ರೂಮ್ ಸಾಮ್ರಾಜ್ಯದ ಕರ್ಮಠ ಮುಸ್ಲಿಮರಿಗೆ ಜಲಾಲುದ್ದೀನ್ ಬಾಲ್ಖಿ ಅಥವಾ ಜಲಾಲುದ್ದೀನ್ ಬಖ್ರ್ ನ ಈ ಸಮಾ ಕುಣಿತ ಒಂದು ಹುಚ್ಚಾಟದಂತೆ ಕಾಣುತ್ತಿತ್ತು. ಬಾಲ್ಖ್ ನಿಂದ ಹೊರಟು, ಬಖ್ರ್ ಪ್ರದೇಶ ಹಾದು ಬಂದಿದ್ದರಿಂದ ಜಲಾಲನಿಗೆ ಆ ಗುರುತುಗಳು. ಮಧ್ಯಪ್ರಾಚ್ಯದ ಮುಸ್ಲಿಂ ಕರ್ಮಠರಿಗಷ್ಟೇ ಅಲ್ಲ, “ಅನ್ ಅಲ್ ಹಕ್” ಅನ್ನುತ್ತಿದ್ದ ಸೂಫಿಗಳಿಗೂ ಈ ಕುಣಿತವೆಲ್ಲ ಹೊಸತು. ಹಾಗೆ ಸಾರ್ವಜನಿಕರ ಮಧ್ಯೆ ನರ್ತಿಸೋದು ಅವರಿಗೂ ಮುಜುಗರ ತರಿಸುತ್ತಿತ್ತು… ~ ಚೇತನಾ ತೀರ್ಥಹಳ್ಳಿ। ಕೀಮಿಯಾ; ರೂಮಿಯ ಮಗಳು (ಕಾದಂಬರಿಯ ಆಯ್ದ ಭಾಗ)
ಅದೊಮ್ಮೆ ದರ್ಬಾರಿನಲ್ಲಿ ಪರ್ಶಿಯಾದ ಶ್ರೇಷ್ಠ ಪಂಡಿತರ ಸಭೆ ನೆರೆದಿತ್ತು. ಅಂತಾಲ್ಯದಿಂದ ಬಾಲ್ಖ್ ವರೆಗೂ ಹಬ್ಬಿದ್ದ ಸೂಫಿ ಚಿಂತನೆಯ ಬಗ್ಗೆ ಚರ್ಚೆ ನಡೆಸಲು ಸುಲ್ತಾನನೇ ಈ ಸಭೆ ಕರೆದಿದ್ದ. ದೊಡ್ಡ ದೊಡ್ಡ ಮುಸ್ಲಿಂ ವಿದ್ವಾಂಸರು, ಧರ್ಮ ಪಂಡಿತರು. ಕವಿಗಳು, ಗ್ರಂಥಕಾರರು ಎಲ್ಲರೂ ನೆರೆದಿದ್ದರು. ಬಂದವರಲ್ಲಿ ಬಹುತೇಕ ಎಲ್ಲರೂ ದೀವಾನ್ ಗಳ ಮೇಲೆ ಕುಳಿತು ತಮ್ಮ ತಮ್ಮ ಜಾಗ ಭದ್ರ ಪಡಿಸಿಕೊಂಡಿದ್ದರು.
ಜಲಾಲ್ ದರ್ಬಾರಿಗೆ ಕೊಂಚ ತಡವಾಗಿ ಬಂದ. ಕುಳಿತವರು ಚೂರು ಆಚೀಚೆ ಜರುಗಿದ್ದರೆ ಒಬ್ಬ ಜಲಾಲ್ ಕೂರಲು ಸಾಕಾಗುವಷ್ಟು ಜಾಗ ಖಂಡಿತಾ ಸಿಗುತ್ತಿತ್ತು. ಆದರೆ ಯಾರೂ ಆ ಮನಸ್ಸು ಮಾಡಲಿಲ್ಲ. ಪೂರ್ವದಿಂದ ಬಂದ ಮೌಲ್ವಿಯ ಮಗನೊಬ್ಬ ಸ್ಥಳೀಯರನ್ನೂ ಮೀರಿಸುವಂತೆ ಜನಪ್ರಿಯನಾಗುತ್ತಿದ್ದರೆ ಯಾರು ತಾನೆ ಸಹಿಸಿಯಾರು?
