ದಡ್ಡ ತೋಳ, ಜಾಣ ನರಿ ಮತ್ತು ಸರ್ವಾಧಿಕಾರಿ ಸಿಂಹ : ರೂಮಿಯ ‘ಮಸ್ನವಿ’ಯಿಂದ #11

ಬೇಟೆಗೆಂದು ಒಕ್ಕೂಟ ಮಾಡಿಕೊಂಡರೂ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ವನರಾಜ ತನಗಷ್ಟೇ ಉಳಿಸಿಕೊಂಡ. ಜಾಣ ನರಿ, ದಡ್ಡತನದಿಂದ ಜೀವತೆತ್ತ ತೋಳವನ್ನು ಕಂಡು ಸೋಗಿನ ಮಾತಾಡುವ ಪಾಠ ಕಲಿಯಿತು. ನರಿಯ ಭಯವನ್ನೂ, ಧೂರ್ತ ವಿನಯವನ್ನೂ ಕಂಡ ಸಿಂಹ ಮಾತ್ರ ಅದನ್ನು ಅದರ ಪ್ರೇಮಪೂರ್ಣ ವ್ಯವಹಾರವೆಂದೇ ಬಗೆಯಿತು! । ರೂಮಿ ಹೇಳಿದ ಕತೆ, ಮಸ್ನವಿಯಿಂದ; ಕನ್ನಡ ನಿರೂಪಣೆ: ಚೇತನಾ ತೀರ್ಥಹಳ್ಳಿ

ಒಂದಾನೊಂದು ಕಾಡಿನಲ್ಲಿ ವನರಾಜ ಸಿಂಹದೊಡನೆ ತೋಳ ಮತ್ತು ನರಿ ಬೇಟೆಯ ಪಾಲುದಾರರಾಗಿ ಸೇರಿಕೊಂಡವು. ಸಿಂಹಕ್ಕೆ ತಾನು ತನಗಿಂತ ಕೀಳಾದ ತೋಳ ಮತ್ತು ನರಿಯ ಜೊತೆ ಕಾಣಿಸಿಕೊಳ್ಳೋದು ಇಷ್ಟವಿರಲಿಲ್ಲ. ಆದರೂ, ತನಗೆ ಬೇಕಿರಲಿ ಇಲ್ಲದಿರಲಿ ಸೂರ್ಯ ತನ್ನ ಬೆಳಕನ್ನು ಹಂಚುವ ಹಾಗೆ ಕಾಡಿನ ರಾಜನಾದ ತಾನು ದುರ್ಬಲರ ಮೇಲೆ ಔದಾರ್ಯ ತೋರುವುದು ಧರ್ಮ ಅಂದುಕೊಂಡು ಸುಮ್ಮಗಾಯಿತು.

ಈ ಮೂವರ ಮೊದಲನೆ ಜಂಟಿ ಕಾರ್ಯಾಚರಣೆ ಅದ್ಭುತ ಯಶಸ್ಸು ಕಂಡಿತು. ಸಿಂಹದ ಮೇಲುಸ್ತುವಾರಿಯಲ್ಲಿ ಬೆಟ್ತದ ಮೇಲೆ ನಡೆಸಿದ ಬೇಟೆಯಲ್ಲಿ ಒಂದು ಎತ್ತು, ಒಂದು ಹೋತ ಮತ್ತು ಒಂದು ಮೊಲ ದೊರೆತವು. ಬೇಟೆಯಾಡುವುದಷ್ಟೆ ತನ್ನ ಕೆಲಸ ಎಂಬಂತೆ ಸಿಂಹ ಆ ಮೂರು ಬೇಟೆಗಳನ್ನು ಹಲ್ಲಿನಲ್ಲಿ ಕಚ್ಚಿ ನೆಲದ ಮೇಲೆ ಬಿಸಾಡಿ ತನ್ನ ಪಾಡಿಗೆ ಮುಂದೆ ಹೆಜ್ಜೆ ಹಾಕಿತು, ಆಗಾಗ ಹಿಂದಿರುಗಿ ನೋಡುತ್ತಾ. ಅವನ್ನು ಬೆಟ್ಟದಿಂದ ಕೆಳಗಿಳಿಸಿ ಕಾಡಿಗೆ ಒಯ್ಯುವುದೀಗ ನರಿ ಮತ್ತು ತೋಳದ ಕೆಲಸ.

