ್ಮ ಕಂಪನಿ ಬದಲಾದಾಗ ನಿಮ್ಮ ಬದುಕು ಬದಲಾಗುವುದಿಲ್ಲ… ನೀವು ಬದಲಾದಾಗ ಮಾತ್ರ ನಿಮ್ಮ ಬದುಕು ಬದಲಾಗುವುದು… ನಿಮ್ಮನ್ನು ಕಟ್ಟಿಹಾಕಿರುವ ನಂಬಿಕೆಗಳನ್ನು ಮೀರಿ ನೀವು ಮುನ್ನಡೆದಾಗ, ನಿಮ್ಮ ಬದುಕಿಗೆ ನೀವು ಮಾತ್ರ ಜವಾಬ್ದಾರಿ ಎನ್ನುವುದು ನಿಮಗೆ ಮನವರಿಕೆಯಾಗುತ್ತದೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್ ತಬ್ರೀಝಿ
ಒಂದು ದಿನ ಕಂಪನಿಯ ಎಲ್ಲ ಉದ್ಯೋಗಿಗಳು ಆಫೀಸಿಗೆ ಬಂದಾಗ, ಆಫೀಸ್ ನ ಗೇಟಿನಲ್ಲಿಯೇ ಅವರಿಗೊಂದು ದೊಡ್ಡ ಬೋರ್ಡ ಕಾಣಿಸಿತು. ಆ ಬೋರ್ಡಿನ ಮೇಲೆ ಹೀಗೆ ಬರೆಯಲಾಗಿತ್ತು……
“ಈ ಕಂಪನಿಯಲ್ಲಿ ನಿಮ್ಮ ಬೆಳವಣಿಗೆಗೆ ಅಡ್ಡಗಾಲಾಗಿದ್ದ ವ್ಯಕ್ತಿ ನಿನ್ನೆ ತೀರಿಕೊಂಡಿದ್ದಾರೆ. ಆ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ನಿಮಗೆಲ್ಲ ಆಹ್ವಾನವಿದೆ”.
ಮೊದಲು ಎಲ್ಲರಿಗೂ ತಮ್ಮ ಸಹೋದ್ಯೋಗಿಯೊಬ್ಬನ ಮರಣದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ನಂತರ ಅವರಿಗೆಲ್ಲ, ಕಂಪನಿಯಲ್ಲಿ ತಮ್ಮ ಬೆಳವಣಿಗೆಗೆ ಅಡ್ಡಗಾಲಾಗಿದ್ದ ಆ ವ್ಯಕ್ತಿ ಯಾರು ಎನ್ನುವುದನ್ನ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
“ಸದ್ಯ ನಮ್ಮ ಬೆಳವಣಿಗೆಯನ್ನು ಬಯಸದ ವ್ಯಕ್ತಿ ಸತ್ತುಹೋದ” ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು.
ಒಂದು ವಿಚಿತ್ರ ಥ್ರಿಲ್ ಗೆ ಒಳಗಾಗಿದ್ದ ಉದ್ಯೋಗಿಗಳು ನಂತರ ಮೃತ ವ್ಯಕ್ತಿಯ ಶವಪೆಟ್ಟಿಗೆ ಇಟ್ಟಿದ್ದ ಜಾಗಕ್ಕೆ ಸಾಲಾಗಿ ಹೊರಟರು. ಶವ ಪೆಟ್ಟಿಗೆಯೊಳಗೆ ಬಗ್ಗಿ ನೋಡುತ್ತಿದ್ದಂತೆಯೇ ಅವರೆಲ್ಲ ಶಾಕ್ ಗೆ ಒಳಗಾದವರಂತೆ ದಿಗ್ಭ್ರಮೆಗೊಂಡರು, ಯಾರೋ ತಮ್ಮ ಆತ್ಮದ ಆಳವನ್ನು ಮುಟ್ಟಿ ಮಾತನಾಡಿಸಿದಂತೆ ಅನಿಸಿ ಮಾತು ಹೊರಡದವರಂತೆ ಸುಮ್ಮನೇ ನಿಂತುಬಿಟ್ಟರು. ಆ ಶವ ಪೆಟ್ಟಿಗೆಯಲ್ಲಿ ಕನ್ನಡಿಯೊಂದನ್ನು ಇರಿಸಲಾಗಿತ್ತು ಮತ್ತು ಪೆಟ್ಟಿಗೆಯೊಳಗೆ ಇಣುಕಿ ನೋಡಿದವರೆಲ್ಲ ಅಲ್ಲಿ ತಮ್ಮ ಚೆಹರೆಯನ್ನೇ ಕಂಡು ದಂಗುಬಡಿದು ಹೋದರು.
