ಜಲಾಲುದ್ದೀನ್ ರೂಮಿಗೆ ಮೊದಲ ಹೆಂಡತಿ ಗೌಹರಳಲ್ಲಿ ಹುಟ್ಟಿದ ಇಬ್ಬರು ಮಕ್ಕಳು – ಸುಲ್ತಾನ್ ಮತ್ತು ಅಲಿ. ಒಬ್ಬ ಜ್ಞಾನ – ವಿವೇಕಗಳ ಸಾಕಾರವಾದರೆ, ಮತ್ತೊಬ್ಬ ಸ್ನೇಹ – ಪ್ರೇಮದ ಪ್ರತಿರೂಪ… ಇಬ್ಬರೂ ಅಪ್ಪನ ಗುಣಗಳನ್ನು ಹಂಚಿಕೊಂಡೇ ಹುಟ್ಟಿದ್ದರು… । ಚೇತನಾ ತೀರ್ಥಹಳ್ಳಿ; ಕೀಮಿಯಾ, ರೂಮಿಯ ಮಗಳು ಕಾದಂಬರಿಯ ಆಯ್ದ ತುಣುಕು.
ಅಲಿ! ಅಲೀ… ಅಲೀ…
ಎಲ್ಲಿ ಅಲಿ?
ಅಲಿ ಅಷ್ಟು ಸುಲಭಕ್ಕೆ ಕೈಗೆ ಸಿಗುವನೇ? ಅದರಲ್ಲೂ ಅಡುಗೆಮನೆ ತುಂಬಾ ಜೈತೂನ್ ಎಣ್ಣೆ ಚೆಲ್ಲಿ ಬಂದಿರುವಾಗ!?
ಗೌಹರ್ ಕೈಯಲ್ಲಿ ಬೆತ್ತ ಹಿಡಿದು ಮನೆಯ ತುಂಬ ಹುಡುಕುತ್ತಿದ್ದಾಳೆ. ಅವಳ ಆವೇಶ ನೋಡಿದರೆ ಅಲಿಯನ್ನು ಬಡಿದೇ ಬಿಡುತ್ತಾಳೆ ಅನ್ನುವ ಹಾಗಿದೆ!
ಆದರೆ ಗೌಹರ್ ಹಾಗೆಲ್ಲ ಬಡಿಯುವಳೇ? ಅದೂ ತನ್ನ ಮುದ್ದು ಮಗ ಅಲಿಯನ್ನು?
ಅಲಿ ಬಹಳ ತುಂಟ. ಮನೆಯಿಂದ ಹೊರಗೆ, ಅಥವಾ ಹೊರಗಿನ ಜನರ ಮುಂದೆ ಅಷ್ಟೇ ಸಭ್ಯಸ್ಥ. ಅವನ ತುಂಟಾಟಗಳ ಬಗ್ಗೆ ಅವರಿಗೆ ಹೇಳಿದರೆ ಅವರು ಒಂದಕ್ಷರವೂ ನಂಬಲಾರರು. ಅಷ್ಟು ಗಂಭೀರ.
ಅಂತಾಲ್ಯದಲ್ಲಿ ಮಸಾಲೆ ಅಂಗಡಿಗೆ ಹೋಗಿ ಅಜ್ಜನ ಪುಸ್ತಕ ತಲುಪಿಸಿದ್ದು ಇದೇ ಅಲಿ ಅಂದರೆ ಯಾರಾದರೂ ನಂಬುವರೇ!?
ಅಲಾವುದ್ದೀನ್ ಎಷ್ಟು ಸುಸಂಸ್ಕೃತ ಹುಡುಗ!