ತೋಳ ಮತ್ತು ನರಿ ಬೇಟೆಗಳನ್ನು ಎಳೆದುಕೊಂಡು ಬೆಟ್ಟ ಇಳಿಯುತ್ತಿದ್ದರೂ ಅವುಗಳ ಮನಸ್ಸಿನಲ್ಲಿ ದೊಡ್ಡ ಯುದ್ಧವೇ ನಡೆದಿತ್ತು. ಕಷ್ಟಪಟ್ಟು ಬೇಟೆಯಾಡಿದ್ದಾಯ್ತು. ಈಗ ಇರುವ ಶಕ್ತಿಯೆಲ್ಲ ಸುರಿದು ಕೆಳಕ್ಕೆ ಒಯ್ಯುವ ಕೆಲಸ. ಮೊದಲೇ ಹಸಿವು, ಜೊತೆಗೆ ಶ್ರಮದ ಮೈಕೈ ನೋವು. ಈ ಕಾಡಿನ ರಾಜ ನಮಗೆ ಬೇಟೆಯಲ್ಲಿ ಎಷ್ಟು ಪಾಲು ಕೊಡ್ತಾನೆ ಅನ್ನೋದೂ ಗೊತ್ತಿಲ್ಲ!

ಅವು ಸನ್ನೆಯಲ್ಲೇ ಪರಸ್ಪರ ಅನುಮಾನ ತೋಡಿಕೊಂಡವು. ಆದರೂ ನರಿಗೆ ಮೂಲೆಯಲ್ಲೆಲ್ಲೋ ಆಸೆ, ಕಾಡಿನ ರಾಜನಾದ್ದರಿಂದ ಸಿಂಹ ಹೆಚ್ಚು ಔದಾರ್ಯ ತೋರಬಹುದು. ಅಥವಾ ತನ್ನ ಪ್ರತಿಷ್ಠೆಗಾಗಿಯಾದರೂ ನಮಗೆ ಹೆಚ್ಚಿನ ಪಾಲು ಕೊಡಬಹುದು!

ಮುಂದೆ ನಡೆಯುತ್ತಿದ್ದ ಸಿಂಹಕ್ಕೆ ನರಿ ಮತ್ತು ತೋಳಗಳ ಆಲೋಚನೆ ತಿಳಿದುಹೋಯ್ತು. ಈಗಲೇ ಏನೂ ಹೇಳೋದು ಬೇಡ. ಸರಿಯಾದ ಸಮಯಕ್ಕೆ ಸರಿಯಾದ ಉತ್ತರ ಕೊಟ್ಟರಾಯ್ತು ಅಂದುಕೊಂಡಿತು. “ಈ ಕೀಳು ಪ್ರಾಣಿಗಳಿಗೆ ನನ್ನ ಸಹವಾಸವೇ ಎಷ್ಟು ಅಮೂಲ್ಯ. ಇವೆರಡೂ ನನ್ನ ಜೊತೆ ಬೇಟೆಯಾಡುವ ಅವಕಾಶ ಪಡೆದಿದ್ದೇ ಇವುಗಳ ಜನ್ಮಕ್ಕೆ ಸಿಕ್ಕ ಅದೃಷ್ಟ! ಬೇಟೆಯನ್ನು ಹೇಗೆ ಪಾಲು ಮಾಡಬೇಕು, ಎಷ್ಟು ಪಾಕು ಮಾಡಬೇಕೆಂದು ಇವರ ಮಾತು ಕೇಳಿ ನಾನು ನಿರ್ಧಾರ ಮಾಡಬೇಕಾ?” ಎಂದು ತನಗೆ ತಾನೆ ಹೇಳಿಕೊಳ್ಳುತ್ತ ನಕ್ಕುಬಿಟ್ಟಿತು.

