ಈ ಜಯವರ್ಮ ಅನ್ನುವ ವ್ಯಕ್ತಿ ಬೋಧಿ ಧರ್ಮನಾಗಿ ಬೌದ್ಧೀಯತೆಯನ್ನು ಪೂರ್ವಕ್ಕೊಯ್ದ ಕತೆ, ವಾಸ್ತವದಲ್ಲಿ ರೂಪಕವಷ್ಟೇ. ಇದು ಸಾಂಕೇತಿಕ. ಬೋಧಿ ಧರ್ಮ ಅನ್ನುವುದು ವ್ಯಕ್ತಿಯಲ್ಲ, ತತ್ವ ಅನ್ನುವ ವಾದವೂ ಇದೆ. ಇದರ ಪ್ರಕಾರ, ಬೋಧಿ – ಆತ್ಯಂತಿಕ ಅರಿವು, ಈ ಅರಿವಿನ ದಾರಿಯೇ, ಅಂದರೆ ಧರ್ಮವೇ ಬೋಧಿಯ ಧರ್ಮ = ಬೋಧಿ ಧರ್ಮ… । ಚೇತನಾ ತೀರ್ಥಹಳ್ಳಿ
ದಕ್ಷಿಣ ಭಾರತದ ಪಲ್ಲವರ ರಾಜ ಕುಮಾರ ಜಯವರ್ಮ ಬೆಟ್ಟ – ಸಮುದ್ರಗಳನ್ನು ದಾಟಿ ಚೀನಾ ದೇಶಕ್ಕೆ ಹೋದನಂತೆ. ಅತೀಂದ್ರಿಯ ಶಕ್ತಿಗಳಲ್ಲಿ ಮಹಾ ನಂಬಿಕೆ ಇಟ್ಟು ಮೌಢ್ಯದಲ್ಲಿ ಮುಳುಗಿ ವಾಸ್ತವಕ್ಕೆ ಬೆನ್ನು ಹಾಕಿದ್ದ ಚೀಣೀಯರು ಬಿರುಗಣ್ಣು ಬಿಟ್ಟುಕೊಂಡು ಗಂಟೆಗಟ್ಟಲೆ ಗೋಡೆ ದಿಟ್ಟಿಸುತ್ತ ಕುಳಿತಿರುತ್ತಿದ್ದ ಈ ವಿಚಿತ್ರ ಮನುಷ್ಯನನ್ನು ಕಂಡು ಬೆರಗಾದರಂತೆ.
ಜಯವರ್ಮ, ಧ್ಯಾನದಲ್ಲಿ ಅದಾಗಲೇ ಸಿದ್ಧಿ ಪಡೆದವ. ಆದರೆ ಅವನು ಕಾಲಿಟ್ಟ ನೆಲದಲ್ಲಿ ಮೊದಲು ದೇಹಗಳ ರಕ್ಷಣೆ ಆದ್ಯತೆಯಾಗಿತ್ತು. ಅನಂತರ ಮನಸ್ಸು, ಬುದ್ಧಿ, ಆತ್ಮಗಳ ಸರದಿ. ಹಾಗೆಂದೇ ಅಲ್ಲಿಯ ಜನರಿಗೆ ಕೆಲವು ಯುದ್ಧಕಲೆಗಳನ್ನು ಕಲಿಸಿ ಅವರ ವಿಶ್ವಾಸ ಗಳಿಸಿದನಂತೆ. ಅವರ ಮನಸ್ಸನ್ನು ನಿರಾಳಗೊಳಿಸಿ ಧ್ಯಾನಕ್ಕೆ ಸಜ್ಜುಗೊಳಿಸಿದನಂತೆ.
ಹೀಗೆ ಬೋಧಿ ಧರ್ಮ ಬೋಧಿಸಿದ ಧ್ಯಾನ, ಪಾಳಿ ಭಾಷೆಯ ಜಾನ, ಚೀಣೀಯರ ಬಾಯಲ್ಲಿ ಚಾನ್ ಆಯಿತು; ಜಪಾನಿಗೆ ಹೋಗಿ ಝೆನ್ ಆಯಿತು. ಕೊರಿಯನ್ನರ ಪಾಲಿಗೆ ಸೋನ್ (ಅಥವಾ ಸಿಯೋನ್) ಆಯಿತು.