ಕನ್ನಡಿಯ ಪಕ್ಕ ಒಂದು ಸೂಚನೆಯನ್ನು ಬರೆದು ಇಡಲಾಗಿತ್ತು.
“ನಿಮ್ಮ ಬೆಳವಣಿಗೆಗೆ ಮಿತಿಗಳನ್ನು ಹಾಕಲು ಸಾಧ್ಯವಿರುವುದು ಒಬ್ಬ ವ್ಯಕ್ತಿಗೆ ಮಾತ್ರ …. ಮತ್ತು ಅದು ಸ್ವತಃ ನೀವು. ಕೇವಲ ನೀವು ಮಾತ್ರ ನಿಮ್ಮ ಖುಶಿಯನ್ನ, ಯಶಸ್ಸನ್ನ, ಅರಿತುಕೊಳ್ಳುವಿಕೆಯನ್ನ ಪ್ರಭಾವಿಸಬಲ್ಲವರು.”
ನಿಮ್ಮ ಬಾಸ್, ನಿಮ್ಮ ಗೆಳೆಯರು, ನಿಮ್ಮ ಕಂಪನಿ ಬದಲಾದಾಗ ನಿಮ್ಮ ಬದುಕು ಬದಲಾಗುವುದಿಲ್ಲ… ನೀವು ಬದಲಾದಾಗ ಮಾತ್ರ ನಿಮ್ಮ ಬದುಕು ಬದಲಾಗುವುದು… ನಿಮ್ಮನ್ನು ಕಟ್ಟಿಹಾಕಿರುವ ನಂಬಿಕೆಗಳನ್ನು ಮೀರಿ ನೀವು ಮುನ್ನಡೆದಾಗ, ನಿಮ್ಮ ಬದುಕಿಗೆ ನೀವು ಮಾತ್ರ ಜವಾಬ್ದಾರಿ ಎನ್ನುವುದು ನಿಮಗೆ ಮನವರಿಕೆಯಾಗುತ್ತದೆ.
ನಿಮ್ಮ ಜವಾಬ್ದಾರಿಯನ್ನ ಸ್ವತಃ ನೀವು ವಹಿಸಿಕೊಂಡಾಗ ಮಾತ್ರ ನಿಮ್ಮ ಬದುಕು ಬದಲಾವಣೆಯನ್ನು ಕಾಣಬಲ್ಲದು.
ಹೊರಗಿನ ಒತ್ತಡದಿಂದ ಮೊಟ್ಟೆ ಒಡೆದುಹೋದಾಗ ಬದುಕು ನಾಶವಾಗುತ್ತದೆ…… ಆದರೆ ಒಳಗಿನ ಒತ್ತಡದಿಂದ ಮೊಟ್ಟೆ ಒಡೆದಾಗ ಒಂದು ಹೊಸ ಬದುಕು ಶುರುವಾಗುತ್ತದೆ.
ಎಲ್ಲ ಮಹಾ ಸಂಗತಿಗಳು ಸಂಭವಿಸುವುದು ಅವು ನಮ್ಮೊಳಗಿಂದ ಒಡಮೂಡಿ ಬಂದಾಗಲೇ.