ಸಿಂಹದ ನಗು ಕೇಳಿ ನರಿಗೂ ತೋಳಕ್ಕೂ ಆಶ್ಚರ್ಯ. ಬಹುಶಃ ವನರಾಜನಿಗೂ ಹಸಿವಾಗಿರಬೇಕು, ಈಗ ಪಾಲಿನ ವಿಷಯಕ್ಕೆ ಬರಬಹುದು ಅಂದುಕೊಂಡವು.

ಸಿಂಹ, ತೋಳದತ್ತ ತಿರುಗಿ “ನನ್ನ ಪರವಾಗಿ ಬೇಟೆಯನ್ನು ಪಾಲು ಮಾಡುವ ಹೊಣೆ ನಿನ್ನದು, ಹೇಳು, ಈ ಮೂರು ಬೇಟೆಗಳನ್ನು ಹೇಗೆ ಪಾಲು ಮಾಡ್ತೀಯ?” ಎಂದು ಕೇಳಿತು.

ತೋಳ ತನ್ನ ಅಷ್ಟೂ ಬುದ್ಧಿ ಉಪಯೋಗಿಸಿ, “ವನರಾಜ, ಈ ಎತ್ತು ನಿಮ್ಮ ಪಾಲಿಗಿರಲಿ. ಏಕೆಂದರೆ ಇದು ಗಾತ್ರದಲ್ಲಿ ದೊಡ್ಡದು ಮತ್ತು ನೀವು ಕಾಡಿನ ರಾಜ. ಇದು ನಿಮಗೆ ಸೇರಬೇಕು. ಆ ಮೊಲ ಗಾತ್ರದಲ್ಲಿ ಚಿಕ್ಕದು, ನರಿಯ ಹೊಟ್ಟೆಗೆ ಸಾಕಾದೀತು. ಮತ್ತೆ ಈ ಹೋತ ನನಗಿರಲಿ” ಅಂದಿತು.

ಸಿಂಹ ಒಮ್ಮೆಗೇ ಕೋಪದಿಂದ ಘರ್ಜಿಸಿ ಮುಂಗಾಲನ್ನು ನೆಲಕ್ಕೆ ಅಪ್ಪಳಿಸಿತು. ತೋಳಕ್ಕೆ ತನ್ನ ಮಾತಲ್ಲಿ ಏನು ತಪ್ಪಾಯಿತೆಂದೇ ಗೊತ್ತಾಗದೆ ನಡುಗುತ್ತ ನಿಂತುಬಿಟ್ಟಿತು.

“ಕಾಡಿನ ರಾಜ ನಾನಿರುವಾಗ ನಿನ್ನ ಪಾಲನ್ನು ನೀನೇ ನಿರ್ಧರಿಸಿಕೊಳ್ಳಲು ಅದೆಷ್ಟು ಸೊಕ್ಕು ನಿನಗೆ” ಎಂದು ಮತ್ತೊಮ್ಮೆ ಘರ್ಜಿಸಿದ ಸಿಂಹ, ತೋಳವನ್ನು ಮುಂದೆ ಬಾ ಎಂದು ಕರೆಯಿತು. ತೋಳ ತಲೆ ತಗ್ಗಿಸಿ ಸಿಂಹದ ಮುಂದೆ ನಿಂತಾಗ ಒಂದೇ ಏಟಿಗೆ ಅದರ ತಲೆ ಒಡೆದು ಇಡೀ ಮೈ ಹರಿದು ಬಿಸಾಡಿತು.

ತೋಳದ ಅವಸ್ಥೆ ನೋಡಿ ನಡುಗಿದ ನರಿ ಬಾಲ ಮುದುರಿಕೊಂಡು ನಿಂತಿತು. ಸಿಂಹ ನರಿಯನ್ನು ಮುಂದೆ ಕರೆಯುತ್ತಾ, “ಎಲ್ಲಿ, ಈಗ ನೀನು ಈ ಬೇಟೆಯನ್ನು ಪಾಲು ಮಾಡು” ಅಂದಿತು.