ಬೋಧಿ ಧರ್ಮ ಪೂರ್ವಕ್ಕೆ ಪ್ರಯಾಣ ಬೆಳೆಸದೆ ಇದ್ದಿದ್ದರೆ ಇವತ್ತಿನ ಚೀನಾ, ಜಪಾನ್, ಕೊರಿಯಾಗಳು ಹೇಗಿರುತ್ತಿದ್ದವು? ಈ ಮೂರು ದೇಶಗಳಲ್ಲಿ ಬುದ್ಧ, ಬೌದ್ಧೀಯತೆ ಮತ್ತು ಚಾನ್/ ಝೆನ್/ ಸೋನ್ ಧಾರ್ಮಿಕಕ್ಕಿಂತ ಹೆಚ್ಚಾಗಿ ಒಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಗತಿ. ಶಮನ್ ಗಳಿಂದ ಹಿಡಿದು ಪುರೋಹಿತರವರೆಗೂ, ವಾಮಾಚಾರಿಗಳಿಂದ ಹಿಡಿದು ಶುದ್ಧ ಸಾತ್ವಿಕ ಧ್ಯಾನಿಗಳ ವರೆಗೂ ಪು ಸ, ಎಮಿತೊಫೊ ಅಂದುಕೊಂಡು ಬುದ್ಧನ ಮೊರೆ ಹೋಗುವ ಜನರುಳ್ಳ ದೇಶಗಳಿವು. ಈ ದೇಶಗಳಲ್ಲಿ ಬಹುತೇಕ ‘ಬುದ್ಧ’ ಅನ್ನುವುದು ‘ಭಗವಂತ’ ಪದದ ಪರ್ಯಾಯ ಪದ! ಅಷ್ಟರಮಟ್ಟಿಗೆ ಅಲ್ಲಿ ಆ ಹೆಸರು ಹಾಸುಹೊಕ್ಕು.
ಈ ಜಯವರ್ಮ ಅನ್ನುವ ವ್ಯಕ್ತಿ ಬೋಧಿ ಧರ್ಮನಾಗಿ ಬೌದ್ಧೀಯತೆಯನ್ನು ಪೂರ್ವಕ್ಕೊಯ್ದ ಕತೆ, ವಾಸ್ತವದಲ್ಲಿ ರೂಪಕವಷ್ಟೇ. ಇದು ಸಾಂಕೇತಿಕ. ಬೋಧಿ ಧರ್ಮ ಅನ್ನುವುದು ವ್ಯಕ್ತಿಯಲ್ಲ, ತತ್ವ ಅನ್ನುವ ವಾದವೂ ಇದೆ.
ಇದರ ಪ್ರಕಾರ, ಬೋಧಿ – ಆತ್ಯಂತಿಕ ಅರಿವು, ಈ ಅರಿವಿನ ದಾರಿಯೇ, ಅಂದರೆ ಧರ್ಮವೇ ಬೋಧಿಯ ಧರ್ಮ = ಬೋಧಿ ಧರ್ಮ.
ಧರ್ಮ ಪದದ ವ್ಯುತ್ಪತ್ತಿ : ಧಾರಯತಿ ಇತಿ ಧರ್ಮ. ಯಾವುದು ಧರಿಸುತ್ತದೆಯೋ, ನಮ್ಮನ್ನು ಕ್ಯಾರಿ ಮಾಡುತ್ತದೆಯೋ ಅದು ಧರ್ಮ. ಇಂಗ್ಲೀಷಿನಲ್ಲಿ ಧರ್ಮದ ವಿವರಣೆ – the way of life. ಚೀನೀ ಭಾಷೆಯಲ್ಲಿ ತಾವೋ ಅಂದರೆ ಧರ್ಮ. ತಾವೋ ಸ್ವತಃ ಧರ್ಮವಲ್ಲ, ತಾವೋ ಅಂದರೆ ಧರ್ಮ. ಮತ್ತು ತಾವೋದ ಪದಶಃ ಅರ್ಥ – ದಾರಿ.
