ಸತ್ಯವನ್ನು ಅಭಿವ್ಯಕ್ತಿಸುವ ಬಗೆಯ ಕುರಿತಾದ ಒಂದು ಸೂಫಿ ದೃಷ್ಟಾಂತ ಕಥೆ ಇಲ್ಲಿದೆ… । ಚಿದಂಬರ ನರೇಂದ್ರ
ಒಂದು ದಿನ ಒಬ್ಬ ಪ್ರವಾಸಿ land of fools ಎನ್ನುವ ವಿಚಿತ್ರ ಜಾಗೆಯ ಮೂಲಕ ಹಾಯ್ದು ಹೋಗುತ್ತಿದ್ದ. ಹೀಗೆ ಪ್ರಯಾಣ ಮಾಡುವಾಗ ಒಂದು ಹಳ್ಳಿಯ ಹೊಲದ ರಸ್ತೆಯಲ್ಲಿ ರೈತರು ಭಯಭೀತರಾಗಿ ಕಿರುಚುತ್ತ ಓಡುತ್ತಿರುವುದನ್ನ ಅವನು ಗಮನಿಸಿದ.
ಪ್ರವಾಸಿ ಓಡಿಹೋಗುತ್ತಿದ್ದ ಒಬ್ಬ ರೈತನನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡಿದ,
“ಏನಾಯಿತು? ಯಾಕೆ ಹೀಗೆ ಓಡಿ ಹೋಗುತ್ತಿದ್ದೀರಿ?”
“ನಮ್ಮ ಹೊಲದಲ್ಲಿ ಒಂದು ದೈತ್ಯ ಜೀವಿ ಕಾಣಿಸಿಕೊಂಡಿದೆ. ಅದಕ್ಕಾಗಿಯೇ ನಾವು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದೇವೆ”.
ರೈತ ಉತ್ತರಿಸಿದ.
ಕುತೂಹಲದಿಂದ ಪ್ರವಾಸಿ ಆ ರೈತರ ಹೊಲಕ್ಕೆ ಹೋಗಿ ನೋಡಿದಾಗ ಅಲ್ಲೊಂದು ದೈತ್ಯಾಕಾರದ ಕಲ್ಲಂಗಡಿ ಹಣ್ಣು ಬೆಳೆದು ನಿಂತಿರುವುದನ್ನ ಅವನು ಗಮನಿಸಿದ. ಪ್ರವಾಸಿ ಭಯಭೀತರಾಗಿದ್ದ ರೈತರನ್ನೆಲ್ಲ ಒಟ್ಟುಗೂಡಿಸಿ, ನಾನು ದೈತ್ಯ ಜೀವಿಯನ್ನು ಸಂಹಾರ ಮಾಡುವೆ, ನೀವು ಹೆದರುವ ಕಾರಣ ಇಲ್ಲ ಎಂದು ಅವರನ್ನು ಒಪ್ಪಿಸಿದ.
ರೈತರೆಲ್ಲ ನೋಡ ನೋಡುತ್ತಿದ್ದಂತೆಯೇ ಪ್ರವಾಸಿ, ಚಾಕು ತೆಗೆದುಕೊಂಡು ಕಲ್ಲಂಗಡಿಯನ್ನು ಕತ್ತರಿಸಿ, ಒಂದೊಂದಾಗಿ ಹಣ್ಣಿನ ತುಣುಕುಗಳನ್ನ ತಿಂದು ಮುಗಿಸಿದ. ಇದನ್ನು ನೋಡುತ್ತಿದ್ದಂತೆಯೇ ರೈತರು ಇನ್ನೂ ಹೆಚ್ಚು ಭಯಭೀತರಾದರು. ಆ ದೈತ್ಯ ಜೀವಿಯನ್ನೇ ಕೊಂದವನು ಇನ್ನು ನಮ್ಮನ್ನು ಬಿಡುವುದಿಲ್ಲ. ಮುಂದೆ ಅವನು ನಮ್ಮನ್ನೂ ಕೊಲ್ಲುತ್ತಾನೆ ಎಂದು ಎಲ್ಲ ಸೇರಿ, ಆ ಪ್ರವಾಸಿಯನ್ನು ಹೊಡೆದು ಬಡಿದು ಅಲ್ಲಿಂದ ಓಡಿಸಿಬಿಟ್ಟರು.
ಮುಂದಿನ ವರ್ಷ ಇದೇ ಸಮಯದಲ್ಲಿ ಇದೇ ರೀತಿಯ ಘಟನೆಯನ್ನು ಇನ್ನೊಬ್ಬ ಪ್ರವಾಸಿ ಗಮನಿಸಿದ. ಆದರೆ ಈ ಪ್ರವಾಸಿ ಕಲ್ಲಂಗಡಿ ಹಣ್ಣನ್ನು ತಾನೇ ಕತ್ತರಿಸಲು ಮುಂದಾಗುವುದರ ಬದಲಾಗಿ, ಮೊದಲು ಅದು ಅಪಾಯಕಾರಿ ಎಂದು ರೈತರು ಹೇಳುವುದನ್ನ ಒಪ್ಪಿಕೊಂಡು ಅವರ ವಿಶ್ವಾಸ ಗಳಿಸಿದ. ಅವನು ರೈತರ ಮನೆಗಳಲ್ಲಿಯೇ ಇದ್ದಕೊಂಡು ನಿಧಾನವಾಗಿ ಕಲ್ಲಂಗಡಿಯ ಬಗ್ಗೆ ಸ್ವಲ್ಪ ಸ್ವಲ್ಪ ಅವರಿಗೆ ತಿಳಿ ಹೇಳುತ್ತ ಅದರ ಕುರಿತಾದ ಹಳ್ಳಿಗರ ಭಯವನ್ನ ಸಾವಕಾಶವಾಗಿ ತೆಗೆದುಹಾಕಲು ಪ್ರಯತ್ನ ಮಾಡಿದ. ಕೊನೆಗೆ ರೈತರಲ್ಲಿ ಕಲ್ಲಂಗಡಿಯ ಕುರಿತಾಗಿದ್ದ ಮೂಢ ನಂಬಿಕೆಗಳನ್ನೆಲ್ಲ ನಿವಾರಿಸಿ, ಅವರೆಲ್ಲ ಸೇರಿ ತಮ್ಮ ತಮ್ಮ ಹೊಲಗಳಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುವಂತೆ ಮಾಡಿದ.
ಸತ್ಯ ಒಂದೇ ಜನರನ್ನು ಸ್ವತಂತ್ರರನ್ನಾಗಿ ಮಾಡುವುದಿಲ್ಲ. ಸರಿಯಾದ ಹಾದಿಯಲ್ಲಿ ಜನರನ್ನು ಮುನ್ನಡೆಸುವುದಿಲ್ಲ. ವಾಸ್ತವವೊಂದೇ ಜನರ ಧೋರಣೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದಿಲ್ಲ. ಸತ್ಯ ಅರ್ಥವಾಗಬೇಕಾದರೆ ಅದನ್ನು ಸರಿಯಾಗಿ ಅಭಿವ್ಯಕ್ತಿಸಬೇಕಾಗುತ್ತದೆ, ಅದನ್ನು ಸರಿಯಾದ ಮನೋಭಾವದಿಂದ ಶೋಧಿಸಿ ತಮ್ಮದಾಗಿಸಿಕೊಳ್ಳಬೇಕಾಗುತ್ತದೆ.