ಅಲಾವುದ್ದೀನ್ ಅಮ್ಮನ ಮುದ್ದಿನ ಮಗ. ಗೌಹರ್ – ಜಲಾಲುದ್ದೀನರ ಚೊಚ್ಚಲ ಅವಳಿ ಮಕ್ಕಳಲ್ಲಿ ಅಲಿ ಕಿರಿಯವನು. ಅವಳಿಗಳ ನಡುವೆ ಕೇವಲ ಐದೇ ನಿಮಿಷದಷ್ಟು ಅಂತರವಿತ್ತಾದರೂ ಇಬ್ಬರ ಆಸಕ್ತಿ, ನಡವಳಿಕೆ ಅಜಗಜಾಂತರ. ಜೊತೆಗೆ ಮೊದಲು ಹುಟ್ಟಿದವನಿಗೆ ಹಿರಿತನದ ಗೈರತ್ತು, ನಂತರದವನಿಗೆ ಕಿರಿತನದ ಸವಲತ್ತು!
ಅಲಿಯ ಅಣ್ಣನಿಗೆ ಬಹಾವುದ್ದೀನ್ ವಲದ್ ಎಂದು ಅಜ್ಜನ ಹೆಸರನ್ನೇ ಇಡಲಾಗಿತ್ತು. ಆದರೆ ಕರೆಯುತ್ತಿದ್ದುದು ಮಾತ್ರ ಸುಲ್ತಾನ್ ಎಂದು. ಕಿರಿಯ ಅಲಾವುದ್ದೀನ್ ಚಲಬಿ, ಎಲ್ಲರ ಬಾಯಲ್ಲಿ ಮುದ್ದು ಅಲಿಯಾಗಿದ್ದ. ನಗುವಿನಲ್ಲಿ, ಪ್ರೀತಿಸುವ ಗುಣದಲ್ಲಿ, ಸಹಾಯ ಮಾಡುವುದರಲ್ಲೆಲ್ಲ ಅಮ್ಮನನ್ನೇ ಹೊತ್ತಿದ್ದ ಅಲಿ, ಗೆಳೆತನದ ವಿಷಯದಲ್ಲಿ ಮಾತ್ರ ಪೂರ್ತಿ ಅಪ್ಪನ ಪಡಿಯಚ್ಚು. ಗೆಳೆಯರಿಗಾಗಿ ಜೀವ ಕೊಡಲೂ ತಯಾರಾಗುತ್ತಿದ್ದ. ತನ್ನ ಗೆಳೆಯರಿಗೆ ಚೂರು ತೊಂದರೆಯಾದರೂ ಸಾಕು, ತೊಂದರೆ ಕೊಟ್ಟವರ ಮೇಲೆ ಉರಿದು ಬೀಳುತ್ತಿದ್ದ. ಅಷ್ಟೆಲ್ಲ ಪ್ರೀತಿಯ ಗುಣದ ಅಲಿ ಗೆಳೆಯರ ವಿಷಯಕ್ಕೆ ಉದ್ವಿಗ್ನಗೊಳ್ಳೋದು ಅಮ್ಮನಿಗೆ ಆತಂಕ ತಂದಿತ್ತು.
ಇದೊಂದು ಅವಗುಣದ ಹೊರತಾಗಿ ಅಲಿ ಅಪ್ಪಟ ಚಿನ್ನ. ಗೌಹರ್ ಆಗಾಗ ಮಗನನ್ನು ‘ವಲಿ’ ಎಂದೂ ಕರೆಯುತ್ತಿದ್ದಳು. ಅದು ಗೆಳೆತನ ಸೂಚಿಸುವ ಪದ.
“ಅಲಿ ಇದ್ದಲ್ಲಿ ಹೂಗಳು ಅರಳುತ್ತವೆ” ಹರೇಮಿನ ಹೆಣ್ಣುಮಕ್ಕಳು ನೆಟಿಕೆ ಮುರಿದು ದೃಷ್ಟಿ ತೆಗೆಯುತ್ತಿದ್ದರು. “ಅಲಿ ಇದ್ದಲ್ಲಿ ಕಲ್ಲು ಬಂಡೆಯೂ ಮಾತಾಡುತ್ತೆ!” ಅಜ್ಜ ನಗುತ್ತಿದ್ದ. “ನನ್ನ ಅಲಿ, ಚಿಂತಾಮಣಿ!” ಅಮ್ಮ ಹೆಮ್ಮೆ ಪಡುತ್ತಿದ್ದಳು. “ಈ ಅಲಿ ನನ್ನ ಹೆಸರು ಕೆಡಿಸ್ತಾನೆ” ಅನ್ನುವ ದೂರು ಸುಲ್ತಾನ್ ದು. ಸುಲ್ತಾನ್ ಎಷ್ಟು ಗಂಭೀರನೋ ಅಲಿ ಅಷ್ಟು ತುಂಟ.