ಜಲಾಲ್ ಸ್ವಲ್ಪವೂ ಬೇಸರಿಸದೆ ತನ್ನ ಪಾಡಿಗೆ ತಾನು ನೆಲದ ಮೇಲೆ ಹಾಸಿದ್ದ ಚಾರಪಾಯಿಯ ಮೇಲೆ ಕುಳಿತ.
ಜಲಾಲುದ್ದೀನ್ ಕೆಳಕ್ಕೆ ಕೂತಿದ್ದನ್ನು ಕಂಡು ಗಾಬರಿಯಾದ ಅವನ ಶಿಷ್ಯ ಹುಸಮ್ ಚಲಬಿ ಓಡೋಡಿ ಬಂದು ಅವನ ಪಕ್ಕ ಕುಳಿತ. ಅವರಿಬ್ಬರು ನೆಲದ ಮೇಲೆ ಕುಳಿತಿರುವಾಗ ತಮ್ಮದೇನು ಅಂದುಕೊಂಡು ಕೆಲವು ಮೃದು ಹೃದಯದ ಜನರೂ, ವಿನಯವಂತ ಪಂಡಿತರೂ ಜಲಾಲನ ಪಕ್ಕ ಬಂದು ಕುಳಿತರು.
ಮತ್ಸರದ ವಿದ್ವಾಂಸರಿಗೆ ಇದರಿಂದ ಮುಜುಗರ ಉಂಟಾಯಿತು. ವಾತಾವರಣ ತಿಳಿಗೊಳಿಸುವ ಉದ್ದೇಶದಿಂದ ಅವರಲ್ಲೊಬ್ಬ ಚರ್ಚೆ ಶುರು ಮಾಡಿದ. “ಯಾವುದೇ ವ್ಯಕ್ತಿಯ ಪಾಲಿಗೆ ಕುಳಿತುಕೊಳ್ಳಲು ಅತ್ಯಂತ ಶ್ರೇಷ್ಠ ಜಾಗ ಯಾವುದು?” ಅನ್ನುವ ಪ್ರಶ್ನೆ ಮುಂದಿಟ್ಟ.
ಈ ಪ್ರಶ್ನೆ ಸೂಫಿಗಳಲ್ಲಿ ಆಗಾಗ ಚಾಲ್ತಿಗೆ ಬರುತ್ತಿದ್ದುದೇ ಆಗಿತ್ತು. ಒಬ್ಬ ವ್ಯಕ್ತಿಗೆ ಎಲ್ಲಕ್ಕಿಂತ ಮಹತ್ವದ ಜಾಗ ಯಾವುದು ಅನ್ನುವ ಪ್ರಶ್ನೆಗೆ ನಾನಾರೀತಿಯ ಉತ್ತರಗಳು, ತರ್ಕಗಳು ಹೊಮ್ಮುತ್ತಿದ್ದವು.
ಒಬ್ಬರು, “ಸಭೆಯ ಮಧ್ಯದಲ್ಲಿ ಎತ್ತರದ ಜಾಗದಲ್ಲಿ ಕೂರುವುದೇ ಶ್ರೇಷ್ಠ” ಅಂದರೆ, ಮತ್ತೊಬ್ಬರು “ಅಂಗಳದ ಅಂಚಿನಲ್ಲಿ, ಅತಿಥಿಗಳು ಚಪ್ಪಲಿ ಬಿಡುವ ಜಾಗದಲ್ಲಿ ವಿನಮ್ರವಾಗಿ ಕೂರುವುದೇ ಶ್ರೇಷ್ಠ” ಅನ್ನುತ್ತಿದ್ದರು.
ಈ ಸಭೆಯಲ್ಲೂ ಅದೇ ಆಯಿತು. ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟಾದ ಮೇಲೆ ಜಲಾಲುದ್ದೀನ್ ಪಾಳಿ ಬಂತು.
“ಜಲಾಲುದ್ದೀನ್, ನಿನ್ನ ಉತ್ತರವೇನು?”
