ದೇವರ ರೂಪ ನಮ್ಮದೇ ಸೃಷ್ಟಿ! : ಓಶೋ ವ್ಯಾಖ್ಯಾನ

ನಿಮ್ಮ ದೇವರು ನಿಮ್ಮ ಆಕಾಂಕ್ಷೆಗಳ ಸುಧಾರಿತ, ಮಾರ್ಪಟ್ಟ, ಅಲಂಕೃತ, ಪ್ರೊಜೆಕ್ಟೆಡ್ ಪ್ರತಿರೂಪ. ನೀವು ಹೇಗೆ ಇರಲು ಬಯಸುತ್ತೀರೋ ಹಾಗೆಯೇ ಇದ್ದಾನೆ ನಿಮ್ಮ ದೇವರು… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಭಗವಂತನ ಬಗ್ಗೆ
ಪೂರ್ಣವಾಗಿ ಗೊತ್ತಿರುವ ಇಬ್ಬರು
ಹೇಗೆ ಪರಸ್ಪರ ಭೇಟಿ ಮಾಡಬೇಕು
ಮತ್ತು ಹೇಗೆ
ಒಬ್ಬರನೊಬ್ಬರು ಬಿಳ್ಕೊಡಬೇಕು?

ಹೇಗೆಂದರೆ

ಹಿರಿಯ ಸಂಗೀತ ಮಾಂತ್ರಿಕನೊಬ್ಬ
ತನ್ನ ಪ್ರೀತಿಯ
ವಾದ್ಯವನ್ನು ಅಕ್ಕರೆಯಿಂದ ಮಾತಾಡಿಸಿ
ತನ್ನ ಅವತ್ತಿನ ಕೊನೆಯ ಪ್ರದರ್ಶನಕ್ಕೆ
ಹುರಿದುಂಬಿಸುವಂತೆ.

– ಹಾಫಿಜ್




ಇಮಾಮ್ ಮೊಹಮ್ಮದ ಬಕೀರ್ ಹೇಳಿದ ವಿಷಯ.

ಇರುವೆಯ ಭಾಷೆ ನನಗೆ ಗೊತ್ತು ಎನ್ನುವ ಕಾರಣದಿಂದ ನಾನು ಒಮ್ಮೆ ಇರುವೆಯನ್ನ ಪ್ರಶ್ನೆ ಮಾಡಿದೆ.

“ದೇವರು ಹೇಗಿರಬಹುದು, ಇರುವೆಯ ಹಾಗೆಯೇ ಇರಬಹುದಾ?”

“ದೇವರಾ? ಖಂಡಿತ ಇಲ್ಲ. ಚುಚ್ಚಲು ನಮಗೆ ಒಂದೇ ಕೊಂಡಿ ಇದೆ. ಆದರೆ ದೇವರಿಗೆ ಎರಡು ಕೊಂಡಿಗಳು” ಇರುವೆ ಉತ್ತರಿಸಿತು.

ನಿಮ್ಮ ಧರ್ಮಗಳು, ಸಿದ್ಧಾಂತಗಳು ಕೂಡ ಇರುವುದು ಹೀಗೆಯೇ. ದೇವರು ಕೇವಲ ನಿಮ್ಮ ಆಕಾಂಕ್ಷೆಗಳ ಬೃಹತ್ ರೂಪ. ನಿಮಗೆ ಚುಚ್ಚುವುದಕ್ಕೆ ಒಂದು ಕೊಂಡಿ ಮಾತ್ರ ಇದ್ದರೆ ಅವನ ಬಳಿ ಇರುವುದು ಎರಡು ಕೊಂಡಿ. ನೀವು ಎಪ್ಪತ್ತು ಎಂಭತ್ತು ವರ್ಷ ಬದುಕುವಿರಾದರೆ ಅವನಿಗೆ ಸಾವೇ ಇಲ್ಲ. ನಿಮಗೆ ವಯಸ್ಸಾಗುತ್ತದೆ, ಅವನು ಮಾತ್ರ ಚಿರಯೌವ್ವನಿಗ. ಕ್ವಾಲಿಟಿಯಲ್ಲಿ ಏನೂ ವ್ಯತ್ಯಾಸವಿಲ್ಲ, ವ್ಯತ್ಯಾಸ ಇರುವುದು ಕ್ವಾಂಟಿಟಿಯಲ್ಲಿ ಮಾತ್ರ.

ನಿಮ್ಮ ದೇವರು ನಿಮ್ಮ ಆಕಾಂಕ್ಷೆಗಳ ಸುಧಾರಿತ, ಮಾರ್ಪಟ್ಟ, ಅಲಂಕೃತ, ಪ್ರೊಜೆಕ್ಟೆಡ್ ಪ್ರತಿರೂಪ. ನೀವು ಹೇಗೆ ಇರಲು ಬಯಸುತ್ತೀರೋ ಹಾಗೆಯೇ ಇದ್ದಾನೆ ನಿಮ್ಮ ದೇವರು.

