ನೀವು ಜನರ ಕಣ್ಣುಗಳಲ್ಲಿ ನೋಡುತ್ತ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ; ಅವರು ನಿಮ್ಮನ್ನ ಒಳ್ಳೆಯ ಮನುಷ್ಯ ಎಂದು ಹೇಳಿದರೆ, ನೀವು ಒಳ್ಳೆಯ ಮನುಷ್ಯ. ಅವರು ನಿಮ್ಮನ್ನ ಸುಂದರ ವ್ಯಕ್ತಿ ಎಂದರೆ ನೀವು ಸುಂದರ ವ್ಯಕ್ತಿ. ಅವರು ನಿಮ್ಮನ್ನು ಜಾಣ ಎಂದು ಗುರುತಿಸಿದರೆ ನೀವು ಜಾಣರು. ನಿಮ್ಮ ಬಗ್ಗೆ ನಿಮಗೆ ಗೊತ್ತಿರುವುದೆಲ್ಲ ನೀವು ಇನ್ನೊಬ್ಬರಿಂದ ಸಂಗ್ರಹಿಸಿದ ಮಾಹಿತಿ… ~ ಓಶೋ । ಚಿದಂಬರ ನರೇಂದ್ರ
ಸ್ಪಷ್ಟವಾಗಿ ಹೇಳುತ್ತೇನೆ ಕೇಳಿ,
ನೀವು ಅನುಭವಿಸುತ್ತಿರುವ ಸ್ಥಿತಿಯ ನಶೆ ಕಾರಣವಾಗಿ,
‘ಕಪಟ ಮತ್ತು ಸೋಗು’ ನಿಮ್ಮನ್ನ ಉನ್ಮತ್ತಗೊಳಿಸುತ್ತವೆ.
ಸತ್ಯ, ನಿಮ್ಮನ್ನು ದುಗುಡಕ್ಕೆ ನೂಕುತ್ತದೆ,
ಕೈ ಹಿಡಿದು ಹಿಂದೆ ಎಳೆಯುತ್ತದೆ,
ಪೂರ್ಣ ಖಾಲಿಯ ತಲ್ಲಣಕ್ಕೆ ಗುರಿ ಮಾಡುತ್ತದೆ.
“ನೀನು ಒಬ್ಬ ಅದ್ಭುತ ಮನುಷ್ಯ
ಈ ಪೀಳಿಗೆಯಲ್ಲಿ ನಿನ್ನಂಥ ಇನ್ನೊಬ್ಬನನ್ನು ಕಂಡಿಲ್ಲ “
ಇತ್ತೀಚಿಗೆ, ಒಬ್ಬ ಮನುಷ್ಯನಿಗೆ ಹೇಳಿದೆ,
“ನಿನ್ನ ತಪ್ಪು ತಿಳಿದುಕೊಂಡಿದ್ದೆ “
ಆತ ಗದ್ಗದಿತನಾಗಿ ನನ್ನ ಕೈ ಹಿಡಿದುಕೊಂಡ.
ಕಳೆದ ಬಾರಿ ಭೇಟಿ ಮಾಡಿದಾಗ
ನಾನು ಆತನನ್ನು ಸಂಭ್ರಮಿಸಿ ಮಾತನಾಡಿರಲಿಲ್ಲ.
ಆತ ನನ್ನ, ತನ್ನ ವೈರಿ ಎಂದುಕೊಂಡಿದ್ದ.
ಎಂಥ ವಿಲಕ್ಷಣ ಇದು.
ಇನ್ನೊಬ್ಬರೊಡನೆ ಸೌಹಾರ್ದ ಸಾಧ್ಯವಾಗಬೇಕಾದರೆ,
ನಾವು ನಮ್ಮ ಹಾಗಿರಬಾರದು,
ಹಾಗಾದರೆ ಕಪಟದ ಬದುಕನ್ನೇ ಬಾಳಿ.
ಬೆಟ್ಟದ ಮೇಲೆ ಹೋಗಿ ಕುಳಿತುಕೊಳ್ಳಿ
ಮರುಭೂಮಿಯ ನಡುವೆಹೋಗಿ ನಿಲ್ಲಿ,
ಜನರ ನಡುವೆ ಇದ್ದುಕೊಂಡೇ
ತಮ್ಮ ಹೃದಯದ ಮಾತು ಬಿಚ್ಚಿಡುವುದು
ಸಾಮಾನ್ಯರಿಗೆ ಸಾಧ್ಯವಾಗದ ಮಾತು.
