ತೆತ್ಸುಜೆನ್ ನ ಆದ್ಯತೆ

ತೆತ್ಸುಜನ್ ಇನ್ನೇನು ಸೂತ್ರಗಳ ಪ್ರಕಟನೆಯನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ, ಉಜಿ ನದಿಯಲ್ಲಿ ಪ್ರವಾಹ ಬಂದು ಸಾಕಷ್ಟು ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡರು. ಪ್ರವಾಹ ಇಳಿಯುತ್ತಿದ್ದಂತೆಯೇ ಆ ಪ್ರದೇಶದಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡು ಜನಕ್ಕೆ ತಿನ್ನಲು ಉಣ್ಣಲು ಆಹಾರದ ತೀವ್ರ ಅಭಾವ ಕಾಡತೊಡಗಿತು… ಆಗ ಅವನೇನು ಮಾಡಿದ ಗೊತ್ತಾ? : ಚಿದಂಬರ ನರೇಂದ್ರ

ತೆತ್ಸುಜನ್ ಎನ್ನುವ ಝೆನ್ ಸಾಧಕ ಆ ವರೆಗೆ ಕೇವಲ ಚೈನಾದಲ್ಲಿ ಲಭ್ಯವಿದ್ದ ಝೆನ್ ಸೂತ್ರಗಳನ್ನು ಜಪಾನಿನಲ್ಲಿ ಪ್ರಕಟಿಸುವ ಕಾರ್ಯಕ್ಕೆ ಮುಂದಾದ. ಆ ಸೂತ್ರಗಳ ಏಳು ಸಾವಿರ ಕಾಪಿಗಳನ್ನು ಕಟ್ಟಿಗೆಯ ಬ್ಲಾಕ್ ಗಳ ಮೇಲೆ ಪ್ರಿಂಟ್ ಮಾಡಿಸಬೇಕಿತ್ತು. ಅದು ಒಂದು ಮಹಾ ಕಠಿಣ ಕೆಲಸವಾಗಿತ್ತು.

ತೆತ್ಸುಜನ್ ಜಪಾನಿನಾದ್ಯಂತ ಓಡಾಡುತ್ತ ಸೂತ್ರಗಳ ಪ್ರಕಟನೆಗೆ ಬೇಕಾಗಲಿದ್ದ ದೇಣಿಗೆ ಸಂಗ್ರಹ ಮಾಡಲು ಶುರು ಮಾಡಿದ. ಈ ಕೆಲಸದ ಮಹತ್ವ ಗೊತ್ತಿದ್ದ ಕೆಲವರು ನೂರು ಇನ್ನೂರು ಬಂಗಾರದ ನಾಣ್ಯಗಳನ್ನು ತೆತ್ಸುಜನ್ ಗೆ ದೇಣಿಗೆಯಾಗಿ ಕೊಟ್ಟರೆ, ಬಹಳಷ್ಟು ಜನರು ತಮಗೆ ಸಾಧ್ಯವಿದ್ದಷ್ಟು ಒಂದು, ಎರಡು, ಐದು ಬಂಗಾರದ ನಾಣ್ಯಗಳನ್ನು ಸೂತ್ರಗಳ ಪ್ರಕಟನೆಯ ಕಾರ್ಯಕ್ಕೆ ದೇಣಿಗೆಯಾಗಿ ಕೊಟ್ಟರು. ತೆತ್ಸುಜನ್ ತನ್ನ ಕೆಲಸಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಸಮವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದ. ಅವನು ಹೆಚ್ಚು ಅಥವಾ ಕಡಿಮೆ ದೇಣಿಗೆ ಕೊಟ್ಟವರಲ್ಲಿ ಭೇದ ಭಾವ ಮಾಡುತ್ತಿರಲಿಲ್ಲ. ಹತ್ತು ವರ್ಷಗಳ ಕಾಲ ದೇಣಿಗೆ ಸಂಗ್ರಹ ಮಾಡಿದ ಮೇಲೆ ಅವನ ಬಳಿ ಸೂತ್ರಗಳ ಪ್ರಕಟನೆಗೆ ಬೇಕಾಗುವಷ್ಟು ದೇಣಿಗೆ ಸಂಗ್ರಹವಾಯಿತು.

