ಸಾಲ ಮಾಡಿಯಾದರೂ ದಾನ ಮಾಡುವುದು ವ್ಯಂಗ್ಯವಾಗಿ ತೋರಬಹುದು. ಆದರೆ ದಾನ ಮಾಡುವವರಿಗೂ, ಅವರಿಗೆ ಸಾಲ ಕೊಟ್ಟವರಿಗೂ ಅಸಲು ಸಿಕ್ಕೇಸಿಗುವುದು ಅನ್ನುತ್ತಾನೆ ರೂಮಿ… । ಮಸ್ನವಿ ಇಂದ ಆಯ್ದ ಕತೆ; ಕನ್ನಡಕ್ಕೆ: ಪ್ರಣವ ಚೈತನ್ಯ
ಒಮ್ಮೆ ಒಂದು ಚಿಕ್ಕ ಊರಿನಲ್ಲಿ ಒಬ್ಬ ಶೇಖ್ ವಾಸವಿದ್ದ. ಅವನು ಆ ಊರಿನಲ್ಲಿ ಹೆಚ್ಚು ಗೌರವ ಮತ್ತು ಮೆಚ್ಚುಗೆ ಪಡೆದುಕೊಂಡು ಆ ಊರಿನ ಅತ್ಯಂತ ಮುಖ್ಯವಾದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ. ದಾನ ಮಾಡುವುದಕ್ಕೇ ಖ್ಯಾತನಾಗಿದ್ದ ಅವನು ತನ್ನ ಬಳಿ ಇರುವ ಎಲ್ಲಾ ಧನ – ಸಂಪತ್ತನ್ನೂ ದಾನ ಮಾಡಿಬಿಟ್ಟಿದ್ದ.ಕೊನೆಗೆ ಬೇರೆಯವರ ಬಳಿ ಹಣ ಸಾಲ ಪಡೆದು ದಾನ ನೀಡಲಾರಂಭಿಸಿದ. ಇದರಿಂದ ಅವನು ಸಾಲದ ಸುಳಿಯಲ್ಲಿ ಮುಳುಗಿದ. ಒಮ್ಮೆ ಒಬ್ಬ ಶ್ರೀಮಂತನು ಕೊಟ್ಟ ಹಣದಿಂದ ಒಂದು ಚಿಕ್ಕ ಗುಡಿಸಲು ಮನೆಯನ್ನು ತನಗಾಗಿ ಕಟ್ಟಿಕೊಂಡ, ಆದರೆ ಆ ಮನೆಯನ್ನು ಕಟ್ಟಿದ ಕೆಲವು ದಿನಗಳಲ್ಲೇ ಅವನ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಅವನು ಸಾಯುವ ಸ್ಥಿತಿಗೆ ಹೋದ. ಅವನಿಗೆ ಸಾಲ ನೀಡಿದ್ದ ವ್ಯಕ್ತಿಗಳು ಅವನ ಮನೆಗೆ ಬಂದು ನೋಡಿದಾಗ ಹಾಸಿಗೆ ಹಿಡಿದಿದ್ದ ಈ ಶೇಖ್ ತನ್ನ ಜೀವನದ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದ.
“ನೋಡು ಈ ಸೈತಾನರನ್ನು… ಸಾಯುತ್ತಿರುವ ಮನುಷ್ಯನ ಮನೆಗೆ ಬಂದು ದುಡ್ಡಿಗಾಗಿ ಕಾಯುತ್ತಿದ್ದಾರೆ. ಇವರಿಗೆ ತಿಳಿದಿಲ್ಲವೇ? ದೇವರು ನನ್ನ ಸಾಲವನ್ನು ತೀರಿಸುವವನು” ಎಂದು ತನ್ನ ಮನಸ್ಸಿನಲ್ಲೆ ಆ ಶೇಖ್ ಯೋಚಿಸಿದ. ಆ ಕ್ಷಣದಲ್ಲೇ ಒಬ್ಬ ಚಿಕ್ಕ ಹುಡುಗ ಸಿಹಿ ತಿಂಡಿಗಳನ್ನು ಮಾರುತ್ತಾ ಆ ಬೀದಿಗೆ ಬಂದ, ಅವನ ಧ್ವನಿ ಕೇಳಿದ ಶೇಖ್ ತನ್ನ ಕೆಲಸದವನಿಗೆ “ಹೋಗಿ ಆ ಹುಡುಗನ ಬಳಿ ಇರುವ ಅಷ್ಟು ಸಿಹಿ ತಿಂಡಿಗಳನ್ನು ತೆಗೆದುಕೊಂಡು ಬಾ” ಎಂದ. ಕೆಲಸದವನು ಆ ಹುಡುಗನ ಬಳಿಗೆ ಹೋಗಿ ಚೌಕಾಸಿ ಮಾಡಿ ಒಂದು ನಾಣ್ಯಕ್ಕೆ ತಟ್ಟೆಯಲ್ಲಿದ್ದ ಅಷ್ಟು ಸಿಹಿ ತಿಂಡಿಗಳನ್ನು ತೆಗೆದುಕೊಂಡು ಬಂದ. ಆ ಸಿಹಿ ತಿಂಡಿಗಳನ್ನು ಸಾಲ ಪಡೆಯಲು ಬಂದಿರುವ ವ್ಯಕ್ತಿಗಳಿಗೆ ನೀಡೆಂದು ಶೇಖ್ ತನ್ನ ಕೆಲಸದವನಿಗೆ ಸನ್ನೆ ಮಾಡಿದ. ಸಾಲ ಪಡೆಯಲು ಬಂದಿದ್ದ ವ್ಯಕ್ತಿಗಳೆಲ್ಲಾ ಸಿಹಿ ತಿಂಡಿ ತಿನ್ನಲಾರಂಭಿಸಿದರು. ಆದರೆ, ಆ ಹುಡುಗನಿಗೆ ಸಿಹಿ ತಿಂಡಿಯ ಹಣವನ್ನು ಇನ್ನೂ ಶೇಖ್ ನೀಡಿರಲಿಲ್ಲ. ಆ ಹುಡುಗನು ಹಣವನ್ನು ಕೇಳಿದಾಗ “ನಾನು ಸಾಯುತ್ತಿದ್ದೇನೆ, ಹಾಸಿಗೆ ಹಿಡಿದಿರುವೆ, ಹಣವನ್ನು ಹೇಗೆ ಕೊಡಲಿ? ನನಗೆ ನೆಮ್ಮದಿಯಿಂದ ಇರಲು ಬಿಡು, ಇಲ್ಲಿಂದ ಹೋಗು” ಎಂದ ಶೇಖ್.