ಆದ್ದರಿಂದ, ಪಶ್ಚಿಮ ದೇಶದಿಂದ ಹರಿದು ಬಂದ ಹೊಸ ತಾತ್ವಿಕತೆ, ಮೂಡಿ ಬಂದ ಹೊಸ ಅರಿವಿನ ದಾರಿಯೇ – ಬೋಧಿ ಧರ್ಮ.
‘ಬೋಧಿ ಧರ್ಮ’ದ ಬಗ್ಗೆ ಚೀನೀಯರು ಇನ್ನೂ ಒಂದು ಆಸಕ್ತಿಕರ ವಿಚಾರ ಹೇಳುತ್ತಾರೆ. ಚೀನೀಯರ ಪ್ರಕಾರ ಚೀನಾ ದೇಶ ಇರುವುದು ಭೂಮಿಯ ಮಧ್ಯದಲ್ಲಿ. ಆದ್ದರಿಂದಲೇ ತಮ್ಮ ದೇಶವನ್ನವರು ಜಾಂಗ್ ಗುಓ ( Zhongguo) ಅಂತ ಕರೆದುಕೊಳ್ತಾರೆ. ಜಾಂಗ್ ಅಂದರೆ ಮಧ್ಯ ಎಂದರ್ಥ. ಇವರ ಪ್ರಕಾರ ಆತ್ಯಂತಿಕ ಅರಿವಿನ ದಾರಿ ಜಗತ್ತನ್ನೆಲ್ಲ ಸುತ್ತಿ, ನೆಲೆಯೂರಲು ಎಲ್ಲೂ ಸರಿಯಾಗದೆ ಕೊನೆಗೆ ಭೂಮಿಯ ನಟ್ಟನಡುವಿನ ದೇಶದಲ್ಲಿ ಕೊನೆಯಾಯಿತಂತೆ (ಅಂದ್ರೆ, ಅವರ ಜಾಂಗ್ ಗುಓದಲ್ಲಿ!). ಇದೇ ಬೋಧಿ ಧರ್ಮ! ಇದರ ಮೂಲಗುಣ ಧ್ಯಾನ – ಚಾನ್ – ಝೆನ್ – ಸೋನ್!!
ಪೂರ್ವ ಏಷ್ಯಾದ ಸಂಸ್ಕೃತಿ ಮತ್ತು ತತ್ವಚಿಂತನೆಗಳಿಗೆ ಚೀನಾ ದೇಶವೇ ಮುಂದಾಳುವಾದ್ದರಿಂದ, ಅದರ ನಂಬಿಕೆ – ನಡವಳಿಕೆಗಳೇ ಜಪಾನ್ ಮತ್ತು ಕೊರಿಯಾ (ಹಾಗೂ ಇನ್ನಿತರ ಭೌಗೋಳಿಕವಾಗಿ ಸಣ್ಣ, ಆದರೆ ಮಹತ್ವದ ದೇಶಗಳಲ್ಲಿ) ಮುಂದುವರೆದವು.
ಬೋಧಿ ಧರ್ಮನನ್ನು ಒಬ್ಬ ವ್ಯಕ್ತಿಯಾಗಿ ನೋಡಿದರೆ, ಆತ ನೀಲಿಕಣ್ಣಿನ ಬಾರ್ಬರಿಕನೆಂದು ಕರೆಯಲ್ಪಟ್ಟಿದ್ದಾನೆ ಮತ್ತು ರೆಪ್ಪೆಗಳಿಲ್ಲದ ದೊಡ್ಡ ಕಣ್ಣು, ದಪ್ಪ ಮೂಗು, ಸಿಡುಕು ಮುಖದೊಡನೆ ಚಿತ್ರಿಸಲ್ಪಟ್ಟಿದ್ದಾನೆ. ಬುದ್ಧನ ಧರ್ಮ ಬೋಧಿಸಲು ಹೋದವನು ಸಿಡುಕು ಮುಖ ಹೊಂದಿದ್ದನೇ? ಅಥವಾ ಅವರು ಅವನನ್ನು ಹಾಗೆ ಚಿತ್ರಿಸಿದ್ದು ಯಾಕೆ?
ಈ ಪ್ರಶ್ನೆಗಳಿಗೆ ಇನ್ನೂ ಸಮಾಧಾನಕರ ಉತ್ತರ ಸಿಕ್ಕಿಲ್ಲ; ಹುಡುಕಬೇಕಿದೆ.