ತೆತ್ಸುಜನ್ ಇನ್ನೇನು ಸೂತ್ರಗಳ ಪ್ರಕಟನೆಯನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ, ಉಜಿ ನದಿಯಲ್ಲಿ ಪ್ರವಾಹ ಬಂದು ಸಾಕಷ್ಟು ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡರು. ಪ್ರವಾಹ ಇಳಿಯುತ್ತಿದ್ದಂತೆಯೇ ಆ ಪ್ರದೇಶದಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡು ಜನಕ್ಕೆ ತಿನ್ನಲು ಉಣ್ಣಲು ಆಹಾರದ ತೀವ್ರ ಅಭಾವ ಕಾಡತೊಡಗಿತು. ತೆತ್ಸುಜನ್ ತಾನು ಸೂತ್ರಗಳ ಪ್ರಕಟನೆಗೆಂದು ಸಂಗ್ರಹಿಸಿದ ಎಲ್ಲ ದೇಣಿಗೆಯನ್ನು ಬರಗಾಲದ ಪರಿಹಾರ ಕಾರ್ಯಕ್ಕೆ ಬಳಸಿಬಿಟ್ಟ. ತಾನು ಸಂಗ್ರಹಿಸಿದ ದೇಣಿಗೆಯಿಂದ ಜನರಿಗೆ ಊಟ ವಸತಿಯ ವ್ಯವಸ್ಥೆ ಮಾಡಿಸಿದ.

ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ತೆತ್ಸುಜನ್ ಮತ್ತೆ ಸೂತ್ರಗಳ ಪ್ರಕಟನೆಯ ಕಾರ್ಯವನ್ನು ಕೈಗೆತ್ತಿಕೊಂಡು ದೇಣಿಗೆ ಸಂಗ್ರಹಕ್ಕೆ ಮುಂದಾದ. ಮತ್ತೆ ಹತ್ತು ವರ್ಷ ಓಡಾಡಿ ದೇಣಿಗೆ ಸಂಗ್ರಹ ಮಾಡಿದ

ಆದರೆ ದುರದೃಷ್ಟವಶಾತ್ ಕೆಲ ವರ್ಷಗಳ ನಂತರ ದೇಶದಲ್ಲಿ ಮಹಾಮಾರಿ ಕಾಣಿಸಿಕೊಂಡಿತು. ತೆತ್ಸುಜನ್ ತಾನು ಸಂಗ್ರಹಿಸಿದ ದೇಣಿಗೆಯನ್ನು ಮತ್ತೆ ಜನರ ಸಹಾಯಕ್ಕಾಗಿ ಉಪಯೋಗಿಸಿಬಿಟ್ಟ.

ನಂತರ ಮೂರನೇ ಬಾರಿ ತೆತ್ಸುಜನ್ ಮತ್ತೆ ಸೂತ್ರಗಳ ಪ್ರಕಟನೆಯ ಕಾರ್ಯವನ್ನು ಶುರು ಮಾಡಿದ ತೆತ್ಸುಜನ್ ಹಲವಾರು ವರ್ಷಗಳಷ್ಟು ಕಾಲ ಪ್ರಕಟನೆಗೆ ಬೇಕಾಗುವ ಸಂಪನ್ಮೂಲಗಳನ್ನು ಸಂಗ್ರಹಿಸಿ ಕೊನೆಗೆ ಇಪ್ಪತ್ತು ವರ್ಷಗಳ ನಂತರ ತಾನು ಕೈಗೊಂಡಿದ್ದ ಮಹಾ ಕಾರ್ಯವನ್ನು ಪೂರೈಸಿದ. ಜಪಾನಿನಲ್ಲಿ ಸೂತ್ರಗಳ ಏಳು ಸಾವಿರ ಕಾಪಿಗಳು ಪ್ರಕಟಗೊಂಡವು. ಕ್ಯೊಟೋ ದ ಓಬಾಕು ಮಾನೆಸ್ಟ್ರಿಯಲ್ಲಿ ಸೂತ್ರಗಳ ಪ್ರಥಮ ಆವೃತ್ತಿಯನ್ನು ನಾವು ಇಂದಿಗೂ ನೋಡಬಹುದು.

ಜಪಾನಿನ ಜನ ತಮ್ಮ ಮಕ್ಕಳಿಗೆ ಸೂತ್ರಗಳ ಪುಸ್ತಿಕೆ ತೋರಿಸುತ್ತ, ತೆತ್ಸುಜನ್ ಝೆನ್ ಸೂತ್ರಗಳ ಮೂರು ಆವೃತ್ತಿಗಳನ್ನು ಪ್ರಕಟಿಸಿದನೆಂದೂ, ಮೊದಲೆರಡು ಅದೃಶ್ಯ ಆವೃತ್ತಿಗಳು ಮೂರನೇ ಪ್ರಕಟಿತ ಆವೃತ್ತಿಗಿಂತ ಬಹಳ ಪವಿತ್ರ ಮತ್ತು ಬಹಳ ಮಹತ್ವದವು ಎಂದು ಇಂದಿಗೂ ತಿಳಿಸಿ ಹೇಳುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.