ಬಯಕೆ – ತುಡಿತಗಳ ನಡುವಿನ ವ್ಯತ್ಯಾಸ : ಓಶೋ ವ್ಯಾಖ್ಯಾನ

ಮನುಷ್ಯ ಜ್ಞಾನಕ್ಕಾಗಿ ಹಾತೊರೆಯುತ್ತಾನಾದರೆ ಅರಿವನ್ನು ಹೊಂದಲು ತುಡಿಯುತ್ತಾನೆ. ಮನುಷ್ಯ ಜಗತ್ತನ್ನು ಹೊಂದಲು ಬಯಸುವುದು ಬಯಕೆಯಾದರೆ, ದೇವರನ್ನು ಕಂಡುಕೊಳ್ಳಲು ಹಾತೊರೆಯುವುದು ತುಡಿತ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ಯಾವ ದಿಕ್ಕಾದರೂ ಸರಿ
ಅಂಥ ವ್ಯತ್ಯಾಸವೆನೂ ಆಗದು.

ನಿಮ್ಮ ಗುರಿ ಏನಾದರೂ ಇರಲಿ,
ಆದರೆ ಪ್ರತೀ ಪ್ರಯಾಣ
ನಿಮ್ಮ ಆಂತರ್ಯದ ಪ್ರಯಾಣವಾಗುವುದನ್ನ
ಖಚಿತಪಡಿಸಿಕೊಳ್ಳಿ ದಯಮಾಡಿ.

ನೀವು ನಿಮ್ಮ ಅಂತರಂಗವನ್ನು ಪ್ರವೇಶಿಸಿದಾಗ
ಇಡೀ ಜಗತ್ತನ್ನೇ ಎದುರುಗೊಳ್ಳುತ್ತೀರಿ
ಮತ್ತು ಜಗತ್ತಿನಾಚೆಗೂ ಹೆಜ್ಜೆ ಹಾಕುತ್ತೀರಿ.

~ ಶಮ್ಸ್ ತಬ್ರೀಝಿ


ಬಯಕೆ ಎನ್ನುವುದು ನಿಮ್ಮ ಹೊರಗೆ ಇರುವುದನ್ನ ಬಯಸುವುದಾದರೆ, ತುಡಿತ ಎಂದರೆ ನಿಮ್ಮ ಒಳಗೇ ಇರುವುದಕ್ಕಾಗಿ ಹಾತೊರೆಯುವುದು. ಬಯಕೆ ವಸ್ತುನಿಷ್ಠವಾದರೆ, ತುಡಿತ ವ್ಯಕ್ತಿನಿಷ್ಠವಾದದ್ದು. ಗುಲಾಬಿ ಕಮಲ ಆಗಲು ಆಸೆಪಡುವುದು ಬಯಕೆ ಆದರೆ, ಗುಲಾಬಿ ಸುಂದರ ಗುಲಾಬಿಯಾಗಲು ಬಯಸುವುದು ತುಡಿತ. ಬೀಜ ಮೊಳಕೆಯೊಡೆದು ಸಸಿಯಾಗಿ ಮರವಾಗಲು ಬಯಸುವುದು ತುಡಿತ ಆದರೆ, ಬೀಜ ಚಿಟ್ಟೆಯಾಗಲು ಬಯಸುವುದು ಬಯಕೆ.

ಬಯಕೆ ಎನ್ನುವುದು ಅಸಂಗತವಾದರೆ, ತುಡಿತ ಅಸ್ತಿತವಾದಿ. ತುಡಿತ ಎನ್ನುವುದು ಪೂರ್ಣ ಸುಂದರ ಪ್ರಕ್ರಿಯೆ, ಬಯಕೆ ಮಹಾ ಅಪಾಯಕಾರಿ. ಈ ಎರಡರ ನಡುವಿನ ವ್ಯತ್ಯಾಸ ತುಂಬ ಸೂಕ್ಷ್ಮವಾದದ್ದು ಆದ್ದರಿಂದ ಈ ಕುರಿತಾಗಿ ಸದಾ ಎಚ್ಚರದಲ್ಲಿರಬೇಕು. ತುಡಿತ ಎನ್ನುವುದು ಒಳಗಿನದನ್ನು ತೆರೆದುಕೊಳ್ಳುವುದಾದರೆ, ಬಯಕೆ ಹೊರಗಿನದನ್ನು ಸಂಗ್ರಹಿಸುವುದು. ಮನುಷ್ಯ ಹಣವನ್ನು ಬಯಸುತ್ತಾನಾದರೆ ಧ್ಯಾನಕ್ಕಾಗಿ ತುಡಿಯುತ್ತಾನೆ. ಮನುಷ್ಯ ಅಧಿಕಾರವನ್ನು ಬಯಸುತ್ತಾನಾದರೆ ಅಂತರಂಗದ ಶುದ್ಧತೆಗಾಗಿ ತುಡಿಯುತ್ತಾನೆ.