ಅಡುಗೆಮನೆಯಲ್ಲಿ ಜೈತೂನ್ ಎಣ್ಣೆ ಚೆಲ್ಲಿ ತಪ್ಪಿಸಿಕೊಂಡಿದ್ದ ಅಲಿಯನ್ನು ಅಮ್ಮ ಹಿಡಿದೇ ಹಿಡಿದಳು. ಇಂಥಾ ತುಂಟಾಟ ಮಾಡಿದಾಗೆಲ್ಲ ಅವನು ಅಡಗಿಕೊಳ್ಳುವ ಜಾಗ ಅವಳಿಗೆ ಗೊತ್ತಿತ್ತು. ಆಗೆಲ್ಲ ಅಲಿ ಕೂರುತ್ತಿದ್ದುದು ಜಲಾಲನ ಓದಿನ ಕೋಣೆಯಲ್ಲಿ. ಅಲಿ ಅಪ್ಪಿತಪ್ಪಿಯೂ ಓದಿನ ಕೋಣೆಗೆ ಹೋಗುವವನಲ್ಲ. ಆದ್ದರಿಂದ ತನ್ನನ್ನು ಅಲ್ಲಿ ಹುಡುಕೋದಿಲ್ಲ ಅನ್ನುವ ತರ್ಕ ಅವನದಾಗಿತ್ತು. ಆದರೆ ಗೌಹರ್ ಸಾಮಾನ್ಯಳಲ್ಲ. ಅವಳೂ ರಾಜಮನೆತನದ ಹೆಣ್ಣು. ಸಮರ್ ಖಂದ್ ರಾಜಕುಮಾರರಲ್ಲಿ ಒಬ್ಬನಾಗಿದ್ದ ಖಾಜಾ ಶರಾಫುದ್ದೀನ್ ಲಾಲಾನ ಮಗಳು. ಅಪ್ಪನಷ್ಟೇ ಜಾಣೆ, ಧೀರ ಗುಣದವಳು. ಅವಕಾಶ ಸಿಕ್ಕರೆ ಎಂಥ ಸನ್ನಿವೇಶವನ್ನೂ ನಿಭಾಯಿಸಬಲ್ಲ ಚಾತುರ್ಯ ಅವಳಿಗಿತ್ತು. ಅಂಥವಳು ಈ ಚಿಕ್ಕ ಅಲಿಯನ್ನು ಹುಡುಕಲಾರಳೆ?
ಹಿಂದ್ ದೇಶದ ಗಂಧದ ಅತ್ತರಿನ ಘಮಲು ಗೌಹರಳ ಮೂಗಿಗೆ ಬಡಿಯಿತು. ಅಷ್ಟು ಸಾಕಿತ್ತು, ಅಲಿಯನ್ನು ಪತ್ತೆ ಮಾಡಲು!
ಕಿವಿ ಹಿಂಡಿ ಕರೆತಂದ ಅಮ್ಮನ ಹಿಂದೆ ಕುರಿಯಂತೆ ಬಂದ ಅಲಿ. ಅಮ್ಮ ಅವನ ಕೈಗೆ ಜಪಮಾಲೆ ಕೊಟ್ಟು ಸಾವಿರ ಸಲ ಅಲ್ಲಾಹುವಿನ ಹೆಸರಲ್ಲಿ ಜಪ ಮಾಡಲು ಹೇಳಿದಳು. “ನಿನ್ನನ್ನ ಆ ದೇವರೇ ಕಾಪಾಡ್ಬೇಕು. ಜಪ ಮಾಡಿಯಾದ್ರೂ ನಿನ್ನ ತುಂಟತನ ಕಡಿಮೆಯಾಗ್ಲಿ” ಅಂದಳು. ಅವನ ಕಾವಲಿಗೆ ಸುಲ್ತಾನನ್ನು ಹಚ್ಚಿದಳು. ಅಂವ ಗೊಣಗುತ್ತಲೇ ಒಪ್ಪಿಕೊಂಡ.
