ಈ ಕತೆ ಓದಿ… ನೀವು ಜಿಂಕೆ ಆಗಿರಬಹುದು ಅಥವಾ ಮನುಷ್ಯರಾಗಿರಬಹುದು, ನಿಮ್ಮ ಫೋಕಸ್ ಏನಾಗಿರಬೇಕು ಯೋಚಿಸಿ ~ ಚಿದಂಬರ ನರೇಂದ್ರ
ಒಂದು ದಟ್ಟ ಅಡವಿಯಲ್ಲಿ ತುಂಬು ಬಸುರಿ ಜಿಂಕೆಯೊಂದು ತನ್ನ ಮರಿಗೆ ಜನ್ಮ ನೀಡಲು ಸುರಕ್ಷಿತ ಜಾಗವೊಂದನ್ನು ಹುಡುಕುತ್ತಿತ್ತು. ಅದೇ ಕ್ಷಣದಲ್ಲಿ ಮೆತ್ತನೆಯ ಹುಲ್ಲುಗಾವಲೊಂದು ಜಿಂಕೆಯ ಕಣ್ಣಿಗೆ ಬಿತ್ತು. ಹೆರಿಗೆಗೆ ಈ ಜಾಗ ಸೂಕ್ತ ಎಂದು ನಿರ್ಧರಿಸಿ ಜಿಂಕೆ ಈ ಹುಲ್ಲುಗಾವಲಿನ ಕಡೆಗೆ ಹೆಜ್ಜೆ ಹಾಕಿತು.
ಹುಲ್ಲುಗಾವಲಿನ ಕಡೆಗೆ ಹೆಜ್ಜೆ ಹಾಕುತ್ತಿರುವಾಗಲೇ ಜಿಂಕೆಗೆ ಹೆರಿಗೆ ಬೇನೆ ಶುರುವಾಯಿತು. ಆಕಾಶದಲ್ಲಿ ದಟ್ಟ ಮೋಡಗಳು ಸೇರಿಕೊಂಡವು, ಜೋರು ಜೋರಾಗಿ ಗುಡುಗು ಮಿಂಚು ಶುರುವಾದವು ದೂರದಲ್ಲಿ ಸಿಡಿಲು ಬಿದ್ದು ಕಾಡಿಗೆ ಬೆಂಕಿ ಹತ್ತಿಕೊಂಡಿತು.
ಮುಂದೆ ಹೋಗುವುದು ಬೇಡ ಎಂದು ನಿರ್ಧರಿಸಿ ಜಿಂಕೆ ಎಡಕ್ಕೆ ಹೊರಳಿತು. ಅಲ್ಲೊಬ್ಬ ಬೇಟೆಗಾರ ತನ್ನ ಕಡೆಗೆ ಬಾಣದ ಗುರಿಯಿಟ್ಟು ಕಾಯುತ್ತಿರುವುದು ಜಿಂಕೆಗೆ ಕಾಣಿಸಿತು. ಗಾಬರಿಯಲ್ಲಿ ಜಿಂಕೆ ಬಲಕ್ಕೆ ತಿರುಗಿತು. ಅದಕ್ಕೆ ಆಗ ಹಸಿದ ಸಿಂಹವೊಂದು ತನ್ನತ್ತಲೇ ನಿಧಾನವಾಗಿ ಬರುತ್ತಿರುವುದು ಕಂಡುಬಂದಿತು.
ಬಸುರಿ ಜಿಂಕೆ ಏನು ಮಾಡಬೇಕು ಆಗ? ಪಾಪ ಹೆರಿಗೆ ಬೇನೆ ಬೇರೆ ಶುರುವಾಗಿಬಿಟ್ಟಿದೆ.
ಮುಂದೆ ಏನಾಗಬಹುದು?
ಜಿಂಕೆ ಬದುಕಿ ಉಳಿಯಬಹುದಾ?
ಜಿಂಕೆ ತನ್ನ ಮರಿಗೆ ಜನ್ಮ ಕೊಟ್ಟಿತಾ?
ಜಿಂಕೆಯ ಮರಿ ಬದುಕಿ ಉಳಿಯಿತಾ?
ಅಥವಾ
ಕಾಡಿನ ಬೆಂಕಿಯಲ್ಲಿ ಎಲ್ಲವೂ ಸುಟ್ಟು ಭಸ್ಮವಾದವಾ?
ಆ ಕ್ಷಣದಲ್ಲಿ ಜಿಂಕೆ ಎಡಕ್ಕೆ ಹೋಗಬೇಕಾ?
ಅಲ್ಲಿ ಬೇಟೆಗಾರ ಗುರಿಯಿಟ್ಟು ಕಾಯುತ್ತಿದ್ದಾನೆ.
ಅಥವಾ ಜಿಂಕೆ ಬಲಕ್ಕೆ ಹೊರಳಬೇಕಾ?
ಅಲ್ಲಿ ಹಸಿದ ಸಿಂಹ ಕಾಯ್ದು ಕುಳಿತಿದೆ.