ಜಲಾಲ್, ಕವಿ ಕಿರ್ಮಾನಿಯ ಸಾಲುಗಳನ್ನು ಉದ್ಧರಿಸುತ್ತಾ ಹೇಳಿದ, “ಬಾಗಿಲು ಇರುವಲ್ಲೇ ಗೌರವ ತರುವ ಜಾಗವೂ. ನಾವೆಲ್ಲರೂ ಇರುವುದು ಬಾಗಿಲ ಬಳಿಯೇ. ನಾನಿರುವುದೂ ಅಲ್ಲಿಯೇ, ಆದರೆ ಸಂಗಾತಿಯ ಜೊತೆಗೆ. ಅದೇ ನನ್ನ ಪಾಲಿಗೆ ಅತ್ಯಂತ ಶ್ರೇಷ್ಠವಾದ ಜಾಗ”
“ಯಾರು ನಿನ್ನ ಸಂಗಾತಿ?” ಮತ್ತೊಂದು ಪ್ರಶ್ನೆ ತೂರಿಬಂತು.
“ನನ್ನ ಬದುಕೇ ನನ್ನ ಸಂಗಾತಿ” ಜಲಾಲ್ ಉತ್ತರಿಸಿದ, “ನಮ್ಮ ನಮ್ಮ ಬದುಕಿನೊಡನೆಯೇ ನಮ್ಮ ನಮ್ಮ ಸಾಂಗತ್ಯ”
ಜಲಾಲ್ ಬದುಕನ್ನು ಸಂಗಾತಿ ಅನ್ನುತ್ತಿದ್ದಾನೋ, ಸಂಗಾತಿಯನ್ನೇ ಬದುಕು ಅನ್ನುತ್ತಿದ್ದಾನೋ? ಕೇಳುಗರಿಗೆ ಒಗಟಾಯಿತು. ಪ್ರಶ್ನೆ ಮಾಡುವಷ್ಟರಲ್ಲಿ ಜಲಾಲ್ ಎದ್ದು ನಿಂತು ಕೈಯಗಲಿಸಿ ಮೆಲ್ಲನೆ ಸುತ್ತಲಾರಂಭಿಸಿದ್ದ. ಅವನು ಅದಾಗಲೇ ಸಮಾ ನೃತ್ಯಕ್ಕೆ ಅಣಿಯಾಗುತ್ತಿದ್ದ.
ಸಾಂಗತ್ಯ ಅನ್ನುವ ಪದವೇ ಜಲಾಲುದ್ದೀನನನ್ನು ಭಾವಪರವಶಗೊಳಿಸುತ್ತಿತ್ತು. ಆಗೆಲ್ಲ ಅವನು ತನ್ನಲ್ಲೆ ತಾನು ಲೀನವಾಗಲು ಸಮಾ ತಿರುಗಣೆಗೆ ತಯಾರಾಗುತ್ತಿದ್ದ. ಆತ್ಮವನ್ನು ಕೇಂದ್ರದಲ್ಲಿರಿಸಿಕೊಂಡು ಐಹಿಕವನ್ನು ಸುತ್ತಿ ಸುತ್ತಿ ಇಲ್ಲವಾಗಿಸಿ ಕೇಂದ್ರವನ್ನಷ್ಟೆ ಉಳಿಸಿಕೊಳ್ಳುವ ಪರಿಯದು.
ರೂಮ್ ಸಾಮ್ರಾಜ್ಯದ ಕರ್ಮಠ ಮುಸ್ಲಿಮರಿಗೆ ಜಲಾಲುದ್ದೀನ್ ಬಾಲ್ಖಿ ಅಥವಾ ಜಲಾಲುದ್ದೀನ್ ಬಖ್ರ್ ನ ಈ ಸಮಾ ಕುಣಿತ ಒಂದು ಹುಚ್ಚಾಟದಂತೆ ಕಾಣುತ್ತಿತ್ತು. ಬಾಲ್ಖ್ ನಿಂದ ಹೊರಟು, ಬಖ್ರ್ ಪ್ರದೇಶ ಹಾದು ಬಂದಿದ್ದರಿಂದ ಜಲಾಲನಿಗೆ ಆ ಗುರುತುಗಳು. ಮಧ್ಯಪ್ರಾಚ್ಯದ ಮುಸ್ಲಿಂ ಕರ್ಮಠರಿಗಷ್ಟೇ ಅಲ್ಲ, “ಅನ್ ಅಲ್ ಹಕ್” ಅನ್ನುತ್ತಿದ್ದ ಸೂಫಿಗಳಿಗೂ ಈ ಕುಣಿತವೆಲ್ಲ ಹೊಸತು. ಹಾಗೆ ಸಾರ್ವಜನಿಕರ ಮಧ್ಯೆ ನರ್ತಿಸೋದು ಅವರಿಗೂ ಮುಜುಗರ ತರಿಸುತ್ತಿತ್ತು.