ಅಲಿ ಜಪಮಣಿ ತಿರುಗಿಸುತ್ತ ಮನೆ ತುಂಬ ಓಡಾಡುತ್ತ ಜಪ ಮಾಡತೊಡಗಿದ. ಅಥವಾ ಹಾಗೆ ನಟಿಸುತ್ತಿದ್ದ. ಸುಲ್ತಾನ್ ವಿಚಾರಿಸಿದರೆ, ಮನಸಲ್ಲಿ ಹೇಳ್ಕೋತಿದ್ದೀನಿ ಅನ್ನುತ್ತಿದ್ದ.
ಸಂಜೆಯಾಗುತ್ತಿತ್ತು. ಅಲಿ – ಸುಲ್ತಾನ್ ಇಬ್ಬರೂ ಜಗುಲಿಯ ಮೇಲೆ ಕುಳಿತಿದ್ದರು. ಅಲಿಯ ಜಪ ಮುಗಿಯುತ್ತ ಬಂದಿತ್ತು. ಅಜ್ಜ ವಲದ್ ಸಾಹೇಬರು ಮಗ್ರೀಬಿನ ತಯಾರಿ ನಡೆಸಿದ್ದರು. ಜಲಾಲ್ ಆಗ ತಾನೆ ದಮಾಸ್ಕಸ್’ನಿಂದ ಮರಳಿ ಬಂದು ಕೈ-ಕಾಲು ತೊಳೆದು ಕುಳಿತಿದ್ದ.
ಅದೇ ವೇಳೆಗೆ ಅಲ್ಲಿಗೊಬ್ಬ ಆಗಂತುಕ ಬಂದ. ಅವನ ಕೈಯಲ್ಲೂ ಜಪಮಾಲೆ ಇತ್ತು. ಅದರ ಮಣಿ ತಿರುಗಿಸುತ್ತಲೇ ಅವನು ಜಲಾಲ್ ಜೊತೆ ಮಾತಿಗೆ ತೊಡಗಿದ.
ಅವನನ್ನು ನೋಡಿ ಕುತೂಹಲ ತಾಳಲಾರದೇ ಅಲಿ, “ನೀವೂ ಜೈತೂನ್ ಎಣ್ಣೆ ಚೆಲ್ಲಿದ್ದಿರಾ?” ಎಂದು ಕೇಳಿಬಿಟ್ಟ.
ಅಲಿಗೆ ಜನರು ಒಂದೆಡೆ ಕೂತು ಜಪಮಾಲೆ ತಿರುಗಿಸೋದು ಗೊತ್ತು. ಅಜ್ಜ ಮನೆಯಲ್ಲಿದ್ದಾಗ ದಿನದ ಬಹುಪಾಲು ಮಾಡೋದು ಅದನ್ನೇ. ಆದರೆ ಇವರು ತನ್ನಂತೆ ಬರೀ ಮಣಿ ತಿರುಗಿಸ್ತಿದ್ದಾರೆ, ಊರೆಲ್ಲ ಅಲೆಯುತ್ತಿದ್ದಾರೆ. ಜೊತೆಗೆ ಅಪ್ಪನ ಜೊತೆ ಮಾತೂ ಆಡುತ್ತಿದ್ದಾರೆ! ಅಂದ ಮೇಲೆ ಇವರಿಗೂ ನನ್ನ ಹಾಗೇ ಜಪಮಣಿ ತಿರುಗಿಸುವ ಶಿಕ್ಷೆ ಸಿಕ್ಕಿರಬೇಕು! ಶಿಕ್ಷೆಗೆ ಕಾರಣ ಎಣ್ಣೆ ಚೆಲ್ಲಿದ್ದೇ ಆಗಿರಬೇಕು!! ಅಲಿ ತರ್ಕಿಸಿದ.