ಮನುಷ್ಯ ಜ್ಞಾನಕ್ಕಾಗಿ ಹಾತೊರೆಯುತ್ತಾನಾದರೆ ಅರಿವನ್ನು ಹೊಂದಲು ತುಡಿಯುತ್ತಾನೆ. ಮನುಷ್ಯ ಜಗತ್ತನ್ನು ಹೊಂದಲು ಬಯಸುವುದು ಬಯಕೆಯಾದರೆ, ದೇವರನ್ನು ಕಂಡುಕೊಳ್ಳಲು ಹಾತೊರೆಯುವುದು ತುಡಿತ.

ಹಾಗಾಗಿ ನಿಮ್ಮ ಎಲ್ಲ ಸಾಮರ್ಥ್ಯವನ್ನ ಬಯಕೆಯಿಂದ ತುಡಿತಕ್ಕೆ ವರ್ಗಾಯಿಸಿ. ಬಯಕೆ, ನಿಮ್ಮ ತಾವೋದಿಂದ, ನಿಮ್ಮ ಧರ್ಮದಿಂದ, ನಿಮ್ಮ ಪ್ರಕೃತಿಯಿಂದ ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತದೆ. ಬಯಕೆ ನಿಮ್ಮ ದಾರಿ ತಪ್ಪಿಸುತ್ತದೆ, ಸಾಧ್ಯವಾಗದ ಫ್ಯಾಂಟಸಿಗಳಲ್ಲಿ ಸಾಧ್ಯವಾಗದ ಭರವಸೆಗಳಲ್ಲಿ ನಿಮ್ಮನ್ನು ಕೆಡವಿ ಹುಚ್ಚರನ್ನಾಗಿಸುತ್ತದೆ. ಬಯಕೆ ಸಮಯ, ಸಾಮರ್ಥ್ಯ, ಬದುಕು ಎಲ್ಲವನ್ನೂ ವ್ಯರ್ಥಗೊಳಿಸುತ್ತದೆ, ಕೊನೆಗೂ ನಿಮ್ಮೊಳಗೆ ಉಳಿದುಕೊಳ್ಳುವುದು ಹತಾಶೆ ಮಾತ್ರ. ಆದರೆ ತುಡಿತ ನಿಮ್ಮ ಪರಿಪೂರ್ಣತೆಯನ್ನು ಸಾಧ್ಯಮಾಡುತ್ತದೆ.

ಶ್ರೀಮಂತರಾಗಲು ಹಾತೊರೆಯುವುದು ಬಯಕೆಯಾದರೆ, ಸತ್ಯವಂತರಾಗಲು ಹಾತೊರೆಯುವುದು ತುಡಿತ. ಬಯಕೆ ಇನ್ನೊಬ್ಬರ ಮೇಲೆ ಅವಲಂಬಿಸಿದೆಯಾದರೆ ತುಡಿತ ಕೇವಲ ನಿಮ್ಮ ಸ್ವಂತದ ಸಹಾಯವನ್ನು ಎದುರು ನೋಡುತ್ತಿದೆ, ಅದು ನಿಮ್ಮ ಸ್ವಂತದ ಅರಳುವಿಕೆ. ನಿಮ್ಮೊಳಗೆ ಇರುವುದು ಅರಳುವುದಕ್ಕಾಗಿ, ಸರಿಯಾದ ಮಣ್ಣು, ಸರಿಯಾದ ಕಾಲಕ್ಕಾಗಿ ತುಡಿಯುತ್ತಿದೆ.

ಒಬ್ಬ ಝೆನ್ ಸಾಧಕನಿದ್ಧ, ಅವನು ಬಹಳ ನಿಷ್ಠುರ ಸತ್ಯಗಳನ್ನು ಹೇಳುವವನೂ, ಖಚಿತ ಮತಿಯೂ ಆಗಿದ್ದ. ಮತ್ತು ಈ ಕಾರಣಗಳಿಂದಾಗಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದ. ಅವನ ಈ ಜನಪ್ರಿಯತೆ ಕೆಲವರಿಗೆ ಮಗ್ಗಲ ಮುಳ್ಳಾಗಿತ್ತು. ಆ ಪ್ರದೇಶದ ಪುರೋಹಿತಶಾಹಿ ಅವನನ್ನು ದ್ವೇಷಿಸುತ್ತಿತ್ತು.