ಶೇಖ್ ಮಾತುಗಳನ್ನು ಕೇಳಿದ ಹುಡುಗನ ಕಣ್ಣಲ್ಲಿ ನೀರು ಬಂತು ಅಲ್ಲೇ ಕುಳಿತುಬಿಟ್ಟ, ಜೋರಾಗಿ ಅಳಲು ಶುರುಮಾಡಿದ. ಅವನ ಅಳುವಿನ ಸದ್ದು ಕೇಳಿ ಶೇಖ್ ಮನೆಸುತ್ತಲೂ ಜನ ಸೇರಿದರು. “ಓ ಶೇಖ್, ದಯವಿಟ್ಟು ನನಗೆ ನನ್ನ ದುಡ್ಡು ಕೊಟ್ಟುಬಿಡಿ, ಇಲ್ಲವಾದರೆ ಅಂಗಡಿ ಮಾಲೀಕರು ನನ್ನ ಕಾಲು ಮುರಿಯುತ್ತಾರೆ” ಎಂದು ಆ ಹುಡುಗ ಬೇಡಿಕೊಂಡ. “ನಮ್ಮ ಹಣವನ್ನು ನೀರಿನಲ್ಲಿ ಹೋಮ ಮಾಡಿದೆ, ಆದರೆ ಈ ಚಿಕ್ಕ ಹುಡುಗನಿಗೆ ನೀನು ಹೀಗೆ ಮಾಡಿದ್ದು ತಪ್ಪು” ಎಂದು ಸಾಲ ಪಡೆಯಲು ಬಂದಿದ್ದ ವ್ಯಕ್ತಿಗಳು ವ್ಯಂಗ್ಯವಾಗಿ ಶೇಖ್ ಗೆ ಹೇಳಿದರು.
ಶೇಖ್ ತಾನು ಬೇರೆ ಲೋಕದಲ್ಲೇ ಇದ್ದಂತೆ ಕಣ್ಣು ಮುಚ್ಚಿಕೊಂಡು ಮಲಗಿಬಿಟ್ಟ. ಆದರೆ ಆ ಹುಡುಗ ಅಳುವುದನ್ನು ನಿಲ್ಲಿಸಲಿಲ್ಲ, ಸಂಜೆಯಾಯಿತು, ಶೇಖ್ ಮನೆಗೆ ಒಬ್ಬ ಶ್ರೀಮಂತನ ಸೇವಕ ಬಂದ, ಅವನ ಕೈಯಲ್ಲಿ ಒಂದು ತಟ್ಟೆ ಇತ್ತು. ಶೇಖ್ ಆ ಹುಡುಗನಿಗೆ ತಟ್ಟೆಯ ಮೇಲಿದ್ದ ಹೊದಿಕೆಯನ್ನು ತೆಗೆಯಲು ಹೇಳಿದ. ಹುಡುಗನು ಹೊದಿಕೆ ತೆಗೆಯುತ್ತಿದ್ದಂತೆ ಶೇಖ್ ಮನೆಯಲ್ಲಿ ಇದ್ದ ಎಲ್ಲರಿಗೂ ಅಚ್ಚರಿಯಾಯಿತು. ಆ ಶ್ರೀಮಂತನು ಶೇಖ್ ಸಾಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದು ಅವರಿಗೆ ಸಹಾಯ ಮಾಡಲು ಸಿಹಿ ತಿಂಡಿಗಳು ಮತ್ತು ಅದರ ಜೊತೆಗೆ ನಾಲ್ಕು ನೂರು ನಾಣ್ಯಗಳನ್ನು ಕಳಿಸಿದ್ದ. “ಇದರಲ್ಲಿ ನಿಮ್ಮ ಪಾಲು ನೀವು ತೆಗೆದುಕೊಂಡು ಹೋಗಿ, ನಿಮಗೆಲ್ಲ ಒಳ್ಳೆಯದಾಗಲಿ” ಎಂದ ಶೇಖ್.
ಒಳ್ಳೆಯದ್ದನು ಮಾಡಿದರೆ, ಒಳ್ಳೆಯದೇ ಆಗುವುದು ಎಂದು ತುಂಬ ಹಿಂದಿನಿಂದ ಹೇಳಿಕೊಂಡು ಬಂದಿದ್ದಾರೆ ನಮ್ಮ ಪೂರ್ವಜರು. ಈ ಕತೆ ಇದಕ್ಕೆ ಸಾಕ್ಷಿ.