ಹಾಗಾಗಿ ದೇವರು ಎನ್ನುವುದು ಅನುಭವಿಸುವ ವಸ್ತುವಲ್ಲ, ಅನುಭವದ ವಿಷಯವೂ ಅಲ್ಲ – ದೇವರು ಎಂದರೆ ತನ್ನನ್ನು ತಾನು ಅನುಭವಿಸುವುದು, experiencing itself. ದೇವರು ಎನ್ನುವುದು ಸ್ಥಿರವಾದುದಲ್ಲ, ಅದು ನಿರಂತರವಾಗಿ ಬದಲಾಗುತ್ತಿರುವ ಪ್ರಕ್ರಿಯೆ, ಸದಾ ಹೊಸತಾಗುತ್ತಿರುವ, ಸದಾ ವಿಸ್ತಾರಗೊಳ್ಳುತ್ತಿರುವ, ಸದಾ ಸ್ಫೋಟಗೊಳ್ಳುತ್ತಿರುವ, ನಿರಂತರವಾಗಿ ಹುಡುಕಬೇಕಾಗಿರುವ ಸಂಗತಿ. ಅದು ಒಂದು ಸಾಹಸ ; no where ದಿಂದ no where ಗೆ ಮಾಡುವ ತೀರ್ಥಯಾತ್ರೆ. ದೇವರು ಸ್ವರ್ಗ ಅಥವಾ ಅಂಥಹ ಇನ್ನಾವುದೋ ಜಾಗದಲ್ಲಿ ಇಲ್ಲ. ದೇವರು ಅಲ್ಲಿ ಎಲ್ಲೂ ಇಲ್ಲ, ಅವನು ಇರುವುದು ಇಲ್ಲಿಯೇ (here). ದೇವರು ಸಂಭವಿಸುವುದು ಆಗ ಅಲ್ಲ ಈಗ (now), ಮತ್ತು ದೇವರು that ಅಲ್ಲ, this.

HERE, NOW & THIS ( ಇಲ್ಲಿ, ಈಗ, ಇದು) ಈ ಮೂರು ಪದಗಳನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಾದರೆ, ಈ ಮೂರು ಪದಗಳು ಸೂಫಿ, ಝೆನ್ ನ ಮತ್ತು ಎಲ್ಲ ಅವಶ್ಯಕ ಧಾರ್ಮಿಕತೆಯ ಆಧಾರ ಸ್ಥಂಭಗಳು. HERE, NOW & THIS ಈ ಮೂರು ಪದಗಳು ನಿಮ್ಮ ಇಡಿ ಆಂತರ್ಯದೊಳಗಡೆ ವೈಬ್ರೇಟ್ ಆಗಲಿ, ನಿಮ್ಮ ರಕ್ತದ ಕಣಕಣದಲ್ಲಿ ಒಂದಾಗಲಿ.

ಯಾರು ದೇವರು ಎಂದರೆ ಬೇರೆ ಯಾರೋ, ಎಲ್ಲೋ ದೂರ ಇರುವವನು ಎಂದುಕೊಳ್ಳುವವರು ಯಾವುದೋ ಕಲ್ಪನಾ ಲೋಕದಲ್ಲಿರುವವರು, ಇಲ್ಲಿ, ಈಗ ಸಂಭವಿಸುತ್ತಿರುವುದನ್ನ ಮಿಸ್ ಮಾಡಿಕೊಳ್ಳುತ್ತಿರುವವರು. ದೇವರು ಎಲ್ಲೋ ದೂರ ಇರುವವನಲ್ಲ, ಅವನು ನಿಮಗೆ ನಿಮಗಿಂತಲೂ ಹತ್ತಿರವಾಗಿರುವವನು. ಅವನು ಬೇರೆ ಯಾರೂ ಅಲ್ಲ ನಿಮ್ಮ ಆಂತರ್ಯದ ತಿರುಳು.

———-

ತನ್ನ ಶಿಷ್ಯರಿಗೆ ಝೆನ್ ಮಾಸ್ಟರ್ ಪ್ರಶ್ನೆ ಮಾಡಿದ.

“ ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “

ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ.

ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರವೂ ಇಷ್ಟವಾಗಲಿಲ್ಲ.

ನೀವೇ ಹೇಳಿ ಮಾಸ್ಟರ್, ಶಿಷ್ಯರೆಲ್ಲ ಒತ್ತಾಯಿಸಿದರು.

ಮಾಸ್ಟರ್ : ಯಾವಾಗ ಅಪರಿಚಿತನೊಬ್ಬ ಎದುರಾದಾಗ, ನಮಗೆ ನಮ್ಮ ಮನೆಯವನ ಹಾಗೆ ಕಾಣುತ್ತಾನೋ ಆವಾಗ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a reply to ರಂಗನಾಥ್ ಹೊಸಕೆರೆ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.