ನರಿ ತೋಳದ ಛಿದ್ರ ದೇಹವನ್ನೇ ನೋಡುತ್ತಾ, “ವನರಾಜ, ಈ ಎತ್ತು ನಿಮ್ಮ ಬೆಳಗಿನ ಉಪಹಾರಕ್ಕೆ. ಹೋತ ಮಧ್ಯಾಹ್ನದ ಊಟಕ್ಕೆ. ಮತ್ತು ಮೊಲ ನಿಮ್ಮ ರಾತ್ರಿಯ ಹಿತ-ಮಿತವಾದ ಭೋಜನಕ್ಕಿರಲಿ” ಅಂದಿತು. ಅದು ತನ್ನ ಪ್ರಸ್ತಾಪವನ್ನೇ ಮಾಡಲಿಲ್ಲ.

ಸಿಂಹಕ್ಕೆ ನರಿಯ ಮಾತು ಕೇಳಿ ಅಚ್ಚರಿಯಾಯ್ತು. “ಇಷ್ಟು ಚೆನ್ನಾಗಿ ಪಾಲು ಮಾಡೋದನ್ನು ಎಲ್ಲಿ ಕಲಿತೆ ನೀನು?”

“ತೋಳದ ಛಿದ್ರ ದೇಹ ನೋಡಿ ಕಲಿತೆ ವನರಾಜ”

“ಭಲೇ! ನೀನು ನನ್ನನ್ನು ಅದೆಷ್ಟು ಪ್ರೀತಿಸ್ತೀಯ! ನನ್ನ ಮುಂದೆ ನಿನಗೆ ಅಸ್ತಿತ್ವವೇ ಇಲ್ಲದಂತೆ ಭಾವಿಸಿದ್ದೀಯ. ಇರುವುದೆಲ್ಲ ನನಗೇ, ನಿನಗೆ ಏನೂ ಇಲ್ಲ. ಯಾಕೆಂದರೆ ಪ್ರೇಮಿಯ ಪಾಲಿಗೆ ಪ್ರಿಯತಮನೊಬ್ಬನೇ ಸತ್ಯ, ತಾನು ಮತ್ತೊಬ್ಬನಾಗಿ ಅಸ್ತಿತ್ವದಲ್ಲೇ ಇರೋದಿಲ್ಲ!” ಸಿಂಹ ನರಿಯ ಗುಣಗಾನ ಮಾಡಿತು. “ಮತ್ತೊಬ್ಬರಿಗೆ ಆದ ಗತಿಯಿಂದ ಪಾಠ ಕಲಿಯುವವರು ನಿಜಕ್ಕೂ ಬುದ್ಧಿವಂತರು. ನೀನೊಬ್ಬ ಪ್ರೇಮಿ. ನೀನೊಬ್ಬ ಬುದ್ಧಿವಂತ ಪ್ರೇಮಿ. ತಗೋ, ಈ ಮೂರೂ ಬೇಟೆಗಳನ್ನ ನೀನೇ ತೆಗೆದುಕೊಂಡು ಬಿಡು, ನಾನು ನಿನಗೇನೂ ಹಾನಿ ಮಾಡೋದಿಲ್ಲ. ಇನ್ನು, ನಾನೂ ನಿನ್ನವನೇ. ತಗೋ, ತೆಗೆದುಕೊಂಡು ಹೊರಟುಹೋಗು” ಅಂದಿತು.

ನರಿಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ. ವನರಾಜ ತನ್ನ ಬದಲು ಮೊದಲು ತೋಳವನ್ನು ಕರೆಯುವಂತೆ ಮಾಡಿದ ದೇವರಿಗೂ, ಸಾವು ತಪ್ಪಿಸಿದ ತನ್ನ ಅದೃಷ್ಟಕ್ಕೂ ಮತ್ತೆ ಮತ್ತೆ ಧನ್ಯವಾದ ಹೇಳುತ್ತಾ ಸಿಕ್ಕ ಬೇಟೆ ಕಚ್ಚಿಕೊಂಡು ಅಲ್ಲಿಂದ ಓಡಿ ಹೋಯಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.