ಅದು ಹೇಗೋ ಝೆನ್ ಸಾಧಕ ತನ್ನ ಜೋಳಿಗೆಯಲ್ಲಿ ಸದಾ ಒಂದು ಕನ್ನಡಿಯನ್ನಿಟ್ಟುಕೊಳ್ಳುವುದು ಒಬ್ಬ ಪುರೋಹಿತನಿಗೆ ಗೊತ್ತಾಗಿಹೋಯಿತು. ತನ್ನ ರೂಪ ಸೌಂದರ್ಯಗಳನ್ನು ಪ್ರೇಮಿಸುವುದು ಮತ್ತು ಇವುಗಳ ಸಲುವಾಗಿ ಸಮಯ ವ್ಯರ್ಥ ಮಾಡುವುದನ್ನ ಝೆನ್ ಒಪ್ಪುವುದಿಲ್ಲ, ಝೆನ್ ನಲ್ಲಿ ಅಂತರಂಗದ ಚೆಲುವಿಗೆ ಮಾತ್ರ ಪ್ರಾಧಾನ್ಯ ಮತ್ತು ಸಾಧಕ ವರ್ಷಗಟ್ಟಲೇ ತನ್ನ ಸಹಜ ಸೌಂದರ್ಯವನ್ನು ಕಂಡುಕೊಳ್ಳಲು ಸಾಧನೆ ಮಾಡುತ್ತಾನೆ. ಇಂಥದರಲ್ಲಿ ಈ ಝೆನ್ ಸಾಧಕ ಕನ್ನಡಿಯಂಥ ಅಲಂಕಾರದ ವಸ್ತುವನ್ನು ಸದಾ ಬಳಸುವುದನ್ನ ಜನರಿಗೆ ಎತ್ತಿ ತೋರಿಸಿ ಸಾಧಕನಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ಆ ಪುರೋಹಿತ, ಝೆನ್ ಸಾಧಕ ಉಪನ್ಯಾಸ ಮಾಡುತ್ತಿದ್ದ ಜಾಗಕ್ಕೆ ಬಂದು ಅವನಿಗೆ ಸವಾಲು ಹಾಕಿದ.

“ ಕನ್ನಡಿಯಂಥ ಅಲಂಕಾರಿಕ ಸಾಮಗ್ರಿಯನ್ನ ನೀನು ಸದಾ ನಿನ್ನ ಜೊತೆಯಲ್ಲಿಟ್ಟುಕೊಳ್ಳುವುದು ಝೆನ್ ಗೆ ಮತ್ತು ನೀನು ಉಪದೇಶ ಹೇಳುತ್ತಿರುವ ಮಾತುಗಳಿಗೆ ವಿರುದ್ಧ ಅಲ್ಲವೆ? ಈ ಸಂಗತಿಯಿಂದ ನೀನು ಎಂಥ ಸುಳ್ಳು ಮನುಷ್ಯ ಎನ್ನುವುದು ಗೊತ್ತಾಗುತ್ತದೆ. “

ಝೆನ್ ಸಾಧಕ ತನ್ನ ಜೋಳಿಗೆಯಿಂದ ಕನ್ನಡಿಯನ್ನು ಹೊರತೆಗೆದು ಪುರೋಹಿತನ ಎದುರು ಹಿಡಿದು ಹೇಳಿದ.

“ ಈ ಕನ್ನಡಿ ನನ್ನ ಬಹಿರಂಗದ ಅಲಂಕಾರದ ಸಲುವಾಗಿ ಅಲ್ಲ, ನನ್ನ ಅಂತರಂಗವನ್ನು ಕಂಡುಕೊಳ್ಳುವುದಕ್ಕಾಗಿ. ನಾನು ಈ ಕನ್ನಡಿಯನ್ನ ನನಗೆ ತುಂಬ ಗಂಭೀರ ಸಮಸ್ಯೆ ಎದುರಾದಾಗ ಬಳಸುತ್ತೇನೆ. ಸಮಸ್ಯೆ ಎದುರಾದಾಗ ನಾನು ಈ ಕನ್ನಡಿಯಲ್ಲಿ ದಿಟ್ಟಿಸುತ್ತೇನೆ, ಆಗ ನನಗೆ ಕನ್ನಡಿಯಲ್ಲಿ ನನ್ನ ಸಮಸ್ಯೆಯ ಮೂಲ ಕಾರಣ ಮತ್ತು ನನ್ನ ಸಮಸ್ಯೆಯ ಪರಿಹಾರ ಎರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಈ ಕನ್ನಡಿ ನನ್ನ ಬಯಕೆಗಳ ಪೂರ್ತಿಗಳಿಗಲ್ಲ, ನನ್ನ ತುಡಿತಗಳ ಸಾಧನೆಗೆ, ಹಾಗಾಗಿ ಇದೊಂದು ಜಾದು ಕನ್ನಡಿ. “

ಝೆನ್ ಸಾಧಕನ ಮಾತು ಕೇಳಿ ಪುರೋಹಿತ ನಾಚಿಕೊಂಡು ಸಭೆ ಬಿಟ್ಟು ಹೊರಟು ಹೋದ.


Source: Ōshō / The Perfect~ Master/ Volume-2

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.