ಅವನ ಮಾತಿಗೆ ಜಗಲಿಯಲ್ಲಿದ್ದವರೆಲ್ಲ ನಕ್ಕುಬಿಟ್ಟರು. ಅಷ್ಟೂ ಹೊತ್ತು ಅಲಿಯ ಮೇಲೆ ಮುನಿಸಿಕೊಂಡಿದ್ದ ಗೌಹರಳೂ ನಕ್ಕಳು. ಸುಲ್ತಾನ್ ತಮ್ಮನ ಹೆಗಲು ಜಗ್ಗುತ್ತಾ ಮೆಲ್ಲನೆ ಗದರಿದ, “ಅವರೂ ಜಪಮಾಲೆ ತಿರುಗಿಸ್ತಿದಾರೆ ಅಂದ ಮಾತ್ರಕ್ಕೆ ಅವರಿಗೂ ಅವರಮ್ಮ ಶಿಕ್ಷೆ ಕೊಟ್ಟಿದಾರೆ ಅಂತಲ್ಲ. ಅವರು ನಿಜವಾಗ್ಲೂ ಮನಸಲ್ಲೇ ಜಪ ಮಾಡ್ತಿರಬಹುದು. ಅಪ್ಪ ಹೇಳಿದ್ದು ನೆನಪಿಲ್ವಾ? ಮತ್ತೊಬ್ಬರು ನಮ್ಮ ಹಾಗೇ ವರ್ತಿಸ್ತಿದ್ದಾರೆ ಅಂದ ಮಾತ್ರಕ್ಕೆ ಅವರೂ ನಮ್ಮ ಹಾಗೇ ಅಂದ್ಕೋಬಾರ್ದು ಅಂತ? ಎಲ್ಲರ ಪಾಲಿಗೂ ಸಮಯ – ಸಂದರ್ಭ ಬೇರೆ ಇರುತ್ತೆ ಅಂತ?”
ಅಲಿ ತನ್ನ ತರ್ಕಕ್ಕೆ ನಾಚಿ ಮುಖ ಮುಚ್ಚಿಕೊಂಡ. ವಲದ್ ಸಾಹೇಬರಿಗೆ ಅಲಿಯ ಮೇಲೆ ಮುದ್ದು ಉಕ್ಕಿದರೂ ಸುಲ್ತಾನನ ವಿವೇಕದ ಬಗ್ಗೆ ಹೆಮ್ಮೆಯಾಯಿತು. ತಮ್ಮ ಕುಟುಂಬಕ್ಕೆ ಸರಿಯಾದ ಉತ್ತರಾಧಿಕಾರಿಯೇ ಹುಟ್ಟಿದ್ದಾನೆ ಅಂದುಕೊಂಡ. ಜಲಾಲನೂ ಸುಲ್ತಾನನ ಬುದ್ಧಿವಂತಿಕೆ, ನೆನಪಿನ ಶಕ್ತಿಗಳನ್ನು ಮೆಚ್ಚಿ ಕೊಂಡಾಡಿದ. ಇದರಿಂದ ಅಲಿಗೇನೂ ಹೊಟ್ಟೆಕಿಚ್ಚಾಗಲಿಲ್ಲ. “ನನ್ನಣ್ಣ ಎಷ್ಟು ಜಾಣ!” ಅನ್ನುತ್ತಾ ಕುಳಿತಲ್ಲೇ ಅವನನ್ನು ತಬ್ಬಿಕೊಂಡ. ಅಲಿಯ ಈ ಪ್ರೀತಿಯ ವ್ಯವಹಾರ ಎಲ್ಲವನ್ನೂ ತಿಳಿಯಾಗಿಸಿತು.
ವಿ.ಸೂ: ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನೈಜ, ಕತೆಗಳು ಕಾಲ್ಪನಿಕ.