~ ಶಮ್ಸ್ ತಬ್ರೀಝಿ
ತನ್ನ ಬಳಿ ಇದ್ದ ಚೆಕ್ ಎನ್ ಕ್ಯಾಶ್ ಮಾಡಿಸುವುದಕ್ಕಾಗಿ ಲುಕೊವಸ್ಕಿ ಬ್ಯಾಂಕ್ ಗೆ ಹೋಗುತ್ತಾರೆ. ಬ್ಯಾಂಕ್ ಲ್ಲಿ ಅವರ ಅಕೌಂಟ್ ಇಲ್ಲದ ಕಾರಣ ತಮ್ಮನ್ನು ಐಡೆಂಟಿಫೈ ಮಾಡಿಕೊಳ್ಳುವಂತೆ ಬ್ಯಾಂಕಿನ ಕ್ಲರ್ಕ್ ಹೇಳುತ್ತಾನೆ.
“ಇಲ್ಲಿ ಎಲ್ಲಾದರೂ ಕನ್ನಡಿ ಇದೆಯಾ?” ಲುಕೊವಸ್ಕಿ ಪ್ರಶ್ನೆ ಮಾಡುತ್ತಾರೆ.
“ನಿಮ್ಮ ಹಿಂದೆಯೇ ಇದೆ ನೋಡಿ” ಉತ್ತರಿಸುತ್ತಾನೆ ಕ್ಲರ್ಕ್.
ಕನ್ನಡಿಯಲ್ಲಿ ತಮ್ಮನ್ನೊಮ್ಮೆ ನೋಡಿಕೊಂಡು ಲುಕೊವಸ್ಕಿ ಉದ್ಗರಿಸುತ್ತಾರೆ, “ಸಧ್ಯ ಇದು ನಾನೇ”
ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಹೀಗೆ, ಕನ್ನಡಿ ನೋಡಿಕೊಳ್ಳುತ್ತ. ಆದರೆ ಕನ್ನಡಿಗಳು ಬೇರೆ ಬೇರೆಯಾಗಿರುತ್ತವೆ.
ನೀವು ಜನರ ಕಣ್ಣುಗಳಲ್ಲಿ ನೋಡುತ್ತ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ; ಅವರು ನಿಮ್ಮನ್ನ ಒಳ್ಳೆಯ ಮನುಷ್ಯ ಎಂದು ಹೇಳಿದರೆ, ನೀವು ಒಳ್ಳೆಯ ಮನುಷ್ಯ. ಅವರು ನಿಮ್ಮನ್ನ ಸುಂದರ ವ್ಯಕ್ತಿ ಎಂದರೆ ನೀವು ಸುಂದರ ವ್ಯಕ್ತಿ. ಅವರು ನಿಮ್ಮನ್ನು ಜಾಣ ಎಂದು ಗುರುತಿಸಿದರೆ ನೀವು ಜಾಣರು. ನಿಮ್ಮ ಬಗ್ಗೆ ನಿಮಗೆ ಗೊತ್ತಿರುವುದೆಲ್ಲ ನೀವು ಇನ್ನೊಬ್ಬರಿಂದ ಸಂಗ್ರಹಿಸಿದ ಮಾಹಿತಿ. ಆ ಇನ್ನೊಬ್ಬರಿಗೆ ತಾವು ಯಾರು ಎನ್ನುವುದು ಗೊತ್ತಿಲ್ಲದಿದ್ದರೂ ನೀವು ಯಾರು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.
ಇದು ವಿಚಿತ್ರ ಜಗತ್ತು. ನೀವು ಜನರನ್ನ ಕೇಳುತ್ತೀರಿ, “who are you?” ಅವರು ತಡಬಡಾಯಿಸುತ್ತಾರೆ, ಅವರಿಗೆ ತಮ್ಮ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎನ್ನುವುದರ ಮೇಲೆ ನಿಮ್ಮನ್ನ ಗುರುತಿಸಿಕೊಳ್ಳಲು ನೀವು ಸಿದ್ಧರಾಗಿದ್ದೀರಿ. ನಿಮ್ಮ ಐಡಿಂಟಿಫಿಕೇಶನ್ ಗಾಗಿ ನೀವು ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತರಾಗಿದ್ದೀರಿ.