ಒಂದು ಕಡೆ ಬೆಂಕಿ, ಇನ್ನೊಂದು ಕಡೆ ನದಿ, ಎಡಕ್ಕೆ ಬೇಟೆಗಾರ, ಬಲಕ್ಕೆ ಸಿಂಹ, ಎಲ್ಲ ಕಡೆಯಿಂದಲೂ ಜಿಂಕೆ ಅಪಾಯಗಳಿಂದ ಸುತ್ತುವರೆದಿದೆ.
ಜಿಂಕೆ ಏನು ಮಾಡಿತು ಆಗ?
ಜಿಂಕೆ ಸುಮ್ಮನೇ ಹೊಸ ಜೀವವೊಂದಕ್ಕೆ ಜನ್ಮ ನೀಡುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತು.
ಅದೇ ಕ್ಷಣದಲ್ಲಿ ಒಂದಾದ ಮೇಲೊಂದರಂತೆ ನಡೆದ ಸರಣಿ ಘಟನೆಗಳು ಈ ರೀತಿಯಾಗಿದ್ದವು.
ಆಕಾಶದಲ್ಲಿ ಕಾಣಿಸಿಕೊಂಡ ಭಯಂಕರ ಮಿಂಚು ಬೇಟೆಗಾರನ ಕಣ್ಣನ್ನು ಆ ಕ್ಷಣಕ್ಕೆ ಕುರುಡಾಯಿಸಿತು.
ಬೇಟೆಗಾರ ಬಿಟ್ಟ ಬಾಣ ಗುರಿ ತಪ್ಪಿ, ಸಿಂಹಕ್ಕೆ ತಗುಲಿತು.
ಗಾಯಗೊಂಡ ಸಿಂಹ ಭಯಂಕಾರವಾಗಿ ಬಿದ್ದು ಉರುಳಾಡತೊಡಗಿತು.
ಅದೇ ಕ್ಷಣಕ್ಕೆ ಜೋರು ಮಳೆ ಶುರುವಾಯಿತು. ಕಾಡಿನ ಬೆಂಕಿ ಆರಿ ಹೋಯಿತು.
ಮುಂದಿನ ಗಳಿಗೆಯಲ್ಲಿಯೇ ಬಸುರಿ ಜಿಂಕೆ ಆರೋಗ್ಯವಂತ ಮರಿಗೆ ಜನ್ಮ ನೀಡಿತು.
ನಮ್ಮ ಬದುಕಿನಲ್ಲಿಯೂ ಒಮ್ಮೊಮ್ಮೆ ನಮ್ಮನ್ನು ಹೀಗೆಯೇ ಎಲ್ಲಕಡೆಗಳಿಂದಲೂ ಅಪಾಯಗಳು ಸುತ್ತುವರೆಯುತ್ತವೆ.
ಆಗ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಾಗುವುದಿಲ್ಲ.
ಆಗ ನಾವು ಅವಸರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬೇಡ.
ಬಹುಶಃ ಇಲ್ಲಿ ನಾವು ಬಸುರಿ ಜಿಂಕೆಯಿಂದ ಕಲಿಯಬಹುದಾದದ್ದು ಸಾಕಷ್ಟಿದೆ.
ಆ ಕ್ಷಣದಲ್ಲಿ ಜಿಂಕೆಯ ಮುಂದಿದ್ದ ಏಕಮೇವ ಆದ್ಯತೆ ಎಂದರೆ ತನ್ನ ಮರಿಗೆ ಜನ್ಮ ನೀಡುವುದು. ಏಕೆಂದರೆ ಬದುಕು ಅತ್ಯಮೂಲ್ಯ.
ಇದನ್ನು ಬಿಟ್ಟು ಬೇರೆ ಯಾವುದೂ ಜಿಂಕೆಯ ಕೈಯಲ್ಲಿರಲಿಲ್ಲ. ಗಾಬರಿಯಲ್ಲಿ ಜಿಂಕೆ ಬೇರೆ ಯಾವುದಾದರೂ ಕ್ರಿಯೆಗೆ ಮುಂದಾಗಿದ್ದರೆ ಅದು ಇನ್ನಾವುದೋ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದಿತ್ತು.
ನೀವು ಜಿಂಕೆ ಆಗಿರಬಹುದು ಅಥವಾ ಮನುಷ್ಯರಾಗಿರಬಹುದು, ನಿಮ್ಮ ಫೋಕಸ್ ಏನಾಗಿರಬೇಕು ಯೋಚಿಸಿ.
ನಿಮ್ಮ ಗಮನ ಯಾವುದರ ಮೇಲಿರಬೇಕು?
ನಿಮ್ಮ ಗಮನ ನಿಮ್ಮ ಆದ್ಯತೆಯ ಮೇಲೆ ಇರಬೇಕು. ಆ ಕ್ಷಣದಲ್ಲಿ ಯಾವುದು ಬಹಳ ಮುಖ್ಯವೋ ಅದರ ಮೇಲೆ ನಿಮ್ಮ ಫೋಕಸ್ ಇರಬೇಕು.
ಆ ಕ್ಷಣಕ್ಕೆ ಅತ್ಯಂತ ಮುಖ್ಯವಾದ ಸಂಗತಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತ, ಕ್ರಿಯೆಯಲ್ಲಿ ತೊಡಗಿಕೊಳ್ಳಿ.
ಬಾಕಿ ಎಲ್ಲವೂ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ.