ಯಾವುದೇ ಮತ – ಪಂಥವಾದರೂ ಒಂದು ಸಂಸ್ಥೆಯಾಗಿ ಸ್ಥಾಪನೆಗೊಂಡಂತೆಲ್ಲ, ಹೆಚ್ಚು ಹೆಚ್ಚು ಹಬ್ಬತೊಡಗಿದಂತೆಲ್ಲ, ಸಂಕುಚಿತವಾಗುತ್ತ ಹೋಗುತ್ತದೆ. ತನ್ನನ್ನು ಸಾಂಸ್ಥಿಕ ರೂಪದಲ್ಲಿ ಕಾಯ್ದುಕೊಳ್ಳುವ, ವಿಸ್ತಾರದ ಉದ್ದಗಲಕ್ಕೂ ಅಸ್ತಿತ್ವ ಉಳಿಸಿಕೊಳ್ಳುವ ಜರೂರತ್ತಿನಿಂದ ಹುಟ್ಟಿಕೊಳ್ಳುವ ಅನಿವಾರ್ಯವದು. ಇಸ್ಲಾಂ ಕೂಡ ಅದರಿಂದ ಹೊರತಾಗಲಿಲ್ಲ. ಪ್ರವಾದಿ ಮುಹಮ್ಮದರು ದೇವ ವಾಣಿಯನ್ನು ಜನರಿಗೆ ತಲುಪಿಸಿದ ಮೇಲೆ, ಕಾಲಕಾಲಕ್ಕೆ ಹುಟ್ಟಿಕೊಂಡ ‘ಧರ್ಮರಕ್ಷಕರು’ ತಮಗೆ ತೋಚಿದ ಕಾನೂನು ರೂಪಿಸಿ ದೇವವಾಣಿಯ ಹೆಸರಲ್ಲಿ ಬಿತ್ತರಿಸತೊಡಗಿದರು. ಅಥವಾ ದೇವವಾಣಿಗೆ ತಮ್ಮದೇ ಅರ್ಥವ್ಯಾಖ್ಯಾನ ಹಚ್ಚಿ, ತಮಗೆ ಅನುಕೂಲವಾಗುವಂತೆ ಪ್ರಚುರ ಪಡಿಸಿದರು. ಅವುಗಳಲ್ಲಿ, ಹಾಡು ಮತ್ತು ಕುಣಿತ ಹರಾಮ್ ಅನ್ನುವುದೂ ಸೇರಿತ್ತು.
ಈಗ ಜಲಾಲನ ಧ್ಯಾನ ನರ್ತನವೂ ಅವರ ಪಾಲಿಗೆ ಹರಾಮ್ ಆಯಿತು. ವಾಸ್ತವದಲ್ಲಿ ಅವರ ಪಾಲಿಗೆ ಧ್ಯಾನ ನರ್ತನ ಹರಾಮ್ ಆಗಲು ಕಾರಣ ಬೇರೆಯೇ ಇತ್ತು. ಅದು, ಜಲಾಲುದ್ದೀನ್ ಈ ನೆಲದವನಲ್ಲ ಅನ್ನೋದು. ಮುಂದೆ ಈತ ತಮ್ಮ ನೆಲೆಯನ್ನೇ ತನ್ನ ಗುರುತಾಗಿಸಿಕೊಂಡು, ‘ರೂಮಿ’ಯೆಂದು ಖ್ಯಾತನಾಗುತ್ತಾನೆಂದೂ, ತಮ್ಮ ದೇಶಕ್ಕೊಂದು ಘನತೆಯ ಹೆಸರು ತರುತ್ತಾನೆಂದೂ ಅವರಿಗೇನು ಗೊತ್ತಿತ್ತು!?