ನೀವು ಇನ್ನೊಬ್ಬರಿಂದ ನಿಮ್ಮ ಬಗ್ಗೆ ಮಾಹಿತಿ ಸಂಗ್ರಹಿಸುತ್ತ ಹೋಗುತ್ತೀರಿ. ಆದ್ದರಿಂದಲೇ ಯಾರಾದರೂ ನಿನ್ನ ಮೂರ್ಖ ಎಂದು ಹೇಳಿದಾಗ ನಿಮಗೆ ನೋವಾಗುತ್ತದೆ. ನಿಮಗೆ ಯಾಕೆ ನೋವಾಗಬೇಕು? ಹೇಳಲಿ ಬಿಡಿ ಅವನು ನೀವು ಮೂರ್ಖ ಎಂದು, ಅವನು ಹೇಳಿದ ಮಾತ್ರಕ್ಕೆ ನೀವು ಮೂರ್ಖ ಆಗುವುದಿಲ್ಲವಲ್ಲ. ಆದರೆ ನೀವು ನೋವು ಅನುಭವಿಸುವುದು ನಿಜ ತಾನೆ? ಯಾಕೆ ಹೀಗೆ? ಯಾಕೆ ಹೀಗೆ ಎಂದರೆ ಇನ್ನೊಬ್ಬರ ಅಭಿಪ್ರಾಯಗಳ ಮೇಲೆ ನೀವು ನಿಮ್ಮ ಗುರುತನ್ನ ಕಟ್ಟಿಕೊಂಡಿದ್ದೀರಿ. ಯಾರು ನಿಮ್ಮನ್ನ ಜಾಣ ಎಂದು ಹೇಳಿದಾಗ ನೀವು ಅದನ್ನ ನಂಬಿದ್ದಿರೋ ಅವರೇ ಈಗ ನಿಮ್ಮನ್ನ ಮೂರ್ಖ ಎನ್ನುತ್ತಿದ್ದಾರೆ. ನಿಮ್ಮೊಳಗೆ ಈಗ ದ್ವಂದ್ವ ಹುಟ್ಟಿಕೊಂಡಿದೆ. ಆದ್ದರಿಂದಲೇ ನಿಮಗೆ ಬೇಸರವಾಗಿದೆ, ನೀವು ಗೊಂದಲಕ್ಕೊಳಗಾಗಿದ್ದೀರಿ. ಈಗ ಅವರು ನಿಮ್ಮೆದುರು ಗೊಂದಲವನ್ನು ಸೃಷ್ಟಿಸಿದ್ದಾರೆ. ನೀವು ಉಭಯಸಂಕಟದಲ್ಲಿದ್ದೀರಿ. ನೀವು ಮತ್ತೊಮ್ಮೆ ಗೊಂದಲದ ಸ್ಥಿತಿಯಲ್ಲಿದ್ದೀರಿ, ಅಸಲಿಗೆ ನೀವು ಯಾರು ಎನ್ನುವುದು ನಿಮಗೆ ಗೊತ್ತಾಗುತ್ತಿಲ್ಲ.
ಒಂದು ದಿನ ಇಬ್ಬರು ವ್ಯಕ್ತಿಗಳು ಓಡುತ್ತ ನಸ್ರುದ್ದೀನ್ ನ ಮನೆಗೆ ಬಂದರು.
“ ಯಾಕೆ ಏನಾಯ್ತು ? “ ಆ ಇಬ್ಬರನ್ನು ವಿಚಾರಿಸಿದ ನಸ್ರುದ್ದೀನ್.
“ ಮಾರ್ಕೇಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “
ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.
“ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
ನಸ್ರುದ್ದೀನ್.
“ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “
“ ನನ್ನ ಹಾಗೇ ಇತ್ತಾ ಅವನ ಗಡ್ಡ ? “
“ ಥೇಟ್ ನಿನ್ನ ಹಾಗೆ “
“ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “
“ ಪಿಂಕ್ ಕಲರ್ ಶರ್ಟ್ “
“ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “
ನಿಟ್ಟುಸಿರು ಬಿಟ್ಟ ನಸ್ರುದ್ದೀನ್.

