ದೇವರ ಕರುಣೆ ಅಪಾರ, ಅವನ ಕರುಣೆಯನ್ನ ಪ್ರೇರೇಪಿಸುವಂಥವು ನಮ್ಮ ಶ್ರಮ ಮತ್ತು ವಿನಯ… |ಚಿದಂಬರ ನರೇಂದ್ರ
ಒಮ್ಮೆ ನಾನು
ನನ್ನ ಗುರುವನ್ನ ಕೇಳಿದೆ,
ನಮ್ಮಿಬ್ಬರ ನಡುವೆ ಇರುವ
ಅಂಥ ವ್ಯತ್ಯಾಸವಾದರೂ ಏನು?
ಹಾಫಿಜ್, ಇಲ್ಲಿ ಕೇಳು,
ಕಾಡೆಮ್ಮೆಗಳ ಗುಂಪೊಂದು
ನಮ್ಮ ಮನೆಯೊಳಗೆ ನುಗ್ಗಿ
ನಮ್ಮ ಖಾಲಿ ಭಿಕ್ಷಾ ಪಾತ್ರೆಗಳನ್ನ
ಕೆಳಗೆ ಬೀಳಿಸಿದರೆ
ನಿನ್ನ ಪಾತ್ರೆಯೊಳಗಿಂದ
ಬೀಳುವುದಿಲ್ಲ ಕೆಳಗೆ ಒಂದು
ಹನಿಯೂ.
ಆದರೆ ಭಗವಂತ
ನನ್ನ ತಟ್ಟೆಯೊಳಗೆನೋ ಇರಿಸಿದ್ದಾನೆ
ಒಂದು ಅದೃಶ್ಯ ಅಪರೂಪವನ್ನ,
ಅದೇನಾದರೂ ಬಿದ್ದರೆ ಕೆಳಗೆ
ಕೊಚ್ಚಿಕೊಂಡು ಹೋಗುತ್ತದೆ
ಈ ಇಡೀ ಜಗತ್ತು.
- ಹಾಫೀಜ್
ಒಂದು ದಿನ ಮಗುವೊಂದು ತಾಯಿಯ ಜೊತೆ ಕಿರಾಣಿ ಅಂಗಡಿಗೆ ಬಂದಿತ್ತು.
ಮುದ್ದಾದ ಮಗು ನೋಡಿ ಅಂಗಡಿಯವ, “ಮರಿ ಆ ಬಾಟಲಿಯಲ್ಲಿರುವ ಚಾಕಲೇಟ್ ತೊಗೋ “ ಎಂದು ಹೇಳಿದ.
ಆದರೆ ಮಗು ಸುಮ್ಮನೇ ನಿಂತಿತ್ತು.
ಅಂಗಡಿಯವನಿಗೆ ಆಶ್ಚರ್ಯವಾಯಿತು. ಮಕ್ಕಳಿಗೆ ಚಾಕಲೇಟ್ ಅಂದರೆ ಪ್ರಾಣ. ಎಂಥ ಮಗು ಇದು , ಚಾಕಲೇಟ್ ತೊಗೋ ಅಂದರೂ ತೊಗೋಳ್ತಾ ಇಲ್ವಲ್ಲಾ?
ಅಂಗಡಿಯವ ಚಾಕಲೇಟ್ ತೆದುಕೊಳ್ಳುವಂತೆ ಮಗುವಿಗೆ ಇನ್ನೊಮ್ಮೆ ಒತ್ತಾಯ ಮಾಡಿದ.
ಆದರೆ ಮಗು ಸುಮ್ಮನೇ ನೋಡುತ್ತ ನಿಂತಿತ್ತು.
ಕೊನೆಗೆ ಮಗುವಿನ ತಾಯಿ ಕೂಡ ಬಾಟಲಿ ತೆಗೆದು ಚಾಕಲೇಟ್ ತೆಗೆದುಕೊಳ್ಳುವಂತೆ ಮಗುವಿಗೆ ಹೇಳಿದಳು. ಮಗು ತಾಯಿಯ ಮಾತು ಕೂಡ ಕೇಳಲ್ಲಿಲ್ಲ
ಕೊನೆಗೆ ಅಂಗಡಿಯವನೇ ಬಾಟಲ್ ಓಪನ್ ಮಾಡಿ ಒಂದು ಮುಷ್ಟಿಯಷ್ಟು ಚಾಕಲೇಟ್ ತೆಗೆದು ಮಗುವಿನ ಜೇಬಿಗೆ ತುಂಬಿದ.
ಅಂಗಡಿಯಿಂದ ವಾಪಸ್ ಬರುವಾಗ ತಾಯಿ ಮಗುವನ್ನ ಪ್ರಶ್ನೆ ಮಾಡಿದಳು, “ಆ ಅಂಗಡಿಯವ ಎಷ್ಟು ಒತ್ತಾಯ ಮಾಡಿದರೂ ಯಾಕೆ ಸುಮ್ಮನೆ ನಿಂತಿದ್ದೆ, ಯಾಕೆ ಚಾಕಲೇಟ್ ತೆಗೆದುಕೊಳ್ಳಲಿಲ್ಲ? “
ಮಗುವಿನ ಉತ್ತರ ಏನಿತ್ತು ಊಹೆ ಮಾಡುವಿರಾ?
ಮಗು ಉತ್ತರಿಸಿತು, “ಅಮ್ಮಾ ನನ್ನ ಕೈ ಚಿಕ್ಕವು, ನಾನೇ ತೆಗೆದುಕೊಂಡಿದ್ದರೆ ಒಂದೋ ಎರಡೋ ಚಾಕಲೇಟ್ ತೆಗೆದುಕೊಳ್ಳಬಹುದಾಗಿತ್ತು. ಈಗ ನೋಡು ಆ ಅಂಗಡಿಯವನೇ ತನ್ನ ದೊಡ್ಡ ಕೈಗಳಿಂದ ನನ್ನ ಜೇಬು ತುಂಬುವಷ್ಟು ಚಾಕಲೇಟ್ ತೆಗೆದುಕೊಟ್ಟ”.
ಬದುಕಿನಲ್ಲಿಯೂ ಹೀಗೆಯೇ, ನಾವು ಗಳಿಸಿದ್ದು ಬಹಳ ಕಡಿಮೆ ಆದರೆ ದೇವರ ಕರುಣೆ ಅಪಾರ, ಅವನ ಕರುಣೆಯನ್ನ ಪ್ರೇರೇಪಿಸುವಂಥವು ನಮ್ಮ ಶ್ರಮ ಮತ್ತು ವಿನಯ.
Stay Blessed !

